ಮನುಜ ಕುಲವೇ ಎಚ್ಚರ…ಪ್ರಕೃತಿ ಮುನಿದಿದೆ…

0
537

ವಾರ್ತೆ ವಿಶೇಷ : ಹರೀಶ್ ಕೆ.ಆದೂರು
ವೈಪರೀತ್ಯ ಉಂಟಾಗುತ್ತಿದೆ. ಪರಿಣಾಮ ಕಾಲ ಕಾಲಕ್ಕೆ ಮಳೆಯಾಗುತ್ತಿಲ್ಲ. ಮಳೆಯಾದರೂ ಸರಿಯಾದ ಪ್ರಮಾಣದಲ್ಲಿರದೆ ಮುಳುವಾಗಿದೆ. ಒಂದೆಡೆ ಅತಿವೃಷ್ಠಿ, ಮತ್ತೊಂದೆಡೆ ಅನಾವೃಷ್ಠಿ, ವಾತಾವರಣದಲ್ಲಿ ಅತ್ಯಧಿಕ ತಾಪಮಾನದ ಏರಿಕೆ, ಮತ್ತೊಂದೆಡೆ ಅತಿಯಾದ ಚಳಿ…ಒಟ್ಟಿನಲ್ಲಿ ಅಸಮತೋಲನದ ಸ್ಥಿತಿ ಉದ್ಭವಿಸಿದೆ. ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರತೊಡಗಿದರೆ ಮತ್ತೊಂದೆಡೆಯಿಂದ ನೇರ ಹಾಗೂ ಪರೋಕ್ಷ ಎರಡೂ ರೀತಿಯಲ್ಲಿ ಮಾನವನ ಮೇಲೆ ಪ್ರಭಾವ ಬೀರುತ್ತದೆ.
 
fire_karakal1
ಎಲ್ಲೆಡೆಗಳಲ್ಲಿ ಬೆಂಕಿಯ ಬಿರುಗಾಳಿ!
ಎಲ್ಲೆಡೆ ಬೆಂಕಿಯ ಬಿರುಗಾಳಿ! ಹೌದು…ಇಡೀ ರಾಜ್ಯದುದ್ದಕ್ಕೂ ಬೆಂಕಿಯ ರುದ್ರ ನರ್ತನ ಕಳೆದೊಂದು ತಿಂಗಳಿನಲ್ಲಾಗುತ್ತಿದೆ. ರಾಜ್ಯದ ಪ್ರತೀ ಭಾಗದಲ್ಲಿಎಂಬಂತೆ ಬೆಂಕಿ ಆಕಸ್ಮಿಕದ ಸುದ್ದಿ ದಿನಂಪ್ರತಿ ಕಾಣತೊಡಗಿದೆ. ಭಂಡೀಪುರ ಅಭಯಾರಣ್ಯ, ಪಶ್ಚಿಮ ಘಟ್ಟ, ಕೊಡಚಾದ್ರಿ ಪರ್ವತ ಶ್ರೇಣಿ, ಮುಳ್ಳಯನ ಗಿರಿ ಹೀಗೆ ಸೂಕ್ಷ್ಮಾತಿ ಸೂಕ್ಷ್ಮ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳಿದ್ದ ಸಹ್ಯಾದ್ರಿ ಶ್ರೇಣಿಯಲ್ಲಿ ಈ ರೀತಿಯ ಕಾಡ್ಗಿಚ್ಚು ಹೊತ್ತಿ ಉರಿದರೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಬೆಂಕಿ ಅವಗಡಗಳ ಸುದ್ದಿ ಮಾಮೂಲಿ ಎಂಬಂತಾಗಿದೆ.
ಮಾನವನ ನಿರ್ಲಕ್ಷ್ಯವೇ ಇದಕ್ಕೆಲ್ಲ ಬಹುಮುಖ್ಯ ಕಾರಣ ಎಂದರೆ ತಪ್ಪಲ್ಲ. ಈ ಬಾರಿಯ ಬೆಂಕಿ ಅವಗಡಗಳಿಗೆ ಬಹುತೇಕ ಅರಣ್ಯ ಪ್ರದೇಶ ಆಹುತಿಯಾಗಿದೆ. ಹಲವು ಸಾವಿರ ಎಕರೆಗಳು ಬೆಂಕಿ ಆಕಸ್ಮಿಕಕ್ಕೆ ತುತ್ತಾಗಿ ಉರಿದುಹೋಗಿದೆ. ಕೃಷಿ ಭೂಮಿಗಳೂ ಬೆಂಕಿಗಾಹುತಿಯಾಗಿವೆ. ಅಳಿದುಳಿದ ಹಸಿರನ್ನೂ ಬೆಂಕಿಯ ಕೆನ್ನಾಲಿಗೆ ಆಹುತಿ ಪಡೆದಿದೆ. ಇದೆಲ್ಲವೂ ಮನುಕುಲಕ್ಕೆ ಪ್ರಕೃತಿ ನೀಡುತ್ತಿರುವ ದೊಡ್ಡ ಎಚ್ಚರಿಕೆಯೆಂದರೆ ತಪ್ಪಲ್ಲ…
 
