ಬೆಂಕಿಯನ್ನು ಸುಡುತ್ತದೆ ಎಂಬ ಪರಿಜ್ಞಾನದಲ್ಲಿ ಬಳಸಿದರೆ ಅಪಾಯವಿಲ್ಲ

0
631

ಚಿಗುರು:ರಾಧಾಕೃಷ್ಣ ಹೊಳ್ಳ
1939 ರಲ್ಲಿ ಪೌಲ್ ಮುಲ್ಲರ್ ಎಂಬವನು ಡಿಡಿಟಿ ಎಂಬ ಅತೀ ಪರಿಣಾಮಕಾರಿ ಕೀಟನಾಶಕವನ್ನು ಆವಿಷ್ಕಾರ ಮಾಡಿದ. ಅದಕ್ಕೆ ಅವನಿಗೆ ನೋಬೆಲ್ಪ್ರಶಸ್ತಿಯೂ ಲಭಿಸಿದೆ. ಇದನ್ನು ಅವನು ಮನೆ ಸುತ್ತಲಿನಲ್ಲಿರುವ ಸೋಳ್ಳೆ ನಿಯಂತ್ರಣಕ್ಕಾಗಿ ಬಳಕೆಗೆ ತಯಾರಿಸಿದ್ದ. ಇದರ ನಂತರ ತೊಗೆದುಕೊಳಿ, ಎಂತೆಂಥ ಕೀಟನಾಶಕ , ಶಿಲೀಂದ್ರ ನಾಶಕಗಳು ಬಂದವು. ಈಗ ಲೀಟರಿಗೆ 8000 ರೂ. ಶಿಲೀಂದ್ರ ನಾಶಕ, 2500 ರೂ. ನ ಕೀಟನಾಶಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಮೇರಿಕಾದ ಲೇಖಕಿಯಾದ ರಾಚೆಲ್ ಕಾರ್ಸನ್ ಅವರು ಹಿಂದಿನ ಕೀಟನಾಶಕಗಳಿಗೆ ರೈನ್ ಕೆಮಿಕಲ್ಸ್ ಎಂದಿದ್ದಾರೆ. ಇದಾದ ನಂತರ ಬಂದ ಎರಡನೇ ಶತಮಾನದದ್ದನ್ನು ಸೈಲೆಂಟ್ ಸ್ಪ್ರಿಂಗ್ ಎಂದಿದ್ದಾರೆ. 1975 ರ ತರುವಾಯ ಕೀಟನಾಶಕ , ಶಿಲೀಂದ್ರ ನಾಶಕ ಮತ್ತು ಕಳೆನಾಶಕಗಳ ಅನ್ವೇಶಣೆ ವೇಗವಾಗಿ ಸಾಗಿತು. ಇವು ಮಾನವನು ತಯಾರಿಸಿದ ಗುರಿಯಾಧರಿತ ಆರ್ಗಾನಿಕ್ ಕೆಮಿಕಲ್ ಕಂಪೊಸಿಷನ್ನ ಸಿಂಥೆಟಿಕ್ ಕಿಟನಾಶಕಗಳಾಗಿವೆ. ಇವು ಕಡಿಮೆ ಸಾಂದ್ರತೆಯಲ್ಲಿ ಬಳಸುವಂತದ್ದು ಮತ್ತು ಪೂರ್ತಿಯಾಗಿ ನೀರಿನಲ್ಲಿ ಕರಗುವಂತದ್ದಾಗಿವೆ. (ಸಾವಯವ ರಾಸಾಯನಿಕ ಸಂಯೋಜನೆ) .
 
 
1975 ರ ಸುಮಾರಿಗೆ ಅಮೆರಿಕಾವು ಪೆರಿಥ್ರೇನ್ ಸಂಯುಕ್ತದಲ್ಲಿ ರಾಸಾಯನಿಕವಾಗಿ ಆರ್ಗನೋ ಫೋಸ್ಫೇಟ್ ಮತ್ತು ಕಾರ್ಬಮೇಟ್ ಅನ್ನು ತಯಾರಿಸಿ ಡಿಡಿಟಿ ಯನ್ನು ಬದಿಗೆ ಸರಿಸಿತು. 1940 ರಿಂದ 1950 ರ ನಂತರದ ವರ್ಷಗಳು ಕೀಟನಾಶಕಗಳ ಯುಗ ಎಂದೇ ಕರೆಯಬಹುದು. ಆನಂತರ ಅವುಗಳ ವಿವೇಕ ರಹಿತ ತಯಾರಿಕೆ ಮತ್ತು ಬಳಕೆ ತಡೆಯಲು ಕೆಲವು ಶಾಸನಗಳು ಬಂದವು. ಕೀಟನಾಶಕಳ ಆವಿಷ್ಕಾರ ಪ್ರಾರಂಭವಾದುದೇ ತಡ ನಂತರದ ವರ್ಷಗಳಲ್ಲಿ ಹೆಚ್ಚು ಹೆಚ್ಚು ಪ್ರಭಲ ಕೀಟನಾಶಕಗಳು ಮಾರುಕಟ್ಟೆಗೆ ಬರಲಾರಂಭಿಸಿತು. ಹಳೆಯ ತಯಾರಿಕೆಗಳ ಕುಂದು ಕೊರತೆಗಳನ್ನು ಗುರುತಿಸಿ ಅವನ್ನು ತೆರೆಮರೆಗೆ ಸರಿಸಲಾಗುತ್ತಿದೆ. 1970 ರಿಂದ ಇಂದಿನ ವರೆಗೆ 50 ಪಟ್ಟು ಕೀಟನಾಶಕಗಳ ಬಳಕೆ ಹೆಚ್ಚಿದೆ. 75 % ಕೀಟನಾಶಕಗಳು ಅಭಿವೃದ್ದಿ ಹೊಂದಿದ ದೇಶಗಳಲ್ಲೇ ಬಳಕೆಯಾಗುತ್ತಿವೆ.
 
