ಭಾರತಕ್ಕಿರುವ ಕಪ್ಪುಚುಕ್ಕಿಯನ್ನು ಅಳಿಸಬೇಕು!

0
590

ಮಧುಮೇಹ ಮುಕ್ತ ಭಾರತವೇ ನಮ್ಮ ಕನಸು – ಡಾ. ಸತೀಶ್ ಶಂಕರ್ ಬಿ.
ಸಂಪಾದಕರೊಂದಿಗೆ ವಾರ್ತೆ ವಾರದ ಅತಿಥಿ – ಮನದ ಮಾತು
ಹರೀಶ್ ಕೆ.ಆದೂರು
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಯೋಜನೆಯಾದಿಯಾಗಿ ವಿವಿಧ ಜನಪರ ಯೋಜನೆಗಳಿಂದ ಪ್ರೇರೇಪಿತರಾದ ಡಾ.ಸತೀಶ್ ಶಂಕರ್ ಬಿ ಮಧುಮೇಹ ಮುಕ್ತ ಭಾರತದ ಕಲ್ಪನೆಯ ಕನಸನ್ನು ಕಂಡಿದ್ದಾರೆ. ಜನಜಾಗೃತಿಯಿಂದ ಭಾರತವನ್ನು ಮಧುಮೇಹ ಮುಕ್ತ ದೇಶವನ್ನಾಗಿ ಮಾಡಬಹುದೆಂಬ ದೃಢ ಸಂಕಲ್ಪ ಹೊಂದಿ ಕಾರ್ಯೋನ್ಮುಖರಾಗುತ್ತಿದ್ದಾರೆ. ಉತ್ಸಾಹೀ ಯುವ ತರುಣ, ನೂರಾರು ಕನಸನ್ನು ಹೊತ್ತು ದೊಡ್ಡ ಸಾಹಸಕ್ಕೆ ಕೈಯಿಕ್ಕಿದ್ದಾರೆ. ವಾರ್ತೆ.ಕಾಂ ಅವರ ಸಾಹಸವನ್ನು ತುಂಬು ಹೃದಯದಿಂದ ಗೌರವಿಸುತ್ತಾ ಇಂದಿನ ವಾರ್ತೆ .ಕಾಂನ `ಸಂಪಾದಕರೊಂದಿಗೆ ವಾರ್ತೆ ವಾರದ ಅತಿಥಿಯಾಗಿ’ ಬರಮಾಡಿಕೊಂಡಿದೆ. ಅವರ ಮನದಾಳದ ಮಾತುಗಳು ನಮ್ಮ ಓದುಗರಿಗಾಗಿ…
ಡಾಕ್ಟರ್ ನಮಸ್ತೆ. ಮೊಟ್ಟಮೊದಲನೆಯದಾಗಿ ನಿಮಗೆ ಟೀಂ ವಾರ್ತೆಯ ಪರವಾಗಿ ಅಭಿನಂದನೆಗಳು. ನಿಮ್ಮ ಕನಸು, ಸಾಹಸಕ್ಕೆ ಜಯ ಸಿಗಲೆಂಬ ಶುಭ ಹಾರೈಕೆಗಳು. ನೀವೊಂದು ದೊಡ್ಡ ಸಾಹಸಕ್ಕೆ ಕೈಯಿಕ್ಕಿದ್ದೀರಿ. ಕಷ್ಟಸಾಧ್ಯ ಎಂದೆನಿಸುತ್ತಿಲ್ಲವೇ…?
ಖಂಡಿತಾ ಇಲ್ಲ. ಸಾಧಿಸುವ ಛಲವಿದೆ. ಬೆಂಬಲಕ್ಕೆ ಸಾಕಷ್ಟು ಸಂಖ್ಯೆಯ ಜನರಿದ್ದಾರೆ. ಜನರ ಮನಃಪರಿವರ್ತನೆ ಮಾಡುವ ಮೂಲಕ ಈ ಕೆಲಸ ಸಾಧ್ಯವಿದೆ. ಉದಾಹರಣೆಗೆ ಪಲ್ಸ್ ಪೋಲಿಯೋ ನಿರ್ಮೂಲನೆ ಸಾಧ್ಯವಾಗಿಲ್ಲವೇ? ಇದು ಜನಜಾಗೃತಿಯಿಂದಾಗಿ ಸಾಧ್ಯವಾಯಿತು. ಅಭಿಯಾನದಿಂದ ಸಾಧ್ಯವಾಯಿತು. ಸಮಾಜ ಸಮರ್ಪಕವಾಗಿ ಸಹಕಾರ ಮಾಡಿದ್ದೇ ಆದಲ್ಲಿ ಶೀಘ್ರ ಈ ಕಾರ್ಯ ನೆರವೇರುತ್ತದೆ.
 
ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆಯಲ್ಲಾ?
ವಿಶ್ವಸಂಸ್ಥೆಯ ವರದಿಯ ಪ್ರಕಾರ ವಿಶ್ವದಲ್ಲಿ ಅತೀಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶ ನಮ್ಮದು. ವಿಶ್ವದ ಪ್ರತೀ ಐವರು ಮಧುಮೇಹಿಗಳಲ್ಲಿ ಒಬ್ಬರು ಭಾರತೀಯರು. ಒಂದು ಆತಂಕಕಾರಿ ಅಂಶವೆಂದರೆ ಮೊದಲು 40ವರ್ಷದ ನಂತರದ ವಯೋಮಾನದವರಲ್ಲಿ ಮಧುಮೇಹ ಕಂಡುಬರುತ್ತಿದ್ದರೆ ಈಗ 20ರಿಂದ 40ವರ್ಷದ ಒಳಗಿನ ವಯೋಮಾನದವರಲ್ಲಿ ಈ ರೋಗ ಹೆಚ್ಚಾಗಿ ಕಾಣುತ್ತಿರುವುದು ಕಳವಳಕಾರಿ.
 
ಆಯುರ್ವೇದಶಾಸ್ತ್ರದ ಮೂಲಕ ಸಂಪೂರ್ಣ ಗುಣಪಡಿಸಲು ಸಾಧ್ಯವಿದೆಯೇ…?
ಮಧುಮೇಹದಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಮೊದಲನೆಯದ್ದು ಟೈಪ್ 1. ಇದು ಇನ್ಸುಲಿನ್ ಉತ್ಪಾದನೆಯ ಕೊರತೆಯಿಂದ ಅಥವಾ ಇನ್ಸುಲಿನ್ ಅನುತ್ಪಾದನೆಯಿಂದ ಬರುವಂತಹದು. ಇದರ ಸಂಖ್ಯೆ ಕೇವಲ ಶೇಕಡಾ 5ರಷ್ಟು.
ಎಡನೇಯದ್ದು ಟೈಪ್ 2. ಇದು ಇನ್ಸುಲಿನ್ ಸೂಕ್ತ ಪ್ರಮಾಣದ ಕೊರತೆ ಅಥವಾ ಶರೀರ ಸೂಕ್ತವಾಗಿ ಸ್ಪಂದಿಸದೇ ಇರುವ ಹಿನ್ನಲೆಯಲ್ಲಿ ಬರುವಂತಹುದು. ಆರಂಭದಲ್ಲೇ ಇದರ ಬಗ್ಗೆ ಜಾಗೃತರಾದರೆ ಆಯುರ್ವೇದ ಮತ್ತು ವ್ಯಾಯಾಮದಿಂದ ಸಂಪೂರ್ಣ ಗುಣಪಡಿಸಬಹುದಾಗಿದೆ.
ಜಾಗೃತಿ ಮೂಡಿಸುವುದು ಹೇಗೆ?
ದೇಶದ ಆಸ್ತಿ ಯುವಜನತೆ. ದೇಶದಲ್ಲಿ 80ಕೋಟಿ ಯುವಜನತೆ ಇದ್ದಾರೆ. ಈ ಯುವಜನತೆಯಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಬೇಕು. ಅವರಲ್ಲಿ ಸ್ಪಷ್ಟ ಕಲ್ಪನೆ ಮೂಡುವಂತೆ ಮಾಡಬೇಕು. ಹಾಗೂ ಅವರನ್ನು ಗುರಿಯಾಗಿಟ್ಟುಕೊಂಡು ಕಾರ್ಯಕ್ರಮ ಅನುಷ್ಠಾನ ಮಾಡಬೇಕು ಎಂಬುದು ನಮ್ಮ ಉದ್ದೇಶ.
ನಿಮ್ಮ ಅಭಿಯಾನದ ಸ್ವರೂಪ ಹೇಗೆ?
