ಬೇವು-ಬೆಲ್ಲ: ಅಕ್ಟೋಬರ್ 2016

0
274

ವಾರ್ತೆ ಹಿನ್ನೋಟ
2016 ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಇನ್ನೇನು ಕೇವಲ ಕೆಲವೇ ದಿನಗಳಲ್ಲಿ ಹೊಸ ವರುಷದ ಸ್ವಾಗತಕ್ಕೆ ನಾಡು ಸಿದ್ಧವಾಗುತ್ತಿದೆ. ಈ
ಶುಭಾವಸರದಲ್ಲಿ ಕಳೆದುಹೋದ ದಿನಗಳ ಮೆಲುಕು ಹಾಕುತ್ತಾ ನಾಡು ಕಂಡ `ಬೇವು ಬೆಲ್ಲದ’ ಸವಿಯನ್ನು ಮತ್ತೆ ನೆನಪಿಸುತ್ತಾ ಇದ್ದೇವೆ…ನೀವೂ ನಿಮ್ಮ
ನೆನಪಿನ ಬುತ್ತಿಯನ್ನೊಮ್ಮೆ ಬಿಚ್ಚಿಡಬಹುದು…
2016ರ ಅಕ್ಟೋಬರ್ ತಿಂಗಳು ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಏನೆಲ್ಲಾ ಆಯಿತು ಹತ್ತನೇ ತಿಂಗಳು ಎಂಬುದರ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ…
KRS ಪ್ರವೇಶವಿಲ್ಲ
ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಜನರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ದಸರಾಕ್ಕೆ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ-2016ಕ್ಕೆ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಿರಿಯ ಸಾಹಿತಿ ಚೆನ್ನವೀರ ಕಣವಿ ಅವರು ದಸರಾವನ್ನು ಉದ್ಘಾಟಿಸಿದ್ದರು.
ಸಿಒಪಿ21 ಗೆ ಸಹಿ ಹಾಕಿದ 62 ನೇ ರಾಷ್ಟ್ರ ಭಾರತ
ಪ್ಯಾರಿಸ್‌ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಭಾರತ ಅ.2ರಂದು ಅನುಮೋದನೆ ನೀಡಿತ್ತು. ಒಪ್ಪಂದಕ್ಕೆ ಈ ವರೆಗೂ 61 ರಾಷ್ಟ್ರಗಳು ಅನುಮೋದನೆ ನೀಡಿದ್ದು, 62 ನೇ ರಾಷ್ಟ್ರವಾಗಿ ಐತಿಹಾಸಿಕ ಒಪ್ಪಂದವನ್ನು ಅನುಮೋದಿಸಿತ್ತು.
ಜಾಗ್ವಾರ್ ಪತನ
ಭಾರತೀಯ ವಾಯುಸೇನೆಗೆ ಸೇರಿದ ಜಾಗ್ವಾರ್ ವಿಮಾನ ಪತನವಾಗಿತ್ತು. ರಾಜಸ್ತಾನದ ಚಂದನ್ ಫೈರಿಂಗ್ ರೇಂಜ್ ಬಳಿ ವಿಮಾನ ಪತನವಾಗಿದ್ದು, ಪತನಗೊಂಡ ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಸುರಕ್ಷಿತರಾಗಿದ್ದರು.
 
ಸಾವಿನ ಭವಿಷ್ಯ ಗುರೂಜಿ ನಿಧನ
ಸಾವಿನ ಭವಿಷ್ಯ ಖಾತಿಯ ಜೀವನ್ ವಿಜಯಾನಂದ ಗುರೂಜಿ ವಿಧಿವಶರಾಗಿದ್ದರು. ಮಂಗಳೂರಿನ ತೊಕ್ಕೊಟ್ಟುನಲ್ಲಿರುವ ಸಹರಾ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
 
