ಮಹದಾಯಿ ವಿವಾದ: ಸುಪ್ರೀಂ ಮೆಟ್ಟಿಲೇರಲು ರಾಜ್ಯದ ಸಿದ್ಧತೆ

0
234

 
ವರದಿ: ಲೇಖಾ
ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ರಾಜ್ಯ ಸರ್ಕಾರವು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಧಿಕರಣವು ಮಧ್ಯಂತರ ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಆವೇಶ ಬೇಡ, ಆಕ್ರೋಶ ಬೇಡ ಎಂದು ರಾಜ್ಯದ ಜನತೆಯಲ್ಲಿ ಕಳಕಳಿಯ ಮನವಿ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ರಾಜ್ಯದ ನ್ಯಾಯಬದ್ಧ ಹಕ್ಕು ಪ್ರತಿಪಾದಿಸಲು ನ್ಯಾಯಾಧಿಕರಣದಲ್ಲಿ ಹಾಗೂ ಭಾರತ ಸರ್ವೋಚ್ಛ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಮುಂದುವರೆಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಭರವಸೆ ನೀಡಿದರು.
 
 
 
ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾಧ್ಯಮದವರೊಡನೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಜಲ ನೀತಿಯನ್ವಯ ಕುಡಿಯುವ ನೀರಿಗೆ ಆಧ್ಯತೆ ನೀಡಬೇಕಗುತ್ತದೆ. ಉತ್ತರ ಕರ್ನಾಟಕದ ಪ್ರಮುಖ ನಗರಿಗಳಿಗೆ ಕುಡಿಯುವ ನೀರು ಒದಗಿಸಲು ಮಹದಾಯಿ ನದಿಯಿಂದ 7.56 ಟಿ. ಎಂ. ಸಿ ನೀರು ಹಂಚಿಕೆಗೆ ಸಮ್ಮತಿ ನೀಡದ ನ್ಯಾಯಾಧೀಕರಣದ ಈ ಮಧ್ಯಂತರ ತೀರ್ಪು ಸೋಜಿಗವನ್ನು ಉಂಟು ಮಾಡಿದೆ. ರಾಜ್ಯದ ಜನತೆ ಧೃತಿಗೆಡಬೇಕಾಗಿಲ್ಲ. ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿ ಮತ್ತಷ್ಟು ದಾಖಲೆಗಳೊಡನೆ ಮತ್ತೊಂದು ಅರ್ಜಿ ಸಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ನ್ಯಾಯಾಧಿಕರಣದ ತೀರ್ಪಿನ ಪ್ರತಿ ಇನ್ನೂ ತಮ್ಮ ಕೈ ಸೇರಿಲ್ಲ. ತೀರ್ಪಿನ ಪ್ರತಿ ದೊರೆತೊಡನೆಯೇ ಪ್ರತಿ ಪಕ್ಷಗಳ ಮುಖಂಡರು ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆಯನ್ನು ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
 
 
 
ಆಂಧ್ರ ಪ್ರದೇಶ ಮತ್ತು ತಮಿಳುನಾಡು ಹಾಗೂ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಕರೆದ ಸಭೆಯಲ್ಲಿ ಪಾಲ್ಗೊಂಡ ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ತೆಲುಗು ಗಂಗಾ ಯೋಜನೆಗೆ ತಮ್ಮ ಸಮ್ಮತಿ ಸೂಚಿಸಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು ಈ ಹಿನ್ನೆಲೆಯಲ್ಲಿಯೇ ಸರ್ವಪಕ್ಷಗಳ ಮುಖಂಡರ ನಿಯೋಗವನ್ನು ನವದೆಹಲಿಗೆ ಕರೆದೊಯ್ದು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಈ ಮೂರೂ ರಾಜ್ಯಗಳ ನಡುವೆ ಇರುವ ಮಹದಾಯಿ ಅಂತಾರಾಜ್ಯ ಜಲ ವಿವಾದವನ್ನು ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಪ್ರಧಾನ ಮಂತ್ರಿಯವರಲ್ಲಿ ಮನವಿ ಮಾಡಲಾಯಿತು ಎಂದರು.

LEAVE A REPLY

Please enter your comment!
Please enter your name here