ಬೋರ್ವೆಲ್ – ಕೊರೆಸುವವರಿಗೂ ಸ್ವಲ್ಪ ತಿಳುವಳಿಕೆ ಇರಲಿ

0
1760

 
ಚಿಗುರು ಅಂಕಣ: ರಾಧಾಕೃಷ್ಣ ಹೊಳ್ಳ
ನಮ್ಮ ಕರಾವಳಿಯಲ್ಲಿ ಮಳೆಗಾಲದಲ್ಲಿ ಉತ್ತಮ ಮಳೆಯಾದರೆ ಜನವರಿ ಕಳೆದರೆ ಸಾಕು, ಮೇ ತನಕ ನೀರಿನ ಬರ. ಈಗ ಕೆರೆ, ಬಾವಿ ಕಾಲ ಹೋಗಿದೆ. ಹೊಳೆಯಲ್ಲೂ ಸಹ ಮಾರ್ಚ್ ನಂತರ ನೀರು ಕೈಕೊಡುತ್ತದೆ. ಆದ ಕಾರಣ ನೀರಿಗಾಗಿ ಇರುವ ಆಯ್ಕೆ ಎಂದರೆ ಕೊಳವೆ ಬಾವಿ ಮಾತ್ರ. ಕೃಷಿ ನೀರಾವರಿಗೂ ಕೊಳವೆ ಬಾವಿ. ಕುಡಿಯುವ ನೀರಿಗೂ ಅದೇ. ಸರಾಸರಿ ಎರಡು ಮನೆಗೆ ಒಂದರಂತೆಯಾದರೂ ಕೊಳವೆ ಬಾವಿ ಇದ್ದೇ ಇದೆ. ಕರಾವಳಿಯ ಎಲ್ಲಾ ಕಡೆ ಫೆಬ್ರವರಿ ಕಳೆದರೆ ಸಾಕು, ಬೊರ್ ಲಾರಿಗಳು ಎಲ್ಲಾ ಹಳ್ಳಿಯಲ್ಲೂ ಓಡಾಡುವುದನ್ನು ಕಾಣಬಹುದು. ಹಳ್ಳಿ ಹಳ್ಳಿಯ ಮೂಲೆ ಮೂಲೆಯಲ್ಲೂ ಹತ್ತಾರು ಜನ ಬೋರ್ ವೆಲ್ ಕೊರೆಸಿಕೊಡುವ ಏಜೆಂಟರು ತುಂಬಿದ್ದಾರೆ. ಎಲ್ಲೆಡೆಯಲ್ಲೂ ರಾತ್ರೆಯ ನಿಶಭ್ದ ವಾತಾವರಣವನ್ನು ಬೋರ್ ಕೊರೆಯುವ ಶಬ್ಧ ಭೇದಿಸಿ ಬರುತ್ತಿದೆ. ಈ ಸಂದರ್ಭದಲ್ಲಿ ಕೊಳವೆ ಬಾವಿ ಕೊರೆಸುವವರಿಗೆ ಸಣ್ಣ ಪುಟ್ಟ ಸಲಹೆ ಇಲ್ಲಿದೆ.
 
