ಪ್ರಮುಖ ಸುದ್ದಿರಾಜ್ಯವಾರ್ತೆ

ಮಂಗಲಗೋಯಾತ್ರೆ ಎನ್ನುವುದು ಪ್ರಾಣ ಉಳಿಸುವ ಸಂಗ್ರಾಮ – ಶ್ರೀಸಂಸ್ಥಾನ

ನಮ್ಮ ಪ್ರತಿನಿಧಿ ವರದಿ
ಗೋವು ಎಲ್ಲರ ತಾಯಿ. ಎಲ್ಲರಿಗೂ ಹಾಲು ನೀಡುವ ಏಕೈಕ ತಾಯಿ ಗೋಮಾತೆ. ಆಕೆ ಹಾಲು ನೀಡುವಾಗ, ಗೋಮೂತ್ರ, ಗೋಮಯಗಳನ್ನು ನೀಡುವಾಗ ಜಾತಿ, ಮತಗಳ ಭೇಧವೆಣಿಸದೇ ಕ್ಷೀರವಿತ್ತಿದ್ದಾಳೆ. ಹಾಗಾಗಿ ಪ್ರಪಂಚದಲ್ಲಿ ನಿಜವಾದ ಸೆಕ್ಯೂಲರ್ ಎಂದರೆ ಗೋವು ಮಾತ್ರ ಎಂದು ಶ್ರೀಮದ್ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
 
 
 
ಯಾದಗಿರಿಯ ವಿದ್ಯಾಮಂಗಲ ಕಾರ್ಯಾಲಯದಲ್ಲಿ ನೆಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಮಂಗಲಗೋಯಾತ್ರೆ ಎನ್ನುವುದು ಪ್ರಾಣ ಉಳಿಸುವ ಸಂಗ್ರಾಮ. ಕೇವಲ ಗೋವಿನ ಪ್ರಾಣರಕ್ಷಣೆ ಮಾತ್ರವಲ್ಲದೇ ರೈತನ ಪ್ರಾಣರಕ್ಷಣೆಯ ಯಾತ್ರೆಯೂ ಇದಾಗಿದೆ. ಈ ಸಂಗರದಲ್ಲಿ ಪ್ರಾಣ ತೆಗೆಯುವ ಮಾತಿಲ್ಲ. ಬದಲಾಗಿ ಅಗತ್ಯಬಿದ್ದರೆ ಗೋವಿಗಾಗಿ ಪ್ರಾಣ ನೀಡಲೂ ಸನ್ನದ್ಧರಾಗಬೇಕಾದ ಸಂಗ್ರಾಮ ಎಂದರು‌.
 
 
 
ಯಾದಗಿರಿಯಲ್ಲಿ ಸಮಸ್ತ ಭಾರತದ ಪ್ರಾತಿನಿಧ್ಯ
ಬಾಬರ್ ನಂತೆಯೇ ಅನೇಕ ಮುಸ್ಲಿಂ ದೊರೆಗಳು ಗೋಹತ್ಯೆಯನ್ನು ದೇಶದಲ್ಲಿ ನಿಷೇಧಿಸಿದ್ದರು. ಇಸ್ಲಾಂ ಗೋಮಾಂಸದಲ್ಲಿ ವಿಷವಿರುವುದನ್ನು ಸೂಚಿಸುತ್ತದೆ. ಬಿಸ್ಮಿಲ್ಲಾಖಾನ್ ನಂತಹ ಅನೇಕರು ತಮ್ಮ ಆತ್ಮಾರ್ಪಣೆಯನ್ನು ದೇಶಕ್ಕೆ ನೀಡಿದ್ದು ಇಂದು ವ್ಯರ್ಥವಾಗುತ್ತಿರುವಂತೆ ತೋರುತ್ತಿದೆ. ಬ್ರಿಟೀಷರಿಗಿಂತ ಹೆಚ್ಚಿನ ಅನ್ಯಾಯವನ್ನು ಇಂದು ಸರ್ಕಾರದವರು ಮಾಡುತ್ತಿದ್ದಾರೆ. ಆದರೆ ಯಾದಗಿರಿಯ ಸಭೆಯಲ್ಲಿ ಎಲ್ಲಾ ಧರ್ಮ, ಪಕ್ಷ, ಪಂಗಡಗಳನ್ನೂ ಮರೆತು ಜನರು ಸೇರಿರುವುದು ಸಮಸ್ತ ಭಾರತದ ಪ್ರಾತಿನಿಧ್ಯವನ್ನು ಸಾರುವಂತಿದೆ ಎಂದರು.
 
