ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ `ವಸಂತೋತ್ಸವ'

0
337

ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಅತೀ ಮುಖ್ಯ, ಉತ್ತಮ ಶಿಕ್ಷಣದೊಂದಿಗೆ ಸ್ವಚ್ಛ ಪರಿಸರ ಒದಗಿಸುವಲ್ಲಿ ಶಾಲೆಗಳು ಗಮನಹರಿಸಬೇಕಾಗಿದೆ ಎಂದು ಬದಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ದಾಮೋದರನ್ ಅಭಿಪ್ರಾಯಪಟ್ಟರು.
 
 
kasr_dsc school
ಅವರು ಮಂಗಳವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಶಾಲಾ ವಾರ್ಷಿಕೋತ್ಸವ `ವಸಂತೋತ್ಸವ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾಭ್ಯಾಸದ ಜೊತೆಗೆ ಧಾರ್ಮಿಕ ಭಾವನೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಭಕ್ತಿಮಾರ್ಗದೊಂದಿಗಿರುವ ವಿದ್ಯಾಭ್ಯಾಸವು ಈ ಶಾಲೆಯಲ್ಲಿ ಲಭಿಸುತ್ತಿರುವುದು ಮಕ್ಕಳ ಉತ್ತಮ ಭವಿಷ್ಯಕ್ಕೆ ನಾಂದಿಯಾಗಿದೆ. ಸತ್ಯ ನೀತಿ ಹಾಗೂ ಅಚ್ಚುಕಟ್ಟಾದ ವಿದ್ಯಾಭ್ಯಾಸ ಈ ಶಾಲೆಯಲ್ಲಿ ಸಿಗುತ್ತದೆ ಎಂದು ಇಲ್ಲಿಯ ಮಕ್ಕಳನ್ನು ನೋಡಿದಾಗ ಮನದಟ್ಟಾಗುತ್ತದೆ. ಇಂದಿನ ಮಕ್ಕಳೇ ನಾಳೆ ನಮ್ಮ ರಾಜ್ಯವನ್ನು ಮುನ್ನಡೆಸಬೇಕಾದವರು. ಮಕ್ಕಳನ್ನು ಸುರಕ್ಷಿತರಾಗಿ ಶಾಲೆಗೆ ತಲುಪಿಸಲು ಬೇಕಾದ ಸಹಾಯವನ್ನು ನಾವು ಮಾಡುತ್ತೇವೆ ಎಂದರು.
 
 
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸ ಮೂರ್ತಿ ವಿದ್ಯಾರ್ಜನೆಎಂಬುದು ಮಕ್ಕಳ ಭವಿಷ್ಯ ಚಿಗುರೊಡೆಯುವ ಕಾಲ. ವಿದ್ಯೆ ನಮಗೆ ಸಂಸ್ಕಾರವನ್ನು ನೀಡಬೇಕು. ಉತ್ತಮ ನಾಗರಿಕನಾಗಿ ಸತ್ಪ್ರಜೆಯಾಗಿ ಬದುಕಬೇಕು ಎಂಬ ಗುರಿಯಿರಬೇಕು. ಆಕಾಶದ ನಕ್ಷತ್ರಗಳ ಮಧ್ಯೆಧ್ರುವ ನಕ್ಷತ್ರದಂತೆ ಶ್ರೀಭಾರತೀ ವಿದ್ಯಾಪೀಠವು ಬೆಳಗುತ್ತಿದೆ. ಇದೊಂದು ಮಾದರಿ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಿಂಚುತ್ತಿರುವುದನ್ನು ನಾವು ಕಾಣಬಹುದು. ವಸಂತ ಕಾಲದ ಚಿಗುರಿನಂತೆ ಮಕ್ಕಳು ಬೆಳೆಯುತ್ತಿದ್ದಾರೆ. ಇಲ್ಲಿಯ ಶಿಕ್ಷಣ ಮೌಲ್ಯಾಧಾರಿತವಾಗಿದೆ ಎಂದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ಶುಭಾಶಂಸನೆಗೈಯುತ್ತಾ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರ ಪ್ರಯುತ್ನ ಶ್ಲಾಘನೀಯ ಎಂದರು. ದಿ| ಬೇರ್ಕಡವು ಸೀತಾರಾಮ ಭಟ್ಟರ ಸ್ಮರಣಾರ್ಥ ಕೊಡಮಾಡುವ ದತ್ತಿನಿಧಿಯಾದ `ಸ್ವರ್ಣಾಂಕುರ’ವನ್ನು ಕಳೆದ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿನಿ ಅನುಶ್ರೀ ಪಟ್ಟಾಜೆ ಪಡಕೊಂಡಳು. ನಿವೃತ್ತ ಅಧ್ಯಾಪಕ ಕೃಷ್ಣಯ್ಯ ಮಾಸ್ತರ್, ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಉಪಸ್ಥಿತರಿದ್ದರು.
 
 
 
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಪೂಜಾ ನೃತ್ಯದೊಂದಿಗೆ ಹೆಜ್ಜೆ ಹಾಕಿದ ಮಕ್ಕಳು ಕೊನೆಯಲ್ಲಿ `ಕೃಷ್ಣಲೀಲೆ ಕಂಸವಧೆ’ ಯಕ್ಷಗಾನ ಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮದುದ್ದಕ್ಕೂ ಯಾವುದೇ ಧ್ವನಿಸುರುಳಿಯನ್ನು ಉಪಯೋಗಿಸದೆ ಮಕ್ಕಳೇ ಹಿನ್ನೆಲೆ ಗಾಯನವನ್ನು ಹಾಡಿ ಕಾರ್ಯಕ್ರಮವನ್ನು ನೀಡಿರುವುದು ವಿಶೇಷತೆಯಾಗಿತ್ತು. ಕುಮಾರಿ ವೈಶ್ಣವಿ, ಆದಿತ್ಯ ಸುಬ್ರಹ್ಮಣ್ಯ, ಅಪೂರ್ವ, ಶ್ರಾವ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಆಶ್ವಿಜ ಪಿ.ಎಸ್.ಸ್ವಾಗತಿಸಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಧನ್ಯವಾದವನ್ನಿತ್ತರು.

LEAVE A REPLY

Please enter your comment!
Please enter your name here