ಅಂಕಣಗಳು

ಮಲಗಿದರೆ ಆದು ಮಲೆನಾಡಿನ ಸೌಂದರ್ಯದ ಕುತ್ತಿಗೆ ಹಾರ ಆಗುವುದಿಲ್ಲ!!!

ಇದು ನಾವು ನೀವೆಲ್ಲ ಹಲವು ಬಾರಿ ಅನುಭವಿಸಿದ ವಿಚಾರವೇ…ಆದರೂ ಎಷ್ಟೋ ಬಾರಿ ನಾವು ಇವೆಲ್ಲವುಗಳನ್ನು ಮರೆತು ಬಿಡುತ್ತೇವೆ. ಗೆಳೆಯ, ಚಾರಣಿಗ, ಪ್ರಕೃತಿ ಪ್ರಿಯ ದಿನೇಶ್‌ ಹೊಳ್ಳ ಕೊಟ್ಟಿಗೆ ಹಾರದ ವಿಚಾರವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ…ಓದಿ ಅನುಭವಿಸಿ… ಸಂಪಾದಕ.

 

ಕೊಟ್ಟಿಗೆ ಹಾರ ಮಲಗುವುದಿಲ್ಲ….ಮಲಗಿದರೆ ಆದು ಮಲೆನಾಡಿನ ಸೌಂದರ್ಯದ ಕುತ್ತಿಗೆ ಹಾರ ಆಗುವುದಿಲ್ಲ. ಕರಾವಳಿ ಮತ್ತು ಮಲೆನಾಡಿನ ವಿಭಜನೆ ಆಗುವುದು ಚಾರ್ಮಾಡಿ ಘಾಟಿಯ ಕೊಟ್ಟಿಗೆ ಹಾರದಲ್ಲಿ…ಕೊಟ್ಟಿಗೆ ಹಾರ ಅತೀ ಸಣ್ಣ ಪೇಟೆ ಆದರೂ ಅದರ ಆಕರ್ಷಣೆ ಬಹಳ ದೊಡ್ಡದು. ಸುತ್ತಲೂ ಬೆಟ್ಟ, ಕಾಡು, ಚಾರ್ಮಾಡಿ ಘಾಟಿಯ ಗಗನ ಚುಂಬಿ ಶಿಖರಗಳು. ಅತ್ತ ಇನ್ನೊಂದು ಕಡೆ ಕಾಫೀ, ಚಹಾ ತೋಟಗಳು. ವರ್ಷ ಪೂರ್ತಿ ಹಸಿರು ದುಕೂಲದ ನೆರಿಗೆ ಗಳಿರುವ ಅಡವಿ, ಗಿರಿ, ಕಣಿವೆಗಳ ವಿಹಂಗಮ ನೋಟ.

ನದೀ ಮೂಲಗಳ ಕಣಿವೆಗಳಲ್ಲಿ ಅಲ್ಲಲ್ಲಿ ನೀರಿನ ಒರತೆಗಳು. ಅಡವಿಯ ಎದೆಯಲಿ, ಗಿಡಗಳ ನಡು ವಲ್ಲಿ ನೊರೆ ಗಳ ಪುಟಿ ಸುತ ಕುಣಿ ಕುಣಿ ದಾಡುತ ಹರಿಯುವ ನೀರಿನ ಜುಳು ಜುಳು ನಾದದಲ್ಲಿ ನಿಸರ್ಗ ಸೌಂದರ್ಯ ದ ಲಹರಿ ಇವೆ. ಕಡು ನೀಲ ಬಾನಿನಲ್ಲಿ ಬಿಳಿ ಮುಗಿಲ ರಾಶಿಯು ಹಸಿರು ಗಿರಿಗಳ ಚುಂಬಿಸಿದ ಹೊತ್ತು, ಅದೇನೋ ಬಣ್ಣಗಳ ಸಂಗಮವಾದ ಗತ್ತು. ಕಾಣದ ಪ್ರಕೃತಿ ಎಂಬ ಕಲಾವಿದ ಎಲ್ಲೆಲ್ಲೋ ಬಣ್ಣಗಳ ಚೆಲ್ಲಿ ಇಡೀ ಚಾರ್ಮಾಡಿ ಘಾಟಿಯ ನು ನಿಸರ್ಗ ನಿರ್ಮಿತ ಆರ್ಟ್ ಗ್ಯಾಲರಿ ಮಾಡುವುದನ್ನು ನೋಡಲು ಕೇವಲ ಕಣ್ಣುಗಳು ಸಾಲದು, ಒಳಗಣ್ಣು, ಒಳಮನಸು ಮುಖ್ಯವಾಗಿರುತ್ತದೆ.