ಆರಂಭದಲ್ಲಿ ಒಂದು ಗ್ರಾಮವನ್ನು ಅಭಿಯಾನದ ಕೇಂದ್ರಬಿಂದುವನ್ನಾಗಿ ಆಯ್ಕೆಮಾಡಿಕೊಂಡಿದ್ದೇವೆ. ಮೊದಲು ಆ ಗ್ರಾಮವನ್ನು ಮಧುಮೇಹ ಮುಕ್ತ ಗ್ರಾಮವನ್ನಾಗಿಸುವುದು ನಮ್ಮಗುರಿ. ಹಂತ ಹಂತವಾಗಿ ಅಭಿಯಾನವನ್ನು ವಿಸ್ತರಿಸುತ್ತಾ ದೇಶವನ್ನು ಮಧುಮೇಹ ಮುಕ್ತ ರಾಷ್ಟ್ರವನ್ನಾಗಿ ಪರಿವರ್ತಿಸುವುದು ನಮ್ಮ ಉದ್ದೇಶ. ನಮ್ಮ ಈ ಅಭಿಯಾನಕ್ಕೆ ಮಾಧ್ಯಮ ಬೆಂಬಲ ಅತೀ ಅವಶ್ಯ. ಗ್ರಾಮ ಸಭೆ, ನಗರ ಸಭೆಗಳಲ್ಲಿ ಜಾಗೃತಿ ಮೂಡಿಸುವುದು, ವರ್ಷಕ್ಕೆ ಎರಡು ದಿನವನ್ನು ಕೇವಲ ಮಧುಮೇಹ ತಪಾಸಣೆಗಾಗಿಯೇ ಮೀಸಲಿಡುವುದು , ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುವುದು, ಸರಕಾರದ ಸಹಕಾರದೊಂದಿಗೆ ನಿರಂತರ ಜಾಗೃತಿ ಕಾರ್ಯಗಳು, ಮನೆ ಮನೆ ಅಭಿಯಾನ, ಕರಪತ್ರಗಳ ಮೂಲಕ ಅಭಿಯಾನ, ಸ್ಕಿಟ್, ಬೀದಿ ನಾಟಕಗಳ ಮೂಲಕ ಜನತೆಯನ್ನು ತಲುಪುವುದು, ಅಲ್ಲಲ್ಲಿ ಜಾಥಾಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ನಿರಂತರ ಫಾಲೋ ಅಪ್, ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಂಡು ತಳಮಟ್ಟದಿಂದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ. ಇದಕ್ಕಾಗಿ ವಿಶೇಷ ತಂಡದ ರಚನೆಯಾಗಲಿದೆ.
ಗುರಿ?
ವಿಶ್ವಸಂಸ್ಥೆಯ ವರದಿಗಳ ಪ್ರಕಾರ 2030ರ ವೇಳೆಗೆ ಭಾರತದ ಮಧುಮೇಹಿಗಳ ಸಂಖ್ಯೆ ದ್ವಿಗುಣಗೊಳ್ಳಲಿದೆ; ಅಂದರೆ ಸುಮಾರು 80ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗಲಿದ್ದಾರೆ. ನಮ್ಮ ಈ ಅಭಿಯಾನದ ಮೂಲಕ ಇದನ್ನು ತಡೆಗಟ್ಟಬೇಕಾಗಿದೆ. ವಿಶ್ವಸಂಸ್ಥೆಯ ವರದಿಯ ಅಂಶವನ್ನು ಸುಳ್ಳಾಗಿಸುವುದು ನಮ್ಮ ಗುರಿ.
ಮಧುಮೇಹದ ಬಗ್ಗೆ ಸೂಕ್ತ ಅರಿವಿನ ಕೊರತೆ ಇದೆಯೇ?
ಖಂಡಿತಾ ಇದೆ.
ಭಾರತದಲ್ಲಿ ಬದಲಾದ ಜೀವನ ಶೈಲಿಯೂ ಇದಕ್ಕೆ ಕಾರಣ ಎಂದರೆ ತಪ್ಪಲ್ಲ. ನಗರದತ್ತ ಜನತೆ ವಲಸೆಹೋಗುತ್ತಿರುವುದು ಕೂಡಾ ಒಂದು ಕಾರಣ. ಜನರಲ್ಲಿ ವ್ಯಾಯಾಮದ ಕೊರತೆ ಇಂದಿದೆ. ವಿಲಾಸೀ ಜೀವನವನ್ನು ಆಶಿಸುವ ಸಂಖ್ಯೆ ಅಧಿಕವಾಗಿದ್ದಾರೆ. ಕೃತಕ ಪಾನೀಯಗಳನ್ನು ಸೇವಿಸುವುದು, ಜಂಕ್ ಫುಡ್, ಫಾಸ್ಟ್ ಫುಡ್ ಗಳ ಅತಿಯಾದ ಸೇವನೆ ಮಾಡುವುದು , ಆಧುನಿಕ ಜೀವನ ಶೈಲಿಯನ್ನು ಇಷ್ಟಪಡುವುದು ಮಧುಮೇಹಕ್ಕೆ ಕಾರಣವಾಗುತ್ತಿದೆ.
 
