ಬದುಕಿನ ಬಹುದೊಡ್ಡ ಬಲ "ನಂಬಿಕೆ"

0
678

ಅರಿತುಕೋ ಬದುಕ ವೈಖರಿ ಅಂಕಣ: ಎಂ ಎಸ್ ಸಂಚನಾ
‘ನಂಬಿಕೆ’ ಎಂಬುದು ನಿಜಕ್ಕೂ ಒಂದು ದೊಡ್ಡ ಪದ. ನಂಬಿಕೆಯ ಗಳಿಸುವುದೂ ಒಂದು ದೊಡ್ಡ ಕೆಲಸ, ಆದರೆ ಒಮ್ಮೆ ಅದನ್ನು ಗಳಿಸಿದ ನಂತರ ಅದು ನೀಡಬಲ್ಲದು ನಿರಂತರ ನೆಮ್ಮದಿಯ. ನಮ್ಮ ಸಾಮಾನ್ಯ ಜ್ಞಾನದಿಂದ ಇದು ಅಸಾಧ್ಯ ಕೆಲಸ ಎಂದು ಭಾವಿಸುವಂತದನ್ನೂ ಕೇವಲ ನಂಬಿಕೆಯ ಬಲದಿಂದಲೇ ಒಮ್ಮೊಮ್ಮೆ ಸಾಧಿಸಿ ಬಿಡಬಹುದು. ಸಂಬಂಧಗಳು ಅಂಟಿಕೊಳ್ಳುವಂತೆ ಮಾಡುವಲ್ಲಿ ನಂಬಿಕೆಯೇ ಅಂಟಿನಂತೆ ಕೆಲಸ ಮಾಡುವುದು. ನಂಬಿಕೆ ಇರುವಷ್ಟು ಸಮಯ ಭಾಂದವ್ಯವು ಬಿಗಿಯಾಗಿರಬಲ್ಲದು, ಆದರೆ ಒಮ್ಮೆ ಅದು ಸಡಿಲಗೊಂಡಿತೆಂದರೆ ಮುಗಿಯಿತು ,ಆ ಭಾಂದವ್ಯ ನೆಲಕ್ಕೆ ಬಿತ್ತೇಂದೇ ಅರ್ಥ.
 
ಎಲ್ಲರೂ ನಮ್ಮನ್ನು ಪ್ರೀತಿಸುತ್ತಾರೆ ಎಂಬುದಕ್ಕಿಂತ,ಎಲ್ಲರೂ ನಮ್ಮನ್ನು ನಂಬುತ್ತಾರೆ ಎಂಬ ಸಂಗತಿಯೇ ಹೆಚ್ಚು ಸಂತಸವನ್ನು ತರಬಲ್ಲದು.ಅದಕ್ಕೆ ಕಾರಣವಿಷ್ಟೇ,ಪೀತಿಸಿದ ಮಾತ್ರಕ್ಕೆ ಸದಾ ಸಂಬುತ್ತಾರೆಂಬ ಖಾತ್ರಿಯಿಲ್ಲ,ಆದರೆ ನಿಜವಾಗಿ ನಂಬಿದವರು ಪ್ರೀತಿಸದೆಯಿರಲು ಸಾಧ್ಯವಿಲ್ಲ,ಅದ್ದರಿಂದ ಪರಿಪೂರ್ಣ ಪ್ರೀತಿಗೆ ಸಾಕ್ಷಿಯೇ ನಂಬಿಕೆ. ನಂಬಿಕೆ ಎಂದರೇ ಹಾಗೆ ಅದೊಂದು ದುಬಾರಿ ವಿಷಯ,ಅದಕ್ಕೊಂದು ಬೆಲೆ ನಿಗದಿಪಡಿಸಲು ಯಾರಿಂದಲೂ ಆಗದು.ಪುಟ್ಟ ಮಗುವಿಗೆ ತನ್ನ ಪೋಷಕರ ಮೇಲಿರುವ ನಂಬಿಕೆ,ಸದ್ಭಕ್ತನಿಗೆ ಆ ಭಗಂವತನ ಮೇಲಿರುವ ನಂಬಿಕೆ ,ಶಿಷ್ಯೋತ್ತಮನಿಗೆ ತನ್ನ ಗುರುವಿನ ಮೇಲಿರುವ ನಂಬಿಕೆ,ಇವೆಲ್ಲವೂ ಎಂಥಾ ಚಮತ್ಕಾರಗಳನ್ನು ನಡೆಸಬಲ್ಲವೆಂಬುದಕ್ಕೆ ದಿನನಿತ್ಯವೂ ನಮಗೆ ಅನೇಕ ನಿದರ್ಶನಗಳು ದೊರೆಯುತ್ತಲೆ ಇರುತ್ತವೆ.
 
