ಭೇಷ್..ಇವರೆಲ್ಲರ ಸಾಧನೆಗೆ ಬೆನ್ ತಟ್ಟಲೇ ಬೇಕು…

0
956


ಹರೀಶ್ ಕೆ.ಆದೂರು
ʻʻಇಡೀ ವಿಶ್ವವೇ ಕೊರೊನಾ ಭೀತಿಯಲ್ಲಿ ಮುಳುಗಿದೆ. ಜನತೆ ಒಂದರ್ಥದಲ್ಲಿ ಹೊರ ಬರಲೂ ಹೆದರುವ ಸ್ಥಿತಿ ನಿರ್ಮಾಣಗೊಂಡಿದೆ. ಪ್ರಾಣ ಭೀತಿ ಪ್ರತಿಯೊಬ್ಬರನ್ನೂ ಬಿಡದೆ ಕಾಡುತ್ತಿದೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಎಂಬ ಪರಿಸ್ಥಿತಿ ಎದುರಿಸುತ್ತಿರುವ ಮಂದಿ ಅನೇಕ. ಸರಿ ಸುಮಾರು ಒಂದು ತಿಂಗಳುಗಳಿಂದ ಕೊರೊನಾ ಭೀತಿ ನಮ್ಮ ಜಿಲ್ಲೆಯನ್ನು ಕಾಡುತ್ತಿದೆ. ಲಾಕ್ ಡೌನ್ ನಂತರವಂತೂ ಜನತೆ ಕೈಗೆ ಕೆಲಸಗಳಿಲ್ಲದೆ ಮನೆಯಲ್ಲುಳಿದಿದ್ದಾರೆ. ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಅದೆಷ್ಟೋ ಜನರಿಗೆ ದಿನದ ಕೂಳಿಗೂ ತತ್ವಾರದ ಪರಿಸ್ಥಿತಿ ಉಂಟಾಗಿದೆ. ಏತನ್ಮಧ್ಯೆ ಲಾಕ್ ಡೌನ್ ಆರಂಭವಾದ ದಿನದಿಂದ ಅಶಕ್ತರು, ನಿರಾಶ್ರಿತರನ್ನು ಹುಡುಕಿ ಹುಡುಕಿ ಅವರಿಗೆ ದಿನಸಿ, ಊಟೋಪಚಾರ ನೀಡುವ ಈ ಸಾಹಸಿಗಳಿಗೆ ನಿಜಕ್ಕೂ ಬೆನ್ ತಟ್ಟಲೇ ಬೇಕು… ಇವರ ಸಾಧನೆಯನ್ನು ಪರಿಚಯಿಸುವುದೇ ʻವಾರ್ತೆ.ಕಾಂʼ ವಿಶೇಷತೆ.


ಅದೆಷ್ಟೋ ಮಂದಿ ಹೆಸರಿಗಾಗಿ, ಪ್ರಚಾರಕ್ಕಾಗಿ ʻಸಹಾಯʼನೀಡುವ ಮಂದಿ ಸಮಾಜದಲ್ಲಿದ್ದಾರೆ. ಆದರೆ ನಾವಿಂದು ಪರಿಚಯಿಸುವ ಸಾಧಕರು ಇವರೆಲ್ಲರಿಗಿಂತಲೂ ಭಿನ್ನ. ಸ್ವತಃ ತಮ್ಮ ಉತ್ಪತ್ತಿಯ ಬಹುಪಾಲು ಹಣವನ್ನು ಸಮಾಜಕ್ಕಾಗಿ ಮೀಸಲಿಟ್ಟು , ಇತರರ ನೆರವು ಪಡೆದು ಸಮಾಜದಲ್ಲಿ ಅಶಕ್ತರಿಗೆ ದನಿಯಾಗುತ್ತಿರುವ ನಿಜವಾದ ಸೇವಕರು. ಹಗಲಿರುಳೆನ್ನದೆ ಕಳೆದ ೧೪ ದಿನಗಳಿಂದಲೂ ಊರೂರು ಸುತ್ತಿ ಸಮಾಜದ ಅತೀ ಬಡವರನ್ನು ಹುಡುಕಿ ಅವರಿಗೆ ದಿನಸಿ ಸಹಿತ ಅವಶ್ಯವಸ್ತುಗಳನ್ನು ಅವರಿದ್ದಲ್ಲಿಗೆ ನೀಡಿ ಅವರ ಆಶೀರ್ವಾದ ಪಡೆಯುವ ಸೇವಕರು…! ಇವರೆಲ್ಲರ ಸೇವೆ ನಿಜಕ್ಕೂ ಶ್ಲಾಘನಾರ್ಹ ಹಾಗೂ ಮಾದರಿ ಎಂದರೆ ತಪ್ಪಲ್ಲ.

