ಭಾರತದ ರಕ್ಷಣಾ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆ

0
430

ಬೆಂಗಳೂರು ಪ್ರತಿನಿಧಿ ವರದಿ
ಭಾರತದ ರಕ್ಷಣಾ ಕ್ಷೇತ್ರವು ಭಾರತೀಕರಣದತ್ತ ಹೆಚ್ಚು ಗಮನ ಹರಿಸುತ್ತಾ ಕ್ಷಿಪ್ರ ಬದಲಾವಣೆಯನ್ನು ಕಾಣುತ್ತಿದೆ. ಮೇಕ್ ಇಂಡಿಯಾ ಆಂದೋಲನವು ಈ ವಿಭಾಗದಲ್ಲಿ ಬಹು ದೊಡ್ಡ ಪ್ರಗತಿಯನ್ನು ಕಾಣುತ್ತಿದೆ. ಹೊಸ ಕಾರ್ಯತಂತ್ರವಾದ ಉಪಕರಣಗಳ ‘ದೇಶೀಯ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ (ಐಡಿಡಿಎಂ)’ಯಿಂದಾಗಿ ಈಗಿರುವ ವಿದೇಶಿ-ದೇಶೀಯ ಮಿಶ್ರಣದ ಪ್ರಮಾಣ 70 ಅನುಪಾತ 30ರ ಬದಲಾಗಿ 30-70 ಅನುಪಾತಕ್ಕೆ ಬಂದಿದೆ ಎಂದು ಡಿಆರ್ ಡಿ ಒ ದ ರಕ್ಷಣಾ ವಿಭಾಗದ ಸಂಶೋಧನೆ ಮತ್ತು ಅಭಿವೃದ್ದಿಯ ಮಹಾ ನಿರ್ದೇಶನಾಲಯದ ಕಾರ್ಯದರ್ಶಿ ಡಾ. ಎಸ್. ಕ್ರಿಸ್ಟೋಪರ್ ಹೇಳಿದರು.
 
 
ಹೈದರಾಬಾದ್ ನಲ್ಲಿ ಸೆಪ್ಟೆಂಬರ್ 17ರಂದು ನಡೆದ ಗೀತಂ ವಿಶ್ವವಿದ್ಯಾಲಯದ ಹೈದರಾಬಾದ್ ಮತ್ತು ಬೆಂಗಳೂರು ಕ್ಯಾಂಪಸ್ ನ 7ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿ ಗೌರವಿಸಲಾಯಿತು.
 
 
ಸಶಸ್ತ್ರ ಸೇನಾ ಪಡೆಗಳಿಗಾಗಿ ಡಿಆರ್ ಟಿ ಒ ಅಭಿವೃದ್ದಿ ಪಡಿಸಿದ ತಂತ್ರಜ್ಞಾನಗಳು ಸಮಾಜಕ್ಕೂ ಲಾಭ ತರುತ್ತಿದೆ. ಉದಾಹರಣೆಗೆ ಬಯೋ-ಡೈಜೆಸ್ಟರ್ ನನ್ನು ಮೂಲತಃ ಸೇನಾ ಪಡೆಗಾಗಿ ಸಿದ್ಧಪಡಿಸಿದ್ದರೂ ಈಗ ಅದನ್ನು ಭಾರತೀಯ ರೈಲ್ವೆಯು ತನ್ನ ಪ್ಯಾಸೆಂಜರ್ ಕೋಚ್ ಗಳಲ್ಲಿ ಬಳಕೆ ಮಾಡುತ್ತಿದೆ. ಪೋಲಿಯೋ ಪೀಡಿತ ಮಕ್ಕಳಿಗಾಗಿ ಕಡಿಮೆ ಭಾರದ ವಾಕಿಂಗ್ ಉಪಕರಣಗಳನ್ನು ಡಿಆರ್ ಡಿ ಒ ಸಿದ್ಧಪಡಿಸಿದೆ ಎಂದರು.
 
ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಯ ಮೂಲಕ ಸೇನಾ ಪಡೆಗೆ ಅತ್ಯುನ್ನತ ತಂತ್ರಜ್ಞಾನವನ್ನು ಒದಗಿಸುವುದು ಡಿಆರ್ ಡಿ ಒ ಗೆ ಕಡ್ಡಾಯವಾಗಿದೆ. ಉತ್ಪಾದನೆ, ಲೈಫ್ ಸೈಕಲ್ ಅಪ್ ಗ್ರೇಡ್, ಪ್ಲಾಟ್ ಫಾರ್ಮ್, ಸೆನ್ಸಾರ್ ಉಪಕರಣ ಮತ್ತು ಇತರ ವ್ಯವಸ್ಥೆಯನ್ನು ನಾವೇ ತಯಾರಿಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಡಿಆರ್ ಡಿ ಒ ಅಭಿವೃದ್ದಿ ಪಡಿಸಿದ ಹಲವು ಉತ್ಪನ್ನಗಳು ರಫ್ತು ಮಾಡುವಷ್ಟು ಉತ್ತಮ ಗುಣಮಟ್ಟದ್ದಾಗಿದ್ದು, ಮೇಕ್ ಇಂಡಿಯಾ ಯೋಜನೆಯ ಉದ್ದೇಶವನ್ನು ಈಡೇರಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು..
 
githam_convocation1
 
ಗುಣಮಟ್ಟದ ಶಿಕ್ಷಣ ಅಗತ್ಯ
ದೇಶದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಭದ್ರತಾ ಕ್ಷೇತ್ರದ ಪ್ರತಿಯೊಂದು ವಿಭಾಗದ ತಂತ್ರಜ್ಞಾನಕ್ಕೂ ಹೆಚ್ಚಿನ ಮಹತ್ವವನ್ನು ನಾವು ನೀಡಿದ್ದೇವೆ. ರಾಷ್ಟ್ರೀಯ ಭದ್ರತೆ, ಸೈಬರ್ ಭದ್ರತೆ, ವಿದ್ಯುತ್ ಭದ್ರತೆ, ಬಾಹ್ಯಾಕಾಶ ರಕ್ಷಣೆ, ಆರ್ಥಿಕ ಭದ್ರತೆ ಮತ್ತು ಬೆಳವಣಿಗೆ, ಜೀವ ವೈವಿಧ್ಯ, ಪರಿಸರ ಹಾಗೂ ಆಹಾರ ಭದ್ರತೆ ಮತ್ತು ಆರೋಗ್ಯ ಸೇರಿದಂತೆ ಜೀವನ ಮಟ್ಟ ಸುಧಾರಣೆಗೂ ಮಹತ್ವ ನೀಡಿದ್ದೇವೆ. ಮೇಕ್ ಇನ್ ಇಂಡಿಯಾ ಯೋಜನೆ ಇನ್ನಷ್ಟು ಬಲಿಷ್ಠಗೊಂಡು ವಿಶ್ವದರ್ಜೆಯ ರಕ್ಷಣಾ ವ್ಯವಸ್ಥೆ ತಂತ್ರಜ್ಞಾನವನ್ನು ಒದಗಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣವು ಅತ್ಯಗತ್ಯ. ಈ ಮೂಲಕ ಬಾಹ್ಯ ಶಕ್ತಿಗಳ ನಿಯಂತ್ರಣದಿಂದ ಭಾರತವನ್ನು ಮುಕ್ತಗೊಳಿಸಲು ಸಾಧ್ಯ ಎಂದವರು ಹೇಳಿದರು.
 
 
ದೇಶವನ್ನು ಬಲಿಷ್ಠಗೊಳಿಸಿ
ತಾವು ಕಲಿತ ಕೌಶಲ್ಯ ಮತ್ತು ಆವಿಷ್ಕಾರದ ಮೂಲಕ ಪ್ರತಿಷ್ಠಿತ ಗೀತಂ ವಿಶ್ವವಿದ್ಯಾಲಯದಲ್ಲಿ ಕಲಿತ ಎಂಜಿನಿಯರ್ ಗಳು ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ಮೇಕ್ ಇನ್ ಇಂಡಿಯಾ ಯೋಜನೆಯು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಈ ಮೂಲಕ 2022ರೊಳಗೆ ದೇಶದ ಜಿಡಿಪಿಗೆ ನೀಡುವ ಕೊಡುಗೆಯನ್ನು ಶೇ. 25ಕ್ಕೆ ಏರಿಸುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ 25 ವಲಯಗಳನ್ನು ಗುರುತಿಸಲಾಗಿದ್ದು, ಅವಕ್ಕೆ ಉತ್ತೇಜನ ನೀಡಲಾಗುತ್ತಿದ್ದು ಹೂಡಿಕೆಯನ್ನು ಈ ಕ್ಷೇತ್ರಗಳಲ್ಲಿ ಹೆಚ್ಚಿಸಲು ಸೂಕ್ತ ನಿಯಮ ಮಾಡುವ ಭರವಸೆಯನ್ನು ಸರಕಾರ ನೀಡಿದೆ. ಜವಳಿ, ಆಹಾರ ಸಂಸ್ಕರಣೆ, ವಿಮಾನಯಾನ, ರಕ್ಷಣಾ ಉಪಕರಣ ಉತ್ಪಾದನೆ ಮತ್ತು ಇಲೆಕ್ಟ್ರಾನಿಕ್ಸ್ ನಂತಹ ವಲಯಗಳು ಇವುಗಳಲ್ಲಿ ಸೇರಿವೆ ಎಂದು ವಿವರಿಸಿದರು.
 
