ಮಗನಿಗೆ ಮೊದಲೇ ಬರುವ ಗೌರಮ್ಮ

0
543

ಗೌರಿ ವಿಶೇಷ ಲೇಖನ: ಭವ್ಯಾ ಜಿ ಮಯ್ಯ
“ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ”.
ಗೌರೀ-ಗಣೇಶ ಹಬ್ಬಗಳು ಜೊತೆಯಾಗಿ ಬರುತ್ತದೆ. ಗಣೇಶ ಹಬ್ಬದ ಮೊದಲ ದಿನ ಗೌರಿ ಹಬ್ಬ ಬರುತ್ತದೆ. ಗೌರಿ ಹಬ್ಬ ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬವೂ ಹೌದು. ಪ್ರತಿ ವರ್ಷ ಭಾದ್ರಪದ ಮಾಸದ ಚತುರ್ಥಿಯ ಮುನ್ನಾ ದಿನ ಶುದ್ಧ ತದಿಗೆಯನ್ನು ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ. ಗೌರಿ ಹಬ್ಬ ಎಂದರೆ ಮುಖ್ಯವಾಗಿ ಹೆಂಗಳೆಯರ ಹಬ್ಬ ಎಂದೇ ಖ್ಯಾತಿ. ಇದು ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆಯೂ ಇದೆ. ಗೌರಿ ಗಣೇಶ ಹಬ್ಬವು ವಿಶೇಷವಾಗಿ ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಆಚರಿಸಲ್ಪಡುವಂತಹ ಅತೀ ಪ್ರಾಮುಖ್ಯ ಹಬ್ಬವಾಗಿದೆ. ಉತ್ತರ ಭಾರತದಲ್ಲಿ ಇದನ್ನು ‘ಹರತಲಿಕಾ’ ಎಂದು ಕರೆಯಲಾಗುತ್ತದೆ.
 
gowri ganesh fest_vaarte3
 
ಗೌರಿ ಹಬ್ಬದ ಒಂದು ದಿನಕ್ಕೆ ಮೊದಲು ಗೌರಿ ದೇವತೆಯ ಮೂರ್ತಿಯನ್ನು ಮನೆಗೆ ತರಲಾಗುತ್ತದೆ. ಈ ಸಮಯದಲ್ಲಿ ಗೌರಿ ದೇವತೆ ತನ್ನ ತಂದೆಯ ಮನೆಗೆ ಬರುತ್ತಾರೆ ಎಂಬುದು ನಂಬಿಕೆ. ಆ ದಿನ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸುತ್ತಾರೆ. ಗೌರಿ ಪೂಜೆಯಂದು ಮೂರ್ತಿಯ ಸುತ್ತಲು ಬಾಳೆಗಿಡ ಮತ್ತು ಮಾವಿನ ಎಲೆಗಳನ್ನು ಕಟ್ಟಿ ಮಂಟಪವನ್ನು ರಚಿಸಲಾಗುತ್ತದೆ. ಈ ಮಂಟಪವನ್ನು ಹೂವು ಹಾಗೂ ಇನ್ನಿತರ ಸಾಮಗ್ರಿಗಳೊಂದಿಗೆ ಶೃಂಗರಿಸಲಾಗುತ್ತದೆ. ಗೌರಿ ಪೂಜೆ ಮಾಡುವ ಮಹಿಳೆಯರು ಹಾಗೂ ಕನ್ಯೆಯರು ಕೈಗೆ 16 ಸುತ್ತಿನ ಅರಸಿನ ದಾರ ಕಟ್ಟಿಕೊಳ್ಳುತ್ತಾರೆ. ಇದನ್ನು ಗೌರಿದಾರವೆನ್ನಲಾಗುತ್ತದೆ. ಆ ಕಾಲದಲ್ಲಿ ದೊರೆಯುವ ಸೇವಂತಿಗೆ ಹೂ ಘವರಿ ಹಬ್ಬಕ್ಕೆ ತುಂಬಾ ಶ್ರೇಷ್ಠವಾಗಿದೆ.
ಇನ್ನು ಕೆಲವರು ಮರಳಗೌರಿಯನ್ನು ಕೆಲವರು ಅರಿಶಿನ ಗೌರಿಯನ್ನು ಇಡುವ ಪದ್ಧತಿ ವಾಡಿಕೆಯಲ್ಲಿ ಇರುತ್ತೆ. ಅವರವರ ಸಂಪ್ರದಾಯದಂತೆ ಗೌರಿಯನ್ನು ಪ್ರತಿಸ್ಠಾಪಿಸಿ ಪೂಜೆ ಮಾಡುತ್ತಾರೆ.
 
