ಮಕ್ಕಳ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

0
226

ಮಡಿಕೇರಿ ಪ್ರತಿನಿಧಿ ವರದಿ
ಮಕ್ಕಳ ಬುದ್ದಿಶಕ್ತಿಯನ್ನು ಅಂಕ ಗಳಿಸುವುದಕಷ್ಟೇ ಸೀಮಿತಗೊಳಿಸದೆ ಜೀವನದ ಮೌಲ್ಯಗಳ ಬಗ್ಗೆ ಆಸಕ್ತಿ ತೋರುವಂತೆ ಮಾಡಬೇಕೆಂದು ಬೆಳ್ಳಾರೆಯ ಡಾ| ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ನರೇಂದ್ರ ರೈ ದೇರ್ಲ ಅವರು ಕರೆ ನೀಡಿದ್ದಾರೆ.
 
 
 
ನಗರದ ಭಾರತೀಯ ವಿದ್ಯಾಭವನದ ಕಲಾ ಭಾರತಿಯ ಆರ್ಟ್ ಗ್ಯಾಲರಿಯಲ್ಲಿ ನಡೆದ ಮಕ್ಕಳ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಗ್ಧ ಮಕ್ಕಳು ಚಿತ್ರಿಸಿದ ಚಿತ್ರಕಲೆಗಳೇ ನಮ್ಮನ್ನು ಮಾತನಾಡಿಸುವಂತ್ತಿವೆ, ನಿತ್ಯ ಹರಿಧ್ವರ್ಣದಿಂದ ಕೊಡಗು ಕೂಡಿದೆ ಎಂಬುವುದಕ್ಕೆ ಮಕ್ಕಳು ಚಿತ್ರಿಸಿದ ಚಿತ್ರಕಲೆಗಳೇ ಸಾಕ್ಷಿಯಾಗಿವೆ ಎಂದರು.
 
 
ಮಕ್ಕಳ ಚಿತ್ರಕಲೆಗಳನ್ನು ನೋಡಿದಾಗ ಇದರಲ್ಲಿ ಅಧ್ಯಯನ ಹಾಗೂ ಅಭ್ಯಾಸಗಳಿಂದ ಕಲೆಗಳು ಮೂಡಿ ಬಂದಂತ್ತಿವೆಂಬುದನ್ನು ಸಾರಿ ಹೇಳುತ್ತವೆ. ಈ ಮಕ್ಕಳಲ್ಲಿ ಉತ್ತಮ ಪ್ರತಿಭೆಗಳಿವೆ ಎಂಬುದನ್ನು ಬಿಂಬಿಸುತ್ತಿವೆ ಎಂದರು. ಅಭಿರುಚಿಗಳು ಸಹವಾಸ ಹಾಗೂ ಸಂಬಂಧದಿಂದ ಬರುತ್ತವೆ, ಇವುಗಳು ನಮ್ಮನ್ನು ಸಮೃದ್ದಗೊಳಿಸುತ್ತವೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಉದಾಹರಣೆ ಎಂದ ಡಾ| ನರೇಂದ್ರ ರೈ ದೇರ್ಲ ಎಲ್ಲಾ ರೀತಿಯ ಪರೀಕ್ಷೆಗಳಲ್ಲಿ ರಾಜ್ಯದಲ್ಲೇ ದ.ಕ.ಜಿಲ್ಲೆ ಮುಂದಿರುತ್ತದೆ, ಆದರೆ ಕಪ್ಪು ಚುಕ್ಕೆ ಎಂಬಂತೆ ಇವುಗಳ ಪೈಕಿ ಕೋಮು ಗಲಭೆಯಲ್ಲಿ ಕೂಡ ದ.ಕ.ಜಿಲ್ಲೆ ಮುಂದಿರುವುದು ದೌರ್ಭಾಗ್ಯ ಎಂದು ಆತಂಕ ವ್ಯಕ್ತಪಡಿಸಿದರು.
 
 
ಪೋಷಕರಾದ ನಾವುಗಳು ಮಕ್ಕಳಲ್ಲಿರುವ ಜೀವಂತಿಕೆ ಮತ್ತು ಅಭಿರುಚಿಯನ್ನು ಕಸಿದು ಯಾಂತ್ರಿಕವನ್ನಾಗಿ ಮಾಡುತ್ತಿದ್ದೇವೆ. ಇದನ್ನು ಪೋಷಕರು ತಮ್ಮ ಮನಸ್ಸಿನಿಂದ ತೆಗೆದು ಹಾಕಿ ಮಕ್ಕಳ ನಿರ್ಮಲ ಮನಸಿನಲ್ಲಿ ಜೀವಂತಿಕೆಯೊಂದಿಗೆ ಚಿತ್ರಕಲೆ ಸೇರಿದಂತೆ ಅವರವರ ಅಭಿರುಚಿಯನ್ನು ಮೂಡಿಸಬೇಕೆಂದು ಸಲಹೆ ನೀಡಿದರು. ಮಕ್ಕಳು ತಮ್ಮ ಚಿತ್ರಕಲೆಯ ಮೂಲಕ ಪೋಷಕರನ್ನು ಮಾತನಾಡಿಸಿರುವುದರಿಂದ ಮುಂದೆ ಅವರ ಇಷ್ಟಾರ್ಥವನ್ನು ಕಸಿಯುವ ಸಾಹಸಕ್ಕೆ ಕೈಹಾಕಬಾರದು ಎಂದು ಡಾ| ನರೇಂದ್ರ ರೈ ದೇರ್ಲ ಕಿವಿ ಮಾತು ಹೇಳಿದರು.
 
 
ಕಾರ್ಯಕ್ರಮ ಆಯೋಜಕರಲ್ಲೊಬ್ಬರಾದ ಕೊಡಗು ವಿದ್ಯಾಲಯದ ಚಿತ್ರಕಲೆ ಶಿಕ್ಷಕ ಪ್ರಸನ್ನಕುಮಾರ್ ಮಾತನಾಡಿ, ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣದೊಂದಿಗೆ ಅವರಿಗಿಷ್ಟವಾದ ಅವರ ಮುಂದಿನ ಉತ್ತಮ ಭವಿಷ್ಯ ರೂಪಿಸಲು ಸಹಾಯಕವಾಗುವಂತಹ ಪಠ್ಯೇತರ ಚಟುವಟಿಕೆಗಳಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು.
 
 
ಪ್ರತಿದಿನ ಸುಮಾರು ಒಂದೂವರೆ ಗಂಟೆ ಕಾಲ ಸಮಯವನ್ನು ತಮ್ಮ ಮಕ್ಕಳೊಂದಿಗೆ ಬೆರೆಯಲು ಮೀಸಲಿಡುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕರಾದ ಬಿ.ಆರ್.ಸತೀಶ್ ಮತ್ತು ಮಾಲ್ದಾರೆ ಬಾವ ಅಲ್ಲದೆ, ಚಿತ್ರಕಲಾ ಪ್ರದರ್ಶನದಲ್ಲಿ ಸುಮಾರು 250ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here