 
ಧೂಳುಮಯಾ ಈ ಜಗಹೃದಯಾ…
ಧೂಳು…ಹೌದು ಎಲ್ಲೆಂದರಲ್ಲಿ ಇಂದು ಧೂಳು. ಹೆದ್ದಾರಿ ಅಗಲಗೊಳಿಸುವ ಪ್ರಕ್ರಿಯೆಯಿಂದ ಕರಾವಳಿಯ ಬಹುಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಧೂಳುಂಟಾಗುತ್ತಿದೆ. ಜೆ.ಸಿ.ಬಿ, ಹಿಟಾಚಿ ಯಂತ್ರಗಳ ಮೂಲಕ ನೆಲ ಸಮದಟ್ಟು ಗೊಳಿಸುವ ದೊಡ್ಡ ಕಾರ್ಯ ಎಲ್ಲೆಂದರಲ್ಲಿ ನಡೆಯುತ್ತಿದೆ. ಇದರಿಂದಾಗಿ ವಾತಾವರಣದಲ್ಲಿ ತೀವ್ರ ಪ್ರಮಾಣದ ಧೂಳು ಸೇರುತ್ತಿದೆ. ಇದು ಆರೋಗ್ಯಕ್ಕೂ ಹಾನಿ ಉಂಟುಮಾಡುತ್ತಿದೆ. ನೈಜ ಪರಿಸರದ ಮೇಲ್ಮಣ್ಣು ದೊಡ್ಡ ಪ್ರಮಾಣದಲ್ಲಿ ನಾಶವಾಗುತ್ತಿರುವುದು ಪರಿಸರದ ಅಸಮತೋಲನಕ್ಕೂ ಒಂದು ಕಾರಣವಾಗುತ್ತಿದೆ.
 
 
 
ನೀರಿಗೆ ಹಾಹಾಕಾರ…
ಈ ಬಾರಿಯ ಮುಂಗಾರಿನ ಅನಿಯಮಿತ ಮಳೆ ಕರಾವಳಿಯ ಜನತೆಯನ್ನು ಅಕ್ಷರಶಃ ಕಾಡಿದೆ. ಅಕ್ಟೋಬರ್ – ನವೆಂಬರ್ ತಿಂಗಳಾಗುತ್ತಿದ್ದಂತೆಯೇ ಹೊಳೆಗಳು ತಮ್ಮ ನೀರ ಹರಿಯುವಿಕೆಯ ವೇಗ ಕಡಿಮೆಗೊಳಿಸಿವೆ. ಫೆಬ್ರವರಿ ಮಾರ್ಚ್ ತಿಂಗಳಾರಂಭದಲ್ಲೇ ಹೊಳೆಯೆಲ್ಲಾ ಬತ್ತಿ ಬರಡಾದ ದೃಶ್ಯ ಸಾಮಾನ್ಯವಾಗಿದೆ. ಜೀವನದಿಯೇ ಕೈ ಚೆಲ್ಲಿ ಕೂತಂತಿದೆ. ಕೆರೆ ಬಾವಿಗಳು ನೀರಿಲ್ಲದೆ ಒಣಗಿ ಬರಡಾಗತೊಡಗಿವೆ. ಕೊಳವೆ ಬಾವಿಗೆ ಜನ ಮೊರೆಹೋಗುತ್ತಿದ್ದಾರೆ. ನೂರಿನ್ನೂರು ಫೀಟುಗಳಲ್ಲಿ ದೊರೆಯುತ್ತಿದ್ದ ನೀರು 600-800 ಅಡಿಗಳ ತನಕವೂ ಮುಂದುವರಿಯುತ್ತಿರುವುದು ಈ ಜಿಲ್ಲೆಯಲ್ಲಿ ಸಾಮಾನ್ಯ ಎಂಬಂತಾಗಿದೆ. ನೂರಿನ್ನೂರು ಫೀಟುಗಳಲ್ಲಿದ್ದ ಬೋರ್ ವೆಲ್ ಗಳು ಈಗಾಗಲೇ ನೀರಿಲ್ಲದೆ ಒಣಗಿದ ಉದಾಹರಣೆ ಸಾಕಷ್ಟಿದೆ.
 