 
ಭಾರತದಲ್ಲಿ ಯುವ ಕೆಲಸಗಾರರ ಸಂಖ್ಯೆ ಸಾಕಷ್ಟಿದ್ದರೂ, ಕೌಶಲ್ಯವೇ ದೊಡ್ಡ ಸವಾಲಾಗಿ ಇನ್ನೂ ಉಳಿದಿದೆ. 14 ದಶ ಲಕ್ಷ ಯುವ ಉದ್ಯೋಗಿಗಳ ಪೈಕಿ ಸುಮಾರು 2 ದಶ ಲಕ್ಷ ಜನರು ಮಾತ್ರ ಸೂಕ್ತ ತರಬೇತಿ ಪಡೆದಿದ್ದಾರೆ. ಆದ್ದರಿಂದ ಕೌಶಲ್ಯ ಹೆಚ್ಚಿಸಲು ಬೇಕಾದ ಮೂಲಸೌಕರ್ಯ ಒದಗಿಸುವುದು ಈಗಿನ ಅವಶ್ಯಕತೆ. ಮುಂದಿನ ದಿನಗಳಲ್ಲಿ ಎಂಜಿನಿಯರಿಂಗ್ ಕೌಶಲ್ಯ ಹೆಚ್ಚಿಸಲು ಇನ್ನಷ್ಟು ಹೂಡಿಕೆ ಮಾಡಬೇಕಾಗಿದೆ. ಈ ಮೂಲಕ ವಿನ್ಯಾಸ, ಅಭಿವೃದ್ಧಿ, ಪ್ರಾಜೆಕ್ಟ್ ಪ್ಲಾನಿಂಗ್, ಕೆಲಸದ ಅನುಷ್ಠಾನ ಮತ್ತು ನಿರ್ವಹಣೆ ವಿಭಾಗದಲ್ಲಿ ಇನ್ನಷ್ಟು ಹೆಚ್ಚು ಗುಣಮಟ್ಟದ ಉದ್ಯೋಗಿಗಳನ್ನು ತಯಾರಿಸಬಹುದು ಎಂದು ಅವರು ಹೇಳಿದರು.
 
 
ದೇಶ ಕಟ್ಟುವ ಕಾಯಕ
ಯುವ ಪದವೀಧರರು, ಡಾಕ್ಟೋರಲ್ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ದೇಶ ಕಟ್ಟುವ ಕಾಯಕದಲ್ಲಿ ತೊಡಗಬೇಕು. ಸೃಜನಶೀಲ ಜ್ಞಾನವನ್ನು ವೃದ್ಧಿಸಿಕೊಳ್ಳುವ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕು. ಆರಂಭದಿಂದಲೇ ಉದ್ಯಮಿಯಾಗುವ ಗುಣವನ್ನು ಬಿತ್ತಬೇಕು. ವಿದ್ಯಾರ್ಥಿಗಳಿಗೆ ದೊಡ್ಡ ಯಶಸ್ಸಿನ ಹಾದಿಯಲ್ಲಿರುವ ಅಪಾಯದ ಲೆಕ್ಕಾಚಾರವನ್ನು ಹಾಕಲು ವಿದ್ಯಾರ್ಥಿಗಳಿಗೆ ಕಲಿಸಬೇಕು. ವಿದ್ಯಾರ್ಥಿಗಳಲ್ಲಿ ನಿರ್ವಹಣೆಯನ್ನು ಯಾವ ರೀತಿ ಮಾಡಬೇಕು ಎಂಬುದನ್ನು ಕಲಿಸುವ ಮೂಲಕ ತಮ್ಮದೇ ಸ್ವಂತ ಉದ್ಯಮ ಆರಂಭಿಸುವ ನಿಟ್ಟಿನಲ್ಲಿ ಅವರನ್ನು ಸಬಲೀಕರಣಗೊಳಿಸಬೇಕು ಎಂದರು.
 
