ಮನವಿ

0
396

 
ವರದಿ: ಸಂತೋಷ್ ಬಜಾಲ್
ದ.ಕ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು, ವೈದ್ಯರು ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿದ್ದಾರೆ. ಅನಗತ್ಯ ಪರೀಕ್ಷೆ, ಚಿಕಿತ್ಸೆಗಳನ್ನು ನಡೆಸುತ್ತಾರೆ ಎಂಬ ವ್ಯಾಪಕ ದೂರು ಕೇಳಿಬರುತ್ತಿದೆ. ಮುಖ್ಯವಾಗಿ ಖಾಸಗಿ ಆಸ್ಪತ್ರೆಗಳು ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ರೋಗಿಗಳಿಗೆ ಕಾಣುವ ಸ್ಥಳದಲ್ಲಿ ಚಿಕಿತ್ಸೆಯ ದರಪಟ್ಟಿ ಪ್ರಕಟಿಸದಿರುವುದು, ರೋಗಿಗಳ ಕಡೆಯವರಿಗೆ ದರಪಟ್ಟಿ ಚಿಕಿತ್ಸೆಗೆ ಮೊದಲೇ ನೀಡದಿರುವುದು, ಬಿಲ್ ನ ಸಂಪೂರ್ಣ ಮೊತ್ತ ಪಾವತಿಸಲು ಸಾಧ್ಯವಾಗದ ರೋಗಿಗಳನ್ನು ಅಕ್ರಮವಾಗಿ ಬಂಧನದಲ್ಲಿಡುವುದು, ಶವಗಳನ್ನು ಬಿಟ್ಟು ಕೊಡದಿರುವುದು ಸೇರಿದಂತೆ ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಮತ್ತು ಸಮಾನ ಚಿಕಿತ್ಸೆಗೆ ಭಿನ್ನ ಆಸ್ಪತ್ರೆಗಳಲ್ಲಿ ಭಿನ್ನ ದರಗಳನ್ನು ವಿಧಿಸುವುದು ಕಂಡುಬರುತ್ತಿದೆ. ದರ ನಿಗದಿಗೆ ಸಂಬಂಧಿಸಿ ಯಾವುದೇ ಮಾನದಂಡವನ್ನು ವೈದ್ಯರಾಗಲಿ, ಆಸ್ಪತ್ರೆಗಳ ಆಡಳಿತವಾಗಲಿ ಪಾಲಿಸುತ್ತಿಲ್ಲ, ಸಾರಿಗೆ, ಶಿಕ್ಷಣದಂತೆ ಆರೋಗ್ಯ ಕ್ಷೇತ್ರವೂ ಸೇವಾ ಕ್ಷೇತ್ರವಾಗಿರುವುದರಿಂದ ಜಿಲ್ಲಾಡಳಿತವು ದರ ನಿಗದಿಗೆ ಸಂಬಂಧಪಟ್ಟಂತೆ ಮಧ್ಯಪ್ರವೇಶವನ್ನು ಮಾಡಬೇಕು. ನಿಯಮಾವಳಿಗಳನ್ನು ರೂಪಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
 
