ಮಳೆಗಾಲದಲ್ಲಿ ಕರಿಮೆಣಸಿನ ಬೆಳೆ ನಿರ್ವಹಣೆ

0
545

ಚಿಗುರು ಅಂಕಣ: ರಾಧಾಕೃಷ್ಣ ಹೊಳ್ಳ
ಮುಂಗಾರು ಮಳೆಯ ಪ್ರಥಮ ಸಿಂಚನವಾದ ತಕ್ಷಣ ಕರಿಮೆಣಸಿನ ಬಳ್ಳಿಗೆ ಹೊಸ ಚೈತನ್ಯ ಬರುತ್ತದೆ. ಪೂರ್ವ ಮುಂಗಾರು ಮೇ ತಿಂಗಳಲ್ಲಿ ಆಗಿದೆ. ಕೆಲವೇ ದಿನಗಳಲ್ಲಿ ಮೆಣಸಿನ ಬಳ್ಳಿಗಳು ಹೊಸ ಚಿಗುರನ್ನು ಬಿಟ್ಟು ಚಿಗುರಿನ ತುದಿಯಲ್ಲಿ ಹೂ ಕರೆಗಳನ್ನೂ (pike) ಹೊರಹಾಕಲಾರಂಭಿಸಿವೆ. ಸ್ವಲ್ಪ ಚಿಗುರಿವೆ, ಮತ್ತೆ ಕೆಲವು ಚಿಗುರಲಾರಂಭಿಸಿವೆ. ಇನ್ನೇನು ಮುಂಗಾರು ಮಳೆ ಪ್ರಾರಂಭವಾಯಿತು. ಕೆಲವೇ ದಿನಗಳಲ್ಲಿ ಇನ್ನಷ್ಟು ಹೊಸ ಚಿಗುರುಗಳು, ಹೂ ಕರೆಗಳು ಬಂದು ಜುಲೈ ತಿಂಗಳಿಗೆ ಈ ವರ್ಷದ ಹೊಸ ಮೆಣಸಿನ ಬೆಳೆಯ ಚಿತ್ರಣ ಗೊತ್ತಾಗುತ್ತದೆ. ನಂತರ ಅದನ್ನು ಉಳಿಸಿಕೊಳ್ಳುವುದು ಮಾತ್ರ ಕೆಲಸ.
 
vaarte_pepper
ಕರಿಮೆಣಸಿನಲ್ಲಿ ಚಿಗುರಿನ ಜೊತೆಗೆ ಹೂ ಕರೆಗಳು ಮೂಡುತ್ತವೆ. ಬಳ್ಳಿಗೆ ದೊರೆಯುವ ಪೋಷಕಾಂಶದ ಆಧಾರದಲ್ಲಿ ಉದ್ದ ಚಿಗುರುಗಳು ಬಂದು ಎರಡು ಮೂರು ಕರೆಗಳನ್ನು ಒಂದೇ ಗೆಲ್ಲಿನಲ್ಲಿ ಪಡೆಯಬಹುದು. ಇದಕ್ಕಾಗಿ ಮುಂಗಾರು ಮಳೆಗೆ ಮುಂಚೆ ಶೇ.5 ರ ನೀರಿನಲ್ಲಿ ಕರಗುವ 19:19:19 ರಸ ಗೊಬ್ಬರ ಹಾಗೂ ಜೊತೆಗೆ ಸಿದ್ದ ರೂಪದ ಶೇ.1 ಪ್ರಮಾಣದ ಲಘು ಪೋಷಕಾಂಶಗಳನ್ನು ಎಲೆಗಳಿಗೆ ಸಿಂಪರಣೆ ಮಾಡಿದರೆ ಫಲಿತಾಂಶ ಉತ್ತಮವಾಗುತ್ತದೆ. ಮೇ ತಿಂಗಳ ಒಳಗೆಯೇ ಬಳ್ಳಿಗೆ ಬಿಸಿಲು ಬೀಳಲು ಅಡ್ದವಾಗಿರುವ ಬಾಳೆ , ಮರಮಟ್ಟುಗಳ ನೆರಳನ್ನು ತೆಗೆದರೆ ಹೂವಿನ ಪ್ರ್ರಮಾಣ ಹೆಚ್ಚುತ್ತದೆ. ಬಿಸಿಲು ಬೀಳುವ ಭಾಗದಲ್ಲಿ ಮಾತ್ರ ಹೂ ಬರುವುದು ಕ್ರಮ.
 
