ಬಾಂಬ್ ಬ್ಲಾಸ್ಟ್ – 100ಕ್ಕೂ ಅಧಿಕ ಸಾವು

0
224

ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ
ನ್ಯೂಸ್ ಬ್ಯುರೋ ವಾರ್ತೆ.ಕಾಂ
ಪಾಕಿಸ್ತಾನದ ಸೂಫಿ ದರ್ಗಾದ ಮೇಲೆ ಉಗ್ರರ ಅಟ್ಟಹಾಸ ನಡೆದಿದೆ. ದರ್ಗಾದಲ್ಲಿ ನಡೆದ ಆತ್ಮಾಹುತಿ ದಾಳಿಗೆ 100 ಕ್ಕೂ ಹೆಚ್ಚುಮಂದಿ ಸಾವನ್ನಪ್ಪಿರುವುದಾಗಿ ಈ ಸಂದರ್ಭದಲ್ಲಿ ಅಂದಾಜಿಸಲಾಗಿದೆ. 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಗುರುವಾರ ರಾತ್ರಿ ನಡೆದಿದೆ.
ಘಟನೆ ಏನು ?
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೆಹ್ವಾನ್ ನಲ್ಲಿರುವ ಲಾಲ್ ಶಹಭಾಝ್ ಖಲಂದರ್ ಎಂಬ ಅತ್ಯಂತ ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿರುವ ದರ್ಗಾದಲ್ಲಿ ಈ ಘಟನೆ ನಡೆದಿದೆ. ಈ ದರ್ಗಾಕ್ಕೆ ಪ್ರತಿ ಗುರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಾಗಮಿಸುತ್ತಾರೆ. ಧಮಲ್ ಎಂಬ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ನಡೆಯುತ್ತಿದ್ದು ಇದರಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ. ಇದೇ ಸಂದರ್ಭವನ್ನು ಬಳಸಿಕೊಂಡು ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಆರಂಭದಲ್ಲಿ ಗ್ರೆನೇಡ್ ದಾಳಿ ನಡೆಸಿರುವ ಉಗ್ರರು ಬಳಿಕ ಆತ್ಮಾಹುತಿ ದಾಳಿಯ ಮೂಲಕ ಕೃತ್ಯ ಎಸಗಿದ್ದಾರೆ. ಇದರ ಹೊಣೆಯನ್ನು ಇಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ವಿಶ್ವಸಂಸ್ಥೆ ಖಂಡನೆ
ಆತ್ಮಾಹುತಿ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ. ಸಾವನ್ನಪ್ಪಿದ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದೆ. ಗಾಯಾಳುಗಳು ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ. ಭಯೋತ್ಪಾದನೆ ವಿರುದ್ಧದ ಪಾಕಿಸ್ತಾನದ ಹೋರಾಟಕ್ಕೆ ನಾವು ಎಂದಿಗೂ ಜೊತೆಯಲ್ಲಿರುತ್ತೇವೆ. ಭಯೋತ್ಪಾದನಾ ವಿಚಾರದಲ್ಲಿ ಪಾಕಿಸ್ತಾನ ಜೊತೆಗಿನ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದೆ.
ಗಡಿ ಬಂದ್
ಉಗ್ರರ ದಾಳಿ ಹಿನ್ನಲೆಯಲ್ಲಿ ಭದ್ರತಾ ದೃಷ್ಟಿಯಿಂದ ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯನ್ನು ಬಂದ್ ಮಾಡಲಾಗಿದೆ. ಮುಂದಿನ ಕ್ರಮಗಳ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಾಕಿಸ್ತಾನ ಸೇನಾ ಪಡೆ ಹೇಳಿದೆ.

LEAVE A REPLY

Please enter your comment!
Please enter your name here