ಈಗ ಯಾವುದೇ ಬೆಳೆಯಿರಲಿ ಅದಕ್ಕೆ ಕೀಟನಾಶಕ ಶಿಲೀಂದ್ರ ನಾಶಕ ರಾಸಾಯನಿಕ ಗೊಬ್ಬರ ಅನಿವಾರ್ಯವಾಗಿದೆ. ರೈತರು ಬೀಜ ಖರೀದಿಸುವಾಗಲೇ ಕೀಟನಾಶಕ, ರೋಗನಾಶಕ ಖರೀದಿಸಿ ಅಲ್ಲಿಂದಲೇ ಉಪಚಾರ ಪ್ರಾರಂಭಿಸುತ್ತಾರೆ. ಅಧಿಕ ಇಳುವರಿ ಪಡೆದು ಕೃಷಿಯಲ್ಲಿ ಲಾಭ ಮಾಡಿಕೊಳ್ಳಬೇಕೆಂಬ ಆಶೆಯೇ ಹೆಚ್ಚು ಹೆಚ್ಚು ಕೀಟನಾಶಕ ಮತ್ತು ರೋಗನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆಗೆ ಕಾರಣ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸುವಲ್ಲಿ ಮೇಲಿನ ಆವಿಷ್ಕಾರಗಳು ಭಾರೀ ಕೊಡುಗೆ ನೀಡಿವೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಬಳಸುವವನ ಅಜ್ಞಾನವೋ, ಅಥವಾ ತಿಳುವಳಿಕೆ ಕೊರತೆಯಿಂದಲೋ ಈ ರಾಸಾಯನಿಕ ಕೀಟನಾಶಕ, ರೋಗನಾಶಕಗಳು ಎಷ್ಟು ಉತ್ತಮ ಅಭಿಪ್ರಾಯವನ್ನು ಗಳಿಸಿದೆಯೋ ಅಷ್ಟೇ ಕೆಟ್ಟ ಹೆಸರನ್ನೂ ಮಾಡಿವೆ.
 
 
ಮಾನವನ ಆರೋಗ್ಯ ಸಮಸ್ಯೆ, ಜೀವಸಂಕುಲದ ಅವನತಿ, ಕೀಟ ರೋಗಗಳಿಗೆ ನಿರೋಧಕ ಶಕ್ತಿ ಉಂಟಾಗಿದೆ. ಈ ಕಾರಣಕ್ಕಾಗಿಯೇ ಇಂದು ಪ್ರಪಂಚದಾದ್ಯಂತ ಬೆಳೆಗಳಿಗೆ ಕೀಟನಾಶಕ, ರೋಗ ನಾಶಕ ಮತ್ತು ರಾಸಾಯನಿಕ ಗೊಬ್ಬರ ಬಳಕೆಯನ್ನು ನಿಲ್ಲಿಸಬೇಕು ಎಂದು ಹೇಳುವ ಆ ಕುರಿತಾಗಿ ಜನ ಜಾಗೃತಿ ಮೂಡಿಸುವ ಕೆಲಸಕ್ಕೆ ನಾಂದಿಯಾಗಿದೆ. ರಾಸಾಯನಿಕಗಳು ಅಪಾಯಕಾರಿ ಅದರ ಬದಲು ಹಾನಿರಹಿತವಾದ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಬೆಳೆ ಬೆಳೆಯಬೇಕು ಎಂಬ ಹೋರಾಟ ಸಾಗುತ್ತಿದೆ.
 
ಕೃಷಿಗೆ ರಾಸಾಯನಿಕ ವಸ್ತುಗಳನ್ನು ಬಳಸದೇ ಬೆಳೆ ಬೆಳೆಯುವ ಈಗಿರುವುದಕ್ಕಿಂತ ಮಿತವ್ಯದ ಬೆಳೆ ತಾಂತ್ರಿಕತೆ ಈ ತನಕ ಪ್ರಪಂಚದ ಯಾವುದೇ ದೇಶಗಳಲ್ಲೂ ಬಂದಿಲ್ಲ. ನಮ್ಮ ಪೂರ್ವಜರು ಬೆಳೆ ಬೆಳೆಸುತ್ತಿದ್ದರೆ ಆಗ ಅವರ ಆಕಾಂಕ್ಷೆಗಳು ಕಡಿಮೆ ಇದ್ದವು. ಉತ್ಪಾದಕತೆಯೂ ಈಗಿನಷ್ಟು ಇರಲಿಲ್ಲ. ಮುಂದುವರಿದು ಹೇಳಬೇಕಾದರೆ ಎಲ್ಲರೂ ಆಹಾರ ಸ್ವಾವಲಂಭಿಗಳೂ ಆಗಿರಲಿಲ್ಲ. ಕೃಷಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ, ರೋಗನಾಶಕಗಳು ಬಂದ ನಂತರವೇ ನಾವು ಆಹಾರ ಸ್ವಾವಲಂಭನೆ ಸಾಧಿಸಿದ್ದು. ಇದನ್ನು ಇದೇ ಪ್ರಕಾರ ಮುಂದುವರಿಸಿಕೊಂಡು ಹೋಗಬೇಕಾದರೆ, ಬದಲಿ ವ್ಯವಸ್ಥೆ ಬರುವ ವರೆಗೆ ರಾಸಾಯನಿಕಗಳ ಬಳಕೆ ಅನಿವಾರ್ಯ.
 
