ಮರೆಯಾಗುತ್ತಿರುವ ಅಗ್ರಹಾರಗಳು

0
503

 
ದೃಷ್ಠಿ ಅಂಕಣ: ಸೌಮ್ಯ ಕುಗ್ವೆ
ಯು.ಆರ್ ಅನಂತ ಮೂರ್ತಿಯವರ ಕಾದಂಬರಿ ಸಂಸ್ಕಾರ ಓದುತ್ತಿದ್ದಂತೆ ಅಲ್ಲಿ ಪ್ರಸ್ತಾಪಿಸಿದ “ಅಗ್ರಹಾರ” ನನ್ನ ಗಮನ ಸೆಳೆಯಿತು. ಹೌದಲ್ಲವೇ ಈಗೀಗ ಅಗ್ರಹಾರ ನಮ್ಮ ಕಥೆ ಕಾದಂಬರಿಗಳಲ್ಲಿ ಅಥವಾ ಕೆಲವೇ ಕೆಲವು ಪ್ರಶಸ್ತಿ ಪುರಸ್ಕೃತ ಕಾದಂಬರಿ ಆಧಾರಿತ ಸಿನೆಮಾಗಳಲ್ಲಿ ಮಾತ್ರ ಕಾಣಸಿಗುವುದು. ಇಂದಿನ ಯುವ ಪೀಳಿಗೆಗೆ ಅಗ್ರಹಾರವೆಂದರೇನೆಂಬ ಪ್ರಶ್ನೆ ಕೇಳಿದರೆ ಯಾವುದು? ಪರಪ್ಪನ ಅಗ್ರಹಾರವಾ ? ಅಥವಾ ಕೇಳಿದವರ ಮುಖವನ್ನೇ ವಿಚಿತ್ರವಾಗಿ ದೃಷ್ಠಿಸಿ ಯಾರು.
drutsti colom
 
 
ಹಾಗಾದರೆ ಏನಿದು ಅಗ್ರಹಾರ?
ಪ್ರಾಚೀನ ಭಾರತದ ಸುವ್ಯವಸ್ಥಿತ ನಗರ ಪದ್ಧತಿಯಲ್ಲಿ ಅಗ್ರಹಾರಗಳೂ ಒಂದು ಭಾಗ. ಹೆಚ್ಚಾಗಿ ಬ್ರಾಹ್ಮಣ ವರ್ಗಕ್ಕೆಂದೇ ಸೀಮಿತವಾದ ಪ್ರದೇಶ. ಸಂಸ್ಕೃತ ಮೂಲದ ಅಗ್ರಹಾರಂ ಶಬ್ದದಲ್ಲಿ ಅಗ್ರ ಎಂದರೆ ಪ್ರಮುಖ, ಹರಂ ಎಂದರೆ ಶಿವ ಎಂದರ್ಥ. ಶಿವನ ಆರಾಧಕರಿಗೇ ಸೀಮಿತವಾದ ಪ್ರದೇಶವು ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆಂದೇ ಮೀಸಲಾದ ಪ್ರದೇಶವಾಯಿತು. ಇಂದು ಬ್ರಾಹ್ಮಣ ವಿರೋಧಿಗಳು ಈ ಅಗ್ರಹಾರ ವ್ಯವಸ್ಥೆಯನ್ನು ವಿರೋಧಿಸಿಯಾರು ಮತ್ತು ಈಗ ಎಲ್ಲಿಯೂ ಅಗ್ರಹಾರಗಳು ಬ್ರಾಹ್ಮಣರಿಗೆಂದೇ ಸೀಮಿತವಾಗಿ ಕಾಣಸಿಗುವುದಿಲ್ಲ.
 
 
 
ಹೇಗಿತ್ತು?
ಮನೆ ಎದುರಿನ ರಸ್ತೆಗೇ ನೇರ ತೆಗೆದುಕೊಳ್ಳುವ ಬಾಗಿಲುಗಳುಳ್ಳ ಇಳಿಜಾರಿನ ಛಾವಣಿಯುಳ್ಳ ಸಾಲು ಮನೆಗಳು ಈ ಅಗ್ರಹಾರದ ಪ್ರಮುಖ ಲಕ್ಷಣ. ಈ ಅಗ್ರಹಾರಗಳಲ್ಲಿ ದೇವಾಲಯಕ್ಕೆ, ವೇದ ಸಂಬಂಧಿ ವಿಚಾರಗಳಿಗೇ ಪ್ರಮುಖ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಮನೆಯೆದುರು ಗೋಮಯದಿಂದ ಶುದ್ಧೀಕರಿಸಲ್ಪಟ್ಟ ರಸ್ತೆಗಳು, ಸುಂದರ ರಂಗೋಲಿ ಹಾಕಲ್ಪಟ್ಟಂತಹ ಮುಂಬಾಗಿಲುಗಳು…. ಹೀಗೊಂದು ವ್ಯವಸ್ಥಿತ ನಗರ ಭಾಗವಾಗಿತ್ತು.
 