gowri ganesh fest_vaarte2
 
 
ಗೌರಿ ಮೂರ್ತಿಯನ್ನು ವಸ್ತ್ರಾಭರಣಗಳಿಂದ ಅಲಂಕರಿಸಲಾಗುತ್ತದೆ. ವಿವಿಧ ರೀತಿಯ ತಿನಿಸುಗಳನ್ನು ಮಾಡಿ ದೇವಿಗೆ ನೈವೇದ್ಯ ಸಮರ್ಪಿಸಲಾಗುತ್ತದೆ. ದೇವಿಯನ್ನು ಗಂಡನ ಮನೆಗೆ ಕಳುಹಿಸುವ ಸಂಕೇತವಾಗಿ ಹೂವು , ವೀಳ್ಯದೆಲೆ, ಫಲ, ವಿವಿಧ ಪದಾರ್ಥಗಳನ್ನು ನೀರಿನಲ್ಲಿ ತೇಲಿ ಬಿಡುವ ರೂಢಿ ಇದೆ. ಇದು ಗಂಡನ ಮನೆಗೆ ಕಳುಹಿಸುವ ಒಂದು ಸಂಕೇತ. ಸುಮಂಗಲಿಯರು ಪರಸ್ಪರ ಬಾಗಿನವನ್ನು ಹಂಚಿಕೊಳ್ಳುತ್ತಾರೆ.
 
ಮೂರನೆಯ ದಿನ(ಕೆಲವು ಸಂದರ್ಭದಲ್ಲಿ ಅದೇ ದಿನವೇ ಆಗಬಹುದು)ವಿನಾಯಕನ ಆಗಮನವಾಗುತ್ತದೆ. ಸಕಲ ಮರ್ಯಾದೆಯೊಂದಿಗೆ ಹೆಣ್ಣು ಮಗಳನ್ನು ಗಂಡನ ಮನೆಗೆ ಕಳುಹಿಸುವ ಸಂಭ್ರಮ ಅದ್ದೂರಿಯಾಗಿ ನಡೆಯುತ್ತದೆ. ತಾಯಿಯ ಹಾಗೂ ಮಗನ ವಿಗ್ರಹಗಳನ್ನು ಸಾಮಾನ್ಯವಾಗಿ ಹೆಚ್ಚು ನೀರು ಇರುವ ಸ್ಥಳಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಇದು ಅದ್ದೂರಿಯಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಾಗುತ್ತದೆ.
 
ಬಾಗಿನ ವಿಶೇಷ:
ವಿವಾಹಿತ ಮಹಿಳೆಯರಿಗೆ ತವರು ಮನೆಯಿಂದ ಉಡುಗೊರೆ ಹಾಗೂ ಬಾಗಿನ ಕೊಡುವ ಸಂಪ್ರದಾಯವಿದೆ. ಬಾಗಿನದಲ್ಲಿ ವಿವಿಧ ರೀತಿಯ ವಸ್ತುಗಳಾದ ಅರಶೀನ, ಕುಂಕುಮ, ಕಪ್ಪು ಬಳೆಬಿಚ್ಚೋಲೆ, ಕಪ್ಪು ಮಣಿಗಳು, ಬಾಚಣಿಗೆ, ಸಣ್ಣ ಕನ್ನಡಿ, ತೆಂಗಿನಕಾಯಿ, ಐದು ಬಗೆಯ ಹಣ್ಣು, ರವಿಕೆ ಕಣ ಅಥವಾ ಸೀರೆ, ಧಾನ್ಯಗಳು, ಅಕ್ಕಿ, ಗೋಧಿ ಮತ್ತು ಬೆಲ್ಲವಿರುತ್ತದೆ. ವ್ರತಕ್ಕಾಗಿ ಸುಮಾರು ಐದು ಬಾಗಿನಗಳನ್ನು ತಯಾರಿಸಲಾಗುತ್ತದೆ.
 