v nech
 
ಕೊಳವೆ ಬಾವಿ ಕೊರೆಸುವ ಮುನ್ನ ನೀರು ಎಲ್ಲಿ ಇದೆ ಎಂದು ಹುಡುಕಲು ಯಾವಾಗಲೂ ಹೆಚ್ಚು ಅನುಭವ ಉಳ್ಳ ನೀರು ತಜ್ಞರನ್ನೇ ಆಯ್ಕೆ ಮಾಡಿ. ಅವರು ನೀರು ಹೇಳುವ ಸಮಯದಲ್ಲಿ, ಕೆಲವು ದಿನಗಳಿಂದ ನೀರು ಹೇಳಿದಲ್ಲಿ ಯಶಸ್ಸು ಎಷ್ಟು ಎಂದು ತಿಳಿದುಕೊಳ್ಳಿ. ನಿಮ್ಮಲ್ಲಿ ನೀರು ಹೇಳುವಾಗ ಹೇಳುವವರ ಗ್ರಹಗತಿಯೂ ಒಳ್ಳೆಯ ಸ್ಥಾನದಲ್ಲಿದರೆ ಉತ್ತಮ. ಕೆಲವೊಮ್ಮೆ ಇವರು ಹೇಳುವ ನೀರಿನ ಮೂಲ ಒಂದರಿಂದೊಂದು ಯಸಸ್ಸು ಆಗಿರುವುದುಂಟು. ಆ ಸಮಯದಲ್ಲಿ ಅವರ ಗ್ರಹಗತಿ ಉತ್ತಮವಾಗಿರುತ್ತದೆ ಎಂದು ಗ್ರಹಿಸಬಹುದು. ಕೋಲು, ಚೈನು, ತೆಂಗಿನ ಕಾಯಿ ಅಥವಾ ಯಾವುದಾದರೂ ಕೀ ಮೂಲಕ ನೀರು ಹೇಳುವುದು ಶುದ್ಧ ಸುಳ್ಳು ಎನ್ನುತ್ತಾರೆಯಾದರೂ, ಅದನ್ನು ಪೂರ್ತಿಯಾಗಿ ಒಪ್ಪಲು ಸಾಧ್ಯವಿಲ್ಲ. ಅವರ ಲೆಕ್ಕಾಚಾರಗಳೂ ಯಶಸ್ವಿಯಾದ ಸಾವಿರಾರು ಉದಾಹರಣೆ ಇದೆ.
ಕೊಳವೆ ಬಾವಿಯ ಪಾಯಿಂಟ್ ಅನ್ನು ಸಾಧ್ಯವಾದಷ್ಟು ವಿದ್ಯುತ್ ಸಂಪರ್ಕಕ್ಕೆ ಹತ್ತಿರ ಇರುವಂತೆ ಮಾಡಿಸಿಕೊಳ್ಳಿ.
 
 
 
 
ಕೊರೆಯುವ ಯಂತ್ರ ಸಾಮಾನ್ಯವಾಗಿ ಎಲ್ಲವೂ ಹೈಟೆಕ್ ಆಗಿರುತ್ತದೆ. ಕೊರೆಯುವ ಯಂತ್ರ ನಿಲ್ಲಲು ಸಮತಟ್ಟಾದ ಜಾಗದ ಅನುಕೂಲ ಮಾಡಿಕೊಡಿ. ಇಲ್ಲವಾದರೆ ಕೆಲವೊಮ್ಮೆ ಬೋರ್ನ ತೂತು ಓರೆ ಹೋಗುವ ಸಾಧ್ಯತೆ ಇರುತ್ತದೆ. ಎಲ್ಲಾ ಕೊರೆಯುವ ರಿಗ್ನಲ್ಲಿ ಜಲಮಟ್ಟ ತೋರಿಸುವ ವ್ಯವಸ್ಥೆ ಇರುತ್ತದೆ. ಪೈಪು ಇಳಿಸುವ ತುದಿಯಲ್ಲಿ ಇದು ಇರುತ್ತದೆ. ಅದು ಸರಿಯಾಗಿರುವಂತೆ ನೋಡಿಕೊಳ್ಳಲು ಹೇಳಿ. ತುಂಬಾ ಸಡಿಲ ಮಣ್ಣಾಗಿದ್ದಲ್ಲಿ ಬೇಗ ನೀರು ದೊರೆತರೆ ಸ್ವಲ್ಪ ಎಲೈನ್ಮೆಂಟ್ ತಪ್ಪಿದರೂ ತೂತು ಓರೆಯಾಗುತ್ತದೆ. ಅಪರೂಪದಲ್ಲಿಇಂತದ್ದು ಆಗುವುದಾದರೂ ನಾವು ಜಾಗರೂಕತೆ ವಹಿಸಿದರೆ ಒಳ್ಳೆಯದು. ಓರೆ ಕೊರೆಯಲ್ಪಟ್ಟ ಬಾವಿಗೆ ಪಂಪು ಇಳಿಸುವಾಗ ತೊಂದರೆಯಾಗುತ್ತದೆ.
 