 
 
ಇಂದಿನ ಕಾಂಕ್ರೀಟು ಕಾಡಿನಲ್ಲಿ ಅಗ್ರಹಾರಗಳು ಕಣ್ಮರೆಯಾಗುತ್ತಿರುವುದಲ್ಲದೇ ಹೊಸ ಹೊಸ ಪಾಶ್ಚಾತ್ಯ ವಾಸ್ತು ಶಿಲ್ಪಕ್ಕೆ ಮಾರು ಹೋಗಿರುವ ಬಹುತೇಕ ಭಾರತೀಯರಿಗೆ ನಮ್ಮಲ್ಲಿರುವ ಈ ವ್ಯವಸ್ಥಿತ ಅಗ್ರಹಾರದ ಮನೆಗಳ ವಾಸ್ತುಶಿಲ್ಪ ಮರೆಯುತ್ತಿದೆ. ಸಾಲು ಸಾಲಾಗಿ ಒಂದೇ ಆಯ-ಆಕಾರ ಹೊಂದಿರುವ ಮನೆಗಳು ಕಾಣಸಿಗುವುದು ಅಗ್ರಹಾರಗಳಲ್ಲಿ ಮಾತ್ರ. ಆದರೆ ಜಾಗತೀಕರಣ, ಮೆಟ್ರೋಪಾಲಿಟನ್ ನಗರಗಳು, ಬ್ರಾಹ್ಮಣ ವಿರೋಧಿ ಅಲೆಗಳು ಅಗ್ರಹಾರದ ಸುಂದರತೆಯನ್ನು ನಾಶಪಡಿಸಿದೆ. ಮಾಡರ್ನ್ ಚಿಂತನೆಗಳು ಅಗ್ರಹಾರವನ್ನು ಅಪರೂಪವಾಗಿಸಿದೆ.
 
 
ಹಿಂದೆ ಅಂತದ್ದೊಂದು ಕಾಲವಿತ್ತು.ಆಳುವ ರಾಜ ಧರ್ಮಿಷ್ಠ ಹಾಗು ಧರ್ಮ ಸಹಿಷ್ಣುವೂ ಆಗಿದ್ದಲ್ಲಿ ದಾನ ಅಥವಾ ಉಂಬಳಿಯಾಗಿ ಒಂದಷ್ಟು ಭೂಮಿಯನ್ನು ದೇವಸ್ಥಾನ ಹಾಗೂ ಅದನ್ನು ನೋಡಿಕೊಳ್ಳುವ ಮಂದಿಗೆ ಬಿಟ್ಟು ಕೊಡುತ್ತಿದ್ದರು. ವೇದಾಧ್ಯಯನ ಮಾಡಿರುವ ಪಂಡಿತ ಪರಂಪರೆಯ ಜನಗಳಿಗೂ ಈ ಜಾಗ ಕೊಡಮಾಡಲ್ಪಟ್ಟಿತ್ತು… ಅಗ್ರಹಾರ ರೂಪುಗೊಂಡ ಹಿನ್ನಲೆಯನ್ನು ಕೆದಕಿದಾಗ ಈ ಅಂಶ ಬೆಳಕಿಗೆ ಬರುತ್ತದೆ. ಈ ರೀತಿ ನಿಧಾನವಾಗಿ ಅಗ್ರಹಾರ ವ್ಯವಸ್ಥೆ ಗಟ್ಟಿಯಾಗಿ ಬೇರೂರಲು ಕಾರಣವಾಯಿತು.
 
