ಮದ್ಯವರ್ಜಿತರ ಸಮಾವೇಶ

0
455

ವರದಿ: ಸುನೀಲ್ ಬೇಕಲ್
ಧರ್ಮಸ್ಥಳದಲ್ಲಿ ಅಕ್ಟೋಬರ್ ಒಂದರಂದು ಶನಿವಾರ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ಒಂದು ಸಾವಿರನೆ ಮದ್ಯವರ್ಜನ ಶಿಬಿರದಲ್ಲಿ ಸಹಸ್ರಾರು ಮದ್ಯವರ್ಜಿತರು ಭಾಗವಹಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಏಕ ಕಾಲದಲ್ಲಿ ರಾಜ್ಯದ ಹತ್ತು ಕಡೆಗಳಲ್ಲಿ (ಸುಳ್ಯ, ಹೊನ್ನಾಳಿ, ಶಿವಮೊಗ್ಗ, ಬೆಳ್ತಂಗಡಿ, ಮೂಡಬಿದ್ರೆ ಹಾಸನ, ಕೆ.ಆರ್.ನಗರ, ಶಿರಸಿ, ತುಮಕೂರು ಮತ್ತು ಕೊಪ್ಪ) ಇದೇ 24 ರಿಂದ ಅ.1ರ ವರೆಗೆ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.
 
 
ಅವರು ಸೋಮವಾರ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮದ್ಯಪಾನ ಸಾಮಾಜಿಕ ಪಿಡುಗು ಆಗಿದ್ದು ಈಗ ಮದ್ಯವರ್ಜನ ಶಿಬಿರದಿಂದಾಗಿ ಸಾಕಷ್ಟು ಮದ್ಯಪಾನ ಕಡಿಮೆ ಆಗಿದೆ. ಜನರಲ್ಲಿ ಅರಿವು, ಜಾಗೃತಿ ಮೂಡಿ ಬಂದಿದೆ. ಕಾನೂನು, ಮದ್ಯಪಾನ ನಿಷೇಧ, ದಂಡ ಹಾಕುವುದರಿಂದ ಮದ್ಯಪಾನ ನಿಷೇಧ ಸಾಧ್ಯವಿಲ್ಲ. ಬದಲಾಗಿ ವ್ಯಸನಿಗಳ ಮಾನಸಿಕ ಪರಿವರ್ತನೆಯಿಂದ ಸಂಪೂರ್ಣ ಮದ್ಯಪಾನ ನಿಷೇಧ ಮಾಡಿ ಮದ್ಯ ಮುಕ್ತ ಭಾರತ ನಿಮರ್ಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
 
ಮುಂದಿನ ಜನಾಂಗವಾದ ಇಂದಿನ ಮಕ್ಕಳಲ್ಲಿ ಸ್ವಚ್ಛ ಭಾರತ, ವ್ಯಸನ ಮುಕ್ತ, ಹಾಗೂ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದ ಬಗ್ಯೆ ದೃಢ ಸಂಕಲ್ಪ ಮೂಡಿಸಬೇಕು. ಮದ್ಯವರ್ಜನ ಶಿಬಿರಗಳಿಗೆ ಜನರ ಬೆಂಬಲ, ಪ್ರೋತ್ಸಾಹದಿಂದ ತನಗೆ ಇನ್ನೂ ಹೆಚ್ಚಿನ ಆತ್ಮವಿಶಾಸ, ಭರವಸೆ ಮತ್ತು ಉತ್ಸಾಹ ಮೂಡಿ ಬಂದಿದೆ ಎಂದು ಹೇಳಿದರು.
ಅ. ಒಂದರಂದು ಸಮಾವೇಶವನ್ನು ಕೇಂದ್ರ ಸರ್ಕಾರದ ರೈಲ್ವೆ ಸಚಿವ ಸುರೇಶ್ ಪ್ರಭು ಉದ್ಘಾಟಿಸುವರು. ಅಥಣಿಯ ಮೊಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡುವರು.
ಆಯುಷ್ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್, ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಬೆಂಗಳೂರಿನ ಡಾ. ಎಚ್. ಆರ್. ನಾಗೇಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
 