 
ಚಟವನ್ನು ಒಮ್ಮೆಲೇ ಬಿಡುವುದು ಕಷ್ಟ. ಹಾಗೆ ಬಿಟ್ಟರೆ ಅದರ ಬದಲು ಬೇರೆ ಚಟ ಅಂಟಿಕೊಳ್ಳುತ್ತದೆ. ಅದಕ್ಕೆ ಸ್ವಲ್ಪ ಸ್ವಲ್ಪವೇ ಕಡಿಮೆಮಾಡುವುದು ಒಳ್ಳೆಯದು. ಹತ್ತು ಬೀಡಿ ಸೇದುವವರು 8-6 ಈ ರೀತಿಯಲ್ಲಿ ಅದನ್ನು ಕಡಿಮೆ ಮಾಡಬೇಕಂತೆ. ಅದೇ ತರಹದಲ್ಲಿ ರಾಸಾಯನಿಕಗಳ ಬಳಕೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಮಾಡಿಕೊಳ್ಳುವ ಬದಲು ಸ್ವಲ್ಪ ಸ್ವಲ್ಪವೇ ಅಡಿಮೆ ಮಾಡಿ ಅದನ್ನು ಸರಿ ಹೊಂದಿಸಲು ಬೇರೆ ಮೂಲವಸ್ತುಗಳನ್ನು ಬಾಳಸಬೇಕು. ಬಳಕೆ ಮಾಡುವಾಗಲೂ ಹೆಚ್ಚು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು.
ಪರಿಣಾಮಕಾರಿ ಬಳಕೆ ಕ್ರಮ:
ಕೀಟ ನಿಯಂತ್ರಣ ಮತ್ತು ರೋಗ ನಿಯಂತ್ರಣಕ್ಕೆ ಮತ್ತು ಪೋಶಕಾಂಶ ಪೂರೈಕೆಗಾಗಿ ನಾವು ಈ ತನಕವೂ ಅನುಸರಿಸಿಕೊಂಡು ಬಂದ ಕ್ರಮ ಹೆಚ್ಚು ಪರಿಣಾಮಕಾರಿ ಅಲ್ಲ ಎನ್ನಬಹುದು. ವರ್ಷದಿಂದ ವರ್ಷಕ್ಕೆ ಇವುಗಳ ಬಳಕೆ ಹೆಚ್ಚಿಸುತ್ತಾ ಬರುವುದು ಅಲ್ಲ. ಅದನ್ನು ಕಡಿಮೆಮಾಡುತ್ತಾ ಬರಬೇಕು. ಹಾಗೆಂದು ಬೆಳೆಯಲ್ಲಿ ಇಳುವರಿ ಕಡಿಮೆಯಾಗಬಾರದು. ರಾಸಾಯನಿಕ ಗೊಬ್ಬರ ಕೀಟನಾಶಕ ರೋಗನಾಶಕಗಳಲ್ಲಿ ಸಾಕಷ್ಟು ಉಳಿತಾಯವೂ ಆಗಬೇಕು. ಕಳೆದ ಇದಾರು ವರ್ಷಗಳಲ್ಲಿ ಎಲ್ಲಾ ನಮೂನೆಯ ಕೀಟನಾಶಕ , ರೋಗನಾಶಕಗಳ ಬೆಲೆ ದುಪ್ಪಟ್ಟು ಹೆಚ್ಚಾಳವಾಗಿದೆ. ರಾಸಾಯನಿಕ ಗೊಬ್ಬರಗಳ ಬೆಲೆಯೂ ಹೆಚ್ಚುತ್ತಲೇ ಇದೆ. ಸಾವಯವ ಗೊಬ್ಬರಗಳಾದ ಹಿಂಡಿ ಗೊಬ್ಬರಗಳೂ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿವೆ. ಈಗ ನಮ್ಮಲ್ಲಿ ಶೇ. 1-2 ರಷ್ಟು ಮಾತ್ರ ಸಾವಯವ ಕೃಷಿಕರು ಇದ್ದಾಗಲೇ ಈ ಪರಿಯಲ್ಲಿ ಸಾವಯವ ಮೂಲದ ಪೋಷಕಗಳ ಬೆಲೆ ಏರಿಕೆಯಾದರೆ ಇನ್ನೂ ಹೆಚ್ಚು ಹೆಚ್ಚು ಜನ ಸಾವಯವ ಕೃಷಿಯನ್ನೇ ಮಾಡಿದರೆ ಹೊಲದಲ್ಲಿ ಬರುವ ಆದಾಯವೆಲ್ಲಾ ಗೊಬ್ಬರ ಖರೀದಿಗೇ ಮೀಸಲಿಡಬೇಕಾದೀತು!.
 
ಕೃಷಿಕರು ಆದಷ್ಟು ಕೃತಕ ರಾಸಾಯನಿಕ ಗೊಬ್ಬರಗಳನ್ನೇ ಅವಲಂಭಿಸಿದರೆ ಮುಂದಕ್ಕೆ ಉಂಟಾಗುವ ಸಮಸ್ಯೆಯೆಂದರೆ ಅವುಗಳ ಲಭ್ಯತೆ. ಔದ್ಯಮಿಕ ಕ್ರಾಂತಿ ಪರಿಣಾಮದಿಂದ ಪ್ರಾರಂಭವಾದ ರಸಗೊಬ್ಬರಗಳು ಮೊದ ಮೊದಲು ಹೆರಳವಾಗಿ , ಅಗ್ಗದಲ್ಲಿ ದೊರೆಯುತ್ತಿತ್ತು. ಈಗ ಪೊಟ್ಯಾಶಿಯಂ ಮತ್ತು ರಂಜಕ ಗೊಬ್ಬರಗಳನ್ನು ಒದಗಿಸುವ ಖನಿಜ ಮೂಲ ಬರಿದಾಗಲಾರಂಭಿಸಿದೆ. ಅದೇ ರೀತಿಯಲ್ಲಿ ಸಾರಜನಕ ಉತ್ಪಾದನೆಯಾಗುವ ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲು ಸಹ ಮುಗಿದು ಹೋಗುವ ಸಂಪನ್ಮೂಲ. ಇದರಿಂದಾಗಿ ಈ ಉತ್ಪನಗಳ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುತ್ತದೆ. ಇದರ ಅವಲಂಭನೆ ಕಡಿಮೆ ಮಾಡುವುದರಿಂದ ಮಾತ್ರ ರೈತರು ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಸಾಧ್ಯ.
 
