ಮಧುಮೆಹ ತಡೆಗಟ್ಟಲು-ಯೋಗ

0
418

 
ಲೇಖನ: ಡಾ.ಸತೀಶ ಶಂಕರ್. ಬಿ BAMS M.S. (Ayu)
ಮಧುಮೇಹವು ಇನ್ಸುಲಿನ್ ಉತ್ಪಾದನೆ ಕೊರತೆ ಮತ್ತು ಶರೀರವು ಇದಕ್ಕೆ ಸೂಕ್ತವಾದ ಸ್ಪಂದಿಸದೇ ಇದ್ದಾಗ ಬರುತ್ತದೆ. ಇನ್ಸುಲಿನ್ ಪ್ಯಾನ್ಕ್ರಿಯಾಸ್ ಗ್ರಂಥಿಯಲ್ಲಿ ಉತ್ಪಾದನೆಯಾಗುತ್ತದೆ.
ಧನುರಾಸನ, ಅರ್ಥಮತ್ಸ್ಯೇಂದ್ರಾಸನ, ವಕ್ರಾಸನ, ಹಲಾಸನಗಳು ಪ್ಯಾನ್ ಕ್ರಿಯಾಸ್ ಗ್ರಂಥಿಯನ್ನು ಇನ್ಸುಲಿನ್ ಉತ್ಪಾದನೆಗೆ ಪ್ರೇರೇಪಿಸುತ್ತದೆ. ಈ ಯೋಗಾಸನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಇನ್ಸುಲಿನ್ ಉತ್ಪಾದನೆ ಅಧಿಕಗೊಳಿಸಲು ಸಾಧ್ಯ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
 
 
1. ಧನುರಾಸನ:
ಹಾಸಿನ ಮೇಲೆ ಬೋರಲು ಮಲಗಿ ಕಾಲುಗಳನ್ನು ನೀಳವಾಗಿ ಚಾಚಿರಿ. ಪಾದಗಳು ಪರಸ್ಪರ ತಾಗಿರಲಿ. ಅಂಗಾಲುಗಳು ಮೇಲ್ಮುಖವಾಗಿದ್ದು, ಗಲ್ಲವು ನೆಲಕ್ಕೆ ತಾಗಿರಲಿ. ಕೈಗಳನ್ನು ತಲೆಯಪಕ್ಕ ಮುಂದಕ್ಕೆ ನೀಳವಾಗಿ ಚಾಚಿರಿ. ಅಂಗೈ ನೆಲಕ್ಕೆ ಮುಖ ಮಾಡಿರಲಿ. ಮಂಡಿಗಳನ್ನು ಬೆನ್ನಿನ ಕಡೆ ಬಗ್ಗಿಸಿ ಕೈಗಳಿಂದ ಪಾದಗಳನ್ನು ಹಿಡಿಯಿರಿ.
ಉಸಿರನ್ನ ತೆಗೆದುಕೊಳ್ಳುತ್ತಾ ತಲೆ, ಎದೆ ಮತ್ತು ತೊಡೆಗಳನ್ನು ಮೇಲಕ್ಕೆತ್ತಿ. ಮೊದಲನೆಯ ಹಂತದಂತೆ ಕೈಗಳಿಂದ ಪಾದಗಳನ್ನು ಎಳೆಯುತ್ತಾ ಧನುಸ್ಸಿನಾಕಾರದಲ್ಲಿ ಬೆನ್ನುಹುರಿಯನ್ನು ಕಮಾನಿನಂತೆ ಬಗ್ಗಿಸಿ. ದೃಷ್ಠಿ ಮೇಲ್ಮುಖವಾಗಿರಲಿ. ದೇಹದ ಸಂಪೂರ್ಣ ಭಾರ ಹೊಟ್ಟೆಯ ಮೇಲೆ ಇರುತ್ತದೆ. ಮೊಣಕೈಗಳು ಬಗ್ಗಿರಬಾರದು. ಕಲಿಯುವಾಗ ಮಂಡಿಗಳು ವಿಸ್ತರಿಸುತ್ತವೆ. ಕ್ರಮೇಣ ಅಭ್ಯಾಸ ಮುಂದುವರಿಸಿ ಮಂಡಿಗಳನ್ನ ಹತ್ತಿರ ತರಬಹುದು. ಈ ಸ್ಥಿತಿಯಲ್ಲಿ ಕೆಲವು ಕಾಲ ಮಾಮೂಲಿನಂತೆ ಉಸಿರಾಡುತ್ತಾ ಇರಿ. ನಿಧಾನವಾಗಿ 3ನೇ ಹಂತದಲ್ಲಿ ಉಸಿರನ್ನು ಹೊರಬಿಡುತ್ತಾ 4ನೇ ಹಂತದ ಮೂಲಕ ಸ್ಥಿತಿಗೆ ಮರಳಿ ಬನ್ನಿ.
ಪ್ರಯೋಜನಗಳು:
* ದೇಹ ಮತ್ತು ವಿಶೇಷವಾಗಿ ಹೊಟ್ಟೆಯ ಹೆಚ್ಚಿನ ಬೊಜ್ಜು ಕರಗಿ ದೇಹ ತೆಳ್ಳಗಾಗುವುದು.
* ಪ್ಯಾನ್ ಕ್ರಿಯಾಸ್ ಗ್ರಂಥಿಯನ್ನು ಇನ್ಸುಲಿನ್ ಉತ್ಪಾದನೆಗೆ ಉತ್ಪಾದನೆಗೆ ಉತ್ತೇಜಿಸುತ್ತದೆ.
* ಈ ಯೋಗಾಸವನ್ನು ಗ್ಲುಕೋಮಾ ಹೃದ್ರೋಗ, ಕತ್ತು ನೋವು ಮತ್ತು ಬೆನ್ನುನೋವಿನಿಂದ ಬಳಲುತ್ತಿರುವವರು ಮಾಡಬಾರದು.
 