 
ಆದರೆ ಅಗ್ರಹಾರ ವ್ಯವಸ್ಥೆ ಇಂದು ಕಣ್ಮರೆಯಾಗತೊಡಗಿದೆ. ಅಗ್ರಹಾರ ವ್ಯವಸ್ಥೆಯ ಹಾಗೂ ಆ ಸಂಪ್ರದಾಯ ವಿರೋಧಿಸುವ ವ್ಯವಸ್ಥಿತ ಪಂಗಡಗಳು ಅಗ್ರಹಾರ ಹಾಗೂ ಬ್ರಾಹ್ಮಣಶಾಹಿತ್ವ ವ್ಯವಸ್ಥೆಯನ್ನು ನಿರಂತರವಾಗಿ ವಿರೋಧಿಸುತ್ತಾ ಠೀಕಿಸುತ್ತಾ ಬಂದಿದ್ದಾರೆ. ಇಷ್ಟೇ ಅಲ್ಲದೆ ಆಧುನಿಕ ವ್ಯವಸ್ಥೆಗಳಿಗೆ ಅನುಗುಣವಾಗಿ, ಬಂಡವಾಳ ಶಾಹಿಗಳ ನಿರಂತರ ದಬ್ಬಾಳಿಕೆಯ ಪ್ರಭಾವದಿಂದ, ಭೂ ಕಬಳಿಕೆಯ ಹಾಗೂ ಇಂದಿನ ಆಧುನಿಕ ಕಾರ್ಪೋರೇಟ್ ವ್ಯವಸ್ಥೆಗಳ ಸೋಂಕಿನಿಂದಾಗಿ ಅಗ್ರಹಾರಗಳು ರೂಪಕಳೆದುಕೊಳ್ಳತೊಡಗಿದವು.
 
 
 
ಕಾಲ ಬದಲಾದಂತೆ ಅಗ್ರಹಾರ ವ್ಯವಸ್ಥೆಯಲ್ಲೂ ಬದಲಾವಣೆಗಳು ಆಧುನಿಕತೆಯ ಪ್ರಭಾವಗಳು ಕಾಣತೊಡಗಿದವು. ಆದರೆ ಇಂದಿಗೂ ಹಳೆಯ ದೇವಸ್ಥಾನದ ಸುತ್ತಲಿರುವ ಪ್ರದೇಶ ಅಗ್ರಹಾರವೇ ಆಗಿದೆ. ಇಂದು ಗೋಕರ್ಣ, ಮೈಸೂರು ಇತ್ಯಾದಿ ಪ್ರವಾಸಿ ಕ್ಷೇತ್ರಗಳಲ್ಲಿ ಅಗ್ರಹಾರಗಳು ಇಂದಿಗೂ ಕಾಣಸಿಗುತ್ತವೆಯಾದರೂ ಹಲವು ಬದಲಾವಣೆಗಳು ಈ ಅಗ್ರಹಾರ ವ್ಯವಸ್ಥೆಯೊಳಗೆ ಸೇರಿಹೋಗಿವೆ.
 
 
 
ಇತಿಹಾಸವನ್ನು ಅಭ್ಯಸಿಸಿದಾಗ, ಅಗ್ರಹಾರಗಳು ಭಾರತೀಯ ನಗರ ವ್ಯವಸ್ಥೆಯ ಪ್ರಮುಖ ಲಕ್ಷಣವೇ ಆಗಿವೆ ಎಂಬ ಪ್ರಮುಖ ಅಂಶಗಳು ಗೋಚರವಾಗುತ್ತವೆ. ತಮಿಳು ನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ಕಂಡು ಬರುವ ಅಗ್ರಹಾರಗಳು ಪಾರಂಪರಿಕ ತಮಿಳು ಬ್ರಾಹ್ಮಣರಿಂದ ಬಂದ ಕೊಡುಗೆಯಾಗಿದೆ. ವಿಶಿಷ್ಟ ದೇವಸ್ಥಾನ ವಾಸ್ತುಶಿಲ್ಪಗಳಿಗೆ ಹೆಸರಾದ ತಮಿಳು ನಾಡಿನಲ್ಲಿ ಅಗ್ರಹಾರಗಳು ತನ್ನದೇ ಆದ ಶೈಲಿಯಲ್ಲಿ ರೂಪು ತಳೆದಿದ್ದವು .ಕೇರಳದ ತಿರುವನಂತಪುರ, ಅತ್ಯಂತ ಹೆಸರುವಾಸಿಯಾದ ತೀರ್ಥಕ್ಷೇತ್ರ ಮಧುರೈ ಮುಂತಾದ ಧಾರ್ಮಿಕ ಪ್ರವಾಸಿ ಕ್ಷೇತ್ರಗಳಲ್ಲಿರುವ ಅಗ್ರಹಾರಗಳ ವಾಸ್ತು ವೈಭವವೂ ವಿಭಿನ್ನವಾಗಿವೆ.
 