ಜಿಸ್ಯಾಟ್-18 ಯಶಸ್ವಿ ಉಡಾವಣೆ
ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-18ನ್ನು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದ ಕೊವುರೌನಲ್ಲಿರುವ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಜಿಸ್ಯಾಟ್-18 ಸುಮಾರು 3,404 ಕೆ.ಜಿ. ತೂಕ ಹೊಂದಿದ್ದು, ಈ ಉಪಗ್ರಹವನ್ನು ಹೊತ್ತ ಏರಿಯಾನ್-5 ವಿಎ-231 ರಾಕೆಟ್ ಅಗಸಕ್ಕೆ ಚಿಮ್ಮಿತು. ಬಳಿಕ 32 ನಿಮಿಷಗಳಲ್ಲಿ ರಾಕೆಟ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
 
ಹೈಟಿಗೆ ‘ಮ್ಯಾಥ್ಯೂ’ಮರ್ಮಾಘಾತ
ಅಮೆರಿಕಾದಲ್ಲಿ ಕಾಣಿಸಿಕೊಂಡ ಮ್ಯಾಥ್ಯೂ ಚಂಡಮಾರುತಕ್ಕೆ ಹೈಟಿ ಸಂಪೂರ್ಣ ನಾಶವಾಗಿತ್ತು. ಮನೆಗಳು, ಸೇತುವೆಗಳು ಚಂಡಮಾರುತಕ್ಕೆ ಛಿದ್ರಛದ್ರವಾಗಿದೆ ಹೋಗಿದ್ದವು. ಭಾರೀ ಚಂಡಮಾರುತಕ್ಕೆ ನೂರಾರು ಜನರು ಮೃತಪಟ್ಟಿದ್ದು, ಲಕ್ಷಾಂತರ ಜನರು ನಿರಾಶ್ರಿರಾಗಿದ್ದರು.
ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿತಾ
ದಕ್ಷಿಣ ಭಾರತದ ನಟಿ ನಿಖಿತಾ ತುಕ್ರಾಲ್ ಅವರು ಉದ್ಯಮಿ ಗಗನ್‍ದೀಪ್ ಸಿಂಗ್ ಮಾವೋ ಜೊತೆ ಸಪ್ತಪದಿ ತುಳಿದಿದ್ದರು. ಮುಂಬೈನ ಖಾಸಗಿ ಹೊಟೇಲ್ ವೊಂದರಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಉತ್ತರ ಭಾರತೀಯ ಸಂಪ್ರದಾಯದಂತೆ ಇಬ್ಬರು ಸಪ್ತಪದಿ ತುಳಿಸಿದ್ದರು.
ಗ್ರ್ಯಾಂಡ್‌ ಓಪನಿಂಗ್‌
‘ಬಿಗ್‌ಬಾಸ್‌ ಸೀಸನ್‌ 4’ ರಿಯಾಲಿಟಿ ಶೋಗೆ ಭಾನುವಾರ ಗ್ರ್ಯಾಂಡ್‌ ಓಪನಿಂಗ್‌ ದೊರಕಿತ್ತು. ಕಿಚ್ಚ ಸುದೀಪ್‌ 15 ಜನ ಸ್ಪರ್ಧಿಗಳನ್ನ ಅದ್ಧೂರಿಯಾಗಿಯೇ ಸ್ವಾಗತಿಸಿ 55 ಕ್ಯಾಮರಾಗಳಿರೋ ಬಿಗ್‌ಬಾಸ್‌ ಮನೆಗೆ ಕಳುಹಿಸಿದ್ದರು. ಮೊದಲನೇಯದಾಗಿ ನಿರ್ದೇಶಕ ಪ್ರಥಮ್‌ ಬಿಗ್‌ಬಾಸ್‌ ಮನೆಗೆ ಎಂಟ್ರಿ ನೀಡಿದರು. ಉಳಿದಂತೆ ಶೀತಲ್‌ ಶೆಟ್ಟಿ, ಶಾಲಿನಿ, ಕಿರಿಕ್‌ ಕೀರ್ತಿ,ಮಾಳವಿಕ ಅವಿನಾಶ್‌, ಕಾವ್ಯ ಶಾಸ್ತ್ರಿ, ಭುವನ್‌ ಪೊನ್ನಣ್ಣ, ಚೈತ್ರಾ, ಸಂಜನಾ ಚಿದಾನಂದ್‌, ದೊಡ್ಡ ಗಣೇಶ್‌, ವಾಣಿಶ್ರೀ, ನಿರಂಜನ್‌ ದೇಶಪಾಂಡೆ, ಕಾರುಣ್ಯ ರಾಮ್‌, ಮೋಹನ್‌ ಹಾಗೂ ಸ್ಪರ್ಶ ರೇಖಾ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಿದ್ದರು.
ಶಿಲ್ಪಾಗೆ ಪಿತೃ ವಿಯೋಗ
ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಎಸ್.ಶೆಟ್ಟಿ (75) ಮುಂಬೈನ ಧೀರೂಭಾಯಿ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
 