vaarte_pepper1
 
ಚಿಗುರು ಏಕಕಾಲದಲ್ಲಿ ಉತ್ತಮವಾಗಿ ಬಂದರೆ ಹೆಚ್ಚು ಹೂ ಕರೆಗಳು ಬರುತ್ತವೆ. ತಡವಾಗಿ ಬರುವ ಹೂವು ಕರೆಗಳು ಫಸಲಿನ ದೃಷ್ಟಿಯಲ್ಲಿ ಹೆಚ್ಚು ಪ್ರಯೋಜನಕಾರಿಯಲ್ಲ. ನಾವು ನೆಟ್ಟು ಬೆಳೆಸುವ ಕರಿಮೆಣಸಿನ ಬಳ್ಳಿಯಲ್ಲಿ ದ್ವಿಲಿಂಗೀಯ (Hermaphrodite)ಹೂವುಗಳೇ ಇರುವುದರಿಂದ ಅವು ತೇವಾಂಶದಲ್ಲಿ ಸ್ವ ಪರಾಗಸ್ಪರ್ಶಕ್ಕೊಳಗಾಗುತ್ತವೆ. ಕರೆಗಳು ಮೂಡುವಾಗ ತಿಳಿ ಹಸುರು ಬಣ್ಣದಲ್ಲಿರುತ್ತದೆ. ಕ್ರಮೇಣ ಬಿಳಿಯಾಗಿ ದಟ್ಟ ಹಸುರಾಗುತ್ತವೆ. ದಟ್ಟ ಹಸುರು ಬಣ್ಣ ಬಂದಾಗ ಅದರಲ್ಲಿ ಕಾಯಿ ಕಚ್ಚಿ ಸಣ್ಣ ಸಣ್ಣ ಮಿಡಿಗಳನ್ನು ಗುರುತಿಸಬಹುದು. ಒಂದು ಹೂ ಕರೆಯಲ್ಲಿ 25 ರಿಂದ 100ರಷ್ಟು ಹೂವುಗಳಿರುತ್ತವೆ. ಪರಾಗಸ್ಪರ್ಷ ಸರಿಯಾಗಿ ನಡೆದರೆ ಬಹುತೇಕ ಹೂವುಗಳೂ ಫಲಿತಗೊಳ್ಳುತ್ತವೆ. ಹೂ ಬಂದಾಗ ಮಳೆ ಪೂರ್ತಿ ನಿಂತರೆ ಪರಾಗಸ್ಪರ್ಶಕ್ಕೆ ತೊಂದರೆಯಾಗಿ ಬಿಟ್ಟು ಬಿಟ್ಟು ಕಾಯಿ ಕಚ್ಚುವಿಕೆ ಆಗುತ್ತದೆ.
 