 
 
ಪ್ರಮುಖವಾಗಿ ತಮಿಳು ಬ್ರಾಹ್ಮಣರು ನೆಲೆಸಿದ್ದ ಪ್ರದೇಶದ ಬೀದಿ, ಮನೆ ಬಾಗಿಲುಗಳು ಸುಂದರ ರಂಗೋಲಿಗಳಿಂದ ಕಂಗೊಳಿಸುತ್ತಿತ್ತು.ಈ ಅಗ್ರಹಾರಗಳ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಮನೆಗಳು ಮತ್ತು ಬಾಗಿಲುಗಳು ಕೆಂಪು, ಬಿಳಿ ಬಣ್ಣಗಳಿಂದ ಅಲಂಕರಿಸಿರುವುದು. ಇಲ್ಲಿ ಕೆಂಪು ರಕ್ತವನ್ನು, ಬಿಳಿ ಹಾಲನ್ನು ಸಂಕೇತಿಸುತ್ತದೆ. ಇದು ಒಟ್ಟಾರೆ ಆತ್ಮದ ಸಂಕೇತವಾಗಿದ್ದು ಗೋಡೆಗಳ ಮೇಲಿನ ಈ ಬಣ್ಣದ ಚಿತ್ರಗಳು ಆತ್ಮ ಪರಮಾತ್ಮನಲ್ಲಿ ಶರಣಾದದ್ದನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಬಿಳಿ ಮತ್ತು ಕೆಂಪು ಬಣ್ಣವನ್ನು ಹೊಂದಿದ ವಿಶಿಷ್ಟ ಸಂಕೇತಗಳನ್ನು ಹಾಗೂ ರಂಗೋಲಿಗಳನ್ನೊಳಗೊಂಡ ಮನೆ ಬ್ರಾಹ್ಮಣರ ಮನೆ ಎಂಬುದು ನಿರ್ಧರಿತವಾಗುತ್ತಿತ್ತು.
 
 
ಮೂಲ ಅಗ್ರಹಾರ
ಅಗ್ರಹಾರದ ಮೂಲವನ್ನು ಕೆದಕುತ್ತಾ ಸಾಗಿದರೆ ಅಲ್ಲೊಂದು ಅಚ್ಚರಿ ಕಾಣಸಿಗುತ್ತದೆ. ಅಗ್ರಹಾರ ಇದ್ದಲ್ಲಿ ಶಿವ ಅಥವಾ ಇತರೆ ದೇವಸ್ಥಾನವೊಂದು ಇದ್ದೇ ಇದೆ ಎಂಬ ಅಂಶ ಪೂರ್ವ ನಿರ್ಧರಿತ. ಈ ಅಗ್ರಹಾರಗಳನ್ನು ಮೂಲದಲ್ಲಿ ಕಟ್ಟಿದವರು ತಮಿಳುನಾಡಿನ ತಮಿಜಕೋಂ ಎಂಬ ಪಂಗಡಕ್ಕೆ ಸೇರಿದ ಬ್ರಾಹ್ಮಣರು. ಮಕರಕರ ನದಿಯ ತೀರದಲ್ಲಿ ವಾಸವಾಗಿದ್ದ ಈ ಜನಾಂಗದವರು ಜೀವಿಸುತ್ತಿದ್ದ ಅಗ್ರಹಾರದ ಮನೆಗಳ ಗೋಡೆಗಳು ಒಂದಕ್ಕೊಂದು ತಾಗಿದಂತೆ ಕಟ್ಟಲ್ಪಡುತ್ತಿತ್ತು.
 
 
ಈ ಗುಂಪು ಗುಂಪಾದ ಮನೆಗಳ ಈ ಅಗ್ರಹಾರದ ಮೇಲ್ತುದಿಯಲ್ಲಿ ಶಿವ ದೇವಾಲಯ ಕಂಡುಬರುತ್ತದೆ. ಈ ಅಗ್ರಹಾರಗಳು ತಮ್ಮದೇ ಆದ ವಿಶಿಷ್ಟ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಪ್ರತಿಯೊಂದು ಮನೆಯೂ ಎದುರಿನ ರಸ್ತೆಗೆ ತೆರೆದು ಕೊಂಡಂತೆ ಕಟ್ಟಲ್ಪಟ್ಟಿರುತ್ತದೆ.
 
