ಬದ್ಧತೆ ತೋರದವರಿಗೆ ಅನರ್ಹತೆಯ ಶಿಕ್ಷೆ : ಟಿ.ಪಿ.ರಮೇಶ್ ಅಭಿಪ್ರಾಯ

0
267

ಮಡಿಕೇರಿ ಪ್ರತಿನಿಧಿ ವರದಿ
ನಗರಸಭಾ ಸದಸ್ಯತ್ವದಿಂದ ಅನರ್ಹ ಗೊಂಡಿರುವ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ರವಿ ಕುಮಾರ್ ಅವರುಗಳಿಗೆ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನ ಮಾನ ಮತ್ತು ಗೌರವವನ್ನು ನೀಡಿತ್ತೆಂದು ಸ್ಪಷ್ಟಪಡಿಸಿರುವ ಪಕ್ಷದ ಜಿಲ್ಲಾ ಪ್ರಬಾರ ಅಧ್ಯಕ್ಷ ಟಿ.ಪಿ.ರಮೇಶ್, ಪಕ್ಷಕ್ಕೆ ಬದ್ಧತೆಯನ್ನು ತೋರದ ಕಾರಣ ಸದಸ್ಯ ಸ್ಥಾನವನ್ನು ಕಳೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯ ಸಂದರ್ಭ ಇಬ್ಬರು ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ ಬಗ್ಗೆ ಆಧಾರ ಪೂರ್ಣ ದಾಖಲೆಗಳಿದ್ದ ಕಾರಣ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸದಸ್ಯತ್ವ ಅನರ್ಹಗೊಂಡಿದೆಯೆಂದು ತಿಳಿಸಿದರು. ಪಕ್ಷ ನಿಷ್ಠೆ ತೋರದ ಮತ್ತು ಪಕ್ಷದ ನಿಯಮಗಳನ್ನು ಮೀರಿ ರಾಜಕಾರಣಮಾಡುವವರಿಗೆ ಇದೊಂದು ತಕ್ಕ ಪಾಠವೆಂದು ಅಭಿಪ್ರಾಯಪಟ್ಟರು.
 
 
ಒಂದು ಪಕ್ಷದಲ್ಲಿ ಗುರುತಿಸಿಕೊಳ್ಳುವವರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು. ಆದರೆ, ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಇದನ್ನು ಮೀರಿ ಬಿಜೆಪಿ ಅಭ್ಯರ್ಥಿಗಳ ಪರ ಕೈಎತ್ತುವ ಮೂಲಕ ಪಕ್ಷ ದ್ರೋಹ ಮಾಡಿದ್ದಾರೆಂದು ಟೀಕಿಸಿದರು. ಪಕ್ಷದಲ್ಲಿ ಈ ಇಬ್ಬರು ಸದಸ್ಯರುಗಳಿಗೆ ಎಲ್ಲಾ ಗೌರವಗಳನ್ನು ನೀಡಲಾಗಿದೆ.ತಮಗಿರುವ ಅಸಮಾಧಾನದ ಬಗ್ಗೆ ಲಿಖಿತ ದೂರು ನೀಡುವಂತೆ ಸಲಹೆ ನೀಡಿದ್ದರು ಇದನ್ನು ಮೀರಲಾಗಿದೆ. ಇನ್ನು ಮುಂದೆ ಈ ಇಬ್ಬರು ಸದಸ್ಯರು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುವುದಿಲ್ಲವೆಂದು ಸ್ಪಷ್ಟಪಡಿಸಿದರು.
 
 
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಇದ್ದ ರಾಜಾಸೀಟು ರಸ್ತೆಯ ಬಳಿಯ 10 ಸೆಂಟ್ ಜಾಗದ ವಿವಾದ ಕೋರ್ಟ್ನಲ್ಲಿ ಇತ್ಯರ್ಥವಾಗಿದ್ದು, ಜಾಗ ಕಾಂಗ್ರೆಸ್ ವಶವಾಗಿದೆಯೆಂದು ಟಿ.ಪಿ. ರಮೇಶ್ ತಿಳಿಸಿದರು. ತಮ್ಮ ಅಧ್ಯಕ್ಷಾವಧಿಯಲ್ಲಿ ಜಾಗ ಕಾಂಗ್ರೆಸ್ ಪಕ್ಷಕ್ಕೆ ದೊರಕಿರುವುದು ಹೆಮ್ಮೆಯ ವಿಚಾರವೆಂದ ಅವರು ನೂತನ ಕಾಂಗ್ರೆಸ್ ಭವನಕ್ಕೆ ಹಿರಿಯರೊಂದಿಗೆ ಚರ್ಚಿಸಿ ಕಾರ್ಯ ಯೋಜನೆ ರೂಪಿಸುವುದಾಗಿ ತಿಳಿಸಿದರು.
 
 
ಅಧ್ಯಕ್ಷ ಸ್ಥಾನದಿಂದ ಮುಕ್ತಿ ಬೇಕು:
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಬಾರ ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸುವಂತೆ ಈಗಾಗಲೆ ರಾಜ್ಯದ ಹಿರಿಯ ಮುಖಂಡರಿಗೆ ಮನವಿ ಮಾಡಿಕೊಂಡಿದ್ದೇನೆ. ಒಬ್ಬನಿಗೆ ಒಂದೇ ಹುದ್ದೆ ಎನ್ನುವ ನಿಯಮ ಪಾಲನೆಗೆ ನಾನು ಕಟಿಬದ್ಧನಾಗಿದ್ದು, ಈ ಪ್ರಕಾರವಾಗಿ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟು ಕಾರ್ಯಕರ್ತನಾಗಿ ದುಡಿಯಲು ಅವಕಾಶ ನೀಡಿದರೆ ಸೂಕ್ತವೆಂದು ಅಭಿಪ್ರಾಯಪಟ್ಟರು.
 
 
ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರ ದೊಡ್ಡ ಪಡೆಯೆ ಇದೆ. ಆದರೆ, ಬಹುತೇಕ ಕಾರ್ಯಕರ್ತರು ನಾಯಕರಾಗಿರುವುದರಿಂದ ಪಕ್ಷದಲ್ಲಿ ಕಾರ್ಯಕರ್ತರ ಕೊರತೆ ಇದ್ದಂತೆ ಕಂಡು ಬರುತ್ತಿದೆ. ಆದ್ದರಿಂದ ನಾಯಕರೆಲ್ಲರು ಕಾರ್ಯಕರ್ತರಂತೆ ದುಡಿಯಲು ಮುಂದಾದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಯುತವಾಗಲಿದೆಯೆಂದು ಟಿ.ಪಿ.ರಮೇಶ್ ಹೇಳಿದರು.
 
ಸುದ್ದಿಗೋಷ್ಠಿಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನ ಹಾಗೂ ನಗರಸಭಾ ಸದಸ್ಯ ಹೆಚ್.ಎಂ. ನಂದ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here