ಮಕ್ಕಳೆಂದರೆ ನಿತ್ಯಾನಂದರಿಗೆ ಬಲುಪ್ರೀತಿ!

0
1273

ನಿತ್ಯ ಅಂಕಣ-೮೪ : ತಾರಾನಾಥ್‌ ಮೇಸ್ತ, ಶಿರೂರು.
ಸೀತಾಬಾಯಿ, ನಿತ್ಯಾನಂದರ ಪರಮಭಕ್ತೆ ಆಗಿದ್ದಳು. ಗರುದೇವರ ಸಾಮೀಪ್ಯದ ಸಾನ್ನಿಧ್ಯವು ಇವರಿಗೆ ಪ್ರಾಪ್ತವಾಗಿತ್ತು. ಆದರೆ ಸೀತಾಬಾಯಿ ಅವರು ಮೇಲ್ವರ್ಗವಳು ಆದರಿಂದ, ಮಡಿ ಬಾಧೆ ಅವರಿಗೆ ಸಹಜವಾಗಿತ್ತು. ಬಹಳವಾಗಿ ಮಡಿ ಸಂಪ್ರದಾಯ ಆಚರಣೆಯಲ್ಲಿಯೇ ಅವರು ದಿನ ಕಳೆಯುತ್ತಿದ್ದರು. ಹೀಗೆ ಒಮ್ಮೆ ಅವರಿಗೆ ಉಡುಪಿ ಸನಿಹದ ಕಾಪು ಕಡಲ ಕಿನಾರೆಯ ಪ್ರದೇಶದಲ್ಲಿ ನಿತ್ಯಾನಂದರು ವಿಹರಿಸುತ್ತಿದ್ದಾರೆ, ಎಂಬ ಮಾಹಿತಿ ಅವರಿಗೆ ತಿಳಿದು ಬರುತ್ತದೆ. ಸಂತೋಷಗೊಂಡ ಸೀತಾಬಾಯಿ ಅವರು ನಿತ್ಯಾನಂದರು ಇರುವಲ್ಲಿಗೆ ತೆರಳಲು ಸಂಬಂಧಿಕರನ್ನು ಇತರ ಭಕ್ತರನ್ನು ಸಿದ್ಧಗೊಳಿಸುತ್ತಾಳೆ. ಅದರಂತೆ ನಿತ್ಯಾನಂದರನ್ನು ಅರಸುತ್ತ ಅವರೆಲ್ಲ ಕಾಪು ಕಡಲ ಕಿನಾರೆಗೆ ತೆರಳುತ್ತಾರೆ.
ಮಟ ಮಟ ಮಧ್ಯಾಹ್ನದ ಸುಡು ಬಿಸಿಲು. ಮರಳಿನ ನೆಲವು ಕಾದ ಕಾವಲಿಯಂತೆ ಆಗಿತ್ತು. ಯಾರ ಕಾಲಿಗೂ ಪಾದರಕ್ಷೆಗಳು ಇಲ್ಲದ ಕಾರಣದಿಂದ ಯಾರಿಗೂ ಮರಳ ರಾಶಿಯ ಮೇಲೆ ಹೆಜ್ಜೆಗಳಿಡಲು ಅಸಾಧ್ಯವಾಯಿತು. ಸೀತಾಬಾಯಿ, ಅವಳಕ್ಕ ಮುಂದೆ ಸಾಗಿದರೆ, ಉಳಿದವರೆಲ್ಲರೂ ನಡೆಯಲಾಗದೆ ಹಿಂದೆ ಬಿಳುತ್ತಾರೆ. ಸೀತಾಬಾಯಿ ಮತ್ತು ಆಕೆಯ ಅಕ್ಕ ಅಲ್ಲಿ ಇಲ್ಲಿ ವಿಚಾರಿಸುತ್ತ ನಿತ್ಯಾನಂದರು ಇರುವಿಕೆ ಸ್ಥಳವನ್ನು ಪತ್ತೆಗೊಳಿಸುತ್ತಾರೆ. ಆ ಸಮಯದಲ್ಲಿ ನಿತ್ಯಾನಂದರು ಹರಿಜನ ಸಮಾಜದವರ ಮನೆಯಲ್ಲಿ ಇದ್ದರು. ಹರಿಜನರ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಮಕ್ಕಳೆಂದರೇನೇ ಅವರಿಗೆ ಬಲು ಪ್ರೀತಿ. ಅವರಲ್ಲಿದ್ದ ಡೋಲನ್ನು ಬಾರಿಸಿ ಮಕ್ಕಳನ್ನು ಸಂತೋಷ ಪಡಿಸುತ್ತಿದ್ದರು. ಆ ಮುಗ್ದ ಬಡಜನರಿಗೆ ನಿತ್ಯಾನಂದರು ಎಂದರೆ ಬಲು ಪ್ರೀತಿ. ಆ ಕಾಲಘಟ್ಟದಲ್ಲಿ ಕೆಳವರ್ಗದವರನ್ನು ನಾಗರಿಕ ಸಮಾಜ, ಅವರನ್ನು ಹಿನಾಯವಾಗಿ ಕಾಣುವ ದಿನಗಳು ಅಂದಿನವುದಾಗಿದ್ದವು. ಆ ಕಾಲಘಟ್ಟದಲ್ಲಿಯೆ ಅಸ್ಪ್ರಶ್ಯತೆ ಸಲ್ಲದು, ಎಲ್ಲರೂ ದೇವರ ಮಕ್ಕಳು ಎಂಬ ಸಂದೇಶವನ್ನು ಭಗವಾನ್ ನಿತ್ಯಾನಂದರು ನೀಡಿದ್ದವರು. “ಸಮಾನತೆಯ ಬದುಕು ಸ್ವಾಸ್ಥ್ಯ ನಾಗರಿಕ ಸಮಾಜ” ಎನ್ನುವುದು ಅವರ ಸಿದ್ಧಾಂತವಾಗಿತ್ತು. ಹಾಗಾಗಿಯೇ ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನರು ಗುರುದೇವರ ಭಕ್ತರಾಗಿದ್ದರು.
ಸೀತಾಬಾಯಿ ಮತ್ತು ಅವರ ಅಕ್ಕನನ್ನು ಕಂಡ ನಿತ್ಯಾನಂದರು, ಅವರನ್ನು ಸಮೀಪದ ಶಾಲೆಯಲ್ಲಿ ವಿಶ್ರಮಿಸಲು ಹೇಳುತ್ತಾರೆ. ಸುಡು ಬಿಸಿಲ ಧಗೆಯಲ್ಲಿ ಅವರು ನಡೆದು ಬಂದು, ಅವರು ಬಸವಳಿದಿದ್ದಾರೆ ಎಂದು ನಿತ್ಯಾನಂದರಿಗೆ ತಿಳಿಯುತ್ತದೆ. ದಣಿದಿರುವರ ಬಾಯಾರಿಕೆ ತಣಿಸಲು ನಿತ್ಯಾನಂದರು, ಹರಿಜನರ ಮನೆಯಿಂದ ಸಿಯಾಳವನ್ನು ತಂದು ಸೀತಾಬಾಯಿ ಅವರ ಅಕ್ಕಳಿಗೆ ಕುಡಿಯಲು ನೀಡುತ್ತಾರೆ. ಸೀತಾಬಾಯಿ ಅವರಿಗೆ ಹರಿಜನರ ಮನೆಯಿಂದಲೇ ಕುಡಿಯಲು ನೀಡಲು ನೀರು ತರಿಸಿದರು. ಒಂದು ಲೋಟೆಯಲ್ಲಿ ನಿತ್ಯಾನಂದರು ನೀರು ಕುಡಿಯಲು ಸೀತಾಬಾಯಿಗೆ ನೀಡಿದರು. ಮಡಿಯ ವ್ಯಾಧಿಯಿಂದ ಬಳಲುತ್ತಿದ್ದ ಸೀತಾಬಾಯಿ, ನೀರು ಕುಡಿಯಲು ಅಸಹ್ಯ ಭಾವನೆ ವ್ಯಕ್ತಪಡಿಸಿದಳು. ” ಎಂಥಾ ಮಡಿ..! ನೀರನ್ನು ಕುಡಿದು ಬಿಡು” ಎಂದು ನಿತ್ಯಾನಂದರ ಗಟ್ಟಿ ಸ್ವರದಲ್ಲಿ ಗದರಿಸಿದರು. ಗುರುದೇವರ ಆಜ್ಞೆ ಮೀರಲಾಗದ ಸೀತಾಬಾಯಿ ನೀರನ್ನು ಪಾವನ ತೀರ್ಥ ಸ್ವರೂಪವೆಂದು ತಿಳಿದು ಕುಡಿದು ಬಿಟ್ಟಳು. ಜಾತಿ ಬೇಧ, ಮೇಲು ಕೀಳು ಭಾವನೆಗಳು ಸಲ್ಲದು ಎಂಬ ವಿಚಾರಧಾರೆಗಳನ್ನು ನಿತ್ಯಾನಂದರು ಭೋದಿಸಿ ಸೀತಾಬಾಯಿಯ ಮನದೊಳಗೆ ಗಟ್ಟಿ ನೆಲೆಗೊಳಿಸಿದರು. ಅಲ್ಲಿಂದ ಸೀತಾಬಾಯಿಗೆ ಅಂಟಿದ ಮಡಿ ಸೋಂಕು ಕಳಚಿಕೊಂಡಿತು.

LEAVE A REPLY

Please enter your comment!
Please enter your name here