 
 
ಡ್ರಿಲ್ಲಿಂಗ್ ಮಾಡುವಾಗ ನೀರು ಹೇಳಿದವರು ಇಂತಿಷ್ಟು ಅಡಿಯಲ್ಲಿ ಗ್ಯಾಪು ( ಎರಡು ಕಲ್ಲಿನ ಸಂದುಗಳು) ಸಿಗುತ್ತವೆ. ಅದರಲ್ಲಿಇಂತಿಷ್ಟು ಪ್ರಮಾಣದಲ್ಲಿ ನೀರು ಬರುತ್ತದೆ. ಇಷ್ಟಕ್ಕೆ ನಿಲ್ಲಿಸಿ. ಆ ನಂತರ ತೋಡಿದರೆ ಫಲವಿಲ್ಲ ಎಂದೆಲ್ಲಾ ಹೇಳುತ್ತಾರೆ.ಆದರೆ ಯಾರೂ ಭೂಮಿಯ ಅಡಿಭಾಗವನ್ನು ಕಣ್ಣಿನಲ್ಲಿ ನೋಡಿರಲಾರರು. ಕೆಲವೊಮ್ಮೆ ಸರಿಯಾಗಲೂ ಬಹುದು ಆದರೆ ಅವರ ಮಾತಿನಂತೆ ನೀರು ಸಿಗಲಿಲ್ಲ ಎಂದು ಧೃತಿಗೆಡಬೇಡಿ. ನೀವು ಬಾವಿ ತೋಡಲು ನಿಧರ್ಾರ ಮಾಡಿದಾಗ ಅದಕ್ಕೆ ಎಷ್ಟು ಮೊತ್ತವನ್ನು ವಿನಿಯೋಗಿಸಬೇಕೆಂದು ನಿರ್ಧಾರ ಮಾಡಿದ್ದೀರೋ ಅಷ್ಟು ತೋಡಿ. ಕೆಲವೊಮ್ಮೆ 500-600 ಅಡಿ ತೋಡಿದ ನಂತರವೂ ನೀರು ಉಕ್ಕಿ ಬರುವ ಸಾಧ್ಯತೆ ಇದೆ. 700-800 ರ ನಂತರವೂ ಬರುವ ಸಾಧ್ಯತೆ ಇದೆ. ಅಡಿ ಭಾಗದ ನೀರಿಗೆ ಹೆಚ್ಚು ಒತ್ತಡ ಇರುತ್ತದೆ, ಅದು ದೊಡ್ಡ ಬಂಡೆಗಳ ತೂಕದಲ್ಲಿ ಬರುವ ನೀರು ಎಂಬುದಾಗಿ ಹೇಳುತ್ತಾರೆ. ಅದನ್ನೂ ಅಲ್ಲಗಳೆಯುವಂತಿಲ್ಲ.ಈಗ ಅಂತರ್ಜಲ ಮಟ್ಟ ಕುಸಿದಿರುವ ಕಾರಣ ಬೇಗ ನೀರು ದೊರೆಯುವುದು ಕಡಿಮೆ ಎಂಬುದು ತಿಳುವಳಿಕೆಯಲ್ಲಿ ಇರಲಿ. ಒಮ್ಮೆ ತೋಡಿದ ಬಾವಿಯನ್ನು ಮತ್ತೆ ತೋಡುವವರು ವಿರಳ. ಆದ ಕಾರಣ ತೋಡುವಾಗ ಸಾಕಷ್ಟು ಆಳಕ್ಕೆ ತೋಡುವುದು ಸೂಕ್ತ.
 
 
 
