ಬಾಲ ರಾಮನ ಲೀಲೆಗಳು ಶ್ರೀಕೃಷ್ಣನ ಬಾಲಲೀಲೆಗಳಿಗೆ ಹೊಲಿಕೆ ಕಾಣುತ್ತಿದ್ದವು!

0
952

ನಿತ್ಯ ಅಂಕಣ: 36

ಈಶ್ವರ್ ಐಯ್ಯರ್ ಅವರು ವೃತ್ತಿಯಲ್ಲಿ ವಕೀಲರು, ಅದಲ್ಲದೆ ಜಮಿನ್ದಾರರು ಹೌದು. ಎಲ್ಲಾ ಮೂಲಗಳಿಂದಲೂ ಬಹಳಷ್ಟು ಆದಾಯವು ಅವರಿಗೆ ಬರುತಿತ್ತು. ಬಂದ ಹಣವನ್ನು ಕೂಡಿಡದೇ ಧರ್ಮ ಕಾರ್ಯಗಳನ್ನು ಅವರು ಮಾಡುತ್ತಿದ್ದರು. ಈಶ್ವರ ಐಯ್ಯರರು ಶ್ರೀಮಂತ ವ್ಯಕ್ತಿ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿತ್ತು. ಈ ಎಲ್ಲಾ ವಿಚಾರ ಬಲ್ಲ, ಹಾವಾಡಿಗರ ತಂಡವೊಂದು ಈಶ್ವರ ಐಯ್ಯರ್ ಅವರನ್ನು ಮೋಸಗೊಳಿಸಿ ಹಣ ಸಂಪಾದಿಸಲು ಯೋಚಿಸಿತು. ಈ ಹಾವಾಡಿಗರ ತಂಡವು ಊರಿನ ಮನೆಗಳಲ್ಲಿ ಹಾವುಗಳನ್ನು ತಂದು ಬಿಡುವುದು, ನಂತರ ಮನೆಯವರಿಂದ ಕರೆ ಬಂದಾಗ, ಹಾವುಗಳನ್ನು ಹಿಡಿದು ಬೇರೆಡೆ ಬೀಡುವುದು. ಮನೆಯವರಿಂದ ಹಣಪಡೆದು, ಮೋಸದ ನಾಟಕ ಮಾಡಿಕೊಂಡು ಜೀವಿಸುತ್ತಿದ್ದರು.

ಒಂದು ದಿನ ಹಾವಾಡಿಗರು ಎಲ್ಲಿಂದಲೋ ಹಿಡಿದು ತಂದಿರುವ ವಿಷಪೂರಿತ ಹಾವುಗಳನ್ನು ಹಿಡಿದುಕೊಂಡು, ರಾತ್ರಿಯ ಸಮಯದಲ್ಲಿ ಈಶ್ವರ್ ಐಯ್ಯರ್ ಅವರ ಮನೆಯ ಬಳಿಗೆ ಬಂದರು. ಮನೆಯಲ್ಲಿ ಎಲ್ಲರೂ ಮಲಗಿದ್ದನ್ನು ಖಾತ್ರಿಪಡಿಸಿಕೊಂಡು, ಕಳ್ಳ ಹೆಜ್ಜೆ ಹಾಕುತ್ತ ಈಶ್ವರ್ ಐಯ್ಯರ್ ಅವರ ಮನೆಯ ಅಂಗಳವನ್ನು ಪ್ರವೇಶ ಮಾಡಿದರು. ಮನೆಯ ಮೂಲೆಯಲ್ಲಿ ಹಾವುಗಳನ್ನು ಒಂದೊಂದಾಗಿ ಬಿಟ್ಟು ತೆರಳಿದರು. ಹಾವುಗಳು ತೆವಳುತ್ತ ಹೋಗಿ ಮನೆಯ ಸಂಧಿ ಮೂಲೆಗಳಲ್ಲಿ ಆಶ್ರಯ ಪಡೆದವು. ಆದರೆ ಮೋಸಗಾರ ಹಾವಾಡಿಗರಿಗೆ ತಾವು ಮಾಡುತ್ತಿರುವ ನೀಚಕೃತ್ಯವು ಯಾರೂ ಕಂಡಿಲ್ಲ..! ತಮ್ಮ ನೀಚಕೃತ್ಯ ಯಶಸ್ವಿಯಾಗಿದೆ ಎನ್ನುವ ಭಾವನೆ..! ಆದರೆ ಹಾವಾಡಿಗರ ಮೋಸದ ಕೃತ್ಯವನ್ನು ಬಾಲಕ ರಾಮನು ಮರೆಯಿಂದಲೇ ಎಲ್ಲವನ್ನು ನೋಡಿದ್ದ. ಎಲ್ಲರ ಕಣ್ಣು ತಪ್ಪಿಸ ಬಹುದು, ಆದರೆ ದೇವರ ಕಣ್ಣು ತಪ್ಪಿಸಲಾದಿತೇ..! ವಂಚಕ ಹಾವಾಡಿಗರ ತಂಡದ ನೀಚ ಕೃತ್ಯವನ್ನು ಈಶ್ವರ ಐಯ್ಯರರಿಗೆ ರಾಮ ತಿಳಿಸಲಿಲ್ಲ. ವಿಷಯವನ್ನು ಗುಟ್ಟಾಗಿ ಇಟ್ಟಿದ್ದ.

