ಭಾರತದ ಪುಣ್ಯಧರೆಯೆಂದಿಗೂ ಆಗದಿರಲಿ ಗೋರಕ್ತಸಿಕ್ತ: ರಾಘವೇಶ್ವರಶ್ರೀ

0
207

 
ಬೆಂಗಳೂರು ಪ್ರತಿನಿಧಿ ವರದಿ
ರಾಜಾ ರಾಷ್ಟ್ರಗತಂ ಪಾಪಂ.. ಎಂಬಂತೆ ತನ್ನ ಪ್ರಜೆಗಳಾಗಲಿ, ಸೇವಕರಾಗಲಿ ಮಾಡಿದ ಪಾಪ ರಾಜನಿಗೂ ತಟ್ಟುತ್ತದೆ. ಗೋಪಾಲಕ ಮಾಡಿದ ಗೋಹತ್ಯೆಯ ಪಾಪದ ಬಿಸಿ, ಚೋಳ ರಾಜನಿಗೂ ತಟ್ಟಿತು ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀಶ್ರೀಗಳು ಹೇಳಿದರು.
 
mata chaturmasya81
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದ ಪರಿಸರದಲ್ಲಿ ನಡೆದ ಪ್ರವಚನ – ಗಾಯನ – ನರ್ತನಗಳನ್ನೊಳಗೊಂಡ ವಿಶಿಷ್ಟವಾದ ‘ಗೋಕಥೆ’ಯಲ್ಲಿ ಶ್ರೀಗಳು, ಶ್ರೀನಿವಾಸ ತಿರುಮಲದಲ್ಲಿ ನೆಲೆಸಲು ಕಾರಣವಾದ ಗೋವಿನ ಕುರಿತು ನಿರೂಪಿಸಿದರು.
mata chaturmasya82
ತಿರುಪತಿಯ ಕಥೆಯಲ್ಲಿ ಬರುವ ಗೋವು ಒಂದು ಸೋಜಿಗ. ಬರಿಗಣ್ಣಿಗೆ ಕಾಣದ ದೇವರನ್ನು ಕಾಣುವ ಕಣ್ಣುಳ್ಳವನೇ ಋಷಿ ಎಂದ ಮೇಲೆ ಯಾರೂ ಕಾಣದ ಶ್ರೀನಿವಾಸನನ್ನು ಕಂಡ ಆ ಗೋವು ಕೂಡ ಋಷಿಯೇ. ದೇವರಿಗಾಗಿ ದ್ರವಿಸುವ ಹೃದಯವುಳ್ಳವನೇ ಭಕ್ತ. ಶ್ರೀನಿವಾಸನನ್ನು ಕರುಳಕಣ್ಣಿಂದಲೇ ಕಂಡು ಕರಗಿ ಹಾಲ್ಗರೆದ ಗೋವು ಕೂಡ ಭಕ್ತೆ. ಕಾಣದ ದೇವರನ್ನು ಜಗತ್ತಿಗೆ ಕಾಣಿಸುವವನೇ ಗುರು. ಶ್ರೀನಿವಾಸನನ್ನು ಮೊದಲಾಗಿ ಕಂಡು ಲೋಕಮುಖಕ್ಕೆ ಉದ್ಘಾಟಿಸಿದ ಗೋವು ಕೂಡಾ ಗುರುವೇ ಆಗಿದೆ. ಜಗತ್ಪಿತನನ್ನೇ ಶಿಶುವಾಗಿಸಿಕೊಂಡು ಸಂತೃಪ್ತಿಯಾಗುವಷ್ಟು ಹಾಲುಣಿಸಿದ ಆ ಗೋವು ಮಾತೆಯೂ ಆಗಿದ್ದಾಳೆ ಎಂದು ಶ್ರೀಗಳು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದರು.
 
mata chaturmasya83
ತಲೆ ಬೇಕಾದರೂ ಕೊಡು, ಗೋ-ಹತ್ಯೆ ಆಗಲಿಕ್ಕೆ ಬಿಡಬೇಡ ಎಂಬುದು ತಿರುಪತಿ ಶ್ರೀನಿವಾಸನ ಸಂದೇಶ. ಭಗವಂತನನ್ನು ತೋರಿಸುವವನ್ನು ಗುರು ಎನ್ನುವುದಾದರೆ, ಮೊದಲಾಗಿ ಶ್ರೀನಿವಾಸನನ್ನು ತೋರಿಸಿದ ಗೋವು ಯಾವ ಗುರುವಿಗೇನು ಕಡಿಮೆ? ವಿಶ್ವಂಭರನಿಗೇ ಮಾತೆಯಾದ ಗೋವು ಯಾವ ಮಾತೇಗೇನು ಕಡಿಮೆ? ಗೋವಿಗೆ ಎತ್ತಿದ ಕತ್ತಿ ನಿಮ್ಮ ಕುತ್ತಿಗೆಗೆ ಬರುತ್ತೆ, ಗೋವಿನ ನಾಶದ ಅಂತ್ಯ ನಿಮ್ಮ ನಾಶ ಆಮೇಲೆ ಸರ್ವನಾಶ ಎಂದು ನುಡಿದರು.
ಕಥೆಯ ನಿರೂಪಣೆಯ ಜೊತೆಜೊತೆಗೆ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳಿ ಗಣಪತಿ ಹೆಗಡೆ ಮನಮೋಹಕವಾಗಿ ಚಿತ್ರಿಸಿದರು, ಚಂದ್ರಶೇಖರ್ ಕೆದಿಲಾಯ, ಶ್ರೀಪಾದ್ ಭಟ್, ವಸುಧಾ ಶರ್ಮಾ, ಕುಮಾರಿ ದೀಪಿಕಾ ಹಾಗೂ ತಂಡದ ಗಾಯನ ಕಥೆಯ ಅಂದವನ್ನು ಹೆಚ್ಚಿಸಿತು, ನಂತರ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ಮೂಡಿಬಂದ ರೂಪಕ ಜನರ ಮನತಟ್ಟಿತು. ಸಾವಿರಾರು ಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
 