ರೈತರಿಗೆ ಇರುವ ಏಕೈಕ ಉಪಾಯ ಎಂದರೆ ಬಳಸುವ ಕೀಟನಾಶಕ, ರೋಗ ನಾಶಕ ಮತ್ತು ರಸಗೊಬ್ಬರಗಳನ್ನು ಕಡಿಮೆ ಮಾಡಿ ಹೆಚ್ಚು ಪರಿಣಾಮಕಾರಿಯಾಗಿ ಬಳಸುವುದು ಒಂದೇ. ಭಾರತ ಸರಕಾರದ ಕೃಷಿ ಮಂತ್ರಾಲಯವು ಪ್ರಕಟಿಸುವ ಟಿ ವಿ. ಜಾಹೀರಾತಿನಂತೆ, ಬೇಸಾಯ ಮಾಡುವಾಗ ಸ್ವಲ್ಪ ಬುದ್ದಿವಂತಿಕೆಯನ್ನು ಉಪಯೋಗಿಸುವುದರಿಂದ ಮಾತ್ರ ಸಾಕಷ್ಟು ಶ್ರಮ, ಹಣ ಉಳಿತಾಯ ಮಾಡಿ ಬೇಸಾಯದಲ್ಲಿ ಲಾಭ ಸಾಧಿಸಬಹುದು.
 
ಇಂತಹ ಬುದ್ದಿವಂತಿಕೆಗಳಲ್ಲಿ ಒಂದು ಅವಷ್ಯವಿದ್ದಾಗ ಮಾತ್ರ ಇವುಗಳ ಬಳಕೆ ಮಾಡುವುದು. ನಮ್ಮ ಹೆಚ್ಚಿನ ರೈತರು ಬೆಳೆಗೆ ಅವಶ್ಯಕತೆ ಇದೆಯೋ ಇಲ್ಲವೋ ಎಂದು ತಿಳಿದು ಕೊಳ್ಳದೆ ಇವುಗಳನ್ನು ಬಳಕೆ ಮಾಡುತ್ತಾರೆ. ಮಣ್ಣಿಗೆ ಹಾಕಿದ ಪೋಷಕಾಂಶಗಳು ಎಲ್ಲವೂ ಆ ಬೆಳೆಯಿಂದಲೇ ಕಡಿಮೆಯಾಗುವುದಿಲ್ಲ. ಸ್ವಲ್ಪ ಪ್ರಮಾಣ ಮಣ್ಣಿನಲ್ಲಿ ಉಳಿದು ಕೊಂಡಿರುತ್ತದೆ. ಹಲವಾರು ವರ್ಷ ಬೇಸಾಯ ಮಾಡಿದ ಸ್ಥಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಉಳಿದುಕೊಂಡಿರುತ್ತವೆ. ಆದು ಮಣ್ಣಿನ ಯಾವುದಾದರೂ (ಆಮ್ಲೀಯ ಅಥವಾ ಕ್ಷಾರೀಯ)ಅಜೀರ್ಣ ಸ್ಥಿತಿಯಿಂದಾಗಿ ಬೆಳೆಗೆ ಲಭ್ಯವಾಗದಿರಬಹುದು. ಅದನ್ನು ಸರಿಮಾಡಿಕೊಂಡರೆ ಪೋಶಕಾಂಶದ ಉಳಿತಾಯ ಮಾಡಬಹುದು. ಪೋಶಕಾಂಶಗಳ ಸಾಲಿನಲ್ಲಿ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಕೇವಲ ಮುಖ್ಯ ಪೋಶಕಾಂಶಗಳಾದ ಸಾರಜನಕ ರಂಜಕ ಮತ್ತು ಪೋಟ್ಯಾಷಿಯಂ ಅಲ್ಲದೆ ಲಘು ಪೊಷಕಾಂಶಗಳೂ ಮಹತ್ವ ಪಡೆಯುತ್ತಿವೆ.
 
 
ಬಹುಷಃ ಈಗ ಮುಖ್ಯ ಪೊಷಕಾಂಶಗಳಿಗಿಂತ ದೊಡ್ಡ ಪ್ರಮಾಣದಲ್ಲಿ ಇದರ ವ್ಯವಹಾರ ನಡೆಯುತ್ತಿದೆ ಎನ್ನಬಹುದು. ಮಣ್ಣಿಗೆ ಎಲೆಗೆ ಹೀಗೆ ಸಾಕಷ್ಟು ಪ್ರಮಾಣದಲ್ಲಿ ಇದರ ಬಳಕೆಯಾಗುತ್ತಿವೆ. ಇದನ್ನೂ ಸಹ ಮಣ್ಣು ಪರೀಕ್ಷೆ ಮಾಡಿಸಿ ಅವಷ್ಯವಿದ್ದರೆ ಮಾತ್ರ ನೀಡಿದರೆ ಸಾಕು. ರಸಗೊಬ್ಬರಗಳನ್ನು ಮಣ್ಣಿಗೆ ಸೇರಿಸುವುದು ಸಾಂಪ್ರದಯಿಕ ಕ್ರಮ. ಇದರಲ್ಲಿ ಈಗ ಸುಧಾರಣೆಯಾಗಿದೆ. ಅದುವೇ ಎಲೆಗಳಿಗೆ ಸಿಂಪರಣೆ.
 