 
ಮುಂಗಾರು ಮಳೆ ಪ್ರಾರಂಭವಾಗುವುದಕ್ಕೆ ಮುಂಚೆ, ಪೂರ್ವ ಮುಂಗಾರು ಮಳೆಯಾದೊಡನೇ ತೋಟದಲ್ಲಿ ಬಸಿಗಾಲುವೆಗಳನ್ನು ಸ್ವಚ್ಚ ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೇ ಮಾಡಬೇಕು. ಪ್ರತೀ ಬಳ್ಳಿಯ ಬುಡ ಭಾಗವೂ ಬಸಿಗಾಲುವೆಗೆ ಅಭಿಮುಖವಾಗಿ ಇಳಿಜಾರಾಗಿರಬೇಕು. ಬುಡ ಭಾಗದಲ್ಲಿ ಹೆಚ್ಚು ತೇವಾಂಶ ಹೀರಿಕೊಳ್ಳಬಲ್ಲ ಯಾವುದೇ ಸಾವಯವ ವಸ್ತುಗಳನ್ನೂ ಹಾಕಬೇಡಿ. ಮಣ್ಣು ಏರಿಸುವುದು, ಮೇಲುಹಾಸಲು ಹಾಕುವುದರಿಂದ ಅವು ಅಗತ್ಯಕ್ಕಿಂತ ಹೆಚ್ಚು ನೀರು ಹೀರಿಕೊಂಡು ಶಿಲೀಂದ್ರ ಪ್ರಸರಣಕ್ಕೆ ನೆರವಾಗುತ್ತದೆ. ಬಸಿಗಾಲುವೆಗೆ ಅಭಿಮುಖವಾಗಿ ಬುಡ ಭಾಗ ಏರಿಕೆಯಲ್ಲಿದ್ದು ತಳ ಭಾಗ ನೀರು ಬಸಿಯುವಂತೆ ಇಳಿಜಾರಾಗಿದ್ದರೆ ಬುಡಕ್ಕೆ ಪ್ಲಾಸ್ಟಿಕ್ ಹಾಳೆ ಹೊದಿಸಿ ಬುಡ ಭಾಗದ ಮಣ್ಣು ಸವಕಳಿಯಾಗದಂತೆ, ಬೇರು ಹೊರಗೆ ತೆರೆಯಲ್ಪಡದಂತೆ ಹಾಗೂ ನೀರು ಹೆಚ್ಚಾಗದಂತೆ ತಡೆಯುತ್ತದೆ. ಕರಿಮೆಣಸಿನ ಬಳ್ಳಿಗೆ ತೇವಾಂಶ ಬೇಕು. 20 ನಿಮಿಷಕ್ಕಿಂತ ಹೆಚ್ಚಿನ ಕಾಲ ನೀರು ಬುಡದಲ್ಲಿ ನಿಂತರೆ ಬೇರುಗಳಿಗೆ ಘಾಸಿಯಾಗಿ ರೋಗ ಬರುವ ಸಾಧ್ಯತೆ ಹೆಚ್ಚು.
 
 
ಪೂರ್ವ ಮುಂಗಾರು ಸಿಂಚನವಾದ ನಂತರ ಮಾಮೂಲಿಯ ಮುಂಗಾರು ಬರುವ ಮುಂಚೆಯೇ ಬಳ್ಳಿಯ ಎಲೆಗಳ ಆಡಿ ಭಾಗಕ್ಕೆ , ಬಳ್ಳಿಯ ಗಂಟುಗಳಿಗೆ ಹಾಗೂ ಸಾಧ್ಯವಾದಷ್ಟು ಹೂ ಕರೆಗಳಿಗೂ ಬೀಳುವಂತೆ ಶೇ. 1 ಬೋರ್ಡೊ ದ್ರಾವಣವನ್ನು ಸಿಂಪರಣೆ ಮಾಡಬೇಕು. ಪ್ರತೀ ಫಲ ಬಿಡುವ ಬಳ್ಳಿಗೆ 3-4 ಲೀ. ಬುಡಕ್ಕೆ ಬೇರು ಭಾಗಕ್ಕೆ ತಗಲುವಂತೆ ಎರೆಯಬೇಕು. ಬೋರ್ಡೊ ದ್ರಾವಣವನ್ನು ಬಳ್ಳಿ ಗಂಟುಗಳಿಗೆ ಸಿಂಪಡಿಸುವುದರಿಂದ ಹಾವಸೆ ಬಂದು ಬಳ್ಳಿ ಜಾರುವುದು ಕಡಿಮೆಯಾಗುತ್ತದೆ. ಪೊಟ್ಯಾಶಿಯಂ ಫೋಸ್ಫೋನೇಟ್ ಸಿಂಪಡಿಸುವುದರಿಂದ ಕರೆಗಳ ಹೂವುಗಳಿಗೆ ಘಾಸಿಯಾಗುವ ಸಾಧ್ಯತೆ ಇದೆ.
ಮುಂಗಾರು ಮಳೆ ಪ್ರಾರಂಭವಾದೊಡನೆ ನೆಲಮಟ್ಟದಲ್ಲಿ ಹಬ್ಬುತ್ತಿರುವ ಬಳ್ಳಿಗಳನ್ನು ತೆಗೆಯುವುದು ಅವಶ್ಯಕ. ಈ ಬಳ್ಳಿಗಳು ನೆಲಕ್ಕೆ ತಾಗಿ ಮಣ್ಣಿನಲ್ಲೇ ವಾಸ್ತವ್ಯವಿರುವ ಶಿಲೀಂದ್ರಗಳನ್ನು ಬಳ್ಳಿಗೆ ತಲುಪಿಸಲು ನೆರವಾಗುತ್ತವೆ. ಬಳ್ಳಿಯ ಎಲೆಗಳು ನೆಲಮಟ್ಟದಿಂದ ಎರಡು ಮೂರು ಆಡಿ ಮೇಲೆ ಇದ್ದರೆ ಮಣ್ಣು ಸಿಡಿದು ಎಲೆಗಳಿಗೆ ತಗಲುವುದು ತಪ್ಪುತ್ತದೆ.
 
