ಮಹಾಕವಿಮನೆ ಪುನರ್‌ ನಿರ್ಮಾಣವಾಗಲಿ: ಭಟ್ಟಾರಕ ಶ್ರೀ ಆಗ್ರಹ

0
3117

ಮೂಡುಬಿದಿರೆ: ತುಳು ಹಾಗೂ ಕನ್ನಡ ಭಾಷೆಗೆ ಅನರ್ಘ್ಯ ಕೊಡುಗೆ ನೀಡಿದ ದಿವಂಗತ ವಿದ್ವಾನ್‌ ಮಂದಾರ ಕೇಶವ ಭಟ್ಟರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ನಡೆಯಬಾರದ ದುರ್ಗಟನೆ ನಡೆದಿದೆ. ಮಂದಾರರು  ಹುಟ್ಟಿಬೆಳೆದ ಮನೆಗೂ ನೂರು ವರ್ಷ ತುಂಬಿರುವ ಸಂದರ್ಭದಲ್ಲಿ ಊಹಿಸಲೂ ಅಸಾಧ್ಯವಾದ ಘನಘೋರ ದುರಂತ ನಡೆದಿದ್ದು ಇದು ಮಂದಾರರ ಮನೆಮಂದಿಗೆ, ಅವರ ಅಭಿಮಾನಿಗಳಿಗೆ, ಸಮಸ್ತ ಸಮಾಜಕ್ಕೆ ತೀವ್ರ ನೋವುಂಟುಮಾಡಿದೆ. ಆಡಳಿತ ವರ್ಗದ ಅಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದಾದ ದುರಂತದಲ್ಲಿ ಮಂದಾರರು ಹುಟ್ಟಿಬೆಳೆದ ಮನೆ, ದೈವಸ್ಥಾನ, ನಾಗಬನ ಸೇರಿದಂತೆ ಇಡೀ ಪ್ರದೇಶದ ಸುಮಾರು ೧೨ಎಕ್ಕರೆಗೂ ಅಧಿಕ ಕೃಷಿಭೂಮಿ, ೨೭ ಮನೆಗಳು ಸಂಪೂರ್ಣ ನಾಶವಾಗಿದ್ದು  ಇವರುಗಳಿಗೆ ಬದುಕು ಕಟ್ಟುವ ಕಾರ್ಯ ತಕ್ಷಣ ಆಗಬೇಕಾಗಿದೆ. ಶತಮಾನೋತ್ಸವದ ವಿಜೃಂಭಣೆಯ ಆಚರಣೆಯನ್ನು ಮಾಡಬೇಕಾಗಿದ್ದ ಸಂದರ್ಭದಲ್ಲಿ ಮಂದಾರರ ಮನೆಗೆ ಈ ಸ್ಥಿತಿ ಬಂದೊದಗಿದ್ದು ಶೋಚನೀಯವಾದುದು. ಈ ಐತಿಹಾಸಿಕ ಪಾರಂಪರಿಕ ಮನೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಜವಾಬ್ದಾರಿ ಸಮಸ್ತ ಸಮಾಜದ್ದಾಗಿದೆ. ಕವಿ ಮನೆಯ ವಾಸ್ತು ವೈಭವ, ಧಾರ್ಮಿಕ ನಂಬಿಕೆಗಳ ಪುನರ್‌ ನಿರ್ಮಾಣದ ಕಾರ್ಯ ನಡೆದು ಮಹಾಕವಿ ಮಂದಾರರ ಪಾರಂಪರಿಕ ಗೃಹ ಸಂರಕ್ಷಣೆ ಮತ್ತು ಮರು ನಿರ್ಮಾಣಕ್ಕೆ ಸ್ಥಳೀಯಾಡಳಿತ, ಜನಪ್ರತಿನಿಧಿಗಳು, ಹಾಗೂ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಸರಕಾರಕ್ಕೆ ಒತ್ತಾಯಿಸೇಕಾಗಿದೆ. ಹಾಗೂ ಶೀಘ್ರ ಪುನರ್‌ ನಿರ್ಮಾಣ ಕಾರ್ಯ ಹಾಗೂ ಅಲ್ಲಿದ್ದ ಅಷ್ಟೂ ಕುಟುಂಬಗಳ ಬದುಕು ಕಟ್ಟುವ ಕಾರ್ಯ ನಡೆಯಬೇಕಾಗಿದೆ ಎಂದು ಮೂಡುಬಿದಿರೆ ಜೈನಮಠದ ಭಾರತಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯಮಹಾ ಸ್ವಾಮಿಗಳು ಆಗ್ರಹಿಸಿದ್ದಾರೆ. ಜೈನಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗಳು ವಾರದ ಹಿಂದೆ ಸ್ವತಃ ಸ್ಥಳಭೇಟಿ ನಡೆಸಿ ಸಂಪೂರ್ಣ ಚಿತ್ರಣವನ್ನು ನೋಡಿದ್ದು ಮಾತ್ರವಲ್ಲದೆ, ಮಂದಾರ ನಿವಾಸಿಗಳ ಅಳಲು ಕೇಳಿರುವುದಾಗಿ ಶ್ರೀಗಳು ತಿಳಿಸಿದರು. ಶಾಸಕರು, ಸಂಸದರು, ಹಾಗೂ ಜಿಲ್ಲಾಡಳಿತ ತಕ್ಷಣ ಈ ಬಗ್ಗೆ ಸೂಕ್ತ ನಿರ್ಧಾರವನ್ನು ತಕ್ಷಣ ಕೈಗೊಳ್ಳಬೇಕು. ಈ ದುರಂತಕ್ಕೆ ವರುಷ ತುಂಬುವ ಹೊತ್ತು ಸನ್ನಿಹಿತವಾದರೂ ಸೂಕ್ತ ನ್ಯಾಯ ದೊರಕದಿರುವುದು ವಿಪರ್ಯಾಸವೇ ಸರಿ ಎಂದರು.