mata chaturmasya84
ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಇದಕ್ಕೂ ಮೊದಲು ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ರಾಮ ರಾಮ ರಾಮ ಪುಸ್ತಕವನ್ನು ಪೂಜ್ಯ ಶ್ರೀಗಳು ಹಾಗೂ ಸಾಧನಾಪಂಚಕ ದೃಶ್ಯಮುದ್ರಿಕೆಯನ್ನು ಮುಖ್ರಿ ಸಮಾಜದ ಮುಖಂಡ ಎನ್. ಆರ್. ಮುಖ್ರಿ ಲೋಕಾರ್ಪಣೆಗೊಳಿಸಿದರು. ಗೋಕಥಾ ಪ್ರಾಯೋಜಕರಾದ ಹವ್ಯಕ ಸಿ.ಎ. ಸಂಘದ ಸದಸ್ಯರು, ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಗೋವಾ ವಲಯದ ಪರವಾಗಿ ಈಶ್ವರ ಕೆ ಹೆಗಡೆ ಸರ್ವಸೇವೆಯನ್ನು ಸಮರ್ಪಿಸಿದರು. ಮುಖ್ರಿ ಸಮಾಜದ ಶಿಷ್ಯರು ಪಾದಪೂಜಾ ಸೇವೆಯನ್ನು ನಡೆಸಿ ಆಶೀರ್ವಾದ ಪಡೆದರು.
 
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
 
 
ಗೋಕಥೆಯಲ್ಲಿ ಶ್ರೀಗಳ ನುಡಿಮುತ್ತು. . .
· ಈಶ್ವರನ ನಂದಿ ಕಾಮಧೇನುವಿನ ಕೊಡುಗೆ. ವಿಷ್ಣು ಇರುವುದು ಕಾಮಧೇನುವಿನ ಕ್ಷೀರ ಸಾಗರದ ಮಧ್ಯದಲ್ಲಿ, ಇನ್ನು ಬ್ರಹ್ಮ ಇರುವುದು ವಿಷ್ಣುವಿನಲ್ಲಿ. ತ್ರಿಮೂರ್ತಿಗಳು ಇರುವುದು ಕಾಮಧೇನುವಿನ ಅನುಗ್ರಹದಲ್ಲಿಯೇ.
· ಮನ್ನಣೆಯ ದಾಹ ಅತ್ಯಂತ ಕೆಟ್ಟದು. ಅದು ಆತ್ಮವನ್ನೆ ತಿಂದು, ಪರಮಾತ್ಮನನ್ನೆ ಮರೆಸಿಬಿಡುತ್ತದೆ.
· ತನ್ನನ್ನು ತಾನು ದೊಡ್ಡವ ಅಂತ ಅಂದುಕೊಂಡವ ಹೇಗೇಗೋ ಆಡುತ್ತಾರೆ, ಆದರೆ ನಿಜವಾದ ದೊಡ್ಡವರು ಹೇಗೆ ಆಡಬೇಕೊ ಹಾಗೆಯೇ ಆಡುತ್ತಾರೆ.
· ಗೋವಿಗೆ ಅಪಚಾರ ಮಾಡ ಹೊರಟಿದ್ದ ಮಾನವನ ಪಾಪಕರ್ಮದ ಪರಿಹಾರಕ್ಕಾಗಿ ಇಂದಿಗೂ ಇಡಿಯ ಮಾನವಕುಲ ತಿರುಪತಿಯಲ್ಲಿ ಮುಡಿ ಕೊಡುತ್ತಿದೆ
· ಮಠದ ಸವಿಯನ್ನು ಸವಿಯಬೇಕೆಂದರೇ ಒಂದೋ ನಿಜವಾದ ಗುರು ಆಗಬೇಕು ಅಥವಾ ನಿಜವಾದ ಶಿಷ್ಯನಾಗಬೇಕು, ಅವೆರಡನ್ನು ಬಿಟ್ಟು ಭಿನ್ನ ಭಾವದಿಂದ ಹೋದರೆ, ಒಬ್ಬಂಟಿಯಾಗುತ್ತಾರೆ.
 
 
ಇಂದಿನ ಕಾರ್ಯಕ್ರಮ (08.08.2016):
ಬೆಳಗ್ಗೆ 7.00 ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಅಪರಾಹ್ನ 3.30 :
ಗೋಸಂದೇಶ : ಪಂಚಗವ್ಯ – ನಾರಾಯಣ ಸ್ವಾಮೀಜಿ
ಲೋಕಾರ್ಪಣೆ : ಸ್ಯಮಂತಕೋಪಾಖ್ಯಾನ ಪುಸ್ತಕ
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು – ನಾರಾಯಣ ಸ್ವಾಮೀಜಿ
ಸಂತ ಸಂದೇಶ : ಪರಮಪೂಜ್ಯ ಶ್ರೀ ಶ್ರೀ ಮಧುಸೂದನಾನಂದಪುರಿ,
ಓಂಕಾರಾಶ್ರಮ, ಓಂಕಾರ ಹಿಲ್ಸ್ ಕೆಂಗೇರಿ, ಬೆಂಗಳೂರು.
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ – ಗಾಯನ : ಮೇಘಾಲಯ ಹರಿಶಂಕರ್,
ಮೃದಂಗ : ಎಂ. ಆರ್. ಸಾಯಿನಾಥ್
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

LEAVE A REPLY

Please enter your comment!
Please enter your name here