ಸಿಂಪರಣೆಯ ಮೂಲಕ ಗೊಬ್ಬರ ಉಣಿಸಿದಾಗ ಪ್ರಮಾಣದಲ್ಲಿ 50 % ಉಳಿಸಬಹುದು. ಇನ್ನೂ ಮುಂದುವರಿದು ಹೇಳಬೇಕೆಂದರೆ ಪೊಷಕಾಂಶಗಳನ್ನು ನೀರಾವರಿಯ ಮೂಲಕ ದಿನಾಲೂ ಉಣಿಸುವಿಕೆ. ಈಗ ಇದಕ್ಕೆ ನೆರವಾಗುವ ಹನಿ ನೀರಾವರಿ ವ್ಯವಸ್ಥೆಗಳು ಇವೆ. ನೀರಿನಲ್ಲಿ ಕರಗುವ ಗೊಬ್ಬರಗಳು ಮಹತ್ವ ಪಡೆಯುತ್ತಿವೆ. ವರ್ಷದಲ್ಲಿ ಬೆಳೆಯೊಂದಕ್ಕೆ ನೀಡಬೇಕಾದ ಪೊಶಕಾಂಶವನ್ನು ವಿಭಜಿಸಿ ಅದನ್ನು ದಿನದ ಕಂತುಗಳಲ್ಲಿ ನೀಡುವ ಮೂಲಕ ಸಾಕಷ್ಟು ಗೊಬ್ಬರ ಉಳಿತಾಯ ಮಾಡಬಹುದು. ಮಣ್ಣಿಗೆ ಬಳಸುವುದಕ್ಕಿಂತ ಕಡಿಮೆ ಪ್ರಮಾಣ ಸಾಕಾಗುತ್ತದೆ ಮತ್ತು ಮಣ್ಣಿನ ಮೂಲಕ ನೀಡಿದ್ದಕ್ಕಿಂತ ಹೆಚ್ಚು ಫಲಪ್ರದವಾಗಿರುತ್ತದೆ. ಕೆಲವು ಅಲ್ಪ ಕಾಲಿಕ ಬೆಳೆಗಳಿಗೆ ಇದು ದುಬಾರಿಯೆನಿಸಿದರೂ ವಾರ್ಷಿಕ ಬಹು ವಾರ್ಷಿಕ ಬೆಳೆಗಳಿಗೆ ಮಿತವ್ಯದ ದೃಷ್ಟಿಯಿಂದ ಉತ್ತಮ. ನಮ್ಮಲ್ಲಿ ಇತ್ತೀಚೆಗೆ ರಾಸಾಯನಿಕಗಳನ್ನು ಬಳಸಿ ಬಳಸಿ ಮಣ್ಣು ಫಲವತ್ತತೆ ಕಳೆದು ಕೊಂಡಿದೆ, ವರ್ಷ ವರ್ಷ ಹೆಚ್ಚು ಹೆಚ್ಚು ಬಳಸುತ್ತಾ ಬರಬೇಕು.
 
 
ಇದೆಲ್ಲಾ ಕೃಷಿಯನ್ನು ನಷ್ಟಕ್ಕೀಡುಮಾಡುತ್ತಿವೆ ಎಂಬ ಕೂಗು ಕೇಳಿಬರುತ್ತಿದೆ. ವಾಸ್ತವವಾಗಿ ರಾಸಾಯನಿಕಗಳನ್ನು ಸಮತೋಲನದಲ್ಲಿ ಬಳಸದೇ, ಮಣ್ಣಿನ ಅವಶ್ಯಕತೆಗನುಗುಣವಾಗಿ ಬಳಸದೇ ಹೀಗಾಗಿರುತ್ತದೆ. ಎಷ್ಟು ಅವಷ್ಯಕವೋ ಅಷ್ಟನ್ನೇ ಸಮತೋಲನದಲ್ಲಿ ಬಳಸಿದರೆ ಶಿಫಾರಿತ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿದರೂ ಇಳುವರಿಯಲ್ಲಿ ವ್ಯತ್ಯಾಸವಾಗುವುದಿಲ್ಲ. ನಮ್ಮಲ್ಲಿ 80 % ರೈತರಿಗೆ ಮಣ್ಣು ಪರೀಕ್ಷೆ ಮಾಡಿಸುವುದು ಗೊತ್ತಿಲ್ಲ. ಶಿಫಾರಿತ ಪ್ರಮಾಣದ ಬಗ್ಗೆ ತಿಳಿದಿಲ್ಲ. ಈ ಸೌಲಭ್ಯಗಳನ್ನು ರೈತರ ಮನೆಬಾಗಿಲಿನ ವರೆಗೆ ತಲುಪಿಸಿ ಬೇಸಾಯದ ಖರ್ಚನ್ನು ಕಡಿಮೆಮಾಡುವ ಶಿಕ್ಷಣನೀಡಬಹುದು. ನಿಜವಾಗಿಯೂ ಮಣ್ಣೂ ಪರೀಕ್ಷೆ ಮತ್ತು ಸಮತೋಲನದ ಶಿಫಾರಿತ ಗೊಬ್ಬರ ನೀಡಿದರೆ ಮಣ್ಣೂ ಹಾಳಾಗಲಾರದು, ವರ್ಷದಿಂದ ವರ್ಷಕ್ಕೆ ಬಳಕೆ ಪ್ರಮಾಣ ಹೆಚ್ಚು ಮಾಡುವುದೂ ಬೇಕಾಗಿಲ್ಲ.
ಇನ್ನು ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳ ಬಳಕೆಯ ವಿಧಾನ ಸರಿಯಿಲ್ಲದೆ ನಾವು ಸಾಕಷ್ಟು ನಷ್ಟ ಮಾಡಿಕೊಳ್ಳುತ್ತಿದ್ದೇವೆ. ಮೊದಲೇ ಹೇಳಿದಂತೆ ಬದಲಾಯಿಸುವುದಕ್ಕಿಂತ ಉತ್ತಮ ಪರಿಹಾರ ದೊರೆಯುವ ವರೆಗೆ ಇರುವುದರಲ್ಲೇ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು. ವಿಷ ಪೂರಿತ ಕೀಟನಾಶಕ ಶಿಲೀಂದ್ರ ನಾಶಕಗಳು ಒಳ್ಳೆಯದಲ್ಲ ನಿಜ. ಬೆಂಕಿಯನ್ನು ಸುಡುತ್ತದೆ ಎಂಬ ಪರಿಜ್ಞಾನದಲ್ಲಿ ಉಪಯೋಗಿಸಬೇಕು. ಸಂದರ್ಭೊಚಿತವಾಗಿ ಸರಿಯಾದ ಕ್ರಮದಲ್ಲಿ ಬಳಕೆ ಮಾಡಬೇಕು.
 