 
ಇನ್ನು ಸರಕಾರಿ ಆರೋಗ್ಯ ಸೇವೆ ಜಿಲ್ಲೆಯಲ್ಲಿ ಸಂಪೂರ್ಣ ಹದಗೆಟ್ಟಿದೆ. ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಪ್ರಾಥಮಿಕ ಆರೋಗ್ಯಕೇಂದ್ರ, ಸಮುದಾಯ ಆಸ್ಪತ್ರೆಗಳು ಸರಾಸರಿಗಿಂತ ತೀರಾ ಕೆಳಮಟ್ಟದಲ್ಲಿದೆ. ತಾಲೂಕು, ಜಿಲ್ಲಾ ಆಸ್ಪತ್ರೆಗಳಿಗೆ ಜನ ಚಿಕಿತ್ಸೆಗೆ ತೆರಳಲು ಭಯಪಡುವಂತಾಗಿದೆ. ಐದಾರು ಜಿಲ್ಲೆಗಳ ಜನಸಾಮಾನ್ಯರ ಪಾಲಿಗೆ ಏಕೈಕ ದೊಡ್ಡಾಸ್ಪತ್ರೆ ವೆನ್ಲಾಕ್ ತುರ್ತು ಚಿಕಿತ್ಸಾ ಘಟಕ ಸಹಿತ ಮೂಲಭೂತ ಸೌಲಭ್ಯಗಳಿಲ್ಲದೆ ಬಡರೋಗಿಗಳ ಪಾಲಿಗೆ ನರಕದಂತಾಗಿದೆ. ಕೆಳಹಂತದ ಆಸ್ಪತ್ರೆಗಳಲ್ಲಂತೂ ಔಷಧಿ, ಸಿಬ್ಬಂದಿ ಇಲ್ಲದೆ ಜನ ಪರದಾಡುವಂತಾಗಿದೆ. ಜಿಲ್ಲೆಯ ಸಾರ್ವಜನಿಕಾ ಆರೋಗ್ಯ ರಂಗದಲ್ಲಿ ಎಲ್ಲಾ ಹಂತಗಳಲ್ಲಿ ಶೇಕಡಾ 45ರಷ್ಟು ಹುದ್ದೆಗಳು ಖಾಲಿ ಬಿದ್ದಿವೆ. ಇಂತಹ ಕೊರತೆಗಳನ್ನು ಭರ್ತಿ ಮಾಡಲು ತಾವು ಕ್ರಮಕೈಗೊಳ್ಳಬೇಕಾಗಿ ತಮ್ಮಲ್ಲಿ ಆಗ್ರಹಿಸಿಕೊಳ್ಳುತ್ತೇವೆ.
 
ದ.ಕ. ಜಿಲ್ಲೆಯ ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳನ್ನು ಬಳಸಿ ಸರಕಾರಿ ಮೆಡಿಕಲ್ ಕಾಲೇಜು ತೆರೆಯಲು ಎಲ್ಲಾ ಅವಕಾಶಗಳಿವೆ. ಆದರೆ ಸರಕಾರ ಖಾಸಗಿ ಮೆಡಿಕಲ್ ಕಾಲೇಜು ತೆರೆಯಲು ಆಸಕ್ತವಾಗಿದೆ. ತಾವು ದಯವಿಟ್ಟು ಈ ನಿಟ್ಟಿನಲ್ಲಿ ಕ್ರಮಕೈಗೊಂಡು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೊಳ್ಳಲು ಕಾರಣರಾಗಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
 
ನಮ್ಮ ಸಂಘಟನೆಯ ವತಿಯಿಂದ ಈಗಾಗಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದರ ಪಟ್ಟಿ ಪ್ರಕಟಿಸುವುದು, ರೋಗಿಯ ಕಡೆಯವರಿಗೆ ದರ ಪಟ್ಟಿ ನೀಡುವುದು ಮುಂತಾದ ನಿಯಮಗಳನ್ನು ಪಾಲಿಸುವಂತೆ ಮನವಿಯನ್ನು ನೀಡಿರುತ್ತೇವೆ. ಆದರೆ ಖಾಸಗಿ ಆಸ್ಪತ್ರೆಗಳು ನಿಯಮಪಾಲಿಸುತ್ತಿಲ್ಲ. ಆದುದರಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಹಾಗೂ ಈ ಕುರಿತು ಚರ್ಚಿಸಲು ಜಿಲ್ಲಾ ಆರೋಗ್ಯ ಸೇವೆ ನಿಯಂತ್ರಣಾ ಪ್ರಾಧಿಕಾರದ ಸಭೆ ಕರೆಯಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.
 
 
ನಿಯೋಗದಲ್ಲಿ: ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ದಯಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಜೀವನ್ರಾಜ್ ಕುತ್ತಾರ್, ಸಾದಿಕ್ ಕಣ್ಣೂರು, ನೌಷಾದ್ ಬಾವು, ಉಸ್ಮಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here