ಮಾತೆ ನೀಡಿದ್ದನ್ನು ಉಣ್ಣುವುದನ್ನು ಬಿಟ್ಟು ಮಾತೆಯನ್ನೇ ತಿನ್ನಲು ಮುಂದಾಗುತ್ತಿದ್ದೇವೆ

0
294

 
ರಾಯಚೂರು ಪ್ರತಿನಿಧಿ ವರದಿ
ವರ್ಣನೆಗೆ ಮೀರಿದ ಗುಣಗಳ ಗಣಿ ಗೋಮಾತೆ. ಯುಗಯುಗಗಳು ಕಳೆದರೂ ಮುಗಿಯದ ಗಾಥೆ ಗೋಮಾತೆ. ಇಂತಹಾ ಪರಮಾಧ್ಬುತ ಗೋಮಾತೆಯನ್ನು ನಾವಿಂದು ಅಕ್ಕರೆಯಿಂದ ಕಾಣುತ್ತಿಲ್ಲ. ತಾಯಿ ಕೊಟ್ಟದ್ದನ್ನು ತಿನ್ನುವುದನ್ನು ಬಿಟ್ಟು ತಾಯಿಯನ್ನೇ ತಿನ್ನುವ ಧೂರ್ತತನಕ್ಕೆ ನಾವು ಮುಂದಾಗುತ್ತಿದ್ದೇವೆ ಎಂದು ಶ್ರೀಮದ್ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಖೇದ ವ್ಯಕ್ತಪಡಿಸಿದರು.
 
 
mata_go-raichuru1
 
 
ರಾಯಚೂರಿನ ಜಿಲ್ಲಾ ಯಾದವ ಸಮಾಜ ಮೈದಾನದಲ್ಲಿ ತಾಲೂಕು ಮಂಗಲಗೋಯಾತ್ರಾ ಸಮಿತಿ ಆಯೋಜಿಸಿದ್ದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಗೋಪಾದ ಧೂಳಿಯಿಂದ ವಾತಾವರಣ ಪಾವನಮಯವಾಗುತ್ತಿದ್ದ ಗೋಧೂಳಿ ಮುಹೂರ್ತಗಳಿದ್ದ ದಿನಗಳಿದ್ದವು. ಇಂದು ಧೂಳೆಂದರೆ ಖಾಯಿಲೆ ಎನ್ನುವಂತಾಗಿದೆ. ಗೋವುಗಳೂ ಅಲ್ಲದ, ಹಂದಿಗಳೂ ಅಲ್ಲದ ಕೋಟ್ಯಂತರ ಕುಲಾಂತರಿ ಗೋವುಗಳು ಇಂದು ಉದ್ಭವಿಸಿವೆ. ಈ ಅಪಾಯದಿಂದ ಸಮಾಜವನ್ನು ಎಚ್ಚರಿಸುವ ಜಾಗೃತಿ ಘಂಟೆಯೇ ಮಂಗಲಗೋಯಾತ್ರೆ ಎಂದರು.
 
 
 
ಇನ್ನು ಖಾಕಿ, ಖಾದಿಗಳನ್ನು ನಂಬಬೇಕಿಲ್ಲ
ಗೋವುಗಳನ್ನು ಚಿತ್ರಹಿಂಸೆ ಮಾಡಿ ಕೊಲ್ಲುವುದನ್ನು ಇಂದು ಕಾಣುತ್ತಿದ್ದೇವೆ. ಯಾರಿಗೂ ಉಪದ್ರವವನ್ನು ಕೊಡದ ಉಪಕಾರವನ್ನೇ ಮಾಡುವ ಗೋಮಾತೆಯನ್ನು ನಾವಿಂದು ಆದರದಿಂದ ಕಾಣಬೇಕಿದೆ. ಗೋವಂಶ ನಾಶವೆಂದರೆ ದೇಶ ನಾಶವೇ ಆಗಿದೆ. ಖಾಕಿ ಹಾಗೂ ಖಾದಿಯ ಮೇಲೆ ಹೆಚ್ಚಿನ ಭರವಸೆ ಇನ್ನು ಬೇಕಿಲ್ಲ. ಸಂತರ ದೃಢಸಂಕಲ್ಪದಿಂದ ಮಾತ್ರ ಈ ಗೋಸಂರಕ್ಷಣೆಯ ಕಾರ್ಯ ನಡೆಯಬೇಕಿದೆ. ಜೊತೆಗೆ ಸಂತರ ಹೆಜ್ಜೆಯೊಡನೆ ಜನರೂ ಜೊತೆಗೂಡಬೇಕಿದೆ. ಅದಕ್ಕಾಗಿಯೇ ಮಂಗಲಗೋಯಾತ್ರೆ ಎಂದರು.
 