ತುಳುನಾಡಿನ ಪುರಾತನ ವಾಸ್ತು ವೈಭವ ಹೊಂದಿರುವ ಕೆಂಪುಬಣ್ಣದ ವಿಶಾಲ ಪಡಸಾಲೆಯ ಕವಿ ಮನೆಯನ್ನು ಮಂದಾರ ಕುಟುಂಬಸ್ಥರು ಅತ್ಯಂತ ಶ್ರದ್ದೆಯಿಂದ ಆಧುನಿಕತೆಯ ಸ್ಪರ್ಶವೇ ಇಲ್ಲದಂತೆ ಪರಂಪರಾಗತ ಶೈಲಿಯನ್ನು ಉಳಿಸಿಕೊಂಡು ಕಾಪಾಡಿಕೊಂಡು ಬಂದಿದ್ದರು. ಮನೆ ದೇವರಾದ ಅನ್ನಪೂರ್ಣೇಶ್ವರೀ, ಸ್ಥಳದಲ್ಲಿರುವ ನಾಗಬನ, ಮಂದಾರತಾಯಿ ಎಂಬ ಶಕ್ತಿದೇವತೆ, ಕಲ್ಲರ್ಟಿ, ಪಂಜುರ್ಲಿ , ಗುಳಿಗ ದೈವ ದೇವರುಗಳ ಸಾನ್ನಿಧ್ಯವಿದ್ದು ಕಾಲ ಕಾಲಕ್ಕೆ ಸರಿಯಾಗಿ ಸುತ್ತುಮುತ್ತಲ ನೂರಕ್ಕೂ ಹೆಚ್ಚು ಕುಟುಂಬಗಳು ಸೇರಿ ಶ್ರದ್ಧಾ ಭಕ್ತಿಯೊಂದಿಗೆ ನವರಾತ್ರಿ, ನಾಗರ ಪಂಚಮಿ, ತುಳಸಿಪೂಜೆ,ದೈವಗಳ ಮಾಸಿಕ ಪರ್ವ ಹೀಗೆ ಎಲ್ಲಾ ಆಚರಣೆಗಳನ್ನು ಶಾಸ್ತ್ರೋಕ್ತವಾಗಿ ಮಂದಾರ ಮನೆಯ ಹಿರಿಯರು ಮುಂಚೂಣಿಯಲ್ಲಿದ್ದು ನಡೆಸಿಕೊಂಡು ಬರುತ್ತಿದ್ದರು. ಇದೀಗ ತ್ಯಾಜ್ಯದ ರಾಶಿ ಈ ಎಲ್ಲಾ ಧಾರ್ಮಿಕ ಭಾವನೆಗಳನ್ನು ಆಪೋಷಣಗೈದಿದೆ. ಇದು ದೊಡ್ಡ ದುರಂತವೇ ಸರಿ ಎಂದು ಶ್ರೀಗಳು ಅಭಿಪ್ರಾಯಿಸಿದರು.