 
ಗೀತಂ ಅಭ್ಯುದಯ
ಗೀತಂ ವಿಶ್ವವಿದ್ಯಾಲಯವು ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯವಾಗಿ ಹೊರ ಹೊಮ್ಮಿದ್ದು, ವಿಶ್ವದೆಲ್ಲೆಡೆ ಮನೆ ಮಾತಾಗುವ ಸಾಮರ್ಥ್ಯವನ್ನು ಹೊಂದಿದೆ. ಉತ್ತಮ ಪ್ರದೇಶ, ಅತ್ಯುತ್ತಮ ಆಸುಪಾಸು, ಜನ ದಟ್ಟಣೆಯಿಂದ ದೂರ ಇರುವುದರಿಂದ ಕಲಿಕೆ ಮತ್ತು ಕ್ರಿಯೇಟಿವಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಸ್ಥಾಪನೆಯಾದ ದಿನದಿಂದ ಗೀತಂ ವಿವಿ ಸ್ಥಿರವಾಗಿ ಅಭ್ಯುದಯ ದಾರಿಯಲ್ಲಿ ಸಾಗಿ ಬಂದಿದೆ. ರಾಷ್ಟ್ರೀಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಅಂತರ್ ವಿಷಯ ಸಂಶೋ`ನೆಗೆ ಉತ್ತೇಜನ ನೀಡುತ್ತಿದೆ.
 
ಕಾರ್ಯಕ್ರಮದಲ್ಲಿ ಗೀತಂ ವಿವಿಯ ಉಪ ಕುಲಪತಿ ಪ್ರೊ ಎಂ. ಎಸ್. ಪ್ರಸಾದ್ ರಾವ್ ಸಂಸ್ಥೆಯ ಪ್ರಗತಿಯ ವರದಿಯನ್ನು ಮಂಡಿಸಿದರು. 750 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಬಿ. ಟೆಕ್, ಎಂ. ಟೆಕ್ ಮತ್ತು ಎಂಬಿಎ ಡಿಗ್ರಿ ಪ್ರದಾನ ಮಾಡಲಾಯಿತು. 19 ಚಿನ್ನದ ಪದಕವನ್ನು ಹೈದರಬಾದ್ ಮತ್ತು ಬೆಂಗಳೂರು ಕ್ಯಾಂಪಸ್ನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಬೆಂಗಳೂರು ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನ ಶಿವ ಚರಣ್, ಬೆಂಗಳೂರು ಕ್ಯಾಂಪಸ್ ನ ಸ್ಕೂಲ್ ಆಫ್ ಟೆಕ್ನಾಲಜಿಯ SVSD Achyuth ( CSE), Paladugu Harshini (ECE) ಚಿನ್ನದ ಪದಕ ಪಡೆದರು.
 
ಗೀತಂ ವಿವಿ ಸಹಾಯಕ ಉಪ ಕುಲಪತಿಗಳಾದ ಪ್ರೊ. ಕೆ. ಶಿವರಾಮಕೃಷ್ಣ, ಪ್ರೊ. ಎನ್. ಶಿವಪ್ರಸಾದ್ ಮತ್ತು ಪ್ರೊ. ಪಿ.ವಿ. ಶಿವಪುಲ್ಲಯ್ಯ, ಬಿಒಎಂ ಸದಸ್ಯರು ನಿರ್ದೇಶಕರುಗಳು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೆಂಗಳೂರು ಕ್ಯಾಂಪಸ್ ನ ಸ್ಕೂಲ್ ಆಫ್ ಟೆಕ್ನಾಲಜಿಯ ನಿರ್ದೇಶಕರಾದ ಪ್ರೊ. ವಿಜಯ ಭಾಸ್ಕರ ರಾಜು, ಬೆಂಗಳೂರು ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನ ನಿರ್ದೇಶಕರಾದ ಪ್ರೊ. ರಾಮ ಪ್ರಸಾದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here