 
 
ಮನೆಯ ಮುಂಭಾಗದಲ್ಲಿ ಸ್ವಾಗತ ಕೊಠಡಿಗಳು, ಅದರೊಳಗೆ ವಾಸ್ತವ್ಯಕ್ಕನುಕೂಲಕರ ರೀತಿಯ ಕೊಠಡಿ ಹಾಗೂ ಹಿಂಭಾಗದಲ್ಲಿ ಅಡುಗೆ ಮನೆ, ಹಾಗೂ ಹೊರಾಂಗಣ, ನಾಲ್ಕು ಸೂತ್ರದ ಮನೆಯಾದರೆ ಮಧ್ಯಭಾಗದಲ್ಲಿ ತೆರೆದುಕೊಂಡಂತೆ ಕಟ್ಟಲ್ಪಡುತ್ತಿತ್ತು. ಸ್ವಾಗತ ಕೊಠಡಿಗಳು ಅಂದರೆ ಎದುರಿನ ಬೀದಿಗೆ ತೆರೆದುಕೊಂಡಂತೆ ಕಟ್ಟಲಾಗುತ್ತಿತ್ತು. ಹೆಚ್ಚಾಗಿ ಜಾತಿ ಮರದ ಕಲಾತ್ಮಕ ಬೃಹತ್ ಕಂಬಗಳನ್ನು ಹೊಂದಿರುತ್ತಿತ್ತು. ಗೋಡೆಗಳಲ್ಲಿ ಹಾಗೂ ಎದುರುಭಾಗದಲ್ಲಿ ರಂಗೋಲಿಗಳಿಂದ ಅಲಂಕೃತವಾಗಿರುತ್ತಿತ್ತು.
 
 
ದುರದೃಷ್ಟವಶಾತ್ ಇಂದು ಇಂತಹ ಅಗ್ರಹಾರಗಳು ನಶಿಸಿಹೋಗುತ್ತಿವೆ. ಆ ಪ್ರದೇಶದಲ್ಲಿ ಕಾಂಕ್ರೀಟ್ ಕಟ್ಟಡಗಳು, ಬಹುಮಹಡಿ ಕಟ್ಟಡಗಳು ತಲೆಯೆತ್ತುತ್ತಿವೆ. ಪಾರಂಪರಿಕ ಸಂಪ್ರದಾಯಗಳು ಇಂದು ಮೂಲೆಗುಂಪಾಗುತ್ತಿದೆ. ಒಂದರ್ಥದಲ್ಲಿ ಸಂಸ್ಕೃತಿಯನ್ನು ನಾವೇ ನಮ್ಮ ಕೈಯಾರೆ ಹೊಸಕಿ ಹಾಕುತ್ತಿದ್ದೇವೆ…
 
 
ಆಧುನಿಕತೆಯ ಸೋಗಿನಲ್ಲಿ ನಲುಗುತ್ತಿರುವ ಅಗ್ರಹಾರಗಳು…
ದಕ್ಷಿಣ ಭಾರತದಲ್ಲಿ ಮಾತ್ರ ಕಂಡು ಬರುವ ಈ ಅಗ್ರಹಾರ ಬೀದಿಯ ಮನೆಗಳು ತಮ್ಮದೇ ಆದ ಸರಳಸುಂದರ ವಾಸ್ತು ಶೈಲಿಯನ್ನು ಹೊಂದಿತ್ತು. ತಮಿಳುನಾಡಿನ ಕೆಲವು ಪ್ರಮುಖ ಅಗ್ರಹಾರಗಳಲ್ಲಿ ಕೆಲವೇ ಕೆಲವು ಮನೆಗಳು ಇಂದಿಗೂ ಆ ವಾಸ್ತು ಶೈಲಿಯನ್ನು ಹೊಂದಿದೆ.ಉಳಿದಂತೆ ಇನ್ನೆಲ್ಲ ಕಡೆಗಳಲ್ಲಿ ಅಗ್ರಹಾರಗಳು ಆಧುನಿಕತೆಗೆ ಒಳ ಪಟ್ಟಿವೆ.
 
