ಮದ್ಯಪಾನದ ವಿರುದ್ಧ ಜನಜಾಗೃತಿ ಸಪ್ತಾಹ

0
438

ವರದಿ: ಸುನೀಲ್ ಬೇಕಲ್
ಮದ್ಯಪಾನ ಇಂದು ಸಾರ್ವತ್ರಿಕ ಸಾಮಾಜೀಕರಣವಾಗಿರುವುದು ಖೇದಕರವಾಗಿದೆ. ವ್ಯಸನಮುಕ್ತವಾದ ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಬೀದಿ ನಾಟಕ ಅತ್ಯಂತ ಪ್ರಭಾವಿ ಹಾಗೂ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
 
 
 
ಅವರು ಭಾನುವಾರ ಧರ್ಮಸ್ಥಳದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಪುತ್ತೂರು ವಕೀಲರ ಸಂಘ ಹಾಗೂ ವಿವಿಧ ಸಂಘಟಣೆಗಳ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜಾಗೃತಿ ಸಪ್ತಾಹದ ಅಂಗವಾಗಿ ಆಯೋಜಿಸಲಾದ ಬೀದಿ ನಾಟಕ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
 
 
 
ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಅವರನ್ನು ಸರಿದಾರಿಗೆ ತಂದು ವ್ಯಸನಮುಕ್ತರನ್ನಾಗಿ ಮಾಡುವಲ್ಲಿ ಬೀದಿ ನಾಟಕ ಪರಿಣಾಮಕಾರಿ ಸಂದೇಶ ನೀಡುತ್ತದೆ. ಮದ್ಯಪಾನದ ಬಗ್ಗೆ ಪ್ರತಿಭಟನೆ ಮತ್ತು ವಿರೋಧಕ್ಕಿಂತ ಮನಪರಿವರ್ತನೆ ಮಾಡುವುದು ಅಗತ್ಯವಾಗಿದೆ. ಜನಜಾಗೃತಿ ವೇದಿಕೆ ಹಾಗೂ ಬೀದಿ ನಾಟಕ ಪ್ರದರ್ಶನದ ಮೂಲಕ ದುಶ್ವಟಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲಿ ಎಂದು ಅವರು ಹಾರೈಸಿದರು.
 
 
 
ಸವಣೂರಿನ ಶ್ರವಣರಂಗ ಪ್ರತಿಷ್ಠಾನದ ಕಲಾವಿದರು ಹೆಣದೂರು ಬೀದಿ ನಾಟಕದ ಮೂಲಕ ಮದ್ಯಪಾನದ ದುಶ್ಪರಿಣಾಮಗಳನ್ನು ಹೃದಯಸ್ಪರ್ಶಿಯಾಗಿ ಮನವರಿಕೆ ಮಾಡಿದರು. ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದರು.
 
 
 
ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ಪ್ಯಾಸ್ ಮತ್ತು ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸೀತಾರಾಮ ಶೆಟ್ಟಿ ಹಾಗೂ ಸಿಬ್ಬಂದಿಯವರು ಸಹಕರಿಸಿದರು.

LEAVE A REPLY

Please enter your comment!
Please enter your name here