 
 
ಕೈ ಕೊಡುತ್ತಿದೆ ಕರೆಂಟ್
ರಾಜ್ಯದಾದ್ಯಂತ ನೀರಿನ ಅಭಾವ ಒಂದೆಡೆಯಾಗುತ್ತಿದ್ದರೆ ಇದಕ್ಕೆ ಪೂರಕವೆಂಬಂತೆ ವಿದ್ಯುತ್ ಸಮಸ್ಯೆ ಜೊತೆ ಜೊತೆಗೆ ಕಾಣತೊಡಗಿದೆ. ಗ್ರಾಮೀಣ ಭಾಗದಲ್ಲಿ ಅಘೋಷಿತವಾದಂತಹ ವಿದ್ಯುತ್ ವ್ಯತ್ಯಯ – ಪವರ್ ಕಟ್ ಈಗಾಗಲೇ ಆರಂಭಗೊಂಡಿದೆ. ಬೇಸಿಗೆಯ ಆರಂಭದಲ್ಲೇ ಲೋಡ್ ಶೆಡ್ಡಿಂಗ್ ಸಮಸ್ಯೆ ಉದ್ಭವಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಮುನ್ಸೂಚನೆಯೂ ಇದೆ.
 
 
 
ಹೆಚ್ಚಿದೆ ಬಿಸಿಲ ಧಗೆ – ನಾಸಾ ವರದಿಯೂ ಇದೆ…
ಬಿಸಿಲ ಧಗೆ ಎಂದಿಗಿಂತ ಈ ಬಾರಿ ಹೆಚ್ಚಿದೆ. ಕರಾವಳಿಯ ಹಲವು ಭಾಗಗಳಲ್ಲಿ ಪ್ರತಿದಿನ ಬಿಸಿಗಾಳಿಯ ಅನುಭವವಾಗುತ್ತಿದೆ. ಕರಾವಳಿಯ ತಾಪಮಾನ ಮಾಮೂಲಿಗಿಂತ ಹೆಚ್ಚು ಎಂಬಂತಂತಾಗಿದೆ. ಫೆಬ್ರವರಿ ಕೊನೆ ಮಾರ್ಚ್ ಮೊದಲ ವಾರದಲ್ಲೇ ಮಂಗಳೂರಲ್ಲಿ ದಾಖಲೆಯ ತಾಪಮಾನ ವರದಿಯಾಗಿದೆ. ಬಿಸಿಲ ಧಗೆಗೆ ಕೃಷಿ ಭೂಮಿ ಅಕ್ಷರಶಃ ಬಲಿಯಾಗುತ್ತಿದೆ. ಕುಡಿಯವ ನೀರಿಗೂ ಕುತ್ತು ಬೀಳುವಂತಾಗಿದೆ.
ಈ ಬಾರಿಯ ಬೇಸಿಗೆಯಲ್ಲಿ ಭಯಾನಕ ರೀತಿಯ ಬಿರು ಬಿಸಿಲು ಬರುತ್ತದೆ. ವಾಡಿಕೆಗಿಂತಲೂ ಉಷ್ಣಾಂಶದಲ್ಲಿ ಏರಿಕೆಯಾಗಲಿದೆ. ವಾತಾವರಣಲದಲ್ಲಿ ಬಿಸಿ ಗಾಳಿ ಹೆಚ್ಚು ಬೀಸಲಿದೆ. ಅಗ್ನಿ ಅವಘಡ ಹೆಚ್ಚಾಗಲಿದೆ ಎಂದು ನಾಸಾ ಸಂಸ್ಥೆ ಎಚ್ಚರಿಕೆ ನೀಡಿದೆ.
 
