ಬದಿಯಡ್ಕದಲ್ಲೊಂದು ಹೃದಯಸ್ಪರ್ಶಿ ಘಟನೆ

0
491

 
ವಿಶೇಷ ಲೇಖನ: ಶ್ಯಾಮ್ ಪ್ರಸಾದ್ ಬದಿಯಡ್ಕ
ಬೈಕ್ ಅಪಘಾತ: ಗಾಯಾಳು `ಕೃಷ್ಣ’ನಿಗೆ ಗೋಪ್ರೇಮಿಗಳಿಂದ ನೆರವು
ಕಳೆದ ಆದಿತ್ಯವಾರ ಸಂಜೆ ಬದಿಯಡ್ಕದ ಪುತ್ತೂರು ರಸ್ತೆಯ ಪೆಟ್ರೋಲ್ ಪಂಪ್ ಸಮೀಪ ಬೈಕ್ ಢಿಕ್ಕಿ ಹೊಡೆದು 2 ವರ್ಷ ವಯಸ್ಸಿನ ಶುದ್ಧ ಕಾಸರಗೋಡು ತಳಿಯ ಹೋರಿ `ಕೃಷ್ಣ’ ಬಲಗೈ ಮೂಳೆ ಮುರಿತಕ್ಕೊಳಗಾಯಿತು.
 
krishna-cow1
ಅಪಘಾತದ ರಭಸಕ್ಕೆ ಬಲಗೈಮೂಳೆ ಚರ್ಮವನ್ನು ಸೀಳಿ ಹೊರಬಂದಿತ್ತು. ರಸ್ತೆಬದಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಪುಟ್ಟ ಹೋರಿಯ ಕರುಣಾಜನಕ ಸ್ಥಿತಿಯು ನೋಡುಗರ ಮನಕಲಕುವಂತಿತ್ತು. ಸಮೀಪದ ಗ್ಯಾರೇಜಿನಲ್ಲೇ ಅಟೋ ಇಲೆಕ್ಟ್ರೀಶಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರವಿಚಂದ್ರ ವಳಮಲೆ ವಿಷಯವನ್ನರಿತು ಸ್ಥಳಕ್ಕೆ ಧಾವಿಸಿದರು. ಬೈಕ್ ಚಾಲಕ ನೀರ್ಚಾಲು ಮಲ್ಲಡ್ಕ ನಿವಾಸಿ, ನಿವೃತ್ತ ಸೈನಿಕ ಕೃಷ್ಣ ನಾಯ್ಕ ಅಪಘಾತದಲ್ಲಿ ಯಾವುದೇ ಗಾಯಗಳಾಗದೆ ಪಾರಾದರೂ ಪುಟ್ಟ ಹೋರಿಗಾದ ಗಾಯವನ್ನು ಕಂಡು ಮರುಗಿದರು.
krishna-cow2
 
ವೈದ್ಯಕೀಯ ಶುಶ್ರೂಷೆ ನೀಡೋಣವೆಂದರೆ ರಜಾದಿನವಾದುದರಿಂದ ಸ್ಥಳೀಯ ಪಶುವೈದ್ಯರಾರೂ ಲಭ್ಯರಿರಲಿಲ್ಲ. ಬದಿಯಡ್ಕ ನಿವಾಸಿಯಾದ ಖ್ಯಾತ ಸರಕಾರೀ ಪಶುವೈದ್ಯರನ್ನು ಕರೆಸಿದಾಗ ಇಂದೇನೂ ಮಾಡುವಂತಿಲ್ಲ, ನಾಳೆ ನೋಡೋಣ ಎಂದು ನಿರಾಸಕ್ತಿಯಿಂದ ನುಡಿದು ಹಿಂತಿರುಗಿದರು. ಕೃಷ್ಣನ ಕರುಣಾಜನಕ ಸ್ಥಿತಿಯ ವಿಷಯ ಗೋಪ್ರೇಮಿಗಳ ಕಿವಿಗೆ ಬಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಬಜಕೂಡ್ಲು ಗೋಶಾಲೆಯ ತಳಿ ಅಭಿವೃದ್ಧಿ ವಿಭಾಗ ಪ್ರಮುಖ ಹಾಗೂ ಚಲಿಸುವ ಗೋ ಆಲಯದ ರೂವಾರಿ ಗಣೇಶ್ ಭಟ್ ಮುಣ್ಚಿಕ್ಕಾನ, ತಮ್ಮ ಗೋಪ್ರೇಮಿ ಸಂಗಡಿಗರ ಜೊತೆ ತಮ್ಮ ವಾಹನದಲ್ಲಿ ಸ್ಥಳಕ್ಕಾಗಮಿಸಿದರು. ಎಲ್ಲರೂ ಸೇರಿ ಕೃಷ್ಣನನ್ನು ಎತ್ತಿ ವಾಹನದಲ್ಲಿ ಮಲಗಿಸಿ ಬದಿಯಡ್ಕದ ಸರಕಾರೀ ಪಶು ಚಿಕಿತ್ಸಾಲಯಕ್ಕೆ ಕರೆತಂದರು. ಸಮೀಪದ ವಸತಿಗೃಹದಲ್ಲಿ ವಾಸಿಸುತ್ತಿರುವ ಪೆರ್ಲದ ಸರಕಾರೀ ಪಶುವೈದ್ಯೆ ಡಾ| ಐಶ್ವರ್ಯ ಹಾಗೂ ಬದಿಯಡ್ಕದ ಸಹಾಯಕ ವೈದ್ಯಾಧಿಕಾರಿ ಸುಪ್ರಭ ಅವರನ್ನು ಕಾರ್ಯಕರ್ತರು ಸಂಪರ್ಕಿಸಿದರು.
 