 ಭೂಗತ ತೈಲ ಸಂಗ್ರಹಗಾರ ಚಾಲನೆ
ಮಂಗಳೂರಿನಲ್ಲಿ ಭೂಗತ ತೈಲ ಸಂಗ್ರಹಗಾರಕ್ಕೆ ಚಾಲನೆ ನೀಡಲಾಗಿತ್ತು. ಸಂಸದ ನಳೀನ್ ಕುಮಾರ್ ಕಟೀಲ್ ಅವರು ತಾಲೂಕಿನ ಪೆರ್ಮುದೆಯಲ್ಲಿರುವ ಭೂಗತ ತೈಲ ಸಂಗ್ರಹಗಾರವನ್ನು ಲೋಕಾರ್ಪಣೆಗೊಳಿಸಿದ್ದರು. ಇದರಲ್ಲಿ ಈಗ ಇರಾನ್ ನಿಂದ ಭಾರತಕ್ಕೆ ಬಂದಿದ್ದ 0.26 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲ ಸಂಗ್ರಹವಾಗಿದೆ. ಯುದ್ಧ,ತುರ್ತು ಪರಿಸ್ಥಿತಿ ವೇಳೆ ಬಳಕೆ ಮಾಡಲು ಸಂಗ್ರಹ ಮಾಡಲಾಗಿದೆ. ದೇಶದ 3ನೇ ತೈಲ ಸಂಗ್ರಹಗಾರಕ್ಕೆ ಸಂಸದರು ಚಾಲನೆ ನೀಡಿದ್ದರು. ಇದು ದೇಶದ 2ನೇ ಅತಿ ಹೆಚ್ಚು ದೊಡ್ಡ ಭೂಗತ ತೈಲ ಸಂಗ್ರಹಗಾರ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.
 
 
ನಂ.1 ಪಟ್ಟಕ್ಕೇರಿದ ಅಶ್ವಿನ್
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 27 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ ಅಶ್ವಿನ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ ಹಾಗೂ ಆಲ್ರೌಂಡರ್ ರ್ಯಾಂಕಿಂಗ್ ನಲ್ಲೂ ನಂ.1 ಪಟ್ಟಕ್ಕೇರಿದ್ದರು.
ಬಾಬ್ ಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ
ಅಮೆರಿಕಾದ ಪಾಪ್ ಗಾಯಕ ಗೀತ ರಚನಕಾರ ಬಾಬ್ ಡೈಲಾನ್ 2016 ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ ಗೆದ್ದಿದ್ದರು. 75 ವರ್ಷದ ಬಾಬ್ ಡೈಲಾನ್ ಅಮೆರಿಕಾದ ಗೀತ ರಚನೆಯ ಸುದೀರ್ಘ ಸಂಪ್ರದಾಯದಲ್ಲಿ ಹೊಸತನ್ನು ಸೃಷ್ಟಿಸುತ್ತಿರುವುದಕ್ಕೆ ಈ ಪ್ರಶಸ್ತಿ ನೀಡುತ್ತಿರುವುದಾಗಿ ಸ್ವೀಡಿಷ್ ಅಕಾಡೆಮಿ ತಿಳಿಸಿತ್ತು.
 