ಕೇಸಿಂಗ್ ಪೈಪು ಹಾಕುವಾಗ ಮಣ್ಣಿನ ಗುಣಮಟ್ಟ ಹೇಗಿದೆ, ಕಲ್ಲು ಮಿಶ್ರಿತವಾಗಿದೆಯೇ ಅಥವಾ ನಯವಾದ ಮಣ್ಣೇ ಎಂದು ತಿಳಿದುಕೊಂಡು, ಪಿ ವಿ ಸಿ ಅಥವಾ ಗ್ಯಾಲ್ವನೈಸೆಡ್ ಅಯರ್ನ್ ಪೈಪನ್ನು ಹಾಕಿಸಿ. ನಯವಾದ ಮಣ್ಣಾಗಿದ್ದಲ್ಲಿ ಪಿ ವಿ ಸಿ ಉತ್ತಮ. ಖರ್ಚು ಕಡಿಮೆ ಆಗುತ್ತದೆ. ಕಲ್ಲು ಇದ್ದರೆ ಜಿಐ ಹಾಕಿಸಿ. ಯಾವುದೇ ಕಾರಣಕ್ಕೂ ಎಂ ಎಸ್ (ಮೈಡ್ ಸ್ತೀಲ್) ಹಾಕಿಸಬೇಡಿ. ಇದು ಕೆಲವೇ ವರ್ಷದಲ್ಲಿ ಶಿಥಿಲವಾಗುತ್ತದೆ. ಬೋರ್ವೆಲ್ ಕೇಸಿಂಗ್ ಪೈಪು ಪಿ ವಿ ಸಿ ಆದರೆ 20 ಅಡಿಯ ಒಂದು ಪೈಪಿಗೆ ಎಷ್ಟು ಬೆಲೆ ಇರುತ್ತದೆ ಎಂಬುದನ್ನು ಯಾವುದಾದರೂ ಪೈಪು ಮಾರಾಟಗಾರರಲ್ಲಿ ಕೇಳಿದರೆ ತಿಳಿಯುತ್ತದೆ. ಅದೇ ರೀತಿ ಜಿ ಐ ಪೈಪಿಗೂ ಸಹ ಪೈಪು ಮಾರಾಟಗಾರರಲ್ಲಿ ದರ ವಿಚಾರಿಸಿರಿ. ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ರಿಗ್ ಮಾಡುವವರು ಯಾವ ದರ ನಿಗದಿ ಪಡಿಸಿದ್ದಾರೆ ಎಂಬ ಬಗ್ಗೆ ಮಿತ್ರರಲ್ಲಿ ಕೇಳಿ ತಿಳಿದು ಕೊಂಡಿರಿ. ಕೊರೆಯುವ ಲಾರಿಯವರೇ ತಂದು ಹಾಕುವುದಿದ್ದರೆ ಈ ಪೈಪುಗಳಿಗೆ ಒಂದೊಂದು ಕಡೆ ಒಂದೊಂದು ದರ ಇರುತ್ತದೆ. ನೀವು ತೋಡಿಸುವ ಏಜೆಂಟ್ರಲ್ಲಿ ಈ ಬಗ್ಗೆ ವಿಚಾರಿಸಿರಿ. ಅಂಥಃ ಸಂದರ್ಭಗಳಿಲ್ಲಿ ದರ ತುಂಬಾ ಕಡಿಮೆ ಇದ್ದಲ್ಲಿ, ನಾಲ್ಕೈದು ಜನ ಒಟ್ಟು ಸೇರಿ ಪಕ್ಕದ ಜಿಲ್ಲೆಗಳಿಂದ ರಿಗ್ ಯಂತ್ರ ತರಿಸಿ ಬೋರ್ ಕೊರೆಸಬಹುದು. ಬರೇ ಕೇಸಿಂಗ್ ಮಾತ್ರವಲ್ಲ, ಕೊರೆಯುವ ದರದ ಬಗ್ಗೆಯೂ ವಿಚಾರಿಸಿರಿ.
 
 
 
