ಮನ್ ಕಿ ಬಾತ್ ಬಂದ್ ಕರೋ ಕಾಮ್ ಕಿ ಬಾತ್ ಶುರು ಕರೋ -ವಿ. ಕುಕ್ಯಾನ್

0
378

ನಮ್ಮ ಪ್ರತಿನಿಧಿ ವರದಿ
ಅಚ್ಛೆ ದಿನ್ ಆಯೆಗಾ ಎಂದು ಜನರನ್ನು ಕನಸಲ್ಲಿ ತೇಲಾಡಿಸಿ ಬಂಡವಾಳಿಗಪರ ವಿದೇಶಿ ನೀತಿಗಳನ್ನು ಅನುಸರಿಸಿ ದೇಶಿವಾಸಿಗಳಲ್ಲಿ ಸುಳ್ಳು ಹಬ್ಬಿಸಲಾಗುತ್ತಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ದರ ಏರುತ್ತಿದೆ. ಜನರ ನಿತ್ಯೋಪಯೋಗಿ ವಸ್ತುಗಳು ಜನರಿಗೆ ಕೈಗೆಟಕದೆ ದುಬಾರಿಯಾಗುತ್ತಿದೆ. ಜಾತಿ ಮತದ ಹೆಸರಿನಲ್ಲಿ ದೇಶವನ್ನು ಒಡೆಯುವ ಸಂಚು ರೂಪಿಸಲಾಗುತ್ತಿದೆ. ಕಾರ್ಮಿಕರ, ಜನರ ಮೂಲಭೂತ ಬೇಡಿಕೆಗಳ ಬಗ್ಗೆ ಗಮನ ಹರಿಸಲು ಪ್ರಧಾನ ಮಂತ್ರಿಯವರಿಗೆ ಸಮಯವಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಲ್ಲಿ ಜನರನ್ನು ತೇಲಾಡಿಸುತ್ತಿದ್ದಾರೆ. ಮೋದಿಯವರು ತನ್ನ ಮನ್ ಕಿ ಬಾತ್ ನಿಲ್ಲಿಸಿ ಕೆಲಸಕ್ಕೆ ಬರುವ ಮಾತುಗಳನ್ನಾಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಹೇಳಿದರು.
 
 
ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯನ್ನು ಪ್ರತಿಭಟಿಸಿ, ಜನಪರ ರಾಜ್ಯ ಬಜೆಟ್ ಗೆ ಒತ್ತಾಯಿಸಿ ಸಿಪಿಐ ನೇತೃತ್ವದಲ್ಲಿ ಇಂದು ದ.ಕ ಜಿಲ್ಲಾಧಿಕಾರಿ ಕಛೇರಿಯೆದುರು ನಡೆದ ರಾಜ್ಯವ್ಯಾಪಿ ಜನಾಗ್ರಹ ಚಳವಳಿಯಲ್ಲಿ ಅವರು ಮಾತನಾಡುತ್ತಿದ್ದರು.
 
 
 