gowri ganesh fest_vaarte1
 
ಪೌರಾಣಿಕ ಕಥೆಗಳು:
ಸ್ವರ್ಣ ಗೌರಿ ಪೂಜೆ ಹೇಗೆ ಆಚರಣೆಯಲ್ಲಿ ಬಂತು ಎನ್ನುವ ಕುರಿತು ಹಲವು ಪೌರಾಣಿಕ ಕಥೆಗಳು ಚಾಲ್ತಿಯಲ್ಲಿದೆ. ಗೌರಿ ಎಂಬುದು ಶಿವನ ಸತಿ ಪಾರ್ವತಿಯ ಮತ್ತೊಂದು ನಾಮ. ಪಾರ್ವತಿಯ ತಂದೆ ಪರ್ವತರಾಜ. ಅಂದರೆ ಹಿಮಾಲಯವಿರುವ ಭಾರತ (ಭೂಲೋಕ). ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿಹ ಗೌರಿ ವರ್ಷಕ್ಕೊಮ್ಮೆ ತವರಿಗೆ (ಭೂಮಿಗೆ) ಬಂದು ಪೂಜೆ ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬುದು ಕೆಲವರ ನಂಬಿಕೆ. ಗಣಪನಿಗೆ ಒಂದು ದಿನ ಮೊದಲೇ ಗೌರಿ ತವರಿಗೆ ಬರುತ್ತಾಳೆ. ಗೌರಿಯನ್ನು ಆದರದಿಂದ ಬರಮಾಡಿಕೊಂಡು ಪೂಜಿಸಲು ಸುಮಂಗಲಿಯರು ಕಾತರಿಸುತ್ತಾರೆ. ಗೌರಿಯ ಪೂಜೆ ಮಾಡಿದರೆ ತಮ್ಮ ಮಾಂಗಲ್ಯ ಗಟ್ಟಿಯಾಗಿರುತ್ತದೆ ಎಂಬುದು ಹಿಂದೂಗಳ ನಂಬಿಕೆ. ಮಹಾಮಾತೆ ಪಾರ್ವತೀದೇವಿ ತನ್ನ ತವರು ಮನೆಗೆ ಹೋಗುವ ಸಂಭ್ರಮ ಇಲ್ಲಿ ಸಾಂಕೇತಿಕವಾಗಿದೆ. ಗೌರಿ ಹಬ್ಬ ಭಾದ್ರಪದ ತೃತೀಯಾ ದಿನದಂದು ಬರುತ್ತದೆ.ಮೂರನೆಯ ದಿನ ಚೌತಿ ಎಂದರೆ ವಿನಾಯಕ ಚೌತಿ .ಆ ದಿನ ಆಕೆಯ ಮಗ ಗಣಪ(ವಿನಾಯಕ)ಬಂದು ಆಕೆಯನ್ನು ಗಂಡನ ಮನೆಗೆ ಕರೆದೊಯ್ಯುತ್ತಾನೆ ಎಂಬುದು ಪೌರಾಣಿಕ ಹಿನ್ನಲೆ.
ಈ ಹಿನ್ನೆಲೆಯಲ್ಲಿ ಗೌರಿಗಣೇಶ ಹಬ್ಬ ಮದುವೆಯಾಗಿ ಗಂಡನ ಮನೆ ಸೇರಿರುವ ಮಹಿಳೆಯರಿಗೆ ವಿಶೇಷವಾಗಿದೆ. ಮದುವೆಯಾಗಿ ಬೇರೆ ಊರಿಗೆ ಹೋಗಿ ಇಲ್ಲವೇ ಬೇರೆ ಮನೆಯಲ್ಲಿ ಪತಿಯೊಂದಿಗೆ ಸಂಸಾರ ಮಾಡುವ ಹೆಣ್ಣು ಮಕ್ಕಳು ವರ್ಷಕ್ಕೊಮ್ಮೆಯಾದರೂ ತವರಿಗೆ ಹೋಗಲಿ ಎಂಬುದು ಗೌರಿ ಹಬ್ಬದ ಸಂಕೇತವೂ ಹೌದು.

LEAVE A REPLY

Please enter your comment!
Please enter your name here