ನಮ್ಮ ರೈತರು ಕೀಟನಾಶಕವಾಗಲೀ ಶಿಲೀಂದ್ರ ನಾಶಕವನ್ನಾಗಲೀ ಅಥವಾ ಸಿಂಪರಣಾ ಪೋಶಕಾಂಶಗಳನ್ನಾಗಲೀ ಬಳಕೆ ಮಾಡುವ ಕ್ರಮ ಸರಿಯಿಲ್ಲ. ಕೀಟ, ರೋಗ ಬಂದಾಗ ಬೆಳೆಯ ಎಲೆಗಳು ಹೂವುಗಳ ಮೇಲ್ಭಾಗಕ್ಕೇ ಸಿಂಪರಣೆ ಕೈಗೊಳ್ಳುತ್ತೇವೆ. ಹೆಚ್ಚಾಗಿ ಕೀಟಾಣುಗಳು, ರೋಗಾಣುಗಳು ಎಲೆ ಅಥವಾ ಹೂವುಗಳ ಅಡಿಭಾಗದಲ್ಲಿ ವಾಸವಾಗಿರುವುದು ಕ್ರಮ. ನಾವು ಸಿಂಪರಣೆಯನ್ನು ಮೇಲ್ಭಾಗದಲ್ಲಿ ಮಾಡಿ ತೃಪ್ತಿ ಪಟ್ಟುಕೊಳ್ಳುತ್ತೇವೆ. ಇದರಿಂದಾಗಿ ಸ್ವಲ್ಪ ಪ್ರಮಾಣದಲ್ಲಿ ಕೀಟಗಳು ಮತ್ತು ರೋಗಗಳು ಕಡಿಮೆಯಾದರೂ ಪೂರ್ಣ ದೂರವಾಗುವುದಿಲ್ಲ. ಹೆಚ್ಚಾಗಿ ಈ ಜೀವಿಗಳು ಸುರಕ್ಷಿತ ಜಾಗದಲ್ಲೇ ಕುಳಿತಿರುತ್ತವೆ. ಅಲ್ಲಿಗೇ ಗುರಿಯಾಗಿಸಿ ಸಿಂಪರಣೆಯನ್ನು ಕೈಗೊಳ್ಳಬೇಕು. ಮೇಲ್ಭಾಗದಲ್ಲಿ ಸಿಂಪಡಿಸುವ ಬದಲಿಗೆ ಎಲೆಯ ಅಡಿಭಾಗಕ್ಕೆ ಬೀಳುವಂತೆ ಕೆಳಮುಖವಾಗಿ ಸಿಂಪರಣಾ ಸಾಧನದ ನಾಸಲ್ ಅನ್ನು ಹಿಡಿದರೆ ಅದು ತಲುಪಬೇಕಾದಲ್ಲಿಗೆ ಸಮರ್ಪಕವಾಗಿ ತಲುಪುತ್ತದೆ. ನಾಲ್ಕಾರು ಬಾರಿ ಸಿಂಪರಣೆ ಕೈಗೊಳ್ಳುವ ಬದಲು ಒಂದೆರಡು ಬಾರಿ ಸಿಂಪಡಿಸಿದರೆ ಸಾಕಾಗುತ್ತದೆ. ಇದರಿಂದ ಔಷಧಿಯ ಬಳಕೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ, ಆಹಾರದಲ್ಲಿ ವಿಷ ಸೇರಿಕೊಳ್ಳುವ ಪ್ರಮಾಣವೂ ಕಡಿಮೆಯಾಗುತ್ತದೆ.
 