 
 
2. ವಕ್ರಾಸನ:
ದಂಡಾಸನ ಭಂಗಿ.
ಬಲ ಮಂಡಿಯನ್ನು ಮಡಿಸಿ ಮೇಲೆತ್ತಿ ಬಲಪಾದವನ್ನು ಚಾಚಿದ ಎಡಗಾಲಿನ ಮಂಡಿಯ ಬಲಪಕ್ಕದಲ್ಲಿಡಿ. ಸೊಂಟವನ್ನು ನೆಟ್ಟಗೆ ಮಾಡಿ ಬಲಕ್ಕೆ ತಿರುಗಿಸಿ ಎರಗೈಯಿಂದ ಬಲಮಂಡಿಯನ್ನು ಬಳಸಿ ಬಲಗಾಲಿನ ಹೆಬ್ಬೆರಳನ್ನು ಹಿಡಿಯಿರಿ. ಬಲಗೈಯನ್ನು ಬೆನ್ನಹಿಂದಕ್ಕೆ ತಂದು ಅಂಗೈಯನ್ನು ನೆಲದ ಮೇಲೆ ಊರಿ. ಮುಂಡವು ನೆಟ್ಟಗಿರಲಿ. ಮಾಮೂಲಿನಂತೆ ಉಸಿರಾಡಿ ಈ ಆಸನದಲ್ಲಿ ಒಂದು ನಿಮಿಷ ಇದ್ದು ಮರಳಿ ಸ್ಥಿತಿಗೆ ಬನ್ನಿ. ಇದೇ ರೀತಿ ಎಡಭಾಗದಲ್ಲಿಯೂ ಮಾಡಿ.
ಪ್ರಯೋಜನಗಳು:
* ಬೆನ್ನು ಹುರಿಯ ನರಸಮೂಹ ಪುನಃಶ್ಚೇತನಗೊಳ್ಳುವುದು.
* ಮಧುಮೇಹ ತೊಂದರೆ ನಿವಾರಣೆಯಾಗುವುದು.
* ಹೊಟ್ಟೆಯ ಬೊಜ್ಜು ಕರಗುವುದು.
 
ಅರ್ಧಮತ್ಸ್ಯೇಂದ್ರಾಸನ:
ದಂಡಾಸನ ಭಂಗಿಗೆ ಬನ್ನಿ.
ಬಲಮಂಡಿಯನ್ನು ಮಡಿಸಿ ಬಲಪಾದವನ್ನು ಎಡಪೃಷ್ಠದ ಕೆಳಗೆ ತನ್ನಿ. ಎಡಕಾಲಿನ ಪಾದವನ್ನು ಬಲತೊಡೆಯ ಹೊರಭಾಗದಲ್ಲಿ ಮಂಡಿಯ ಬಲಪಕ್ಕಕ್ಕೆ ತನ್ನಿ. ಬಲಗೈಯನ್ನು ಎಡಮಂಡಿಯ ಎಡಗಡೆ ಎದೆಗೂ ಮತ್ತು ಮಂಡಿಗೂ ಮಧ್ಯದಿಂದ ಸುತ್ತಿಸಿ ಎಡಗಾಲಿನ ಹೆಬ್ಬೆರಳನ್ನು ಹಿಡಿಯಿರಿ. ಬಲತೋಳಿನ ಬಲಪಾಶ್ರ್ವದ ಎಡ ಮಂಡಿಯ ಎಡ ಪಾಶ್ರ್ವದ ಮೇಲೆ ಊರಿರುತ್ತದೆ. ಈಗ ಎಡಗೈಯನ್ನು ಬೆನ್ನಹಿಂದಕ್ಕೆ ತಂದು ಬಲತೊಡೆಯ ಎಡತುದಿಯನ್ನು ಹಿಡಿಯಲು ಪ್ರಯತ್ನಿಸಿ. ಭುಜದ ಮೇಲ್ಬಾಗದಿಂದ ಎಡಕ್ಕೆ ತಿರುಗಿ ಹಿಂದೆ ನೋಡಿ. ನೆಟ್ಟಗಿಟ್ಟ ಮಂಡಿಯನ್ನು ಆಧಾರವಾಗಿಟ್ಟು ಬೆನ್ನಹುರಿಯನ್ನು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ತಿರುಗಿಸಲು ಯತ್ನಿಸಿ. ಮುಂಡದ ಭಾಗವು ನೆಟ್ಟಗಿರಲಿ. ಹಿಮ್ಮಡಿಯ ಮೇಲೆ ಕೂಡಬೇಡಿ. ಈ ಸ್ಥಿತಿಯಲ್ಲಿ ಸ್ವಲ್ಪಕಾಲ ಮಾಮೂಲಿನಂತೆ ಉಸಿರಾಡುತ್ತಾ ಇರಿ. ಆನಂತರ ಮರಳಿ ಸ್ಥಿತಿಗೆ ಬನ್ನಿ. ಇದೇ ರೀತಿ ಇನ್ನೊಂದು ಪಕ್ಕದಲ್ಲಿ ಮಾಡಿ.
ಪ್ರಯೋಜನಗಳು:
ಹಿಂದಿನ ವಕ್ರಾಸನದ ಪ್ರಯೋಜನಗಳು.
 