 
ಗೋವಿನ ಸದುಪಯೋಗ ಸಾಧ್ಯವಾಗಬೇಕಿದೆ
ಗೋವನ್ನು ಕ್ಷೀರದಂತೆ ಶುಭ್ರವರ್ಣದಿಂದ, ಹಸನಾದ ಬೆಳೆಯಂತೆ ಹಸಿರಾಗಿಸುವ, ಮಾತೆಯಾಗಿ ಸದುಪಯೋಗ ಪಡಿಸಿಕೊಳ್ಳಬೇಕೇ ಹೊರತು ಗೋಹತ್ಯೆಯನ್ನು ಪ್ರತಿಪಾದಿಸುವ ಕೆಂಪು ವರ್ಣದಿಂದಲ್ಲ. ಯಾದಗಿರಿಯಲ್ಲಿ ಯಾದವಕುಲ ಸಂಜಾತ ಕೃಷ್ಣನಂತೆ ಗೋರಕ್ಷಣೆ ಸಾಧ್ಯವಾಗಬೇಕಿದೆ ಎಂದು ಗೋಸಂದೇಶ ನೀಡಿದರು.
 
 
 
ಪೂಜ್ಯರಾದ ಶ್ರೀ ಬಸವರಾಜದೇವರು ಹೆಡಿಗೆಮುದ್ರ ಸ್ವಾಮಿಗಳು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಋಷಿ ಪರಂಪರೆ ಮತ್ತು ಕೃಷಿ ಪರಂಪರೆಗೆ ಅತ್ಯಂತ ಮಹತ್ತ್ವ ನೀಡಿದ್ದೇವೆ. ಕೃಷಿ ಪರಂಪರೆಗೆ ಮಹತಿಯನ್ನು ಒಸಗಿಸಿರುವುದು ಗೋಮಾತೆಯಾಗಿದ್ದು, ಅಂತಹಾ ಮಾತೆಯನ್ನು ಬಡತನಕ್ಕಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಧೂರ್ತತೆಯನ್ನು ನಾವು ತೋರುತ್ತಿದ್ದೇವೆ. ಹೀಗೆ ಮಾರುಕಟ್ಟೆಯಲ್ಲಿ ಮಾರಲ್ಪಡುತ್ತಿರುವ ಗೋವನ್ನು ರಾಘವೇಶ್ವರ ಶ್ರೀಗಳು ಮತ್ತೊಮ್ಮೆ ಮನೆಯ ಜಗುಲಿಗೆ ತರುವ ಪ್ರಯತ್ನವನ್ನು ಈ ಯಾತ್ರೆಯ ಮೂಲಕ ಮಾಡುತ್ತಿದ್ದಾರೆ. ಇದಕ್ಕೆ ನಮ್ಮೆಲ್ಲರ ಸಹಕಾರ ಅಗತ್ಯ ಎಂದರು.
 
 
 
ಗಂವ್ವಾರಮಠದ ಶ್ರೀಸೋಪಾನನಾಥಮಹಾಸ್ವಾಮಿಗಳು ಮಾತನಾಡಿ, ನಮ್ಮನ್ನು ಎಚ್ಚರಿಸಲು ಬಂದಿರುವ ರಾಘವೇಶ್ವರಶ್ರೀಗಳ ಮಾತನ್ನು ನಾವರಿಯದಿದ್ದರೆ ದೇಶ ಉಳಿಯಲು ಸಾಧ್ಯವಿಲ್ಲ. ಗೋಮಾತೆಗಾಗಿ ಜೀವವಿರುವ ತನಕ ದುಡಿಯೋಣ. ಈ ನಿಟ್ಟಿನಲ್ಲಿ ಶ್ರೀಗಳ ನೆಡೆ ನಮಗೆ ಆದರ್ಶವಾಗಬೇಕು. ರಾಷ್ಟ್ರೀಯ ಪ್ರಾಣಿ ಗೋವು ಆಗುವ ದಿಸೆಯಲ್ಲಿ ಗೋಸಂರಕ್ಷಣೆಯ ನಮ್ಮ ಪ್ರಯತ್ನವಿರಲಿ ಎಂದು ಗೋಪರ ನುಡಿಗಳನ್ನಾಡಿದರು.
 
 
 
ಚಟ್ನಳ್ಳಿ ಪೂಜ್ಯರಾದ ವಿಶ್ವಾರಾಧ್ಯ ಸ್ವಾಮಿಗಳು ಆಶೀರ್ವಚನವಿತ್ತು, ಅಮೃತವನ್ನು ನೀಡುವ ಗೋಮಾತೆಯ ಹಾಲನ್ನು ಕುಡಿದ ಮಾನವ ಹಾಲಾಹಲವನ್ನೇ ಪ್ರಪಂಚಮುಖಕ್ಕೆ ನೀಡುತ್ತಿದ್ದಾನೆ. ಆದರೆ ಪೂಜ್ಯ ರಾಘವೇಶ್ವರ ಶ್ರೀಗಳು ಕೃಷ್ಣನಂತೆ ಕಾಮಧೇನುವಿಗಾಗಿ ಯಾತ್ರೆಯನ್ನು ಕೈಗೊಂಡಿರುವುದು ಅನುಕರಣೀಯ ಎಂದು ಗೋಜಾಗೃತಿಯ ಪಥದರ್ಶನ ಮಾಡಿಸಿದರು.
 