ನಂಬಿಕೆಗಿರುವ ವಿಶೇಷ ಗುಣವನ್ನು ನೀವೆಂದಾದರು ಗಮನಿಸಿದ್ದೀರಾ? ಖಂಡಿತಾ ಗಮನಿಸಿರುತ್ತಿರಿ,ಇರಲಿ ಈಗ ಇನ್ನೊಮ್ಮೆ ಗಮನಿಸಿ.ಕೆಲವೊಂದು ಸಂಧರ್ಭದಲ್ಲಿ ನಂಬಿಕೆಯ ಮೇಲೆ ಎಷ್ಟೇ ದೊಡ್ಡ ಆಘಾತವಾದರೂ ಅದು ಬಂಡೆಗಲ್ಲಿಗಿಂತಲೂ ಗಟ್ಟಿಯಾಗಿ ನಿಲ್ಲಬಲ್ಲದು,ಆದರೆ ಇನ್ನೂ ಕೆಲವೊಮ್ಮೆ ಸಣ್ಣ ಆಘಾತವನ್ನೂ ಸಹಿಸಲಾಗದೆ ಕನ್ನಡಿಯಂತೆ ನುಚ್ಚುನೂರಾಗುವುದು,ಹಾಗೆ ನುಚ್ಚುನೂರಾದ ನಂಬಿಕೆಯನ್ನು ಮತ್ತೆ ಮೊದಲಿನಂತೆ ಜೋಡಿಸುತ್ತೇನೆಂದರೆ ಅದೊಂದು ವ್ಯರ್ಥ ಪ್ರಯತ್ನವಾದೀತು.
 
ನಂಬಿಕೆ ಎಂದರೆ ಈಗಿನ ನಮ್ಮ ವೈ-ಫೈ ಸಂಪರ್ಕವಿದ್ದಂತೆ ಎಂದು ಎಲ್ಲೊ ಓದಿದ ನೆನಪು.ಅದು ನಿಜ ಏಕೆಂದರೆ ವೈ-ಫೈ ಸಂಪರ್ಕದಂತೆಯೇ ನಂಬಿಕೆ ಎಂಬುದು ನಮ್ಮ ಕಣ್ಣಿಗೆ ಕಾಣದು ಆದರೆ ನಮಗೇನು ಬೇಕೋ ಅದನ್ನು ಜೊತೆಗೂಡಿಸುವಷ್ಟು ಸಾಮಥ್ರ್ಯ ಅದಕ್ಕಿದೆ.ಬದುಕಿನಲ್ಲಿ ಎಷ್ಟೋ ಬಾರಿ ಭರವಸೆಯು ಬರಿದಾಗಿ ಬಸವಳಿದು ಬಿದ್ದಾಗ,ಬೇರೆ ಬೇರೆ ರೂಪದಲ್ಲಿ ನಮ್ಮ ಬಳಿ ಬಂದು ಕೈ ನೀಡಿ ಮೇಲೆತ್ತಿ ಮುನ್ನೆಡೆಸಬಲ್ಲ ಒಂದು ಮಹಾನ್ ಶಕ್ತಿ ಎಂದರೆ ಅದು ನಂಬಿಕೆ.
 