 
 
ಗೋಸಂರಕ್ಷಣೆಯಾದರೆ ಮಾತ್ರ ಯಾತ್ರೆ ಸಫಲ
ಬ್ರಿಟಿಷರು ಕೂಡಾ ನಾವುಣ್ಣುವ ತುತ್ತುಗಳನ್ನು ಕಣಕಣವೂ ವಿಷವಾಗುವಂತೆ ಮಾಡಿರಲಿಲ್ಲ. ಆದರೆ ನಾವುಗಳೇ ಮುಂದಾಗಿ ಪ್ಯಾಕೆಟ್ ಹಾಲು, ಗೋವಿನ ಕೊಬ್ಬು, ಇತ್ಯಾದಿ ವಿಷಗಳನ್ನೇ ಸೇವಿಸಿ, ಗೋವನ್ನು ಕಡೆಗಣಿಸುವುದರೊಡನೆ, ನಮ್ಮ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ. ಗೋಹತ್ಯೆ ಸಂಪೂರ್ಣ ನಿಂತು ಗೋಸಂರಕ್ಷಣೆಯಾದರೆ ಮಾತ್ರ ಮಂಗಲಗೋಯಾತ್ರೆ ಸಾರ್ಥಕವಾದಂತೆ. ಇಲ್ಲವಾದರೆ ನಿರರ್ಥಕ ಎಂದು ಗೋಸಂದೇಶ ನೀಡಿದರು.
 
 
 
ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಒಂದು ಕಡೆ ಗೋಸಂರಕ್ಷಣೆಯ ಕಾರ್ಯ ನೆಡೆಯುತ್ತಿದ್ದರಡ ಇನ್ನೊಂದೆಡೆ ಹತ್ಯೆಯ ಕಾರ್ಯ ಎಗ್ಗಿಲ್ಲದೇ ನೆಡೆಯುತ್ತಿದೆ. ಇದರ ಬಗ್ಗೆ ಕಾವಿಧಾರಿಗಳಾದ ಸನ್ಯಾಸಿಗಳು, ಖಾಕಿಧಾರಿಗಳು ಹಾಗೂ ಖಾದಿಧಾರಿಗಳು ಎಚ್ಚರವಹಿಸಿ ಕಾರ್ಯ ನಿರ್ವಹಿಸಬೇಕಿದೆ. ಹುಟ್ಟಿದಾರಭ್ಯ ಸಾಯುವ ತನಕ ಕಾಯುವ ತಾಯಿ ಗೋಮಾತೆ. ಇಂತಹಾ ಗೋಹತ್ಯೆಗಳು ಎಲ್ಲಿ ನಡೆಯುತ್ತಿದ್ದರೂ ತಡೆಯುವ ಮನಸ್ಥಿತಿ ಸಮಾಜದಲ್ಲಿ ಬರಬೇಕಿದೆ. ಬೇರೆ ಬೇರೆ ಪ್ರಾಣಿಗಳನ್ನು ಕೊಂಡು ತರುವುದನ್ನು ಬಿಟ್ಟು ಗೋವುಗಳನ್ನು ದತ್ತು ತೆಗೆದುಕೊಳ್ಳುವ ಮನೋಭಾವ ಎಲ್ಲರಿದ್ದಾಗಬೇಕಿದೆ ಎಂದರು.
 
 
 
ಶ್ರೀ ಅಭಿನವರಾಚೋಟಿ ವೀರಶಿವಾಚಾರ್ಯಸ್ವಾಮಿಗಳು ಅನುಗ್ರಹ ವಚನವಿತ್ತು, ದೇಶದ ಬೆನ್ನೆಲುಬು ರೈತನಾದರೆ, ರೈತನ ಬೆನ್ನೆಲುಬು ಗೋವು. ಇಂತಹಾ ಗೋರಕ್ಷಣೆಗಾಗಿ ಕಾರ್ಯವೆಸಗುತ್ತಿರುವ ರಾಘವೇಶ್ವರ ಶ್ರೀಗಳು ಆದರಣೀಯರು ಹಾಗೂ ಅವರ ನೆಡೆ ಅನುಕರಣೀಯ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಮಂಗಲಗೋಯಾತ್ರಾ ಸಮಿತಿಯವರು, ರಾಘವೇಶ್ವರ ಶ್ರೀಗಳಿಗೆ ಗೋಮಯದ ಗಣೇಶನನ್ನು ನೀಡಿ ಗೌರವಿಸಿದ್ದು ಎಲ್ಲರ ಗಮನ ಸೆಳೆಯಿತು.
 
 
 
ಸಂಭ್ರಮದ ಶೋಭಾಯಾತ್ರೆ
ಪೂರ್ವಾಹ್ನ 11.30 ಕ್ಕೆ ರಾಯರ ಗುಡಿಯಿಂದ ರಾಯಚೂರಿಗೆ ಆಗಮಿಸಿದ ಗೋಯಾತ್ರೆಯನ್ನು ನಗರದ ಗಣ್ಯರು ಸ್ವಾಗತಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ನಾದಸ್ವರ, ಡೋಲುವಾದನಗಳನ್ನು ಒಳಗೊಂಡು ಗೋರಥಗಳು ಸಾಗಿ, ಸೇರಿದ್ದವರಲ್ಲಿ ಗೋಜಾಗೃತಿ ಮೂಡಿಸಿದವು. ಈ ಸಂದರ್ಭದಲ್ಲಿ ಪೂಜ್ಯರಾದ ಶಂಭು ಶಿವನಾಥ ಶಿವಾಚಾರ್ಯ ಸ್ವಾಮಿಗಳು, ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ನಗರದ ಗಣ್ಯರಾದ ಮಾರಪ್ಪ ವಕೀಲರು, ಡಾ.ಶಂಕರ್, ಡಾ.ಆನಂದ್, ಬಸವರಾಜ್, ಉದಯ್ ಕುಮಾರ್ ಕೊಠಾರಿ, ಗೋಪಾಲ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here