ಬಸ್ಸು ಬಂತು ಬಸ್ಸು…ಕೆಂಪು ಬಿಳಿ ಬಸ್ಸು…

0
1157

ವಾರ್ತೆ ಅಭಿಯಾನಕ್ಕೆ ಸಿಕ್ಕಿತು ಜಯ…!
ಮೂಡುಬಿದಿರೆ: ಬಸ್ಸು ಬಂತು ಬಸ್ಸು…ಕೆಂಪು ಬಿಳಿಯ ಬಸ್ಸು…!!! ಹೌದು…ಜನತೆಯ ಬಹುನಿರೀಕ್ಷೆಯ ಕೆಂಪು ಬಸ್ಸು ಅಂತೂ ಇಂತೂ ಮೂಡುಬಿದಿರೆಗೆ ಬಂದಿದೆ!. ಹೌದು ಮೂಡುಬಿದಿರೆ-ಮಂಗಳೂರು ನಡುವೆ ಸರಕಾರಿ ಬಸ್ಸು ಸೇವೆ ಕೊರೊನಾ ಹಿನ್ನಲೆಯಲ್ಲಿ ಗುರುವಾರ ಅಧಿಕೃತವಾಗಿ ಆರಂಭಗೊಂಡಿದೆ. ಮೂಡುಬಿದಿರೆ-ಸಿದ್ದಕಟ್ಟೆ ನಡುವೆ ಈ ಸಂಚಾರ ಶುಕ್ರವಾರದಿಂದ ಪ್ರಾರಂಭಗೊಳ್ಳಲಿದೆ. ತನ್ಮೂಲಕ ಬಹು ಸಮಯದ ಜನತೆಯ ಬೇಡಿಕೆಯನ್ನು ಸಂಬಂಧಪಟ್ಟವರು ಕೊನೆಗೂ ಈಡೇರಿಸಿದಂತಾಗಿದೆ.
೧೨.೩೦ಕ್ಕೆ ಅಧಿಕೃತವಾಗಿ ಮಂಗಳೂರಿನಿಂದ ಮೂಡುಬಿದಿರೆ ಬಸ್ಸು ನಿಲ್ದಾಣಕ್ಕೆ ಸರಕಾರಿ ಬಸ್ಸು ಮೊದಲ ಪ್ರಯಾಣದೊಂದಿಗೆ ಆಗಮಿಸಿತು. ಮೂಡುಬಿದಿರೆ ಎಂಬ ನಾಮ ಫಲಕ ಹೊತ್ತ ಬಸ್ಸು ಪೇಟೆಗೆ ಆಗಮಿಸುತ್ತಿದ್ದಂತೆಯೇ ಜನತೆ ಕುತೂಹಲದಿಂದ ವೀಕ್ಷಿಸಿದರು.
ಮೂಡುಬಿದಿರೆಯ ಖಾಸಗೀ ಬಸ್‌ ನಿಲ್ದಾಣದಲ್ಲಿ ಈ ಬಸ್ಸು ರಾಜಗಾಂಭೀರ್ಯದಿಂದ ನಿಂತಿತು. ಜನತೆ ಬಸ್‌ ಸುತ್ತುವರಿದು ಹೊಸ ಸೇವೆಯ ಬಗ್ಗೆ ಮಾಹಿತಿ ಕಲೆ ಹಾಕಿದರು. ಲಾಕ್‌ ಡೌನ್‌ ಮುಗಿದ ನಂತರವೂ ಸೇವೆ ಮುಂದುವರಿಯಬೇಕು. ಖಾಸಗೀ ಬಸ್ಸು ಲಾಭಿಗೆ ಮೂಡುಬಿದಿರೆ ಮಂಗಳೂರು ಬಸ್‌ ಸೇವೆ ನಿಲ್ಲದಿರಲಿ ಎಂಬ ಆಶಯ ಜನತೆಯದ್ದು.

ವಾರ್ತೆ ಅಭಿಯಾನ: ಮೂಡುಬಿದಿರೆ ತಾಲೂಕಿನಲ್ಲಿ ಸರಕಾರಿ ಬಸ್‌ ಸೇವೆ ಬೇಕೆಂಬ ಅಭಿಯಾನವನ್ನು ವಾರ್ತೆ.ಕಾಂ ಈ ಹಿಂದೆಯೇ ನಡೆಸಿತ್ತು. ಸಂಬಂಧಪಟ್ಟ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆಯುವ ಕಾರ್ಯವನ್ನೂ ವಾರ್ತೆ ಮಾಡಿತ್ತು. ಇದೀಗ ಸೇವೆ ಆರಂಭಗೊಂಡಿದ್ದು ವಾರ್ತೆ ಅಭಿಯಾನಕ್ಕೆ ಸಿಕ್ಕ ಜಯವಾಗಿದೆ.

ಶಾಸಕರ-ಸಂಸದರ ಸಹಕಾರ: ಮೂಡುಬಿದಿರೆ ಮಂಗಳೂರು ನಡುವೆ ಬಸ್‌ ಸಂಚಾರಕ್ಕೆ ಶಾಸಕ ಉಮಾನಾಥ್‌ ಕೋಟ್ಯಾನ್‌, ಸಂಸದ ನಳೀನ್‌ ಕುಮಾರ್‌ ಕಟೀಲು ಅವರ ಶ್ರಮವಿದೆ.ಅದಕ್ಕೆ ಅಭಿನಂದನೆಗಳು. ಈ ಶ್ರಮ ಉಳಿಯಬೇಕಾಗಿದೆ. ಲಾಬಿಗೆ ಮಣಿಯದೆ ಸೇವೆ ಮುಂದುವರಿಯುವಂತಾಗಬೇಕಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ.

LEAVE A REPLY

Please enter your comment!
Please enter your name here