ಮನಸುಗಳಲ್ಲಿ ಪ್ರೀತಿಯ ಅಂತರಗಂಗೆ ಹರಿಯಲಿ

0
200

ಉಡುಪಿ ಪ್ರತಿನಿಧಿ ವರದಿ
ಭಗೀರಥ ಮಹರ್ಷಿಯು ಮನುಕುಲದ ಶ್ರೇಯಸ್ಸಿಗಾಗಿ ದೇವಲೋಕದಿಂದ ಗಂಗೆಯನ್ನು ತಂದರು ಅಂತೆಯೇ ಮಾನವನ ಮನಸ್ಸಿನಲ್ಲಿ ಪ್ರತಿ ಜೀವಿಯ ಮೇಲೆ ಪ್ರೀತಿಯ ಅಂತರಗಂಗೆ ಹರಿದರೆ ಭೂಮಿ ಸ್ವರ್ಗವಾಗುವುದು ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ನಿಕೇತನ ಹೇಳಿದ್ದಾರೆ.
 
ಅವರು ಶುಕ್ರವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಬಾಲಕಿಯರ ಬಾಲಮಂದಿರ (ಸ್ಟೇಟ್ ಹೋಂ) ನಿಟ್ಟೂರು ನಲ್ಲಿ ನಡೆದ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮದ ತಮ್ಮ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
 
ಭಗೀರಥ ರಾಜನು ಇಕ್ವಾಕ್ಷು ವಂಶಕ್ಕೆ ಸೇರಿದವನು, ಈತನ 60 ಸಾವಿರ ಪೂರ್ವಜರು ತಮ್ಮ ಆಡಳಿತಾವಧಿಯಲ್ಲಿ ನಡೆಸಿದ ಆಡಳಿತದಿಂದಾಗಿ, ಇಡೀ ಲೋಕವನ್ನು ಬರಗಾಲಕ್ಕೆ ತಳ್ಳಿದ್ದರು, ತಮ್ಮ ರಾಜ್ಯ ವಿಸ್ತರಣೆಗಾಗಿ ಅಶ್ವಮೇಧ ಯಾಗ ನಡೆಸಿದ್ದರು, ಇವರು ಅಶ್ವಮೇಧ ಕುದುರೆ ಕಪಿಲ ಮಹರ್ಷಿಗಳ ಆಶ್ರಮ ತಲುಪಿದಾಗ, ಅಲ್ಲಿಂದ ಸುಂದರ ಹಸಿರು ಪರಿಸರವನ್ನು ಹಾಳು ಮಾಡಿದ ಇವರು , ಮುನಿಗಳ ಶಾಪಕ್ಕೆ ಗುರಿಯಾಗಿ ಭಸ್ಮವಾದರು. ಇವರ ಅಂತ್ಯ ಸಂಸ್ಕಾರ ನಡೆಸಿ , ಸದ್ಗತಿ ದೊರಕಿಸಲು ದೇವಲೋಕದ ಗಂಗೆಯಿಂದ ಮಾತ್ರ ಸಾಧ್ಯವಿದ್ದುದನ್ನು ತಿಳಿದ, ಭಗೀರಥ ರಾಜನು ತನ್ನ ಕಠಿಣ ತಪಸ್ಸಿನ ಮೂಲಕ ಭೂಲೋಕಕ್ಕೆ ಗಂಗೆಯನ್ನು ತಂದು ಅವರಿಗೆ ಸದ್ಗತಿ ದೊರಕಿಸುವುದರ ಜೊತೆಗೆ ಬರಗಾಲವನ್ನು ನಿವಾರಿಸಿದರು ಎಂದು ಹೇಳಿದರು.
 
 
ಮನುಷ್ಯನ ಸ್ವಾರ್ಥದ ಕಾರಣ ಇಂದು ಭೂಮಿಯಲ್ಲಿನ ಅಂರ್ತಜಲ ಬತ್ತಿ, ಬಾವಿ, ಕೊಳವೆ ಬಾವಿಗಳಲ್ಲಿ ಸಹ ನೀರಿಲ್ಲದೇ, ಜನ ಜಾನುವಾರುಗಳು ನೀರಿಗಾಗಿ ತತ್ತರಿಸುವ ಈ ಸಂದರ್ಭದಲ್ಲಿ ಭಗೀರಥ ಮಹರ್ಷಿಯ ಅಂದಿನ ಸಾಧನೆ ನೆನೆಯಬೇಕಿದೆ, ನೀರನ್ನು ಮಿತವಾಗಿ, ಎಚ್ಚರಿಕೆಯಿಂದ ಬಳಸಿ, ಮುಂದಿನ ಜನಾಂಗಕ್ಕೆ ಸಹ ಉಳಿಸಲು ಭಗೀರಥ ಪ್ರಯತ್ನ ಆಗಬೇಕಿದೆ. ಅಲ್ಲದೇ ಇಂದು ಮಾನವರ ಮನಸ್ಸುಗಳಲ್ಲಿನ ಅಂತರಗಂಗೆ ಬರಿದಾಗಿದ್ದು, ಪ್ರೀತಿ, ವಾತ್ಸಲ್ಯ ಕಡಿಮೆಯಾಗಿದೆ, ಪ್ರಕೃತಿಯನ್ನು ನಾಶ ಮಾಡದೆ, ಮನಸ್ಸುಗಳನ್ನು ಪ್ರೀತಿಯ ಜೀವಜಲ ಸದಾ ಹರಿಯಬೇಕಿದೆ ಎಂದು ಡಾ. ನಿಕೇತನ ಹೇಳಿದರು.
 
 
ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಗುರುಪ್ರಸಾದ್ ಮಾತನಾಡಿ, ಸದುದ್ದೇಶದಿಂದ ಮಾಡಿದ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ಭಗೀರಥರೇ ಸಾಕ್ಷಿ, ನೀರಿಲ್ಲದೇ ಜೀವ ಸಂಕುಲ ಇಲ್ಲ , ಮಹಾನುಭಾವರ ಜಯಂತಿಗಳ ಆಚರಣೆ ಮೂಲಕ ಅವರ ಸಂದೇಶವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ದೇವದಾಸ ಪೈ ಸ್ವಾಗತಿಸಿದರು, ಸರಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಹೆಚ್.ಎಸ್.ಜೋಗೇರ್ ವಂದಿಸಿದರು. ಶಂಕರದಾಸ್ ಚಂಡ್ಕಳ ನಿರೂಪಿಸಿದರು.
ಅನುರಾಧ ಎ.ಪಿ. ಮಯ್ಯ , ಹಿಲಿಯಾಣ ಅವರಿಂದ ಕೀರ್ತನೆಗಳ ಗಾಯನ ನಡೆಯಿತು.

LEAVE A REPLY

Please enter your comment!
Please enter your name here