ಬಹು ಬೇಜಾರಿನ ಸಂಗತಿಯೇನೆಂದರೆ ಈಗಂತೂ ಯಾರನ್ನೂ,ಏನನ್ನೂ ಬಲು ಸುಲಭವಾಗಿ ನಂಬುವಂತ ಕಾಲದಲ್ಲಿ ನಾವಿಲ್ಲ.ಮುಗ್ಧನೊಬ್ಬನ ನಂಬಿಕೆಯನ್ನೇ ಸುಳ್ಳನೊಬ್ಬ ತನ್ನ ಪ್ರಭಾವಿ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾನೆ.ತಾವು ಮಾತ್ರ ಸದಾ ಮೋಸ-ವಂಚನೆಯಲ್ಲೇ ಮುಳುಗಿ,ಜನರು ಮಾತ್ರ ನಮ್ಮನ್ನು ನಂಬಲೇಬೇಕೆಂದು ಆಶಿಸುವವರ ಸಂಖ್ಯೆಯೇ ಅಧಿಕ.ಒಬ್ಬ ವ್ಯಕ್ತಿಯನ್ನು ಮತ್ತೊಬ್ಬ ವ್ಯಕ್ತಿ ವಂಚಿಸಲು ಸಫಲನಾದನೆಂದರೆ,ವಂಚನೆಗೊಳಗಾದ ವ್ಯಕ್ತಿ ಮೂರ್ಖನೆಂದರ್ಥವಲ್ಲ,ಬದಲಿಗೆ ಆ ವಂಚಕನ ಅರ್ಹತೆಯನ್ನು ಮೀರಿದ ನಂಬಿಕೆಯು ಅವನ ಮೇಲಿತ್ತೆಂದು ಅರ್ಥ.ಯಾರಾದರು ನಮ್ಮನ್ನು ಅತಿಯಾಗಿ ಕುರುಡರಂತೆ ನಂಬುತ್ತಾರೆಂಬ ಮಾತ್ರಕ್ಕೆ ಅವರನ್ನು ನಿಜಕ್ಕೂ ಕಪಟತನದಲ್ಲಿ ಕುರುಡರೆಂದು ಸಾಬೀತು ಪಡಿಸಲು ಹಂಬಲಿಸುವುದು ಸರಿಯಲ್ಲ,ಆ ರೀತಿ ಮಾಡಿದ್ದೇ ಹೌದಾದರೆ ಮುದೊಂದು ದಿನ ಅದಕ್ಕೆ ತಕ್ಕ ಬೆಲೆಯನ್ನು ನಾವು ತೆರಬೇಕಾಗುತ್ತದೆ.
ಯಾವುದನ್ನೇ ಆದರೂ ಸಂಪೂರ್ಣ ಪರಿಶೀಲಿಸಿ ನಂತರ ನಂಬಿದರೆ ಮುಂದೆ ಬರುವ ಎಷ್ಟೋ ಸಮಸ್ಯೆಗಳ ಸಂಖ್ಯೆಯನ್ನು ಇಳಿಮುಖವಾಗಿಸಬಹುದು .ಈಗ ಬಲು ನಂಬಿಕೆಯಿಂದ ಒಪ್ಪಿಕೊಂಡದ್ದು-ಅಪ್ಪಿಕೊಂಡದ್ದು ಮುದೊಂದು ದಿನ ಭೂತ-ಪ್ರೇತವಾಗಿ ಕಾಡುವಂತಾಗಬಾರದಲ್ಲ ಅದಕ್ಕೆ.ಕೆಲವೊಮ್ಮೆ ನೂರಾರು ಕ್ಷಣದ ಪರಿಶ್ರಮದಿಂದ ಗಳಿಸಿದ ನಂಬಿಕೆಯನ್ನು ಮೂರೇ ಕ್ಷಣದಲ್ಲಿ ಕಳೆದುಕೊಂಡು ಬಿಡುತ್ತೇವೆ. ಅಕ್ಕರೆಯಿಂದ ನೆಟ್ಟ ನಂಬಿಕೆಯೆಂಬ ಸಸಿಯನ್ನು ನೀರೆರೆದು ಪೋಷಿಸದೆ,ಅನುಮಾನವೆಂಬ ಕತ್ತಿಯಿಂದ ಕಿತ್ತೆಸೆದರೆ ಮುಂದೆ ನಷ್ಟ ಅನುಭವಿಸುವವರು ನಾವೇ ತಾನೇ.
ಎಂ ಎಸ್ ಸಂಚನಾ
[email protected]

LEAVE A REPLY

Please enter your comment!
Please enter your name here