ಬಾಂಜಾರುಮಲೆಗೆ ಶೈಕ್ಷಣಿಕ ಕ್ಷೇತ್ರದರ್ಶನ

0
230

ವರದಿ: ಸುವರ್ಚಲಾ ಅಂಬೇಕರ್
ಚಿತ್ರಕೃಪೆ: ಆ್ಯಕ್ಸ ಎಲ್ಝಾ ಜಾನ್ಸನ್, ಅಭಿಜಿತ್
ಉಜಿರೆ ಎಸ್.ಡಿ.ಎಮ್.ಕಾಲೇಜಿನ ತೃತೀಯ ಬಿ.ಎ.ಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಂದ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಂಜಾರುಮಲೆ ಪ್ರದೇಶಕ್ಕೆ ಶೈಕ್ಷಣಿಕ ಕ್ಷೇತ್ರ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
 
 
ಚಾರ್ಮಾಡಿ ಘಾಟಿಯ ರಸ್ತೆಯ ಮೂಲಕ ಪ್ರಯಾಣಿಸುವಾಗ ಒಂಬತ್ತನೇ ತಿರುವಿನಿಂದ ಬಲ ಬದಿಯ ಮಣ್ಣಿನ ರಸ್ತೆಯೇ ಬಾಂಜಾರುಮಲೆಗೆ ಹೋಗುವ ದಾರಿಯಾಗಿದೆ. ಕಲ್ಲು ಹಾಗೂ ಮಣ್ಣಿನಿಂದ ಕೂಡಿದ ಕಚ್ಛಾರಸ್ತೆಯಲ್ಲಿ ಪ್ರಯಾಣಿಸುವುದೇ ಒಂದು ಸಾಹಸ. ಒಂದೆಡೆ ಇಳಿಜಾರಿನ ರಸ್ತೆಯಾದರೆ ಮತ್ತೊಂದೆಡೆ ಏರು ರಸ್ತೆಯಲ್ಲಿ ವಾಹನ ಹತ್ತುವುದು ಅಷ್ಟೊಂದು ಸುಲಭದ ಮಾತಲ್ಲ.
 
 
ಸ್ಥಳಕ್ಕೆ ತಲುಪಿದ ನಂತರ ಈ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದ ಡಿ.ಸಿ.ಕಟ್ಟೆಯ ವಿಶೇಷತೆಯ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಕಲೆಹಾಕಲಾಯಿತು. ವಿದ್ಯಾರ್ಥಿಗಳು ಐದು ಗುಂಪುಗಳಲ್ಲಿ ಅಲ್ಲಿಯ ಮನೆಗಳಿಗೆ ತೆರಳಿ ಗ್ರಾಮಸ್ಥರಲ್ಲಿ ಸಂವಾದವನ್ನು ನಡೆಸಿದರು.
 
ಸರಕಾರದ ಯೋಜನೆಗಳ ಮಾಹಿತಿಗಳನ್ನು ಹೇಗೆ ಪಡೆಯುತ್ತೀರಿ ಎನ್ನುವ ವಿಷಯಕ್ಕೆ ನಮ್ಮ ಈ ಪ್ರದೇಶದಲ್ಲಿರುವ ಗ್ರಾಮ ಪಂಚಾಯತ್ನ ಸದಸ್ಯರು ಸಕಾಲಕ್ಕೆ ಮಾಹಿತಿಯನ್ನು ನೀಡುತ್ತಿದ್ದಾರೆ. ಕೆಲವು ವಿಷಯಗಳನ್ನು ಮಾಧ್ಯಮಗಳ ಮೂಲಕ ಪಡೆಯಲಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.
 
 
ಮಾಧ್ಯಮಗಳ ಬಳಕೆ ಮತ್ತು ಅಭಿರುಚಿಯ ಬಗ್ಗೆ ಪ್ರಸ್ತಾಪಿಸಿದಾಗ ಬಹುತೇಕರು ಮನೋರಂಜನೆಗಾಗಿ ರೇಡಿಯೋವನ್ನು ಕೇಳುತ್ತಾರೆ. ಕನ್ನಡ ಸುದ್ದಿವಾಹಿನಿ ಹಾಗೂ ಮನೋರಂಜನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೆಚ್ಚಿನ ಧಾರಾವಾಹಿ ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ ಎನ್ನುವ ಅಂಶ ತಿಳಿಯಿತು.
 
 
ಹೀಗೆ ಜೀವನ ಶೈಲಿ, ಶಿಕ್ಷಣ, ಉದ್ಯೋಗ, ಸಂಪ್ರದಾಯ, ಆಚರಣೆಗಳು, ಕೃಷಿ, ಮನೆಮದ್ದು, ಕಾಡು ಪ್ರಾಣಿಗಳ ಹಾವಳಿ ಹಾಗೂ ರಕ್ಷಣೆ ಮತ್ತು ವಿದ್ಯುತ್ ಉತ್ಪಾದನೆ ಬಗೆಯನ್ನು ತಿಳಿದುಕೊಳ್ಳಲಾಯಿತು. ನಾಗರಿಕರು ಸಂವಹನಕ್ಕಾಗಿ ಮೊಬೈಲ್ನ್ನು ಉಪಯೋಗಿಸುತ್ತಿದ್ದು, ಕೇವಲ ಎತ್ತರದ ಪ್ರದೇಶದಲ್ಲಿ ಮಾತ್ರ ಸಂಪರ್ಕ ಸಾಧ್ಯ ಎಂದು ಹಿರಿಯರು ಹೇಳಿದರು. ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಮಳೆಯ ನಡುವೆಯೇ ನಡೆದ ಈ ಕ್ಷೇತ್ರ ಕಾರ್ಯ ಭೇಟಿ ಅರ್ಥಪೂರ್ಣವಾಗಿತ್ತು.
 
ಊರಿನ ಮೂಲಭೂತ ಸೌಕರ್ಯಗಳಲ್ಲಿ ಮುಖ್ಯವಾಗಿರುವ ರಸ್ತೆಯ ಅಭಿವೃದ್ಧಿ ಹಾಗೂ ಸಂಪರ್ಕಕ್ಕಾಗಿ ಮೊಬೈಲ್ ಟವರ್ ಅವರ ಮುಖ್ಯ ಬೇಡಿಕೆಯಾಗಿದ್ದು ಅದನ್ನು ಜನಪ್ರತಿನಿಧಿಗಳು ಈಡೇರಿಸುತ್ತಾರೆ ಎಂಬ ಭರವಸೆಯೊಂದಿಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
 
ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪರಶುರಾಮ ಕಾಮತ್ ಹಾಗೂ ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋ ಕಾರ್ಯನಿರ್ವಾಹಕಿ ಶೃತಿ ಜೈನ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಗ್ರಾಮಸ್ಥರು ಉಪಸ್ಥಿತರಿದ್ದು ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here