ಮುಂಬೈ ದಾಳಿಯ ಹೀರೋ ನಿಧನ
26/11 ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿ ವೇಳೆ ನೂರಾರು ನಾಗರಿಕರ ಸಾವನ್ನು ತಪ್ಪಿಸಿದ್ದ ಮುಂಬೈ ಪೊಲೀಸ್ ಶ್ವಾನ ‘ಸೀಸರ್’ ಸಾವನ್ನಪ್ಪಿದ್ದ.
ಬ್ರಿಕ್ಸ್ ಶೃಂಗಸಭೆ
ಗೋವಾದ ಪಣಜಿಯಲ್ಲಿ 8ನೇ ಬ್ರಿಕ್ಸ್ ಸಮಾವೇಶ ನಡೆದಿತ್ತು. ಬ್ರಿಕ್ಸ್ ಸಮಾವೇಶದಲ್ಲಿ 5 ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಿದ್ದು, ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
 
 
ಎಂಆರ್‌ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ
ವಿಮಾನ ನಿಲ್ದಾಣ, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‌ಗಳಲ್ಲಿ ನಿಗದಿತ ವೌಲ್ಯಕ್ಕಿಂತ (ಎಂಆರ್‌ಪಿ) ಹೆಚ್ಚಿನ ಬೆಲೆಗೆ ಕುಡಿಯುವ ನೀರು ಹಾಗೂ ತಂಪು ಪಾನೀಯಗಳನ್ನು ಮಾರಾಟ ಮಾಡದಂತೆ ನಿರ್ಬಂಧ ಹೇರಲಾಗಿತ್ತು. ಒಂದು ವೇಳೆ ಎಂಆರ್‌ಪಿ ಬೆಲೆಗಿಂಗ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ತಿಳಿಸಿದ್ದರು.
 
 
ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ
ಬೆಂಗಳೂರಿನ ಶಿವಾಜಿನಗರಗ ಕಮರ್ಷಿಯಲ್ ಸ್ಟ್ರೀಟ್ ನ ಕಾಮರಾಜ ರಸ್ತೆಯಲ್ಲಿ ಹಾಡಹಗಲೇ ರುದ್ರೇಶ್ ಎಂಬಾತನನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾರೆ. ಮೃತ ರುದ್ರೇಶ್ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದು, ಪಥಸಂಚಲನ ಮುಗಿಸಿ ವಾಪಸಾಗುತ್ತಿದ್ದರು. ಈ ವೇಳೆ ನುಗ್ಗಿದ ದುಷ್ಕರ್ಮಿಗಳ ತಂಡ ರುದ್ರೇಶ್ ಮೇಲೆ ಹಲ್ಲೆ ಮಾಡಿ ಕೊಲೆಗೈದಿದೆ ಎನ್ನಲಾಗಿದೆ.
 
 
ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವ
ಪ್ರತಿವರ್ಷದಂತೆ ಕೊಡಗು ಜಿಲ್ಲೆಯ ಐತಿಹಾಸಿಕ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಿತ್ತು.
 
 
‘ಕೈ’ಗೆ ಗುಡ್ ಬೈ ಹೇಳಿದ ಶ್ರೀನಿವಾಸ್
ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದರು.
 
 
ಸಾಕ್ಷಿ ಮಲ್ಲಿಕ್ ಗೆ ನಿಶ್ಚಿತಾರ್ಥ
ರಿಯೋ ಒಲಿಂಪಿಕ್ಸ್‌‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿರುವ ಕುಸ್ತಿಪಟು ಸಾಕ್ಷಿ ಮಲಿಕ್‌‌‌ ‌‌‌‌‌‌ ತಮ್ಮ ಗೆಳೆಯ ಹಾಗೂ ಕುಸ್ತಿಪಟು ಸತ್ಯವೃತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಡಾ. ರಾಜ್ ಆಸ್ತಿ ಹಂಚಿಕೆ
ದಿವಂಗತ ವರನಟ ಡಾ.ರಾಜ್‍ಕುಮಾರ್ ಅವರ ಆಸ್ತಿ ಸೋಮವಾರ ಅಧಿಕೃತವಾಗಿ ವಿಭಜನೆಯಾಗಿತ್ತು. ಡಾ.ರಾಜ್ ಅವರು ಆಸ್ತಿಯನ್ನು ಅವರ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗಿತ್ತು.
 