 
ಮಣ್ಣಿನ ರಸ ಸಾರವನ್ನು 6 ರಿಂದ 6.5 ರ ಒಳಗೆ ಇರುವಂತೆ ಮಣ್ಣಿಗೆ ಡೊಲೋಮೈಟ್ ಸುಣ್ಣ ಅಥವಾ ಚಿಲ್ಲೇಟೆಡ್ ಕ್ಯಾಲ್ಸಿಯಂ ಹಾಕಿ ಸರಿಪಡಿಸಿಕೊಳ್ಳಬೇಕು. ಎಲ್ಲಾ ರೋಗಕ್ಕೂ ಮಣ್ಣಿನ ಆರೋಗ್ಯವೇ ಪ್ರಧಾನ. ಮಣ್ಣು ತಟಸ್ಠವಾಗಿದ್ದಲ್ಲಿ ರೋಗ ಕಾರಕಗಳ ಮೊಳೆಯುವಿಕೆ ಕಡಿಮೆಯಾಗುತ್ತದೆ.
ಹಬ್ಬು ಬಳ್ಳಿಗಳು ಹಾಗೂ ಕೆಳಭಾಗದ ಎಲೆಗಳಲ್ಲಿ ಕಪ್ಪು ಚುಕ್ಕೆಗಳು ಕಂಡು ಬಂದರೆ, ಹೂ ಕರೆಗಳು ಕಪ್ಪಾಗಿದ್ದರೆ ರೋಗ ತಗುಲಿದೆ ಎಂದರ್ಥ. ತಕ್ಷಣವೇ ರೋಗಾಣು ನಾಶಕ್ಕೆ ರಿಡೋಮಿಲ್ ಮ್ಯಾಂಕೋಜೆಬ್ ಶಿಲೀಂದ್ರ ನಾಶಕವನ್ನು (2 ಗ್ರಾಂ) ಸಿಂಪಡಿಸಬೇಕು. ರೋಗ ಭಾಧಿತ ಬಳ್ಳಿಯ ಯಾವುದೇ ಭಾಗವನ್ನೂ ತೋಟದಲ್ಲಿ ಉಳಿಸಬಾರದು. ಅಗೆತ ಮಾಡಬಾರದು. ಬೆಳೆ ಅವಧಿಯಲ್ಲಿ ಸರಿಯಾಗಿ ಮುನ್ನೆಚ್ಚರಿಕೆಯ ಶಿಲೀಂದ್ರ ನಾಶಕ ಸಿಂಪಡಿಸಬೇಕು.
 
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here