 
 
ಅಬ್ಬೆತುಮಕೂರಿನ ಪೂಜ್ಯರಾದ ಡಾ.ಗಂಗಾಧರಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗೃಹಪ್ರವೇಶ ಸಂದರ್ಭದಲ್ಲಿ ಗೋಪ್ರವೇಶ ಮಾಡುವಾಗ ಅಮಂಗಲ ದೂರಾಗುವಂತೆ ಮಂಗಲಗೋಯಾತ್ರೆ ಯಾದಗಿರಿ ಪ್ರವೇಶಿಸುತ್ತಿದ್ದಂತೆಯೇ, ಬರಗಾಲ ದೂರಾಗಿ ಸುಭಿಕ್ಷದ ಮಂಗಲಮಯ ವಾತಾವರಣದ ಅನುಭವ ಉಂಟಾಗುತ್ತಿದೆ. ಗೋಸಂತತಿ ರಕ್ಷಣೆಯ ಮೂಲಕ ಈ ಬಗೆಯ ಮಂಗಲ ಖಂಡಿತವಾಗಿ ಉಂಟಾಗಲಿದೆ ಎಂದು ಗೋಮಾತೆಯ ಮಹತ್ತ್ವವನ್ನು ಅರುಹಿದರು.
 
 
 
ಶ್ರೀ ಲಾಯಕ್ ಹುಸೇನ್ ಬಾದಲ್ ರವರು ಮಾತನಾಡಿ, ಹಿಂದೂಸ್ಥಾನದಲ್ಲಿ ಗೋಹತ್ಯೆಯನ್ನು ತಡೆಯುವ ರಾಘವೇಶ್ವರ ಶ್ರೀಗಳ ಕಾರ್ಯ ಮಹತ್ತ್ವಪೂರ್ಣವಾದದ್ದು. ಇದನ್ನು ಅರಿತು ಗೋಮಾತೆಯನ್ನು ರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
 
 
ಶೋಭೆ ತಂದ ಶೋಭಾಯಾತ್ರೆ
ರಾಯಚೂರಿನಿಂದ ಆಗಮಿಸಿದ ಮಂಗಲಗೋಯಾತ್ರೆಯ ದಶರಥಗಳನ್ನು ಯಾದಗಿರಿಯ ಗೋಪ್ರೇಮಿಗಳು ಅದ್ಧೂರಿಯಾಗಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಸ್ಕೌಟ್ಸ್ ಅಂಡ್ ಗೈಡ್ಸ್ ನ ಮಕ್ಕಳ ಪಥಸಂಚಲನ, ಸಾರ್ವಜನಿಕ ಪ್ರೌಢಶಾಲೆಯ ಮಕ್ಕಳಿಂದ ಲೇಝಿಮ್, ವಿವಿಧ ಶಾಲೆಯ ಹೆಣ್ಣುಮಕ್ಕಳಿಂದ ಪೂರ್ಣಕುಂಭ ಸ್ವಾಗತ ಶೋಭಾಯಾತ್ರೆಗೆ ಶೋಭೆ ತಂದಿತು.
ಲಿಂಗರಾಯ ಡೊಳ್ಳಿನ ಸಂಘದ ವತಿಯಿಂದ ನೆಡೆದ ಡೊಳ್ಳುಕುಣಿತ, ಎತ್ತಿನಗಾಡಿ, ಮೆರವಣಿಗೆಯಲ್ಲಿ ಸೇರಿದ್ದವರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಪೂಜ್ಯರಾದ ಶ್ರೀ ಚನ್ನವೀರದೇವರುಸ್ವಾಮಿಗಳು, ಶ್ರೀಹುಚ್ಚೇಶ್ವರಸ್ವಾಮಿಗಳು, ಶ್ರೀ ಶಿವಯೋಗಿಮಹದೇವ ಸ್ವಾಮಿಗಳು, ಶ್ರೀ ದುರುದುಂಡೇಶ್ವರಸ್ವಾಮಿಗಳು, ಶ್ರೀ ಪಾಂಡುರಂಗಮಹಾರಾಜರು, ಹಾಗೂ ಅನೇಕ ಪಕ್ಷಗಳ ರಾಜಕೀಯ ಧುರೀಣರು ಮತ್ತು ಹಲವು ಧರ್ಮಗಳ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here