 
 
ಅರಣ್ಯ ಇಲಾಖೆಯೂ ಗಮನಿಸಲಿ
ಪ್ರಕೃತಿಯ ನಾಶ ಒಂದೆಡೆಯಾದರೆ ಮತ್ತೊಂದೆಡೆ ಹಸುರೀಕರಣ. ಹಸುರೀಕರಣದ ಸಂದರ್ಭದಲ್ಲಿ ಕೇವಲ ಮಾಂಜಿಯಂ, ಅಕೇಷಿಯಾ ಗಿಡಗಳನ್ನು ನಡಸಲಾಗುತ್ತಿದೆ. ಅದರಿಂದ ಪ್ರಕೃತಿಗೆ ಲಾಭವೇನೂ ಇಲ್ಲ. ಅರಣ್ಯ ಇಲಾಖೆ ನೈಸರ್ಗಿಕವಾಗಿ ಪ್ರಕೃತಿಗೆ ಪೂರಕವಾಗುವ ಸಸ್ಯ ಸಂಪತ್ತನ್ನು ಬೆಳೆಸುವ ಬಗ್ಗೆ ಚಿಂತಿಸಿದ್ದೇ ಆದಲ್ಲಿ ಅಂತರ್ಜಲ ವೃದ್ಧಿಗೂ ಇದು ಸಹಕಾರಿಯಾಗುವುದರಲ್ಲಿ ಸಂದೇಹವಿಲ್ಲ.
 
 
 
ಪ್ರತಿಕೂಲ ಹವಾಮಾನ – ಅರೋಗ್ಯಕ್ಕೆ ಮಾರಕ
ಪ್ರತಿಕೂಲ ಹವಾಮಾನ ಆರೋಗ್ಯಕ್ಕೆ ತೀವ್ರ ಹೊಡೆತ ನೀಡುತ್ತಿದೆ. ಜನತೆ ಅಲರ್ಜಿ, ಕೆಮ್ಮು, ಕಫಗಳಿಂದ ಬಳಲುತ್ತಿದ್ದಾರೆ. ಸಾಂಕ್ರಾಮಿಕ ರೋಗ ಲಕ್ಷಣಗಳು ಅಧಿಕವಾಗತೊಡಗಿದೆ. ಮಕ್ಕಳಲ್ಲಿ ಅರೋಗ್ಯದ ಸಮಸ್ಯೆ ತೀವ್ರರೀತಿಯಲ್ಲಿ ಬಾಧಿಸತೊಡಗಿದೆ.
 
 
 
ಮೇಲ್ಮಟ್ಟದ ನೀರು ಬಳಸುತ್ತಿಲ್ಲ
ಹಳ್ಳಿಗಳಲ್ಲಿ ಜನರು ಮೇಲ್ಮಟ್ಟದ ನೀರನ್ನು ಬಳಸುವ ಬಗ್ಗೆ ಹೆಚ್ಚು ಹೆಚ್ಚು ಚಿಂತಿಸಬೇಕಾಗಿದೆ. ಗ್ರಾಮೀಣ ಭಾಗದ ಜನತೆ ಅದರಲ್ಲೂ ಐದು ಸೆಂಟ್ಸ್ ಜಾಗದಲ್ಲಿರುವ ಮಂದಿ ತಮ್ಮ ಜಾಗೆಗಳಲ್ಲಿರುವ ಬಾವಿಗಳನ್ನು ಸ್ವಚ್ಛಗೊಳಿಸಿ ಬಳಸುವುದನ್ನು ನಿಲ್ಲಿಸಿದ್ದಾರೆ. ಕೇವಲ ಬೋರ್ ವೆಲ್ ನೀರಿಗೇ ಮೊರೆಹೋಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಕರಾವಳಿಯಾದ್ಯಂತ ಇರುವ ಕೆರೆ, ಬಾವಿಗಳನ್ನು ಸ್ವಚ್ಛಗೊಳಿಸಿ, ಹೂಳೆತ್ತಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ಹೆಚ್ಚು ಬಳಸಿ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬೋರ್ ವೆಲ್ , ಅಂತರ್ಜಲದ ಬಳಕೆಯತ್ತ ಚಿತ್ತ ವಹಿಸುವುದು ಅತ್ಯುತ್ತಮ.
fire_karakal1 spcil
 

LEAVE A REPLY

Please enter your comment!
Please enter your name here