ಸಮಾಜವಾದಿ ಸಿದ್ದರಾಮಯ್ಯ ಸರಕಾರದ ಮೇಲೆ ರಾಜ್ಯದ ಜನತೆಗೆ ನಿರೀಕ್ಷೆಯಿತ್ತು. ಆದರೆ ಜನರ ನಿಜವಾದ ಸಮಸ್ಯೆಗಳನ್ನು ಆಲಿಸದೆ, ರೈತರ ಬಗ್ಗೆ ಕಾಳಜಿವಹಿಸದೆ ಈ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ರೈತರ ಮೂಲ ಭೂತ ಸಮಸ್ಯೆಗಳನ್ನು ಪರಿಹರಿಸದೆ ಅವರ ಆತ್ಮಹತ್ಯೆಯ ನಂತರ ಪರಿಹಾರ ನೀಡುವ ಭರವಸೆ ನೀಡುತ್ತಿದೆ. ಕರ್ನಾಟಕ ರಾಜ್ಯ ಹಿಂದೆಂದೂ ಕಾಣದ ಸತತ ಬರಗಾಲಕ್ಕೆ ತುತ್ತಾಗಿ ರಾಜ್ಯದ 176 ತಾಲೂಕುಗಳ ಪೈಕಿ 160 ತಾಲೂಕುಗಳಲ್ಲಿ ಭೀಕರ ಬರ ಆವರಿಸಿದೆ. ಈ ವರ್ಷದ ಮುಂಗಾರು ಮಳೆ ವಿಫಲವಾದುದರಿಂದ 17.500 ಕೋಟಿ ರೂಪಾಯಿಗಳ ಹಾಗೂ ಹಿಂಗಾರು ಮಳೆ ವಿಫಲತೆಯಿಂದ 7,160 ಕೋಟಿ ರುಪಾಯಿಗಳಷ್ಟು ಒಟ್ಟು ಸರಿಸುಮಾರು 25 ಸಾವಿರ ಕೋಟಿ ರುಪಾಯಿಗಳಷ್ಟು ರೈತರ ಬೆಳೆ ನಷ್ಠವಾಗಿದೆ ಎಂದು ಸರಕಾರ ಅಂದಾಜಿಸಿದೆ. ಕೈಗೆ ಬಂದ ಅಲ್ಪ ಸ್ವಲ್ಪ ಬೆಲೆಯೂ ನೊಟು ರದ್ದತಿಯಿಂದ ನಷ್ಟವಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ನಿತ್ಯದ ಬದುಕಿಗಾಗಿ ಉದ್ಯೋಗ ಸಮರ್ಪಕವಾಗಿಲ್ಲದೆ ಬದುಕು ಕಷ್ಟವಾಗಿದೆ. ಸರಕಾರ ಮುಂದೆ ಮಂಡಿಸುವ ಬಜೆಟ್ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವತ್ತ ಗಮನಹರಿಸಿ ಜನಪರ ಅಭಿವೃದ್ಧಿಗೆ ಮೀಸಲಿಡಬೆಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ಆಗ್ರಹಿಸುತ್ತದೆ ಎಂದು ಅವರು ಹೇಳಿದರು.
 
 
 
ಸಿಪಿಐ ಜಿಲ್ಲಾ ಸಹಾಯಕ ಕಾರ್ಯದರ್ಶಿ ಬಿ. ಶೇಖರ್ ಸಾಂದರ್ಭಿಕವಾಗಿ ಮಾತನಾಡಿದರು. ಮಂಗಳೂರು ತಾಲೂಕು ಕಾರ್ಯದರ್ಶಿ ವಿ. ಎಸ್ ಬೇರಿಂಜ ಸ್ವಾಗತಿಸಿ ಪ್ರಾಸ್ತಾಪಿಸಿದರು. ಸುರೇಶ್ ಕುಮಾರ್ ವಂದಿಸಿದರು. ಪ್ರತಿಭಟನೆಯ ನೇತೃತ್ವವನ್ನು ಹೆಚ್. ವಿ ರಾವ್, ಎ.ಪಿ ರಾವ್, ಆರ್ಡಿ ಸೋನ್ಸ್, ಭಾರತಿ ಪ್ರಶಾಂತ್, ಎಂ. ಕರುಣಾಕರ್, ಬಾಬು ಭಂಡಾರಿ, ಶಿವಪ್ಪ ಕೋಟ್ಯಾನ್, ಸುಲೋಚನ ಹರೀಶ್, ಚಿತ್ರಾಕ್ಷಿ, ಸುಧಾಕರ್, ಸರಸ್ವತಿ, ವಸಂತಿ ಶೆಟ್ಟಿ, ಕೆ. ಈಶ್ವರ್ ಮುಂತಾದವರು ವಹಿಸಿದ್ದರು.

LEAVE A REPLY

Please enter your comment!
Please enter your name here