 
ಡೆಂಘೀಗೆ ಪುಟ್ಬಾಲ್ ಆಟಗಾರ್ತಿ ಬಲಿ
ಡೆಂಘೀಗೆ ಅಂತಾರಾಷ್ಟ್ರೀಯ ಪುಟ್ಬಾಲ್ ಆಟಗಾರ್ತಿ ಪೂನಂ ಚೌಹಾನ್ ಬಲಿಯಾಗಿದ್ದರು. ಉತ್ತರಪ್ರದೇಶದ ವಾರಣಾಸಿಯ ಬನಾರಸ್ ಆಸ್ಪತ್ರೆಯಲ್ಲಿ ಪೂನಂ ಅವರು ಡೆಂಘೀಯಿಂದ ವಿಧಿವಶರಾಗಿದ್ದರು.
 
 
ಕೊನೆಗೂ ಸಿದ್ದುವಿಗೆ ಚಿಕಿತ್ಸೆ ಭಾಗ್ಯ
ಸುಮಾರು 52 ದಿನಗಳ ಕಾಲ ರಾಮನಗರದಲ್ಲಿ ನರಕಯಾತನೆ ಅನುಭವಿಸಿದ್ದ ಕಾಡಾನೆ ಸಿದ್ದಗೆ ಕೊನೆಗೂ ಚಿಕಿತ್ಸೆ ಭಾಗ್ಯ ದೊರಕಿತ್ತು. ಸಿದ್ದ ಎಂಬ ಹೆಸರಿನ ಆನೆ ಕಳೆದ ಒಂದೂವರೆ ತಿಂಗಳಿನಿಂದ ಕಾಲು ಮುರಿದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ. ಮಾಗಡಿ ತಾಲ್ಲೂಕಿನ ಮಂಚನಬೆಲೆ ಹಿನ್ನೀರಿನ ಜಲಾಶಯದಲ್ಲಿ ಒಂಟಿ ಸಲಗವೊಂದು ಅಪಾಯಕ್ಕೆ ಸಿಲುಕಿತ್ತು. ಈವರೆಗೂ ಅರಣ್ಯ ಇಲಾಖೆ ನೆಪ ಮಾತ್ರಕ್ಕೆ ನೋವು ನಿವಾರಕ ಮಾತ್ರೆಗಳನ್ನು ನೀಡುತ್ತಿತ್ತು.
 
 
ತುಟ್ಟಿ ಭತ್ಯೆ ಹೆಚ್ಚಳ
ರಾಜ್ಯ ಸರ್ಕಾರಿ ನೌಕರರಿಗೆ ಈ ಬಾರಿಯ ದೀಪಾವಳಿಗೆ ಸರ್ಕಾರದಿಂದ ಉಡುಗೊರೆಯೊಂದು ಲಭ್ಯವಾಗಿತ್ತು. ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಶೇ. 4.25ರಷ್ಟು ಹೆಚ್ಚಳ ಮಾಡಿತ್ತು.
 