 
ಹೆಚ್ಚು ಹೆಚ್ಚು ಕೀಟನಾಶಕ ಶಿಲೀಂದ್ರ ನಾಶಕ ಬಳಕೆ ಮಾಡುವುದರಿಂದ ಅದರ ತಯಾರಿಕಾ ಸಂಸ್ಥೆಯನ್ನು ನಾವು ಉದ್ದಾರ ಮಾಡಿದಂತಾಗುತ್ತದೆಯೇ ವಿನಹ ನಮಗೆ ಅದರಿಂದ ಯವುದೇ ಲಾಭವಿಲ್ಲ. ದ್ರವ ರೂಪದ ಪೋಷಕಾಂಶಗಳನ್ನೂ ಸಹ ಹೆಚ್ಚು ಎಲೆಗಳ ಅಡಿಭಾಗಕ್ಕೆ ಬೀಳುವಂತೆ ಸಿಂಪರಣೆ ಕೈಗೊಳ್ಳಬೇಕು. ಸಸ್ಯಗಳಲ್ಲಿ ಉಸಿರಾಟದ ಭಾಗ( ಸ್ಟೊಮಾಟೋ) ಇರುವುದು ಎಲೆಗಳ ಆಡಿಭಾಗದಲ್ಲಿ. ಅಲ್ಲಿಂದಲೇ ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ. ಅದರಲ್ಲೂ ಕೀಟನಾಶಕ ಸಿಂಪರಣೆಯನ್ನು ಮೋಡ ಕವಿದ ವಾತವರಣ ಇರುವಾಗ ಸಿಂಪರನೆ ಮಾಡಬೇಕು. ನಿಮ್ಮ ಸಿಂಪರಣೆ ಹೆಚ್ಚು ಫಲಪ್ರದವಾಗಲು ಎಲೆಗಳ ಅಡಿ ಭಾಗಕ್ಕೆ ಬೀಳುವಂತೆ ಸಿಂಪಡಿಸಬೇಕು. ಉತ್ತರ ಕರ್ನಾಟಕದ ಭತ್ತ ಬೆಳೆಯುವ ಜಿಲೆಗಳಲ್ಲಿ ಮತ್ತು ಮಂಡ್ಯ, ಮೈಸೂರು ಮುಂತಾದೆಡೆ ಭತ್ತದ ಹೊಲದಲ್ಲಿ ನಾಟಿಮಾಡುವಾಗ ಸುಮಾರು ಮೂರು ಮೀಟರಿಗೋಂದರಂತೆ ಒಂದು ಅಡಿಯಷ್ಟು ಖಾಲಿ ಬಿಡಲಾಗುತ್ತದೆ. ಇದು ಸಿಂಪರಣೆ ಮತ್ತು ಇತರ ಕೆಲಸಗಳಿಗೆ ಅನುಕೂಲವಾಗಲೆಂದು ಇರುವಂತದ್ದು. ಈ ಸ್ಥಳಾವಕಾಶದ ಮೂಲಕ ಸಿಂಪರಣೆ ಮಾಡುವ ಸಾಧನದ ನಾಸಲ್ ಅನ್ನು ಪೈರಿನ ಎಲೆ ಅಡಿ ಭಾಗ ಮತ್ತು ಕಾಂಡಕ್ಕೆ ಬೀಳುವಂತೆ ಹಿಡಿದುಕೊಂಡು ಹೋದರೆ ಕೀಟ ರೋಗ ನಿಯಂತ್ರಣ ಪರಿಣಾಮಕಾರಿಯಾಗುತ್ತದೆ. ಅದಕ್ಕಾಗಿಯೇ ಈ ಅವಕಾಶವನ್ನು ಬಿಡಲಾಗಿದೆಯಾದರೂ ಯಾರೂ ಆ ರೀತಿ ಸಿಂಪರಣೆ ಮಾಡದೆ, ಪೈರಿನ ಮೇಲುಭಾಗಕ್ಕೆ ಬೀಳುವಂತೆ ಸಿಂಪರಣೆ ಮಾಡುತ್ತಾರೆ.
ರೋಗ ಕೀಟ ನಾಶಕ ಬಳಕೆಯನ್ನು ಯಾವಾಗ ಮಾಡಬೇಕು ಮತ್ತು ಯಾವಾಗ ಮಾಡಬಾರದು ಎಂಬುದೂ ಅತೀ ಪ್ರ್ರಾಮುಖ್ಯ. ಯಾವಾಗಲೂ ಮೋಡ ಕವಿದ ವಾತಾವರಣ, ಹೆಚ್ಚು ತೇವಾಂಶ( ಮಳೆ, ಇಬ್ಬನಿ ) ಈ ಸಮಯದಲ್ಲಿ ಕೀಟಗಳಾಗಲೀ ರೋಗಕಾರಕಗಳಾಗಲೀ ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ. ಆ ಸಮಯದಲ್ಲಿ ಅದಕ್ಕೆ ಸಿಂಪರಣೆ ಕೈಗೊಳ್ಳಬೇಕು. ಸಮಯ ನೊಡದೆ ಬಳಕೆ ಮಾಡುವುದರಿಂದ ಔಷಧಿ ಅನವಶ್ಯಕ ನಷ್ಟ ಮತ್ತು ಉದ್ದೇಶ ಈಡೇರುವುದಿಲ್ಲ. ಹೆಚ್ಚು ಬಿಸಿಲಿರುವಾಗ, ಬೆಳಗ್ಗಿನ ಹೊತ್ತಿನಲ್ಲಿ ಕೀಟನಾಶಕವನ್ನಾಗಲೀ, ಶಿಲೀಂದ್ರ ನಾಶಕವನ್ನಾಗಲೀ, ದ್ರವ ಗೊಬ್ಬರಗಳನ್ನಾಗಲೀ ಸಿಂಪರಣೆ ಮಾಡಿದರೆ ಲಾಭಕ್ಕಿಂತ ನಷ್ಟ ಹೆಚ್ಚು.
ಯಾವಾಗಲೂ ಪ್ರಭಲ ಔಷಧಿಯನ್ನೇ ಮೊದಲು ಬಳಕೆ ಮಾಡಬಾರದು. ಕೀಟನಾಶಕ, ಶಿಲೀಂದ್ರ ನಾಶಕಗಳಲ್ಲಿ ಸ್ಪರ್ಶ ಮತ್ತು ಅಂತರ್ವಾಯಪಿ ಎಂಬ ವಿಧಗಳಿವೆ. ಮೊದಲೇ ಅಂತರ್ವಾಯಪಿ ಔಷಧಿಗಳನ್ನು ಬಳಸುವುದಲ್ಲ. ಸ್ಪರ್ಶ ಮತ್ತು ಹೆಚ್ಚು ಪ್ರಭಲವಲ್ಲದ್ದನ್ನು ಬಳಕೆ ಮಾಡಿ ಅನಿವಾರ್ಯವಾದರೆ ಮಾತ್ರ ಮುಂದಿನದ್ದಕ್ಕೆ ಹೋಗಬೇಕು. ಹೆಚ್ಚು ಪ್ರಭಲ ಔಷಧಿ ಬಳಕೆ ಮಾಡಿದರೆ ನಂತರ ಅದಕ್ಕೂ ಜೀವಿಗಳು ನಿರೋಧಕ ಶಕ್ತಿ ಪಡೆದು ಅದಕ್ಕಿಂತ ಹೆಚ್ಚು ಪ್ರಭಲತೆಯ ಔಷಧಿ ಬೇಕಾಗುತ್ತದೆ. ಹೆಚ್ಚು ಪ್ರಭಲ ಔಷಧಿಯಾದಂತೆ ಅದಕ್ಕೆ ಬೆಲೆಯೂ ಹೆಚ್ಚು ಇರುತ್ತದೆ. ನಮ್ಮಲ್ಲಿ ಹೆಚ್ಚು ಹೆಚ್ಚು ಪ್ರಭಲ, ಅತಿ ಪ್ರಭಲ ಕೀಟ, ರೋಗ ಔಷಧಿಗಳು ಪರಿಚಯಿಸಲ್ಪಡಲು ಕಾರಣವೇ ನಮ್ಮ ತಿಳುವಳಿಕೆ ರಹಿತ ಔಷಧಿ ಬಳಕೆ. ಕೀಟಗಳು, ರೋಗಕಾರಕಗಳು ಸೌಮ್ಯ ಔಷಧಿಗಳಿಗೆ ನಿರೋಧಕ ಶಕ್ತಿ ಪಡೆಯುತ್ತಿವೆ. ರೋಗ ನಾಶಕವಾಗಿರಲಿ, ಕೀಟನಾಶಕವಾಗಿರಲಿ ಅದನ್ನು ಶಿಫಾರಿತ ಪ್ರಮಾಣದಷ್ಟನ್ನೇ ಬಳಕೆ ಮಾಡಬೇಕು. ಸ್ವಲ್ಪ ಕಡಿಮೆಯಾದರೂ ನಡೆಯುತ್ತದೆ. ಆದರೆ ಹೆಚ್ಚಾಗಬಾರದು. ಹೆಚ್ಚಾದಂತೆ ಅದಕ್ಕೆ ಜೀವಿಗಳು ನಿರೋಧಕ ಶಕ್ತಿ ಪಡೆಯುತ್ತವೆ.
 