ಸಾಧಕ ೧
೧೭೫ಮನೆಗಳಿಗೆ ತಲುಪುತ್ತಿದೆ ಆಹಾರ ಸಾಮಾಗ್ರಿ
ಮೂಡುಬಿದಿರೆಯ ಈ ಪುಟಾಣಿ ಹುಡುಗಿಯ ಸಾಧನೆ ಅಂತಿಂಥದ್ದಲ್ಲ. ಆಳ್ವಾಸ್ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಈಕೆ. ಖಾಸಗೀ ಟಿ.ವಿ. ವಾಹಿನಿಯ ಮಜಾ ಭಾರತ ಖ್ಯಾತಿಯ ಆರಾಧನಾ ಭಟ್ . ಆರದಿರಲಿ ಬದುಕು ಆರಾಧನಾ ತಂಡ ಎಂಬ ವಾಟ್ಸ್ ಆಪ್ ಬಳಗ ಕಟ್ಟಿಕೊಂಡು ಅಶಕ್ತರಿಗೆ, ಅಸಹಾಯಕರಿಗೆ ಪ್ರತೀ ತಿಂಗಳೂ ಸಹಾಯ ಹಸ್ತ ನೀಡುತ್ತಿದ್ದಾಳೆ. ಈಕೆಯ ವಾಟ್ಸ್ ಆಪ್ ಗ್ರೂಪ್ ನಲ್ಲಿ ಪ್ರಸಿದ್ಧ ಚಲನಚಿತ್ರ ನಟರು, ರಾಜಕೀಯ ಮುತ್ಸದ್ದಿಗಳು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹೀಗೆ ಅನೇಕರಿದ್ದಾರೆ. ಈಕೆಯ ನೇತೃತ್ವದಲ್ಲಿ ಲಾಕ್ ಡೌನ್ ನಂತರ ಪ್ರತೀ ದಿನವೂ
ದೈನಂದಿನ ಅಗತ್ಯ ವಸ್ತುಗಳಿಗಾಗಿ ಚಡಪಡಿಸುತ್ತಿರುವ ಅಶಕ್ತ ರ ಬಾಳಿಗೆ ಬೆಳಕಾಗುತ್ತಿದೆ ಈ ತಂಡ.ಮೂಡುಬಿದಿರೆ, ಕಲ್ಲಮುಂಡ್ಕೂರು,ನಿಡ್ಡೋಡಿಯ ಆಸುಪಾಸಿನ ಪರಿಸರದ ಅಶಕ್ತ ರನ್ನು ಹುಡುಕಿ ಸಹಾಯ ಹಸ್ತ ನೀಡುತ್ತಾ ಬಂದಿದೆ ಈ ತಂಡ. ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಎಂ, ಬಿಜೆಪಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಚಿತ್ರನಟ ಅನಿರುದ್ಧ ಮೊದಲಾದವರು ತಂಡದ ಸದಸ್ಯರಾಗಿದ್ದು ಪೂರಕ ಸಹಕಾರ ನೀಡುತ್ತಿದ್ದಾರೆ. ಪಕ್ಷಿಕೆರೆ ಯ ವಾಲ್ಟರ್ ಡಿಸೋಜ ೪೫೦ ಕೆ.ಜಿ ಅಕ್ಕಿ ಹಾಗು ೨೦೦ ಕೆ.ಜಿ ಬೇಳೆ ನೀಡಿ ತಂಡದ ಸಮಾಜ ಸೇವೆಗೆ ತಮ್ಮ ನೆರವು ನೀಡಿದ್ದಾರೆ. ಅಭಿಷೇಕ್ ಶೆಟ್ಟಿ ಐಕಳ ಅಕ್ಕಿ ದಿನಸಿ ಸಾಮಾಗ್ರಿ , ನಾಗರಾಜ ಶೆಟ್ಟಿ ಅಂಬೂರಿ ೨೫ ಕೆ.ಜಿ ತರಕಾರಿ ಅಕ್ಕಿ,ತೆಂಗಿನ ಕಾಯಿ , ಅನ್ವಿ ನಾಯಕ್ ೨೫ ಕೆ.ಜಿ ಅಕ್ಕಿದಿನಸಿ ಸಾಮಾಗ್ರಿ, ಪ್ರತ್ಯುಷ ಕಾರ್ಕಳ ಅಕ್ಕಿ ದಿನಸಿ ಸಾಮಾಗ್ರಿ , ಮಂದಾರ ರಾಜೇಶ್ ಭಟ್ ೫೦ ಕೆ.ಜಿ.ಅಕ್ಕಿ,ದಿನಸಿ ಸಾಮಾಗ್ರಿ,ಚಂದ್ರಹಾಸ ದೇವಾಡಿಗ, ಸುಮನಾ ದೇವಾಡಿಗ.೨೫ ಕೆ.ಜಿ.ಅಕ್ಕಿ ,ರವಿಚಂದ್ರ ಮೂಡುಬಿದಿರೆ ೫೦ ಕೆ.ಜಿ ಅಕ್ಕಿ ,ಗುರು ಶಂಕರ ಭಟ್ ೨೫ ಕೆ.ಜಿ ಅಕ್ಕಿ ,ಬಾಲಕ್ರಷ್ಣ ಸುವರ್ಣ,ಶ್ರೀನಾಗ ಭಟ್. ಅಲಂಗಾರು, ೨೫ ಕೆ.ಜಿ ಅಕ್ಕಿ ,ನಿಲೇಶ್ ಕಟೀಲು ೨೫ಕೆಜಿ ಅಕ್ಕಿ, ಬಾಲಕ್ರಷ್ಣಸುವರ್ಣ ಬೈಲಕೆರೆ ೧೫ ಕೆ.ಜಿ ಅಕ್ಕಿ ನೀಡಿ ತಂಡದ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ. ೧೫೦ ಕ್ಕೂ ಅದಿಕ ಮನೆಗಳಿಗೆ ತಂಡದ ಸದಸ್ಯರು ತೆರಳಿ ಈ ಎಲ್ಲಾ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸಿ ತಮ್ಮ ನಿಸ್ವಾರ್ಥ ಸೇವೆಯನ್ನು ನೀಡುತ್ತಿದ್ದಾರೆ. ಇನ್ನೂ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದು ನಾಳೆ ಹಾಗೂ ಮುಂದಿನ ದಿನಗಳಲ್ಲಿ ಅವಶ್ಯಕತೆ ಇರುವವರಿಗೆ ನೀಡುವ ಬಗ್ಗೆ ತಂಡದ ಸದಸ್ಯರು ತಿಳಿಸಿದ್ದಾರೆ.


