ಮಂಗಲ ಗೋ ಯಾತ್ರೆ

0
418

ನಮ್ಮ ಪ್ರತಿನಿಧಿ ವರದಿ
ನನಗೆ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಸುಭಾಷ್ ಚಂದ್ರ ಭೋಸ್ ಕರೆನೀಡಿದ್ದರು, ಸ್ವಾಮಿ ವಿವೇಕಾನಂದರು ನೂರು ಸದೃಡ ಯುವಕರನ್ನು ಕೊಡಿ, ನವಭಾರತ ನಿರ್ಮಿಸುತ್ತೇನೆ ಎಂದಿದ್ದರು ಎಂದು ನೆನಪಿಸಿದ ಶ್ರೀಗಳು ಗವ್ಯೋತ್ಪನ್ನಗಳನ್ನು ಬಳಸಿ, ಗೋವಿಗೆ ಬೆಲೆ ತಂದುಕೊಡುವ ಕೆಲಸವನ್ನು ನೀವು ಮಾಡುವುದಾದರೆ, ಗೋಹತ್ಯೆಯನ್ನು ನಾವು ಮುಕ್ತವಾಗಿಸುವ ಜವಾಬ್ದಾರಿ ನಮ್ಮದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಕರೆನೀಡಿದರು.
 
mata_goyatra_shikaripura1
 
 
ಶಿಕಾರಿಪುರ ಸಾಂಸ್ಕೃತಿಕ ಭವನದಲ್ಲಿ ನಡೆದ ಮಂಗಲ ಗೋಯಾತ್ರೆಯ ಸಭೆಯಲ್ಲಿ ಸಾನ್ನಿಧ್ಯವಹಿಸಿ ಗೋಸಂದೇಶ ನೀಡಿದ ಶ್ರೀಗಳು, ಗೋವಿನ ರಕ್ಷಣೆಯಲ್ಲಿ ಯಾರು ತೊಡಗಿಕೊಳ್ಳತ್ತಾರೋ ಅವರ ಬದುಕಿನ ಹಾದಿ ಹೂಹಾಸಿನ ಹಾದಿಯಾಗುತ್ತದೆ, ಗೋರಕ್ಷಣೆಯಲ್ಲಿ ತೊಡಗಿಕೊಂಡರೆ ಆಕ್ರಮಣಗಳು ಎದುರಾಗುತ್ತವೆಯಾದರೂ, ಗೋವು ನಮ್ಮನ್ನು ರಕ್ಷಿಸುತ್ತದೆ ಎಂದರು.
 
 
 
 
ಇಂದು ಭೋಪಾಲ್ ಅನಿಲ ದುರಂತ ನಡೆದ ದಿನವಾಗಿದ್ದು, ಲಕ್ಷಾಂತರ ಜನ ಅಂದು ದುರ್ಮರಣವನ್ನಪ್ಪಿದರು. ಚಿಕಿತ್ಸೆ ನೀಡುವ ವೈದ್ಯರು ಅಸುನೀಗಿದ್ದರು. ಆದರೆ ಗೋಮಯ ಲೇಪನವಾದ ಮನೆಗಳಲ್ಲಿ ವಾಸವಾಗಿದ್ದವರು ಬದುಕುಳಿದರು. ಹೀಗಾಗಿ ಈ ದಿನ ರಾಸಾಯನಿಕದ ಕರಾಳಮುಖ ದರ್ಶನವಾದ ಹಾಗೂ ಗೋವಿನ ಶಕ್ತಿ ಪ್ರದರ್ಶನವಾದ ದಿನ ಎಂದು ಅಭಿಪ್ರಾಯಪಟ್ಟರು.
 
