ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ

0
169

 
ಮಂಗಳೂರು ಪ್ರತಿನಿಧಿ ವರದಿ
ಮಂಗಳೂರು ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದ್ದು, ಈ ಸಂದರ್ಭದಲ್ಲಿ ಜನರ ನೀರಿನ ಭವಣೆ ನೀಗಿಸಲು ಪಾಲಿಕೆಯ ಆಡಳಿತದೊಂದಿಗೆ ಮತ್ತು ಜಿಲ್ಲಾಡಳಿತದೊಂದಿಗೆ ತುಂಬು ಸಹಕಾರದಿಂದ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಏ.26ರಂದು ಮಹಾನಗರಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ತುಂಬೆ, ಎ.ಎಂ.ಆರ್, ಎಂ.ಆರ್.ಪಿ.ಎಲ್ ಅಣೆಕಟ್ಟುಗಳ ನೈಜ ಸ್ಥಿತಿಯನ್ನು ಪರಿಶೀಲಿಸಿದ್ದು, ಕಂಡುಕೊಂಡ ಅಂಶಗಳ ಪ್ರಕಾರ ಇನ್ನು 7-8 ದಿನಕ್ಕೆ ಸಾಕಾಗುವಷ್ಟು ಮಾತ್ರ ನೀರು ಲಭ್ಯವಿದೆ. ಪಾಲಿಕೆಯ ಆಡಳಿತದ ಮತ್ತು ಅಧಿಕಾರಿ ವರ್ಗದ ದಿವ್ಯ ನಿರ್ಲಕ್ಷ್ಯದಿಂದ ನೀರಿನ ಭವಣೆ ಇನ್ನಷ್ಟು ಹೆಚ್ಚಾಗಿದ್ದು, ತುಂಬೆ ಡ್ಯಾಂನಲ್ಲಿ 3 ಅಡಿಯಷ್ಟು ಹೂಳು ತುಂಬಿದ್ದು, ಎಂ.ಆರ್.ಪಿ.ಎಲ್ ಡ್ಯಾಂನಿಂದ ಎ.ಎಂ.ಆರ್ ಡ್ಯಾಂಗೆ ನೀರು ಸರಾಗವಾಗಿ ಹರಿಯಲು ಮರಳು ರಾಶಿ ಅಡ್ಡಿಯಾಗುತ್ತಿದೆ. ಇದರಿಂದ ಇರುವ ನೀರನ್ನು ಸುಸೂತ್ರವಾಗಿ ಪಂಪ್ ಮಾಡಲು ಅಸಾಧ್ಯವಾದ ಪರಿಸ್ಥಿತಿಯಿದೆ.
 
 
 
ಮೇಯರ್ ಮೇ ತಿಂಗಳ ಅಂತ್ಯದವರೆಗೆ ಕುಡಿಯುವ ನೀರಿಗೆ ಕೊರತೆಯಿಲ್ಲ, ಎ.ಎಂ.ಆರ್. ಡ್ಯಾಂನಲ್ಲಿ ಸಾಕಷ್ಟು ನೀರು ಸಂಗ್ರಹವಿದೆ, ನೀರು ಸರಬರಾಜು ವ್ಯವಸ್ಥೆಯಲ್ಲಿ ಮಾತ್ರ ಲೋಪದೋಷಗಳಿವೆ. ಎಂದು ಹೇಳಿಕೆ ನೀಡಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿರುವುದು ಈಗ ಸ್ಪಷ್ಟವಾಗಿದೆ. ತನ್ನ ತಪ್ಪು ಹೇಳಿಕೆಯ ಅರಿವಾಗುತ್ತಿದ್ದಂತೆ ಅಧಿಕಾರಿಗಳು ನನ್ನನ್ನು ಮಂಗ ಮಾಡಿದ್ದಾರೆಂದು ಹೇಳಿರುವ ಮೇಯರ್ ರವರು ಸಾರ್ವಜನಿಕರ ಮೂಲಭೂತ ಅವಶ್ಯಕತೆಗೆ ಸಂಬಂಧಿಸಿದ ವಿಷಯದಲ್ಲಿ ತಪ್ಪು ಮಾಹಿತಿ ನೀಡಿರುವ ಈ ಅಧಿಕಾರಿಗಳ ವಿರುದ್ಧ ಏನು ಶಿಸ್ತು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ತಿಳಿಸಬೇಕು. ಮಾತ್ರವಲ್ಲದೆ ಕಟ್ಟಡ ನಿರ್ಮಾಣ ಕಾಮಗಾರಿಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕೆಂದು ಆದೇಶಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳದೆ ಕುಡಿಯುವ ನೀರು ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿರುವುದು ವಿಷಾದನೀಯ.
 
 
ಈ ಹಿಂದೆ ಪಾಲಿಕೆಯ ವ್ಯಾಪ್ತ್ಯಿಯಲ್ಲಿ ಸಾರ್ವಜನಿಕ ಬಾವಿಗಳಿದ್ದು, ತುರ್ತು ಸಂದರ್ಭದಲ್ಲಿ ಇವುಗಳನ್ನು ಉಪಯೋಗಿಸಲು ಸಾಧ್ಯವಾಗುತ್ತಿತ್ತು. ಆದರೆ ಅಂತ ಬಾವಿಗಳು ಈಗ ಇಲ್ಲ. ಮಾತ್ರವಲ್ಲದೆ ಬಾವಿಗಳನ್ನು ಶುಚಿಗೊಳಿಸುವ ಯಾವುದೇ ವ್ಯವಸ್ಥೆ ಪಾಲಿಕೆಯಲ್ಲಿಲ್ಲದೆ ಇರುವುದರಿಂದ ಇರುವ ಖಾಸಗಿ ಬಾವಿಗಳ ನೀರನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಸರಕಾರದಿಂದ ಬರ ಪರಿಹಾರಕ್ಕೆ ಸುಮಾರು ರೂ. 1.00 ಕೋಟಿ ಅನುದಾನ ಬಿಡುಗಡೆಯಾಗಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಲು ಸೂಚನೆ ನೀಡಿದೆಯಾದರೂ ಈವರೆಗೂ ಈ ಯೋಜನೆ ಅನುಷ್ಠಾನಗೊಳ್ಳದೆ ಇರುವುದು ಹಾಗೂ ಈಗಾಗಲೇ ಬಳಕೆಯಾಗುತ್ತಿರುವ ಟ್ಯಾಂಕರ್ ವ್ಯವಸ್ಥೆಯಲ್ಲಿ ಅವ್ಯವಹಾರ ನಡೆಯುತ್ತಿರುವುದು ವಿಷಾದನೀಯ ಸಂಗತಿ.
 
 
ಪಾಲಿಕೆಯ ಆಡಳಿತದವರು ಕುಡಿಯುವ ನೀರಿನ ತಾತ್ವಾರದ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಕ್ಷಿಪ್ರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಹಾಗೂ ಇದಕ್ಕೆ ಸಂಪೂರ್ಣ ಸಹಕಾರವನ್ನು ನೀಡಲಿದ್ದೇವೆ.
ಮಂಗಳೂರಿನಲ್ಲಿ ತಲೆದೋರಿದ ಈ ಜಲಕ್ಷಾಮ ನಮಗೆ ಎಚ್ಚರಿಕೆಯ ಕರೆ ಗಂಟೆಯಾಗಿದ್ದು, ಪರಿಸರ ಸಮತೋಲನ ಕಾಪಾಡಿಕೊಂಡು ಸಹ್ಯ ಅಭಿವೃದ್ಧಿಯನ್ನು ನಡೆಸಲು ಗಂಭೀರ ಚಿಂತನೆಯನ್ನು ಪಾಲಿಕೆಯು ಮುಂದಿನ ದಿನಗಳಲ್ಲಿ ಮಾಡಬೇಕಾಗಿದೆ.
 
 
 
ಜಿಲ್ಲೆಯಲ್ಲಿ ನೀರಿನ ಮೂಲವೇ ಬತ್ತಿ ಹೋಗಿರುವುದರಿಂದ ದೇವರಿಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ. ಆದ್ದರಿಂದ ಪಾಲಿಕೆಯ ಬಿಜೆಪಿ ಕಾರ್ಪೋರೇಟರ್ ಗಳು ಏ.28ರಂದು ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದು, ಪ್ರಕೃತಿ ಮಾತೆಯು ಜನರ ಮೇಲೆ ಕರುಣೆ ತೋರಿ ನೀರಿನ ಭವಣೆಯನ್ನು ಶಮನಗೊಳಿಸಲು ಪ್ರಾರ್ಥಿಸಲಾಗುವುದು ಎಂದು ಮಂಗಳೂರು ಪ್ರತಿಪಕ್ಷ ನಾಯಕಿ ರೂಪಾ ಡಿ.ಬಂಗೇರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here