ಆರಂಭದ ಲಕ್ಷಣ ಹೇಗಿರುತ್ತದೆ?
ಒಂದು ಅತಿಯಾದ ಬಾಯಾರಿಕೆ, ಅತಿಯಾದ ಹಸಿವು ಮತ್ತು ಅತಿಯಾದ ಮೂತ್ರವಿಸರ್ಜನೆ ಮಧುಮೇಹದ ಆರಂಭಿಕ ಲಕ್ಷಣಗಳು.
ಮನದ ಮಾತು ?
ಮಧುಮೇಹ ದೇಶಕ್ಕೆ ಒಂದು ಕಪ್ಪುಚುಕ್ಕಿಯಂತಿದೆ. ವಿದೇಶೀ ಮಾಧ್ಯಮಗಳು ಭಾರತವನ್ನು ಬೊಟ್ಟುಮಾಡುತ್ತಿವೆ. ಭಾರತದಲ್ಲಿ ಮಧುಮೇಹಿಗಳು ಅಧಿಕವೆಂಬುದು ಇಂದು ದೊಡ್ಡ ಸುದ್ದಿಯಾಗಿದೆ. ಜನಸಂಖ್ಯೆಯಲ್ಲಿ ಚೀನಾ ಮುಂದಿದ್ದರೂ ಮಧುಮೇಹದ ವಿಚಾರ ಬಂದಾಗ ಭಾರತ ಮುಂದೆಇದೆ. ಚೀನಾ ಎರಡನೇ ಸ್ಥಾನದಲ್ಲಿದೆ. 2011ರ ತನಕ ಚೀನಾ ಮೊದಲನೆಯ ಸ್ಥಾನದಲ್ಲಿತ್ತು. ಅಲ್ಲಿ ಜಾಗೃತಿಯ ಕಾರ್ಯದಿಂದಾಗಿ ಮಧುಮೇಹಿಗಳ ಪ್ರಮಾಣ ಇಳಿಮುಖವಾಗಿದೆ. ದೇಶಕ್ಕಿರುವ ಕೆಟ್ಟಹೆಸರನ್ನು ತೆಗೆಯಬೇಕು. ಕಪ್ಪುಚುಕ್ಕೆಯಂತಿರುವ ಮಧುಮೇಹವನ್ನು ಹೋಗಲಾಡಿಸಬೇಕು ಎಂಬುದು ನಮ್ಮ ಆಶಯ.
 
ಹರೀಶ್ ಕೆ.ಆದೂರು
ಪ್ರಧಾನ ಸಂಪಾದಕ,ವಾರ್ತೆ.ಕಾಂ
[email protected]

LEAVE A REPLY

Please enter your comment!
Please enter your name here