ವಾಸ್ತುವಿನ ಪ್ರಕಾರವೇ ಕಟ್ಟಲಾದ ಈ ಮನೆಗಳು ಇಳಿಜಾರಿನ ಛಾವಣಿಯನ್ನು ಹೊಂದಿರುತ್ತಿತ್ತು. ಮನೆಯ ಒಳಭಾಗ ತಂಪಾಗಿರಲು ಟೆರ್ರಾಕೋಟದಿಂದ ಮೇಲ್ಛಾವಣಿಯನ್ನು ನಿರ್ಮಿಸುತ್ತಿದ್ದರು. ಪ್ರತೀ ಮನೆಯ ಮುಂದಿನ ಭಾಗದಲ್ಲಿ ಅಗಲವಾದ ಕಟ್ಟೆ, ಬಾಗಿಲಿನಿಂದ ಒಳಗೆ ಸಾಗುತ್ತಿದ್ದಂತೆ ಮತ್ತೆ ಅಗಲವಾದ ಕಟ್ಟೆ ನಂತರ ವಿಶಾಲವಾದ ಜಗುಲಿ ಇರುತ್ತಿತ್ತು. ಇದರ ಮುಂದಿನ ಭಾಗದಲ್ಲಿ ಹಜಾರ ಅದಕ್ಕೆ ಹೊಂದಿಕೊಂಡಂತೆ ಅಡುಗೆ ಕೋಣೆ ನಿರ್ಮಿಸುತ್ತಿದ್ದರು. ಸಾಮಾನ್ಯವಾಗಿ ಈ ಅಗ್ರಹಾರಗಳು ನಾಲ್ಕು ಅಥವಾ ಐದು ಸೂತ್ರದ ಮನೆಗಳನ್ನು ಹೊಂದಿರುತ್ತಿತ್ತು. ಮನೆಯ ಮಧ್ಯ ಭಾಗದಲ್ಲಿ ಸಣ್ಣ ಅಂಗಳ ಹೊಂದಿ ಬೆಳಕಿಗೆ ತೆರೆದು ಕೊಂಡಿರುತ್ತಿತ್ತು. ಕೆಲವು ಮನೆಗಳು ಹಿಂಭಾಗದಲ್ಲಿಯೂ ಸಹ ಅಂಗಳವನ್ನು ಹೊಂದಿರುತ್ತಿತ್ತು.
 
ಆದರೆ ತಮಿಳುನಾಡಿನ ಕೆಲವು ಬ್ರಾಹ್ಮಣ ವಿರೋಧಿ ಚಳುವಳಿಗಳು ಈ ಪರಂಪರಾಗತ ಶೈಲಿಗೇ ದಾಳಿ ಮಾಡಿದ್ದು ಅಲ್ಲಿನ ಬ್ರಾಹ್ಮಣ ಕುಟುಂಬಗಳು ಬದಲಾದ ವಸ್ತು ಸ್ಥಿತಿಗೆ ಅನಿವಾರ್ಯವಾಗಿ ಹೊಂದಿಕೊಂಡಿದ್ದಾರೆ. ತಮಿಳುನಾಡು ಮಾತ್ರವಲ್ಲ ದಕ್ಷಿಣ ಭಾರತದಲ್ಲಿನ ಅನೇಕ ಅಗ್ರಹಾರಗಳು ತಮ್ಮ ನೈಜ ಸೌಂದರ್ಯವನ್ನು ಕಳೆದುಕೊಂಡಿರುವುದು ಜಾತೀ ವಾದವೆಂಬ ಪೆಡಂಭೂತದಿಂದ. ಆಧುನಿಕತೆ ಭಾರತದ ಪ್ರತಿಯೊಂದು ಪ್ರದೇಶದಲ್ಲೂ ಹಾಸು ಹೊಕ್ಕಾಗಿದೆ. ಎಲ್ಲೆಲ್ಲೂ ಮನೆಗಳು ನವೀನ ಮಾದರಿಯನ್ನು ಮೈಗೂಡಿಸಿಕೊಂಡಿದೆ.ನಮ್ಮ ಪರಂಪರಾಗತ ಶೈಲಿಯು ಲವಲೇಶವೂ ಇಲ್ಲದಂತೆ ಮಾಯವಾಗಿದೆ. ಪರಂಪರೆ, ಸಂಸ್ಕೃತಿ ಉಳಿಯಬೇಕು ಎಂಬುದು ಒಂದು ವೈಚಾರಿಕ ವಾದವಾದರೆ ಇನ್ನೊಂದು ವಾದ ಅದ್ಯಾವುದೂ ಬೇಡವೇ ಬೇಡ ಎಂಬಂತಹುದು. ಇದಕ್ಕೆ ಅಗ್ರಹಾರ ಕೂಡಾ ಒಳಪಟ್ಟಿದೆ.
 
