ಭಾಷಣ ಕಲೆಯ ದಕ್ಷತೆ

0
268

 
ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ

ಮುಂದುವರಿದ ಭಾಗ…

ಭಾಷಣಕ್ಕೆ ಬೇಕಾದ ತಯಾರಿಗಳು:
ನೀವಿನ್ನೂ ಪ್ರಾರಂಭಿಕ ಭಾಷಣಕಾರರಾಗಿದ್ದರೆ ಭಾಷಣಕ್ಕೆ ಸ್ವಲ್ಪ ಜಾಸ್ತಿ ಸಿದ್ಧತೆಗಳು ಬೇಕಾಗುತ್ತದೆ. ಆಗ ಈ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಿ:
* ಭಾಷಣದ ವಿಷಯವನ್ನು ಸ್ಪಷ್ಟಪಡಿಸಿಕೊಂಡು ನಿಮಗೆ ಲಭ್ಯವಿರುವ ಸಮಯಾವಕಾಶದಲ್ಲಿ ಯಾವ ಯಾವ ಹಂತಗಳಲ್ಲಿ ಭಾಷಣವನ್ನು ವಿಸ್ತರಿಸಬೇಕೆಂದು ಖಚಿತಪಡಿಸಿಕೊಳ್ಳಿ.
* ನಿಮ್ಮ ವಿಷಯಕ್ಕೆ ತಕ್ಕಂತೆ ಬೇಕಾದ ವಿವರಗಳನ್ನು ಹೊಂದಿಸಿಕೊಳ್ಳಿ. ಇದಕ್ಕೆ ಹಿರಿಯರ, ಹಿರಿಯ ಸ್ನೇಹಿತರ ಅಥವಾ ನಿಮಗಿಂತ ಹೆಚ್ಚು ಗೊತ್ತಿರುವವರ ಸಹಾಯವನ್ನು ಪಡೆದುಕೊಳ್ಳಿ.
* ನೀವು ಸಂಗ್ರಹಿಸಿದ ವಿಷಯವನ್ನು ಭಾಷಣ ರೂಪದಲ್ಲಿ ಬರೆಯಿರಿ. ಆದರೆ ಭಾಷಣ ಮಾಡಿವಾಗ ಬಳಸುವ ಭಾಷೆಯೂ, ಬರೆಯುವಾಗ ಬಳಸುವ ಭಾಷೆಯೂ ಒಂದೇ ಆಗಿರುವುದಿಲ್ಲವೆಂಬುದು ಗಮನದಲ್ಲಿರಲಿ. ಒಂದೋ, ನೀವು ಭಾಷಣದಲ್ಲಿ ಯಾವ ರೀತಿ ಮಾತನಾಡುತ್ತಿರೋ ಆ ರೀತಿಯಲ್ಲೇ ಬರೆದಿರಿಸಿಕೊಳ್ಳಬೇಕು. ಆದರೆ ಹೀಗೆ ಬರೆದಾಗ ಓದಲು ಸ್ವಲ್ಪ ಕಷ್ಟವಾಗುತ್ತದೆ. ಓದಲು ಸುಲಭವಾಗುವುದು ಪ್ರಬಂಧ ಮಾದರಿಯಲ್ಲಿ ನೀವು ಬರೆದಿಟ್ಟುಕೊಂಡರೆ ಹೇಳುವಾಗ ಅದನ್ನು ಭಾಷಣದ ಮಾದರಿಗೆ ಪರಿವರ್ತಿಸಿಕೊಂಡು ಮಾತನಾಡಲು ಸಾಧ್ಯವಾಗಬೇಕು. ಇವೆರಡರಲ್ಲಿ ನಿಮಗೆ ಯಾವುದು ಸುಲಭವೆನಿಸುತ್ತದೋ ಹಾಗೆ ಬರೆದಿಸಿಕೊಳ್ಳಿ.
* ಬರೆದಿರಿಸಿಕೊಂಡ ವಿಚಾರಗಳನ್ನು ಮೂರುನಾಲಕ್ಉ ಬಾರಿ ಗಮನವಿಟ್ಟು ಓದಿಕೊಳ್ಳಿ. ಹೀಗೆ ಓದಿಕೊಳ್ಳುವಾಗ ಯಾವ ವಿಷಯದ ನಂತರ ಯಾವ ವಿಷಯ ಬರಬೇಕು ಎಂಬುದಕ್ಕೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿಕೊಳ್ಳಿ. ಇಡೀ ಭಾಷಣವನ್ನು ಭಾಷಣದ ವಿಸ್ತರಣೆಯ ವಿವಿಧ ಹಂತಗಳಾಗಿ ವಿಂಗಡಿಸಿಕೊಳ್ಳಿ ಹೀಗೆ ವಿಂಗಡಿಸಿಕೊಳ್ಳುವಾಗ ನಿರ್ದಿಷ್ಟ ಅಂಶದ ಬಗ್ಗೆ ಹೇಳಬೇಕಾದ ವಿಷಯವನ್ನು ಹೇಳಿದ ಬಳಿಕ ಎತ್ತಿಕೊಳ್ಳುವ ವಿಷಯದ ಅಂಶವನ್ನು ಪ್ರತ್ಯೇಕಗೊಳಿಸಿ ವಿಂಗಡಿಸಿಕೊಳ್ಳುವುದು ಸೂಕ್ತವಾಗುತ್ತದೆ.