ಸಾಧಕ ೨
೨೦೦ರ ಗಡಿದಾಟಿದ ಆಹಾರ ನೆರವು…!
ಮೂಡುಬಿದಿರೆಯ ಪ್ರತಿಷ್ಠಿತ ಸಂಘಟನೆ ಜವನೆರ್ ಬೆದ್ರ ಸಂಘಟನೆ.ಕಳೆದ ೧೦೮ವಾರಗಳಿಂದ ಪ್ರತೀ ಭಾನುವಾರ ಕ್ಲೀನ್ ಅಪ್ ಮೂಡುಬಿದಿರೆ ಎಂಬ ಸ್ವಚ್ಛತಾ ಅಭಿಯಾನವನ್ನು ಬಿಡದೆ ನಡೆಸುತ್ತಾ ಬಂದಿರುವ ಈ ಸಂಘಟನೆ ಅಶಕ್ತರ ಬಾಳಿಗೆ ಬೆಳಕಾಗುತ್ತಿದೆ. ಸ್ವಚ್ಛತೆ, ಇತಿಹಾಸ, ಸಂಸ್ಕೃತಿ,ಕಲೆ, ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡುವ ಈ ಸಂಘಟನೆ ಇದೀಗ ಕೊರೊನಾ ಸಂದರ್ಭದಲ್ಲಿ ಅವಿರತ ಸೇವೆನೀಡುತ್ತಿದೆ. ಮೂಡುಬಿದಿರೆಯ ಅಂಗಡಿಗಳ ಮುಂಭಾಗದಲ್ಲಿ ಶಾಶ್ವತ ಅಂತರ ವೃತ್ತ ರಚನೆ ಮಾಡಿ ಅಂತರ ಕಾಯ್ದುಕೊಳ್ಳಲು ಸಹಕಾರ ನೀಡಿದೆ. ಇಷ್ಟೇ ಅಲ್ಲದೆ ದಾನಿಗಳಿಂದ ಸಂಗ್ರಹಿಸಿ ಅವಶ್ಯವಿರುವ ಅಶಕ್ತರನ್ನು ಗುರುತಿಸಿ ಅವರ ಮನೆಗೆ ಅಕ್ಕಿ, ದಿನಸಿ, ಉಪ್ಪಿನಕಾಯಿ, ಉಪ್ಪು, ಚಾಹುಡಿ, ಸಕ್ಕರೆಗಳನ್ನು ನೀಡಿ ಕಣ್ಣೀರೊರೆಸುವ ಕಾರ್ಯ ನಿರಂತರವಾಗಿ ಮಾಡುತ್ತಾ ಬಂದಿದೆ. ಕಡಂದಲೆ, ಬಿಟಿ ರೋಡ್, ಕೇಮಾರ್, ಕೊಡ್ಯಡ್ಕ ಮಾಸ್ತಿಕಟ್ಟೆ, ಬೊಗ್ರುಗುಡ್ಡೆ, ಲಾಡಿ , ಪೇಪರ್ ಮಿಲ್ , ಒಂಟಿಕಟ್ಟೆ , ಕಾಯರ್ ಗುಂಡಿ, ಕೋಡಂಗಲ್ಲು, ಆಶ್ರಯ ಕಾಲೊನಿ, ಸುಭಾಷ್ ನಗರ, ನಾರಂಪಾಡಿ, ಕೋಟೆ ಬಾಗಿಲು . ಪರಿಸರದಲ್ಲಿನ ೧೬೦ ಮನೆಗಳಿಗೆ ಆಹಾರ ಸಾಮಾಗ್ರಿ ವಿತರಿಸಿದ್ದಾರೆ. ಮೂಡುಬಿದಿರೆಯ ಅಮರ್ ಕೋಟೆ ನೇತೃತ್ವದ ಜವನೆರ್ ಬೆದ್ರ ಸಂಘಟನೆಯ ಸದಸ್ಯರು ನಿಸ್ವಾರ್ಥವಾಗಿ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಮೂಡುಬಿದಿರೆಯ ಪ್ರೀತಿ ಅಕಾಡೆಮಿಯ ನವೀನ್ ಅವರು ಸಾಥ್ ನೀಡುತ್ತಾ ತಮ್ಮ ವಾಹನದ ಸಹಿತ ಅವಶ್ಯವಿರುವವರ ಮನೆ ಬಾಗಲಿಗೆ ಆಹಾರ ಸಾಮಾಗ್ರಿ ಪೂರೈಸುವ ಮಹತ್ಕಾರ್ಯ ನಡೆಸುತ್ತಿದ್ದಾರೆ.