ತುಳು ಭಾಷೆಯ ಲಿಖಿತ ಪರಂಪರೆಯ ಮೊದಲ ರಾಮಾಯಣ ಕೃತಿ, ತುಳುವಿಗೆ ಆಕರ ಗ್ರಂಥ ಎಂದೇ ಪರಿಗಣಿಸಲ್ಪಟ್ಟ ಮಂದಾರ ರಾಮಾಯಣದ ಕರ್ತೃ ದಿವಂಗತ ಮಂದಾರ ಕೇಶವ ಭಟ್ಟರಾಗಿದ್ದರು. ತುಳು ವಾಲ್ಮೀಕಿ ಎಂದೇ ಹೆಸರಾಗಿದ್ದ ಕೇಶವ ಭಟ್ಟರು, ತಾವೇ ರಚಿಸಿದ ಮಂದಾರ ರಾಮಾಯಣವನ್ನು ಕನ್ನಡಕ್ಕೂ ತರ್ಜುಮೆಗೊಳಿಸಿದ್ದು ಅದೂ ಜನ ಮನ್ನಣೆ ಗಳಿಸಿತ್ತು. ಮಂದಾರರು ಪ್ರಾಧ್ಯಾಪಕರಾಗಿ ತುಳು ಹಾಗೂ ಕನ್ನಡದಲ್ಲಿ ಹತ್ತು ಹಲವು ಕೃತಿಗಳನ್ನು ಬರೆದು ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದರು. ಯಕ್ಷಗಾನ ಅರ್ಥದಾರಿಯಾಗಿ , ಪ್ರಸಂಗ ಕರ್ತರಾಗಿ, ಭಾಗವತರಾಗಿಯೂ ಮಂದಾರರು ತಮ್ಮನ್ನು ತೊಡಗಿಸಿಕೊಂಡಿದ್ದರು. ತುಳು ಭಾಷೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ತುಳುನಾಡಿಗೆ, ತುಳುವರಿಗೆ ತೋರಿಸಿಕೊಟ್ಟ ಹಿರಿಯ ಚೇತನ ಮಂದಾರರು. ಇವರ ವ್ಯಾಕರಣ, ಛಂದಸ್ಸು ಸೇರಿದಂತೆ ಸೃಜನಶೀಲ ಬರವಣಿಗೆ ಮತ್ತು ಶಾಸ್ತ್ರ ಸಾಹಿತ್ಯದಲ್ಲಿ ಅಪಾರ ಶ್ರದ್ಧೆ ತೋರಿದ ನಾಡು ಕಂಡ ಮೇರು ವ್ಯಕ್ತಿ ಮಂದಾರರಾಗಿದ್ದರು.

ಸ್ಥಳೀಯ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಸರಕಾರ ದೊಡ್ಡ ಮನಸ್ಸು ಮಾಡಿ ಕವಿಮನೆಯ ಪುನರ್‌ ನಿರ್ಮಾಣ ಕಾರ್ಯ ಮಾಡುವಂತಾಗಬೇಕಾಗಿದೆ. ಕನ್ನಡ ಹಾಗೂ ತುಳು ಸಾಹಿತ್ಯಾಸಕ್ತ ಬಂಧುಗಳು ಈ ಕೈಂಕರ್ಯದಲ್ಲಿ ಕೈಜೋಡಿಸಬೇಕಾಗಿದೆ ಎಂದು ಶ್ರೀಗಳು ಕರೆನೀಡಿದರು.

Advertisement

ಇದೊಂದು ಘೋರ ಅವಮಾನ: ತುಳು ಭಾಷೆ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಮೇರು ವ್ಯಕ್ತಿ ಮಂದಾರರು. ಅವರ ಜನ್ಮ ಶತಮಾನೋತ್ಸವ ಸಂದರ್ಭವನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸಬೇಕಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಇದೇ ಸಂದರ್ಭದಲ್ಲಿ ಶತಮಾನದ ಇತಿಹಾಸವಿರುವ ಮನೆಯೂ ಕಸದ ರಾಶಿಯೊಳಗೆ ಹುದುಗಿದೆ. ಇದೆಲ್ಲವೂ ಮೇರು ವ್ಯಕ್ತಿಗೆ ಮಾಡಿದ ದೊಡ್ಡ ಅಪಮಾನವಾಗಿದೆ ಎಂದು ಸಂಶೋಧಕ, ಸಾಹಿತಿ ಡಾ.ಪುಂಡಿಕಾಯ್‌ ಗಣಪಯ್ಯ ಭಟ್‌ ಅಭಿಪ್ರಾಯಿಸಿದರು.

ಮಂಜೇಶ್ವರ ಗೋವಿಂದ ಪೈ, ಡಾ.ಶಿವರಾಮ ಕಾರಂತ, ಕುವೆಂಪು ಇವರೆಲ್ಲ ಹುಟ್ಟಿಬೆಳೆದ ಮನೆಗಳು ಸ್ಮಾರಕವಾಗಿ ಪರಿಗಣಿಸಲ್ಪಟ್ಟಿದೆ. ಇದೇ ರೀತಿ ಮಂದಾರ ಕೇಶವ ಭಟ್‌ ಅವರ ಮನೆಯೂ ಸ್ಮಾರಕವಾಗಬೇಕಾಗಿದೆ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹಿರಿಯ ವಕೀಲ ಬಾಹುಬಲಿ ಪ್ರಸಾದ್‌, ಕೆ.ಪಿ ಜಗದೀಶ್‌ ಅಧಿಕಾರಿ, ಬಲಿಪ ಶಿವಶಂಕರ ಭಟ್‌, ಪಟ್ನಶೆಟ್ಟಿ ಸುದೇಶ್‌ ಕುಮಾರ್‌, ದಿನೇಶ್‌ ಆನಡ್ಕ, ಪ್ರಮೋದ್‌ ಸಪ್ರೆ, ಡಾ.ರಾಜೇಶ್‌ ಆಳ್ವ, ಮಂದಾರ ರಾಜೇಶ್ ಭಟ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here