 
ಮೂರನೇ ತಲೆಮಾರಿನ ಹೊಸ ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳು ಅತೀ ಕಡಿಮೆ ಪ್ರಮಾಣದಲ್ಲಿ (%0.005, 1/2 ಮಿಲಿ ಮತ್ತು 1 ಲೀ.) ಬಳಸುವಂತದ್ದಾಗಿದ್ದು ಅದನ್ನು ಬಲು ಜಾಗರೂಕತೆಯಿಂದ ಬಳಸಬೇಕು. ಹೆಚ್ಚು ಪ್ರಮಾಣದಲ್ಲಿ ಬಳಸಿದ ಕಾರಣ ಈಗ 1/2 ಮಿ.ಲಿ ಶಿಫಾರಸು 1 ಮಿಲಿ ಗೆ ಏರಿದೆ. ಕೀಟನಾಶಕ , ಶಿಲೀಂದ್ರನಾಶಕ, ರಸಗೊಬ್ಬರ ಮುಂತಾದವುಗಳನ್ನು ಬಳಸದೆಯೇ ಸಮಾಜಕ್ಕೆ ಆರೋಗ್ಯಕರ ಆಹಾರ ನೀಡಬೇಕಾಗಿಲ್ಲ. ಒಂದು ವೇಳೆ ಹಾಗೇನಾದರೂ ಆದರೆ ರೈತ ಬೇಸಾಯಕ್ಕೆ ಬೇಕಾದ ಒಳಸುರಿಗಳನ್ನು ಹೊಂದಿಸಲಾರದೆ ಬೇಸಾಯ ಬಿಡಬಹುದು. ವಿವೇಚನೆಯಿಂದ ಕನಿಷ್ಟ ಪ್ರಮಾಣದಲ್ಲಿ ಅದನ್ನು ಬಳಕೆ ಮಾಡಿದರೆ ಉತ್ಪನ್ನಗಳಲ್ಲಿ ಉಳಿಕೆಗಳು ಇರಲಾರದು. ರೈತರ ಕೈಗೆ ವಿಷ ಕೊಟ್ಟಾಗಿದೆ. ಅದರ ಫಲವನ್ನು ಅವರು ನೋಡಿಯಾಗಿದೆ. ಇನ್ನು ಅವರಿಂದ ಅದನ್ನು ಬಿಡಿ ಎಂದರೆ ಬಿಟ್ಟಾರೆಯೇ? ಖಂಡಿತವಾಗಿಯೂ ಬಿಡಲಾರರು. ಅವರಿಗೆ ಸಮರ್ಪಕ ಬಳಕೆಯ ಕ್ರಮ ಮತ್ತ್ತು ಅದರಿಂದಾಗುವ ಉಳಿತಾಯವನ್ನು ಮನವರಿಕೆ ಮಾಡಿಕೊಟ್ಟೆ ಅದರಿಂದ ಸ್ವಲ್ಪ ಸ್ವಲ್ಪವೇ ಹಿಂದೆ ಬರುವತೆ ಮಾಡಬೇಕು. ಇದಕ್ಕೆ ನಮ್ಮ ಕೃಷಿಕರಿಗೆ ಪುನರಪಿ ಕೃಷಿ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ. ಕೃಷಿ ಜ್ಞಾನ ಉಳ್ಳವರಿಗೇ ಕೃಷಿ ಒಳಸುರಿ ಮಾರಾಟಕ್ಕೆ ಅನುಮತಿ ನೀಡಬೇಕಾಗಿದೆ. ಕೃಷಿಕರಿಗೆ ಶಿಕ್ಷಣ ನೀಡುವವರೂ ಒಂದಷ್ಟು ತಮ್ಮ ಕಲಿಕೆ ಜ್ಞಾನವನ್ನು ಮೇಲ್ದರ್ಜೆಗೇರಿಸಬೇಕಾಗಿದೆ.
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here