ರಾಮ ಬೆಳಿಗ್ಗೆ ಎದ್ದ ಕೂಡಲೇ.. ಮನೆಯೊಳಗೆ ಸೇರಿಕೊಂಡಿರುವ ವಿಷಪೂರಿತ ಹಾವುಗಳನ್ನು ಒಂದೊಂದಾಗಿ ಹಿಡಿದು, ಬೆತ್ತದ ಬುಟ್ಟಿಯೊಳಗೆ ಹಾವುಗಳನ್ನು ಹಾಕಿಕೊಂಡು ನದಿಯಾಚೆಯ ಕಾಡಿನಲ್ಲಿ ಅವುಗಳನ್ನು ಬಿಟ್ಟು ಬಂದನು. ಸ್ವಲ್ಪ ಸಮಯ ಕಳೆದ ಬಳಿಕ ಈಶ್ವರ ಐಯ್ಯರ್ ಅವರ ಮನೆಗೆ ಹಾವಾಡಿಗರ ತಂಡದ ಪ್ರವೇಶವಾಯಿತು. ಬಂದವರು ಈಶ್ವರ ಐಯ್ಯರಲ್ಲಿ ನಿಮ್ಮ ಮನೆಯಲ್ಲಿ ವಿಷ ಪೂರಿತ ಹಾವುಗಳು ಬಂದು ನೆಲೆಕಂಡಿವೆ. ಅವುಗಳಿಂದ ನಿಮಗೆ ತೊಂದರೆ ಖಂಡಿತ ಇದೆ..! ಎಂದು ಭಯ ಹುಟ್ಟಿಸಿದರು. ಆತಂಕಗೊಂಡ ಈಶ್ವರ್ ಐಯ್ಯರರು ಮೊದಲು ನೀವು ಇಲ್ಲಿರುವ ಹಾವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಹೇಳಿದರು. ಸಂತೋಷಗೊಂಡ ಹಾವಾಡಿಗರು ತಮ್ಮಲ್ಲಿರುವ ಪೂಂಗಿಯನ್ನು ಊದುತ್ತ.. ಮನೆಯ ಸುತ್ತಲು ತಿರುಗಾಡಿದರು. ಪುಂಗಿಯ ನಾದ ಮೊಳಗಿಸಿದರೂ ಒಂದೂ ಹಾವು ಸಹ ತಲೆ ಎತ್ತಿ, ತಮ್ಮ ಇರುವಿಕೆಯನ್ನು ತೋರಿಸಲಿಲ್ಲ. ಹಾವಾಡಿಗರಿಗೆ ಅಚ್ಚರಿಕಂಡಿತು. ನಾವು ಬಿಟ್ಟಿರುವ ಅಷ್ಟೊಂದು ಹಾವುಗಳು ಎಲ್ಲಿಗೆ ಹೋದವು..!! ಎಂದು ಮನದೊಳಗೆ ತರ್ಕಿಸಿಕೊಂಡರು. ಪುಂಗಿ ಊದಿ ಊದಿ ಸುಸ್ತಾದ ಹಾವಾಡಿಗರು ಪುಂಗಿ ಊದುವುದನ್ನು ನಿಲ್ಲಿಸಿದರು. ಐಯ್ಯರರು ‘ಏಲ್ಲಿದೆಯಪ್ಪ ಹಾವುಗಳು..?’ ಎಂದು ಹಾವಾಡಿಗರನ್ನು ಪ್ರಶ್ನಿಸಿದರು. ಹಾವಾಡಿಗರು ಮಾತ್ರ ಉತ್ತರ ನೀಡಲಾಗದೆ ಸುಮ್ಮನಾದರು. ಹಾವಾಡಿಗರ ವ್ಯರ್ಥ ಪ್ರಯತ್ನ ಕಂಡು ರಾಮ ನಗಲಾರಂಭಿಸಿದ. ರಾಮನ ಅಣುಕು ನಗೆಯಲ್ಲಿ ಏನೋ ಬಾಲ ಲೀಲೆ ಅಡಗಿದೆ ಎಂದು ಈಶ್ವರ್ ಐಯ್ಯರ್ ಅವರು ಮನಗಂಡರು.