ಇಡೀ ಪ್ರಪಂಚದಲ್ಲಿ ವಿವಿಧತೆ, ವಿಶಿಷ್ಠತೆಗೆ ಹೆಸರಾಗಿರುವ ನಮ್ಮ ದೇಶ ವಿಭಿನ್ನ ಸಂಸ್ಕೃತಿಗಳ ಸಂಗಮ. ಆದರೆ ಆಧುನಿಕ ಪರಿಸರ ನಮ್ಮ ತನವನ್ನು ನಾಶವಾಗಿಸುತ್ತಿರುವುದು ವಿಷಾಧನೀಯ. ಇತ್ತೀಚಿನ ವಿದ್ಯಮಾನಗಳಲ್ಲಿ ಪಾಶ್ಚಾತ್ಯದೇಶಗಳು ತಮ್ಮ ಮೂಲ ಸಂಸ್ಕೃತಿಯನ್ನು ಮರುಶೋಧಿಸಿ ತಮ್ಮ ತಮ್ಮ ಪರಂಪರೆಯನ್ನು ಉಳಿಸಿಕೊಳ್ಳುವತ್ತ ನಡೆದರೆ ನಾವು ಭಾರತೀಯರು ಭಿನ್ನವಾದ, ಕೋಮು – ಜಾತಿ ವಾದಗಳಲ್ಲಿನಿರತರಾಗಿ ನಮಗೊಂದು ಸಂಸ್ಕೃತಿ ಪರಂಪರೆಯೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದೇವೆ. ಇಂತಹ ನಮ್ಮದಲ್ಲವೆಂಬಂತಹ , ನಮಗೆ ಬೇಡವೆಂಬಂತಹ ನಡುವಳಿಕೆಯಿಂದಾಗಿ ಅಗ್ರಹಾರದಂತಹ ಪರಂಪರೆಯೂ ಇಂದು ನಾಶವಾಗುತ್ತಿದೆ.
 
 
ಜಾತಿವಾದ ಇಡೀ ಭಾರತದ ಯಾವತ್ತಿನ ಸಮಸ್ಯೆ. ಬ್ರಾಹ್ಮಣ ವಿರೋಧೀ ಅಲೆಗಳು ಭಾರತದ ಹೊಸ ಟ್ರೆಂಡ್. ಆದರೆ ಬ್ರಾಹ್ಮಣರೂ ಭಾರತೀಯರು ಎಂಬುದನ್ನು ಈ ವಿರೋಧಿಗಳು ಮರೆತು ಬಿಡುತ್ತಾರೆ. ವಿಶಾಲ ಚಿಂತನೆ ಬೇಕೆಂಬ ಅದೆಷ್ಟೋ ಬುದ್ದಿಜೀವಿಗಳು ಕೂಡಾ ಬ್ರಾಹ್ಮಣತ್ವವನ್ನು ವಿರೋಧಿಸುವುದು ಮಾತ್ರವಷ್ಟೇ ತಮ್ಮ ಹೆಗ್ಗಳಿಕೆ ಎಂದು ತಿಳಿದುಕೊಂಡಿದ್ದಾರೆ.
ಸ್ವತಂತ್ರ ಭಾರತದ ನವ ಅಲೆಗಳು ಇಂದು ಈ ಅಗ್ರಹಾರಗಳ ಮೇಲೂ ಗಾಢ ಪರಿಣಾಮ ಬೀರಿವೆ. ಎಷ್ಟೋ ವಿದೇಶಿಯರಿಗೆ ಕುತೂಹಲಕಾರಿಯಾದ ಅಗ್ರಹಾರ ವ್ಯವಸ್ಥೆ ದೇಶೀಯರಿಗೆ ಏನೂ ಅಲ್ಲವಾಗಿದೆ. ಅಗ್ರಹಾರ ವಾಸ್ತುಶೈಲಿಯು ನಮ್ಮ ಪರಂಪರೆಯ ಒಂದು ಭಾಗ. ಅದನ್ನು ಜಾತೀಯತೆಯ ಸೋಗಿಲ್ಲದೆ ಅಭ್ಯಸಿಸಬೇಕಾಗಿದೆ.
 
 
ಅಗ್ರಹಾರ ಶೈಲಿಯ ಮನೆಗಳು ವಾಸ್ತವಿಕವಾಗಿ ಅತ್ಯಂತ ವೈಜ್ಞಾನಿಕವಾಗಿ ಅಚ್ಚುಕಟ್ಟಾಗಿ ನಿರ್ಮಿಸಲ್ಪಟ್ಟ ಮನೆಗಳಾಗಿತ್ತು. ವೈಶಾಲ್ಯತೆ, ಗಾಳಿ , ಬೆಳಕು ವ್ಯವಸ್ಥೆ, ಭದ್ರತಾ ವ್ಯವಸ್ಥೆ ಇತರ ಎಲ್ಲಾ ದೃಷ್ಠಿಯಿಂದಲೂ ಸುವ್ಯವಸ್ಥಿತ ಗೃಹಗಳಾಗಿದ್ದವು. ಮನೆಗಳ ಮುಂದಿನ ಕಟ್ಟೆಗಳು ವಿಶ್ರಾಂತಿಗಾಗಿ, ಒಳಭಾಗದ ಜಗುಲಿ ಇತರ ಮಾತುಕತೆಗಳಿಗಾಗಿ, ಸ್ವಲ್ಪ ಕತ್ತಲಿರುವ ಹಜಾರ ಉಗ್ರಾಣದಂತೆ ಮಧ್ಯದ ತೆರೆದ ಅಂಗಳ ಮಕ್ಕಳ ಆಟಕ್ಕಾಗಿ, ಕಾರ್ಯಕ್ರಮಗಳಿಗಾಗಿ ಹಾಗೂ ಸಾಕಷ್ಟು ಗಾಳಿ ಬೆಳಕು ಓಡಾಡಲು ಅನುಕೂಲವಾಗುವಂತೆ ಈ ಶೈಲಿಯಲ್ಲಿ ಮನೆಗಳನ್ನು ನಿರ್ಮಿಸಲಾಗಿದ್ದವು.
 