 
ಪರ್ವತಾರೋಹಿ ಜಂಕೊ ತಾಬೆ ನಿಧನ
ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ್ದ ಮೊದಲ ಮಹಿಳೆ ಜಪಾನಿನ ಪರ್ವತಾರೋಹಿ ಜಂಕೊ ತಾಬೆಗೆ ವಿಧಿವಶರಾಗಿದ್ದರು.
77 ವರ್ಷದ ಜಂಕೊ ತಾಬೆ 70 ದೇಶಗಳ ಎತ್ತರದ ಪರ್ವತಗಳನ್ನು ಹತ್ತಿದ್ದು, ತಮ್ಮ ಜೀವನದ ಬಹುಪಾಲು ಸಮಯವನ್ನು ಪರ್ವತಾರೋಹಣೆಗೆ ಮೀಸಲಿರಿಸಿದ್ದರು. 1969 ರಲ್ಲಿ ಪರ್ವತಾರೋಹಿಗಳ ಲೇಡಿಸ್ ಕ್ಲಬ್ ಸೇರಿದ ಜಂಕೋ, ಮೇ 16, 1975ರಲ್ಲಿ ಮೌಂಟ್ ಎವೆರೆಸ್ಟ್ ಹತ್ತಿ ವಿಶ್ವ ದಾಖಲೆ ಮಾಡಿದ್ದರು. ಆ ನಂತರದಿಂದ 1992ರಲ್ಲಿ ಏಳು ಖಂಡಗಳ ಅತೀ ಎತ್ತರದ ಏಳು ಪರ್ವತಗಳನ್ನು ಹತ್ತಿದ ವಿಶ್ವದ ಮೊದಲ ಮಹಿಳೆ ಎನಿಸಿಕೊಂಡರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಜಂಕೋ ಟೋಕಿಯೋದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ದರ್ಗಾ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ
ಮುಂಬೈನ ಹಾಜಿ ಅಲಿ ದರ್ಗಾ ಪ್ರವೇಶಿಸಲು ಮಹಿಳೆಯರಿಗೆ ಇದ್ದ ಎಲ್ಲಾ ಅಡೆತಡೆಗಳು ಇದೀಗ ನಿವಾರಣೆಯಾಗಿ, ಮಹಿಳೆಯರು ದರ್ಗಾ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹಾಜಿ ಅಲಿ ದರ್ಗಾದ ಟ್ರಸ್ಟ್ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.
 
 
ಮಹಿಳೆಯರಿಗಾಗಿ ವಿಶೇಷ ವ್ಯವಸ್ಥೆ
ಕೇರಳದ ರೈಲ್ವೆ ನಿಲ್ದಾಣದಲ್ಲಿ . ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ರಾಜ್ಯದ ಹತ್ತು ರೈಲ್ವೆ ನಿಲ್ದಾಣಗಳಲ್ಲಿ ‘ಶಿ ಟಾಯ್ಲೆಟ್’ ವ್ಯವಸ್ಥೆ ಆರಂಭವಾಗಿತ್ತು. ರಾಜ್ಯದ ಕಾಸರಗೋಡು. ಕಾಞಂಗಾಡು, ಪಯ್ಯನ್ನೂರು, ಕಣ್ಣೂರು, ತಿರುವನಂತಪುರಂ, ವಡಗರ, ತ್ರಿಶೂರು, ಶೋರ್ನೂರು, ತಿರೂರು, ಪಾಲಕ್ಕಾಡ್ ರೈಲು ನಿಲ್ದಾಣಗಳಲ್ಲಿ ತಲಾ 5.25 ಲಕ್ಷ ರೂ. ವೆಚ್ಚದಲ್ಲಿ ‘ಶಿ-ಟಾಯ್ಲೆಟ್’ ವ್ಯವಸ್ಥೆ ಮಾಡಲಾಗಿತ್ತು.
 
 
ಅನಿರೀಕ್ಷಿತವಾಗಿ ರಾಜೀನಾಮೆ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ಮಾನಸ ಅವರು ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದರು. ಮಂಜುಳಾ ಅವರ ಅಧಿಕಾರದ ಅವಧಿ ಪೂರ್ಣಗೊಳ್ಳಲು ಇನ್ನೂ 8 ತಿಂಗಳು ಬಾಕಿ ಇರುವಾಗಲೇ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು.
ರಾಷ್ಟ್ರಪತಿಯವರ ಸಂಬಳ ಹೆಚ್ಚಳ
ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರುಗಳ ಸಂಬಳವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಅಂತೆಯೇ ರಾಷ್ಟ್ರಪತಿಯವರ ಸಂಬಳವನ್ನು 1.5 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲಾಗಿದ್ದು, ಇದರೊಂದಿಗೆ ಉಪರಾಷ್ಟ್ರಪತಿಯವರ ಸಂಬಳ 1.1 ಲಕ್ಷದಿಂದ 3.5 ಲಕ್ಷ ರೂ.ಗೆ ಏರಿಕೆಯಾಗಿತ್ತು.
 