ಡ್ರಿಲ್ಲಿಂಗ್ ಮಾಡುವಾಗ ಬರುವ ನೀರನ್ನು ಇಷ್ಟು ಇಂಚು ಎಂದೆಲ್ಲಾ ಅವರ ಹೇಳಿದ್ದನ್ನು ನಂಬುವುದು ಯುಕ್ತವಲ್ಲ. ರಾಡ್ ಪ್ರಾರಂಭವಾಗುವಾಗ ಅಧಿಕ ಒತ್ತಡ ಕೊಡುವ ಕಾರಣ ಹೆಚ್ಚು ನೀರು ಬರುತ್ತದೆ. ಮಧ್ಯಕ್ಕೆ ತಲುಪಿದಾಗ ಬರುವ ನೀರು ನೈಜ ನೀರು. ಆ ಸಮಯದಲ್ಲಿ ನೀರಿನ ಇಳುವರಿಯನ್ನು ಅಳೆಯುವ ವಿ ನಾಚ್ ಎಂಬ ಕೋನ ಇಟ್ಟು ಅದರಲ್ಲಿ ಕರಾರುವಕ್ಕಾದ ನೀರಿನ ಇಳುವರಿಯನ್ನು ತಿಳಿಯಿರಿ. ಪ್ರತೀ ಲಾರಿಯವರಲ್ಲೂ ಇದು ಇದ್ದೇ ಇರುತ್ತದೆ. ಇದನ್ನು ಕೇಳಿ ನೀರು ಹರಿಯ್ವ ದಾರಿಗೆ ಅಡ್ಡಲಾಗಿ ಇಟ್ಟು ಅದರ ಮೂಲಕ ನೀರು ಹರಿಯುವಂತೆ ಮಾಡಿ, ಅಳೆಸುವುದು ನಮ ಕರ್ತವ್ಯ. ಇದರ ಮೂಲಕ ಹರಿಯುವ ನೀರಿಗೆ ಮಧ್ಯ ಭಾಗಕ್ಕೆ ಅಡಿಕೋಲನ್ನು ಇಟ್ಟಾಗ ಅದರಲ್ಲಿ ತೋರುವ ಇಂಚು ನೈಜ ಇಳುವರಿಯದ್ದಾಗಿರುತ್ತದೆ. ಇದರಲ್ಲೀ ಅಳತೆ ಸೂಚಕ ಇರುತ್ತದೆ. ಸಾಧ್ಯವಾದಷ್ಟು ಹಗಲು ಹೊತ್ತಿನಲ್ಲಿ ರಿಗ್ ಮಾಡಿಸಿ. ಆಗ ಎಲ್ಲವನ್ನೂ ಸರಿಯಾಗಿ ನೋಡಲು ಸಾಧ್ಯವಾಗುತ್ತದೆ.
 
 
ಪಂಪು ಅಳವಡಿಸುವಾಗ ಮೊದಲು ಸ್ವಲ್ಪ ಖರ್ಚಾದರೂ ಒಮ್ಮೆ ಪಂಪು ಹಾಕುವವರಲ್ಲಿ ಟ್ರಾಯಲ್ ನೋಡಿ ನಂತರ ಪಂಪು ಹಾಕಿಸಿ. ಸುಮಾರು 10 ವರ್ಷಕ್ಕೆ ಹಿಂದೆ ಎಲ್ಲಾ ಪಂಪು ಮಾರಾಟಗಾರರು ಇದನ್ನು ಮಾಡುತ್ತಿದ್ದರು. ಈಗ ಕಡಿಮೆ. ಆದರೂ ಒತ್ತಾಯದಲ್ಲಿ ಟ್ರಾಯಲ್ ನೋಡಿ ನಂತರ ಪಂಪಿನ ನಿರ್ಧಾರ ಮಾಡಿ. ಇದು ಪಂಪು ಹಾಕುವ ಕ್ರಮ. ಎಷ್ಟು ಪೈಪು ಇಳಿಸಬೇಕು, ಎಷ್ಟು ಹೆಡ್ ಬೇಕಾಗುತ್ತದೆ ಇದೆಲ್ಲಾ ಆಗ ತಿಳಿಯುತ್ತದೆ.
 
 
 
ಕೊಳವೆ ಬಾವಿ ತೋಡುವಾಗ ಊರಿನ ಕೆಲವರು ಒಟ್ಟಾಗಿ ಒಂದೇ ಬಾರಿಗೆ ತೋಡಿಸುವುದರಿಂದ ತುಂಬಾ ಪ್ರಯೋಜನವಿದೆ. ರೈತರೆಲ್ಲಾ ಒಗ್ಗಟ್ಟಾಗಿ ಹತ್ತಾರು ಬಾವಿಗಳ ಆರ್ಡರ್ ಇದ್ದರೆ ದರ ಚೌಕಾಸಿ ಮಾಡಬಹುದು. ದುರ್ದೈವವೆಂದರೆ ಊರಿನವರೆಲ್ಲಾ ಈ ವಿಚಾರದಲ್ಲಿ ಒಗ್ಗಟ್ಟಾಗುವುದು ಕಷ್ಟ ಸಾಧ್ಯ. ಆದ ಕಾರಣ ಈ ಜಿಲ್ಲೆಯಲ್ಲಿ ಬೋರ್ ಕೊರೆಸುವಾಗ ಸಾಕಷ್ಟು ಅವ್ಯವಹರಾಗಳು ನಡೆಯುತ್ತವೆ.
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here