 
ಈಗಾಗಲೇ ರಿಯಲ್ ಎಸ್ಟೇಟ್ ಧನಿಗಳ ಕರಾಮತ್ತಿನಿಂದಾಗಿ ಕೆಲವು ಬ್ರಾಹ್ಮಣರು ಅನಿವಾರ್ಯವಾಗಿ ಅಗ್ರಹಾರಗಳನ್ನು ತೊರೆಯಬೇಕಾಗಿವೆ. ಎಷ್ಟೋ ಮನೆಗಳು ವಾಣಿಜ್ಯ ಸಂಬಂಧ ಉಪಯೋಗಕ್ಕಾಗಿ ಕೆಡವಲ್ಪಟ್ಟಿವೆ. ಎಲ್ಲಾ ಬ್ರಾಹ್ಮಣರೂ ಶ್ರೀಮಂತರಲ್ಲ. ಹಾಗಾಗಿ ಪ್ರಮುಖ ಸ್ಥಳಗಳಲ್ಲಿನ , ಅಂದರೆ ಪ್ರಸಿದ್ಧ ದೇಗುಲಗಳ ಬಳಿ ಇರುವ ಮನೆಗಳು ಹಣಕ್ಕೇ ಮಾರಲ್ಪಟ್ಟಿವೆ. ಅಷ್ಟೇ ಅಲ್ಲ ಎಷ್ಟೋ ಬ್ರಾಹ್ಮಣರ ವಲಸೆ ಕೂಡಾ ಅಗ್ರಹಾರಗಳು ಮರೆಯಾಗುತ್ತಿರುವುದಕ್ಕೆ ಕಾರಣವಾಗಿವೆ.
ಜಾಗತೀಕರಣ , ನಗರೀಕರಣ, ನಮ್ಮ ಪರಂಪರಾಗತ ವ್ಯವಸ್ಥೆಯನ್ನು ಮರೆಯಾಗಿಸಿವೆ. ಮರೆಯಾದ ಪಟ್ಟಿಯಲ್ಲಿ ಈ ಅಗ್ರಹಾರಗಳು ಕೂಡ ಒಂದಾಗಿವೆ ಎಂಬುದು ಬೇಸರದ ಸಂಗತಿ.
 
 
ಬ್ರಾಹ್ಮಣ ಜಾತಿಗೆ ಸೇರಿದ್ದೆಂಬ ಒಂದೇ ಒಂದು ಕಾರಣಕ್ಕಾಗಿ ಈ ವಿಶಿಷ್ಟ ಪರಂಪರೆಯ ಗೃಹ ನಿರ್ಮಾಣ ಪದ್ಧತಿಯನ್ನು ತಿರಸ್ಕರಿಸುವುದು ನಿಜಕ್ಕೂ ಒಂದು ವಿಷಾಧನೀಯ ಸಂಗತಿ. ಈಗಲಾದರೂ ವಾಸ್ತುಶಿಲ್ಪ , ಸಂಶೋಧನಾಸಕ್ತರು ಈ ಅಗ್ರಹಾರ ಮಾದರಿಯ ಗೃಹಗಳ ಬಗ್ಗೆ ಅಭ್ಯಸಿಸಿ ವಿಭಿನ್ನ ಪರಂಪರಾಗತ ವಾಸ್ತುಶೈಲಿಯನ್ನು ಮತ್ತೆ ಸಮಾಜಕ್ಕೆ ನೀಡುವತ್ತ ಗಮನ ಹರಿಸಬೇಕಾಗಿದೆ.
– ಸೌಮ್ಯ ಕುಗ್ವೆ
[email protected]

LEAVE A REPLY

Please enter your comment!
Please enter your name here