 
 
ಹಲಾಸನ:
ಅಂಗಾತ ಮಲಗಿ ಕೈಗಳನ್ನು ತಲೆಯ ಹಿಂದೆ ಚಾಚಿ. ಕೂಡಿಸಿದ ಎರಡೂ ಕಾಲುಗಳನ್ನು ನಿಧಾನವಾಗಿ ಮಂಡಿಗಳನ್ನು ಮಡಿಸದೆ ಭೂಮಿಯಿಂದ 45 ಡಿಗ್ರಿವರೆಗೆ ಎತ್ತಿ ನಿಲ್ಲಿಸಿ. ಮುಂದುವರಿದು ಭೂಮಿಗೆ ಸಮಕೋನ ಸ್ಥಿತಿಗೆ ಬರುವವರೆಗೂ ಕಾಲುಗಳನ್ನು ಎತ್ತಿ ನಿಲ್ಲಿಸಿ. ಎರಡೂ ಕೈಗಳನ್ನು ಮುಂದಕ್ಕೆ ತಂದು ತೋಳುಗಳ ಮತ್ತು ಮೊಣಕೈಗಳ ಸಹಾಯದಿಂದ ಪೃಷ್ಠ ಮತ್ತು ನಡುವಿನ ಮೇಲ್ಭಾಗವನ್ನು ಮೇಲಕ್ಕೆತ್ತಿರಿ. ಮೊಣಕೈಗಳನ್ನು ಭದ್ರವಾಗಿ ಊರಿ. ಬೆನ್ನನ್ನು ಅಂಗೈಗಳಿಂದ ಹಿಡಿಯಿರಿ. ಕೈಗಳ ಸಹಾಯದಿಂದ ಮುಂಡವನ್ನು ನೆಟ್ಟಗೆ ಇರುವಂತೆ ಮಾಡಿ. ಗಲ್ಲವನ್ನು ಎದೆಯ ಮೇಲ್ಭಾಗದಲ್ಲಿರುವ ಕಂಠಕುಳಿಗೆ ಅದುಮಿಕೊಳ್ಳಿ. ಕಾಲುಗಳನ್ನು ತಲೆಯ ಕಡೆ ಸಮಾನಾಂತರವಾಗಿ ತನ್ನಿ. ಅನಂತರ ಎರಡು ಕಾಲುಗಳನ್ನು ನಿಧಾನವಾಗಿ ಹಿಂದಕ್ಕೆ ತಂದು ನೆಲಕ್ಕೆ ಮುಟ್ಟಿಸಿ. ಸ್ಥಿತಿಗೆ ಹಿಂತಿರುಗಿ.
ಪ್ರಯೋಜನ:
* ಥೈರಾಡ್ ಗ್ರಂಥಿಯ ಆರೋಗ್ಯ ಕಾಪಾಡುತ್ತದೆ. ಬೊಜ್ಜು ಕರಗಿಸಲು ಸಹಕರಿಸುತ್ತದೆ.
* ಬೆನ್ನಿಗೆ ಚೈತನ್ಯ ಉಂಟಾಗುತ್ತದೆ. ಮಧುಮೇಹ ನಿವಾರಣೆಗೆ ಸಹಕಾರಿ.

LEAVE A REPLY

Please enter your comment!
Please enter your name here