 
ಬಿಎಸ್ ವೈ ಗೆ ಬಿಗ್ ರಿಲೀಫ್
ಬಿಎಸ್ ವೈ ವಿರುದ್ಧದ ಕಿಕ್ ಬ್ಯಾಕ್ ಕೇಸ್ ನಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಖುಲಾಸೆಯಾಗಿದ್ದರು. ಅಲ್ಲದೆ ಕಿಕ್ ಪ್ರಕರಣದ ಎಲ್ಲಾ ಆರೋಪಿಗಳು ದೋಷಮುಕ್ತರಾಗಿದ್ದಾರೆ. ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಲ್ಲಿರುವ ಕೋರ್ಟ್ ನಲ್ಲಿ ತೀರ್ಪು ದೊರಕಿತ್ತು. ಯಡಿಯೂರಪ್ಪ, ಮಕ್ಕಳಾದ ಬಿ ವೈ ರಾಘವೇಂದ್ರ, ಬಿ ವೈ ವಿಜಯೇಂದ್ರ, ಅಳಿಯ ಆರ್ ಎನ್ ಸೋಹನ್ ಕುಮಾರ್, ಎಸ್ ಎನ್ ಕೃಷ್ಣಯ್ಯ ಶೆಟ್ಟಿ, ಸೌತ್ ವೆಸ್ಟ್ ಮೈನಿಂಗ್ ಕಂಪನಿ, ಜಿಂದಾಲ್ ಕಂಪನಿ ಅಧಿಕಾರಿಗಳು ಸೇರಿ ಎಲ್ಲರೂ ಈ ಪ್ರಕರಣದಲ್ಲಿ ಖುಲಾಸೆಯಾಗಿದ್ದರು.
ಪ್ರಬಲ ಅವಳಿ ಭೂಕಂಪನ
ಇಟಲಿಯಲ್ಲಿ ಪ್ರಬಲ ಅವಳಿ ಭೂಕಂಪನ ಸಂಭವಿಸಿತ್ತು. ಪ್ರಬಲ ಅವಳಿ ಭೂಕಂಪನಕ್ಕೆ ಇಟಲಿ ತತ್ತರಿಸಿಹೋಗಿದ್ದು, ರೋಮ್ ನಗರದ ಹಲವು ಕಟ್ಟಡಗಳು ನೆಲಕ್ಕುರುಳಿದ್ದವು. ಭೂಕಂಪನವು ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿತ್ತು.
ಪಾಕ್ ರಾಯಭಾರಿಗೆ ಸಮನ್ಸ್
ಹುತಾತ್ಮ ಯೋಧನ ಅಂಗಾಂಗ ಕತ್ತರಿಸಿದ ಪ್ರಕರಣ ಹಿನ್ನೆಲೆಯಲ್ಲಿ ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಗೆ ಸಮನ್ಸ್ ಜಾರಿ ಮಾಡಲಾಗಿತ್ತು. ವಿದೇಶಾಂಗ ಇಲಾಖೆ ಸಮನ್ಸ್ ಜಾರಿ ಮಾಡಿತ್ತು.
ಹೊತ್ತಿ ಉರಿದ ವಿಮಾನ
ಅಮೆರಿಕಾದಲ್ಲಿ ರನ್ ವೇನಲ್ಲಿ ವಿಮಾನ ಹೊತ್ತಿ ಉರಿದಿತ್ತು. ಚಿಕಾಗೋ ಓಹ್ರೆ ಏರ್ ಪೋರ್ಟ್ ನಲ್ಲಿ ಅಮೆರಿಕ ಏರ್ ಲಯನ್ಸ್ ವಿಮಾಣಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಫ್ಲೈಟ್ ಟೇಕಾಫ್ ವೇಳೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನದ ಇಂಜಿನ್ ನಂ.2ರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಮಾನದಲ್ಲಿ 161 ಪ್ರಯಾಣಿಕರು, 9 ಸಿಬ್ಬಂದಿಗಳಿದ್ದರು.

LEAVE A REPLY

Please enter your comment!
Please enter your name here