ಸಾಧಕ ೩
೧೮೫ಮನೆಗೆ ಸಹಾಯ ಹಸ್ತ…
ಮೂಡುಬಿದಿರೆಯ ಸ್ಪೂರ್ತಿ ವಿಶೇಷ ಶಾಲೆಯ ಆಡಳಿತ ಮಂಡಳಿ ಸರ್ವರ ಸಹಕಾರದೊಂದಿಗೆ ಕಳೆದ ೧೪ ದಿನಗಳಿಂದ ೧೮೫ ಅಸಹಾಯಕ ಕುಟುಂಬಗಳಿಗೆ ತುರ್ತು ಅವಶ್ಯಕ ಸಾಮಾಗ್ರಿಗಳನ್ನು ವಿತರಿಸಿದೆ. ೧೦೦ಕ್ಕೂ ಅಧಿಕ ಮನೆಗಳಿಗೆ ತರಕಾರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಸೇವೆಯ ಮೂಲಕ ಸಂಗ್ರಹವಾದ ದಿನಸಿ ಸಾಮಾಗ್ರಿಗಳನ್ನು ಆಹಾರ ಪದಾರ್ಥದಳನ್ನು ಅವಶ್ಯವಿರುವವರಿಗೆ ಪೂರೈಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.೧೬ದಿನಗಳಿಂದ ನಿರಂತರ ಈ ಸೇವೆ ಶಾಲೆಯ ಆಡಳಿತ ನಿರ್ದೇಶಕ ಪ್ರಕಾಶ್ ಜೆ ಶೆಟ್ಟಿಗಾರ್ ಮುತುವರ್ಜಿಯಲ್ಲಿ ನಡೆಯುತ್ತಿದೆ.