* ಭಾಷಣವನ್ನು ಸರಿಯಾಗಿ ವಿಂಗಡಿಸಿಕೊಂಡ ಮೇಲೆ ಪ್ರತಿಯೊಂದು ವಿಂಗಡಣೆಯನ್ನು ಪ್ರತ್ಯೇಕವಾಗಿ ಓದಿಕೊಳ್ಳಿ. ಯಾವ ಉಪಶೀರ್ಷಿಕೆಯಲ್ಲಿ ವಿಂಗಡಿಸಲ್ಪಟ್ಟ ವಿಷಯಗಳನ್ನು ನೆನಪಿರಿಸಿಕೊಳ್ಳುವುದು ಸುಲಭವಾಗುತ್ತದೆ ಎಂದು ಯೋಚಿಸಿ ಉಪಶೀರ್ಷಿಕೆಗಳನ್ನು ಮಾಡಿಕೊಳ್ಳಿ.
* ಮಾಡಿಕೊಂಡ ಶೀರ್ಷಿಕೆಗಳನ್ನು ಒಂದೊಂದಾಗಿಪ್ರತ್ಯೇಕ ಚೀಟಿಯಲ್ಲಿ ಟಿಪ್ಪಣಿಯಾಗಿ ಬರೆದಿರಿಸಿಕೊಳ್ಳಿ. ಈ ಹಂತಕ್ಕೆ ಬರುವಾಗ ಟಿಪ್ಪಣಿಯ ಉಪಶೀರ್ಷಿಕೆಗಳನ್ನು ನೋಡಿದ ತಕ್ಷಣ ಭಾಷಣದ ಎಲ್ಲ ವಿವರಗಳು ನಿಮ್ಮ ಮನಸ್ಸಿಗೆ ಹೊಳೆಯುವಂತಾಗಬೇಕು. ಆ ಮಟ್ಟಿಗೆ ನೀವು ಮಾಡಲಿರುವ ಭಾಷಣದ ವಿಷಯದಲ್ಲಿ ನೀವು ಪ್ರಭುತ್ವವನ್ನು ಪಡೆದಿರಬೇಕು. ಮುಂದೆ ಒಂದೆರಡು ದಿನ ಬಿಟ್ಟುಕೊಂಡು ಟಿಪ್ಪಣಿಯನ್ನು ನೋಡಿ. ಟಿಪ್ಪಣಿಯನ್ನು ನೋಡಿದ ತಕ್ಷಣ ಭಾಷಣದ ವಿವರಗಳೆಲ್ಲ ನಿಮಗೆ ನೆನಪಿಗೆ ಬರುತ್ತವೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ. ಇದಿಷ್ಟು ಸಿದ್ಧತೆಗಳಾದರೆ ಭಾಷಣದ ವಿಷಯಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ನಡೆಸಬೇಕು.
* ನೀವು ತಯಾರಿ ಮಾಡಿದ ಭಾಷಣವನ್ನು ಒಮ್ಮೆ ಕನ್ನಡಿಯ ಮುಂದೆ ನಿಂತು ನೀಚು ಪ್ರದರ್ಶಿಸಿ. ನಿಮ್ಮ ಹಾವ-ಬಾವಗಳ, ಭಂಗಿಗಳು ನಿಮಗೆ ತೃಪ್ತಿಕರವೆನಿಸುತ್ತವೆಯೇ ಎಂದು ಪ್ರಯತ್ನಿಸಿ. ತೃಪ್ತಿಕರವೆನಿಸದಿದ್ದರೆ ಎಲ್ಲಿ ತೃಪ್ತಿಕರವೆನಿಸುವುದಿಲ್ಲ ಎಂಬುದನ್ನು ಗುರುತಿಸಿ ಸರಿಪಡಿಸಿಕೊಳ್ಳಿ.
* ನೀವು ಮಾಡುತ್ತಿರುವ ಭಾಷಣವು ನಿಮಗೆ ತೃಪ್ತಿಕರವೆನಿಸಿದರೆ ನಂತರ ಯಾರಾದರೊಬ್ಬರು ಭಾಷಣಕಾರರ ಮುಂದೆ ಮಾಡಿ ತೋರಿಸಿ. ನಿಮ್ಮ ಭಾವಾಭಿವ್ಯಕ್ತ, ಧ್ವನಿಯ ಏರಿಳಿತಗಳ ಕುರಿತಾಗಿ ಅವರು ನಿಮಗೆ ಸೂಕ್ತ ಸಲಹೆ ನೀಡಬಲ್ಲರು. ಅವರು ನೀಡಿದ ಸಲಹೆಗನುಗುಣವಾಗಿ ಭಾಷಣ ಮಾಡುವ ನಿಮ್ಮ ಶೈಲಿಯನ್ನು ತಿದ್ದಿಕೊಳ್ಳಿ. ಪ್ರಾರಂಭಿಕ ಹಂತದಲ್ಲಿ ಈ ಕಾರ್ಯವನ್ನು ಮಾಡದೆ ಇದ್ದರೆ ಮುಮದೆ ಅದನ್ನು ಸರಿಪಡಿಸಲು ಆಗುವುದಿಲ್ಲ. ಏಳೆಂಟು ಬಾರಿ ತಪ್ಪು ಶೈಲಿಯಲ್ಲಿ ಭಾಷಣವನ್ನು ಮಾಡಿದರೆ ನಂತರ ತಪ್ಪು ಶೈಲಿಯೇ ಅಭ್ಯಾಸವಾಗಿಬಿಡುತ್ತದೆ. ಹಾಗಾಗದಂತೆ ಎಚ್ಚರ ವಹಿಸಿ. ಇವಿಷ್ಟು ಪುರ್ವ ಸಿದ್ಧತೆಗಳಾದ ಮೇಲೆ ಅತ್ಮ ವಿಶ್ವಾಸದಿಂದ ಭಾಷಣವನ್ನು ಮಾಡಿ.
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here