 
ಗೋಕಥಾಕಾರರಾದ ವಾರಣಾಸಿಯ ಮೊಹಮದ್ ಫೈಜ್ ಖಾನ್ ಮಾತನಾಡಿ, ಭಾರತ ಸಂಸ್ಕೃತಿ ಗೋವನ್ನು ಆಧರಿಸಿದೆ, ಗೋವಿನ ಬಗ್ಗೆ ಮಾತನಾಡಿದರೆ ಕೋಮುವಾದ ಎನ್ನುವಂತಾಗಿದೆ, ಆದರೆ ಗೋವು ನಿಜವಾದ ಜಾತ್ಯಾತೀತವಾದದ್ದಾಗಿದೆ. ಗೋವು ಯಾವುದೇ ಜಾತಿಯ ಮಾತೆಯಲ್ಲ, ಮುಸಲ್ಮಾನರು ಸೇರಿದಂತೆ ಎಲ್ಲರಿಗೂ ಗೋವು ಮಾತೆ. ರಾಘವೇಶ್ವರ ಶ್ರೀಗಳು ಗೋವಿನ ಕುರಿತು ಕೇವಲ ಮಾತನಾಡುತ್ತಿಲ್ಲ, ಗೋವಿನ ಕುರಿತಾಗಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
 
 
ಶಿಕಾರಿಪುರದ ಶಾಸಕ ಬಿ ವೈ ರಾಘವೇಂದ್ರ ಮಾತನಾಡಿ, ರಾಘವೇಶ್ವರ ಶ್ರೀಗಳು ಗೋಸಂರಕ್ಷಣೆಯಲ್ಲಿ ತೊಡಗಿಕೊಂಡಿರುವುದು ನಮ್ಮ ಸೌಭಾಗ್ಯವಾಗಿದೆ. ಬೇರೆಯವರಂತೆ ಅವರೂ ಇಂಜಿನಿಯರ್ ಕಾಲೇಜನ್ನು ಕಟ್ಟಿದ್ದರೆ ಮೂಕಪ್ರಾಣಿಯಾದ ಗೋವಿನ ನೋವಿಗೆ ಧ್ವನಿಯೇ ಇರುತ್ತಿರಲಿಲ್ಲ ಎಂದರು.
 
 
ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಹಮ್ಜದ್ ಹುಸೇನ್ ಅವರು ಮಾತನಾಡಿ, ಗೋವು ಎಲ್ಲರಿಗೂ ಮಾತೆ, ಮುಸ್ಲಿಂ ಬಾಂಧವರು ಕೂಡ ಗೋವನ್ನು ಗೌರವಿಸುತ್ತೇವೆ. ಗೋವಿನ ಹಾಲನ್ನು ಯಾರು ಕುಡಿಯುತ್ತಾರೋ ಅವರೆಲ್ಲರಿಗೂ ಗೋವು ಮಾತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
 
ಸಾಮಾಜಿಕ ಕಾರ್ಯಕರ್ತರಾದ ಗುರುಮೂರ್ತಿ ಅವರು ಪ್ರಾಸ್ತಾವಿಕ ಮಾತನಾಡಿದರು, ಷ.ಬ್ರ ಮಹಾಂತದೇಶಿಕೇಂದ್ರ ಸ್ವಾಮಿಗಳು, ಷ.ಬ್ರ ವೀರಭದ್ರಶಿವಾಚಾರ್ಯ ಮಹಾಸ್ವಾಮಿಗಳು, ವಿರಕ್ತಮಠದ ಚನ್ನಬಸವ ಸ್ವಾಮಿಗಳು, ಕ್ರೈಸ್ತಗುರುಗಳಾದ ಸಂತ ಜಾರ್ಜ ಸೇರಿದಂತೆ ಸಂತರು ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿದರೆ, ಆಭಾಗದ ಎಲ್ಲಾ ಜನಪ್ರತಿನಿಧಿಗಳು , ಸಾಮಾಜಿಕ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
 
 
ಸಭೆಗೂ ಮೊದಲು ಸೊರಬದಲ್ಲಿ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು, ಶಿಕಾರಿಪುರದ ಪ್ರಮುಖ ಮಾರ್ಗಗಳಲ್ಲಿ ಸಾಗಿಬಂದ ಶೋಭಾಯಾತ್ರೆಗೆ ಮುಸ್ಲಿಂ ಬಾಂಧವರು ಸೇರಿದಂತೆ ಎಲ್ಲಾ ಗೋಪ್ರೇಮಿಗಳು ಪುಷ್ಪವೃಷ್ಟಿಯ ಸ್ವಾಗತ ಕೋರಿದರು.

LEAVE A REPLY

Please enter your comment!
Please enter your name here