Advertisement


೭೦ಕುಟುಂಬಗಳಿಗೆ ಸಹಾಯ


ಪ್ರಸಾದ್ ಕೊಡ್ಯಡ್ಕ ಇವರೊಬ್ಬ ನಿಸ್ವಾರ್ಥ ಸಮಾಜ ಸೇವಕ. ನಿರಂತರ ಸಮಾಜ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಈಗಾಗಲೇ ನೂರಾರು ಮಂದಿಗೆ ತಮ್ಮದೇ ಮುತುವರ್ಜಿಯಲ್ಲಿ ಉಚಿತವಾಗಿ ಮದುವೆ ನೆರವೇರಿಸಿದ್ದಾರೆ. ಇದೀಗ ಕೊರೊನಾ ಹಿನ್ನಲೆಯಲ್ಲಿ ಜನತೆಗೆ ತಮ್ಮಿಂದಾದ ಸಹಕಾರ ನೀಡಲು ಮುಂದಾಗಿದ್ದಾರೆ. ಕುಗ್ರಾಮಗಳಲ್ಲಿರುವ, ಮೂಲಭೂತ ವ್ಯವಸ್ಥೆಯಿಂದ ವಂಚಿತರಾದ ಸುಮಾರು ೧೦೦ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿ, ಔಷಧಗಳನ್ನು ಪೂರೈಸಿ ಕೃತಾರ್ಥರಾಗಿದ್ದಾರೆ. ಯಾವುದೇ ಸ್ವಾರ್ಥ ರಾಜಕಾರಣವಿಲ್ಲದೆ ತನ್ನಷ್ಟಕ್ಕೆ ತನ್ನ ಸೇವೆಯನ್ನು ನಡೆಸುತ್ತಾ ಬರುತ್ತಿದ್ದಾರೆ ಪ್ರಸಾದ್ ಕೊಡ್ಯಡ್ಕ.

LEAVE A REPLY

Please enter your comment!
Please enter your name here