ಮಂಗಲ ಗೋಯಾತ್ರೆಯ ಸಿದ್ಧತಾ ಸಭೆ

0
395

ನಮ್ಮ ಪ್ರತಿನಿಧಿ ವರದಿ
ಆಳಿವಿನಂಚಿನಲ್ಲಿರುವ ಗೋವುಗಳ ರಕ್ಷಣೆಗೆ ಗೋ ಜಾಗೃತಿ ಹೇಗೆ ಅನಿವಾರ್ಯವೋ ಹಾಗೆಯೇ ಭಾರತದ ಸಂತ ಪರಂಪರೆಯ ಉಳಿವಿಗೆ ಸಂತ ಸಂಘಟನೆ ಅನಿವಾರ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
 
mata_kalaburagi_vaarte1
 
ಕಲಬುರ್ಗಿಯ ಜಿಲ್ಲೆಯ ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತೀ ಮಠದ ಪರಿಸರದಲ್ಲಿ ನಡೆದ ಮಂಗಲ ಗೋಯಾತ್ರೆಯ ಪೂರ್ವಭಾವೀ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಭಕ್ತರು ಯತಿಗಳಿಗೆ ಫಲ ಕಾಣಿಕೆ ಸಮರ್ಪಿಸುತ್ತಾರೆ, ಸಂತರು ಗೋಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮಾಜದ ಋಣವನ್ನು ತೀರಿಸಬೇಕು, ನಾವು ಗೋವನ್ನು ರಕ್ಷಿಸಿದರೆ ನಮ್ಮ ಬದುಕಿನಲ್ಲಿ ಎಂತಹಾ ಸಂದಿಗ್ಧ ಸನ್ನಿವೇಶ ಎದುರಾದರೂ ಅದು ನಮ್ಮನ್ನು ರಕ್ಷಿಸುತ್ತದೆ, ಹಾಗಾಗಿ ಗೋವಿಗೆ ಗೋಮಾತೆ ಎನ್ನುತ್ತಾರೆ ಎಂದರು.
 
 
 
ಮಂಗಲ ಗೋಯಾತ್ರೆಯ ಭಾಗವಾಗಿ ನಡೆಯುವ ಗೋ ಆರೋಗ್ಯ ಶಿಬಿರ ಹಾಗೂ ಗೋವು ಸಂಚರಿಸುವ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಅಮೃತಪಥ ಯೋಜನೆಯ ಕುರಿತು ವಿವರಿಸಿದ ಶ್ರೀಗಳು ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಅಲ್ಲ, ರಾಷ್ಟ್ರ ಮಾತೆಯಾಗಿ ಉದ್ಘೋಶಿಸಬೇಕು ಎಂದು ಆಗ್ರಹಿಸಿದರು.
 
ಎಲ್ಲಾ ಮಠ ಮಂದಿರಗಳಲ್ಲಿಯೂ ಗೋಶಾಲೆಯನ್ನು ಸ್ಥಾಪಿಸಿ, ದೇಶೀ ಗೋವನ್ನು ರಕ್ಷಿಸಬೇಕು ಎಂಬ ನಿರ್ಣಯವನ್ನು ಸೇರಿದ ಸಂತರು ಕೈಗೊಂಡರು. ಸಭೆಯಲ್ಲಿ ತ್ರಿವಿಕ್ರಮಾನಂದ ಸರಸ್ವತೀ ಮಠದ ಶ್ರೀ ಸೋಪಾನನಾಥ ಸ್ವಾಮಿಜಿ, ಆಂದೋಲ ಮಠದ ಶ್ರೀ ಸಿದ್ದಲಿಂಗ ಸ್ವಾಮಿಜಿ, ಕಣ್ವ ಮಠದ ಶ್ರೀ ವಿದ್ಯಾವಾರಿಧಿ ತೀರ್ಥ ಸ್ವಾಮಿಜಿ, ಡಾ ತ್ರಿಮೂರ್ತಿ ಶಿವಾಚಾರ್ಯ ಶ್ರೀಮಹಾಂತೇಶ್ವರ ಹಿರೇಮಠ, ತೋಟನಳ್ಳಿ, ಷ.ಬ್ರ ಸೂಗೂರೇಶ್ವರ ಶಿವಾಚಾರ್ಯರು, ಹಿರೇಮಠ ಶಹಾಪುರ ಸೇರಿದಂತೆ ಹೈದರಾಬದ್ ಕರ್ನಾಟಕ ಭಾಗದ 40 ಸಂತರು ಸಾನ್ನಿಧ್ಯವಹಿಸಿ ಗೋಯಾತ್ರೆಯ ಕುರಿತು ಚರ್ಚಿಸಿ, ಮಂಗಲ ಗೋಯಾತ್ರೆಗೆ ತಮ್ಮ ಸಂಪೂರ್ಣ ಸಹಕಾರವನ್ನು ವ್ಯಕ್ತಪಡಿಸಿದರು. ಹಾಗೇ ಇದೇ ಸಂದರ್ಭದಲ್ಲಿ ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ, ವಿಜಾಪುರ ಭಾಗಗಳ ಗೋಕಿಂಕರರು – ಗೋಪ್ರೇಮಿಗಳು ಹಾಗೂ ಮಂಗಲ ಗೋಯಾತ್ರೆ ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here