ಹಾವಾಡಿಗರೇ… ನೀವು ಬಹಳಷ್ಟು ಕಡೆಗಳಲ್ಲಿ ಇದೇ ರೀತಿ ಮೋಸಮಾಡಿ ನಮ್ಮಲ್ಲಿಗೆ ಬಂದ್ದೀರಿ. ನಿಮ್ಮ ಮೋಸದಾಟ ಇಲ್ಲಿ ನಡೆಯುದಿಲ್ಲ..! ನೀವು ಬರುವ ಮೊದಲೇ ನೀವು ರಾತ್ರಿಯ ಸಮಯದಲ್ಲಿ ಬಿಟ್ಟು ಹೋಗಿರುವ ಹಾವುಗಳನ್ನು ನಾನು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದೇನೆ. ಈಗ ನಿಮ್ಮ ಮೋಸಗಾರಿಕೆ ವಿಫಲವಾಗಿದೆ. ಇಂದೇ ಕೊನೆ..! ಮೋಸದಬುದ್ದಿ ಬಿಟ್ಟು ಪ್ರಮಾಣಿಕತನದಿಂದ ದುಡಿಮೆ ಮಾಡಿ ಬದುಕಲು ಕಲಿಯಿರಿ. ಎಂದು ರಾಮ ಹಾವಾಡಿಗರಿಗೆ ಬುದ್ಧಿ ಮಾತುಗಳನ್ನು ಹೇಳಿದ. ಸತ್ಯ ವಿಚಾರ ತಿಳಿದ ಬಳಿಕ ಹಾವಾಡಿಗರು ಈಶ್ವರ ಐಯ್ಯರ್ ಅವರ ಬಳಿ ಕ್ಷಮೆಯಾಚಿಸಿ ಮುಂದೆ ಸಾಗಿದರು. ರಾಮನು ಯಾರಿಗೂ ತಿಳಿಯದಂತೆ ಮಾಡಿದ ಸಾಹಸಗಾಥೆ ಕೇಳಿ ಈಶ್ವರ ಐಯ್ಯರರು ಬೆರಗಾದರು. ಸಾಹಸವನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದರು. ಬಾಲಕನಾಗಿರುವಾಗ (ರಾಮನ್) ನಿತ್ಯಾನಂದರ ಲೀಲೆಗಳು ಶ್ರೀಕೃಷ್ಣನ ಬಾಲಲೀಲೆಗಳಿಗೆ ಹೊಲಿಕೆ ಕಾಣುತ್ತಿದ್ದವು.

Advertisement

ತಾರಾನಾಥ್‌ ಮೇಸ್ತ,ಶಿರೂರು.

LEAVE A REPLY

Please enter your comment!
Please enter your name here