ಕೊಟ್ಟಿಗೆ ಹಾರ ಅಂದರೆ ಮಲೆನಾಡಿನ ಕುತ್ತಿಗೆಗೆ ಹಾರವಾಗಿರುತ್ತದೆ. ಯಾಕೆಂದರೆ ಮಲೆನಾಡಿನ ಅಂದರೆ ಚಿಕ್ಕಮಗಳೂರಿನ ನಿಸರ್ಗ ಸೌಂದರ್ಯದ ಮಹಲಿನ ಒಂದೊಂದೇ ಅಂದ ಆರಂಭವಾಗುವುದೇ ಈ ಕೊಟ್ಟಿಗೆ ಹಾರಾದಲ್ಲಿ…ಇದರ ಸಮೀಪದ ಜಾವಲೇ ಎಂಬಲ್ಲಿ ಹೇಮಾವತಿ ನದೀ ಮೂಲ ಇದ್ದು, ಜಾವಳೆಯ ಇನ್ನೊಂದು ಪಕ್ಕದ ದುರ್ಗದ ಬೆಟ್ಟದಲ್ಲಿ ನೇತ್ರಾವತಿ ನದಿಯ ಒಂದು ಪ್ರಧಾನ ಉಪ ನದಿಯಾಗಿರುವ ಬಂಡಾಜೆ ಹೊಳೆಯ ಉಗಮ ಸ್ಥಾನ ವಿರುವುದು ಇಲ್ಲಿನ ವಿಶೇಷ.

ಕೊಟ್ಟಿಗೆಹಾರದ ನೀರ್ ದೋಸೆ ತಿನ್ನದೇ ಇದ್ದರೆ ಕೊಟ್ಟಿಗೆ ಹಾರ ಕ್ಕೆ ಹೋಗಿಯೂ ವೇಸ್ಟ್ . ದಿನದ 24 ಗಂಟೆಯೂ ಇಲ್ಲಿ ಬಿಸಿ ಬಿಸಿ ರುಚಿಯಾದ ನೀರ್ ದೋಸೆ ಲಭಿಸುತ್ತವೆ. ಮಳೆಗಾಲದಲ್ಲಿ ಮಂಜು ಮುಸುಕಿದ ಕೊಟ್ಟಿಗೆ ಹಾರ ಇನ್ನೂ ಚಂದ. ಒಮ್ಮೆ ಇಡೀ ಬೆಟ್ಟವನ್ನು ಆವರಿಸಿದ ಮಂಜು ಕ್ರಮೇಣ ನಿಧಾನಕ್ಕೆ ಮಂಜು ಕಡಿಮೆಯಾಗಿ ಬೆಟ್ಟದಿಂದ ಎತ್ತಲೋ ಪಯಣಿಸುವಾಗ ಮಾಯವಾಗಿದ್ದ ಹಸಿರು ಬೆಟ್ಟಗಳು ನಿಧಾನಕ್ಕೆ ತನ್ನ ಇರುವನ್ನು ತೋರಿಸುವುದು, ಮತ್ತೆ ಮಂಜು ಆವರಿಸಿ ಬೆಟ್ಟಗಳು ಮರೆಯಾಗುವ ಪುನರಾವರ್ತನೆ ನೋಡುವುದೇ ಚಂದ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here