 
ಕಾವೇರಿ ಸಮಸ್ಯೆ: ಅಹಿಂಸಾತ್ಮಕ ಚಳವಳಿ ಅಗತ್ಯ:
ಮಹಾತ್ಮ ಗಾಂಧಿ ತೋರಿಸಿದ ಅಹಿಂಸಾತ್ಮಕ ಚಳವಳಿ ಮೂಲಕ ಶಾಂತಿ, ಸಹನೆಯಿಂದ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಸರ್ಕಾರ ಮತ್ತು ಸಮಾಜದ ಸೊತ್ತುಗಳನ್ನು ಚಳವಳಿ ಹೆಸರಿನಲ್ಲಿ ಹಾನಿ ಮಾಡಬಾರದು ಎಂದು ಹೇಳಿದರು.
ಕಾವೇರಿ ನೀರಿನ ಸಮಸ್ಯೆ ಪರಿಹಾರದ ಬಗ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪೂರ್ಣ ಬೆಂಬಲವಿದೆ. ಈ ಬಾರಿ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಕೂಡಾ ಸುಮಾರು 15 ಇಂಚಿನಷ್ಟು ಕಡಿಮೆ ಮಳೆಯಾಗಿದ್ದು ನೀರಿನ ಕೊರತೆ ಬಾಧಿಸಲಿದೆ. ಆದುದರಿಂದ ಬಹಳ ಎಚ್ಚರಿಕೆಯಿಂದ ನೀರಿನ ಮಿತ ಬಳಕೆ ಹಾಗೂ ಸದ್ಬಳಕೆ ಮಾಡಬೇಕು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತೀಶ್ ಹೊನ್ನವಳ್ಳಿ, ಮಾಜಿ ಅಧ್ಯಕ್ಷ ದೇವದಾಸ ಹೆಬ್ಬಾರ್, ಕೆ. ವಸಂತ ಸಾಲಿಯಾನ್ ಉಪಸ್ಥಿತರಿದ್ದರು.
ವಿವೇಕ್ ಪಾಸ್ ಸ್ವಾಗತಿಸಿದರು. ತಿಮ್ಮಯ್ಯ ನಾಯ್ಕ್ ಧನ್ಯವಾದವಿತ್ತರು.
 
 
ಭಜನಾ ತರಬೇತಿ
ಧರ್ಮಸ್ಥಳದಲ್ಲಿ ಇದೇ 18ರಿಂದ 25ರ ವರೆಗೆ ಭಜನಾ ತರಬೇತಿ ಕಮ್ಮಟ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸೆ. 18ರಂದು ಭಾನುವಾರ ಮಂಜೇಶ್ವರದ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಕಮ್ಮಟವನ್ನು ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಸೆ. 25ರಂದು ಭಾನುವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಶುಭಾಶಂಸನೆ ಮಾಡುವರು. ಬೆಂಗಳೂರಿನ ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಕೆ. ವಸಂತ ಬಂಗೇರ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಬೆಂಗಳೂರಿನ ಎಂ.ಎಸ್. ಗಿರಿಧರ, ಶಂಕರ್ ಶ್ಯಾನುಭಾಗ್, ರಾಮಕೃಷ್ಣ ಕಾಟುಕುಕ್ಕೆ, ಮಂಗಳೂರಿನ ಮೋಹನದಾಸ್ ಶೆಣೈ, ದೇವದಾಸ ಪ್ರಭು, ಮಂಗಲದಾಸ್ ಗುಲ್ವಾಡಿ, ಮಣಿಪಾಲದ ಉಷಾ ಹೆಬ್ಬಾರ್, ಉಡುಪಿಯ ರಮೇಶ್ ಕಲ್ಮಾಡಿ, ಶಂಕರ್ ಮತ್ತು ಸಂಗೀತಾ ಬಾಲಚಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡುವರು.
ನೃತ್ಯ ಭಜನೆ: ಸೆ. 25 ರಂದು ಭಾನುವಾರ ಇನ್ನೂರು ಭಜನಾ ಮಂಡಳಿಗಳ ಎರಡು ಸಾವಿರ ಭಜನಾ ಪಟುಗಳಿಂದ ನೃತ್ಯ ಭಜನೆ ನಡೆಯಲಿದೆ.
ಪ್ರತಿ ವರ್ಷ ಭಜನಾ ಕಮ್ಮಟ ಏರ್ಪಡಿಸುತ್ತಿದ್ದು ರಾಗ, ತಾಳ, ಲಯ ಬದ್ಧವಾಗಿ ಶಿಸ್ತಿನಿಂದ ಭಜನೆ ಹಾಡುವ ಬಗ್ಯೆ ತರಬೇತಿ ನೀಡುವುದಲ್ಲದೆ ಪ್ರಾರ್ಥನೆ, ಯೋಗಭ್ಯಾಸ , ಧ್ಯಾನ, ಮಾನವೀಯ ಮೌಲ್ಯಗಳ ಉದ್ದೀಪನದ ಬಗ್ಯೆಯೂ ಮಾರ್ಗದರ್ಶನ ನೀಡಲಾಗುತ್ತದೆ.

LEAVE A REPLY

Please enter your comment!
Please enter your name here