ಗೋಪ್ರೇಮಿಗಳ ಕರೆಗೆ ಸ್ಪಂದಿಸಿ ಮಹಿಳಾ ಸಿಬ್ಬಂದಿಗಳೀರ್ವರು ಆಸ್ಪತ್ರೆಯ ಬಾಗಿಲು ತೆರೆದು ಹೋರಿಯನ್ನು ಉಪಚರಿಸಲು ಮುಂದಾದರು. ಚರ್ಮವನ್ನು ಸೀಳಿ ಹೊರಬಂದ ಮೂಳೆಯನ್ನು ಸ್ವಸ್ಥಾನಕ್ಕೆ ಜೋಡಿಸಿ ಹೊಲಿಗೆಯನ್ನು ಹಾಕಿ ಬ್ಯಾಂಡೇಜ್ ಮಾಡಿ ಚುಚ್ಚುಮದ್ದು ಹಾಗೂ ಔಷಧಿಗಳನ್ನು ನೀಡಿ ಉಪಚರಿಸಿದರು. ಸರಕಾರೀ ಮಹಿಳಾ ವೈದ್ಯೆ ಹಾಗೂ ಸಹಾಯಕಿ ರಜಾದಿನದಂದು, ಕತ್ತಲಾಗಿದ್ದರೂ ಸಕಾಲಿಕವಾಗಿ ಸ್ಪಂದಿಸಿರುವುದು ವಿಶೇಷತೆಯಾಗಿತ್ತು.
 
ಇದಕ್ಕಾಗಿ ಗೋಪ್ರೇಮಿಗಳು ಅವರಿಗೆ ಧನ್ಯವಾದವನ್ನು ತಿಳಿಸಿದಾಗ ಅವರು ಕುತೂಹಲದಿಂದ ಕೇಳಿದ ಪ್ರಶ್ನೆ ತುಂಬಾ ಮಾರ್ಮಿಕವಾಗಿತ್ತು. ಅಪಘಾತದಲ್ಲಿ ಗಾಯಾಳುಗಳ ಕಡೆಗೆ ತಿರುಗಿ ನೋಡದ ಈ ಕಾಲದಲ್ಲಿ ಒಂದು ಪಶುವಿಗಾಗಿ ಇಷ್ಟು ಜನರ ಸ್ಪಂದನೆ ನೋಡಿ ಆಶ್ಚರ್ಯವಾಗಿದೆ ಎಂದು ಪ್ರಶ್ನಿಸಿದರು.
 
ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗೋಯಾತ್ರೆ ಹಾಗೂ ಗೋಸಂರಕ್ಷಣೆಯಲ್ಲಿ ಮಾರ್ಗದರ್ಶನ ಮತ್ತು ಪ್ರೇರಣೆ ಪಡೆದ ಈ ಯುವ ಕಾರ್ಯಕರ್ತರ ತಂಡವನ್ನು ಕಂಡು ವೈದ್ಯಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು. ಹೋರಿಯ ಮ್ಹಾಲಕ ರವಿಚಂದ್ರ ವಳಮಲೆ, ಬೈಕ್ ಸವಾರ ಕೃಷ್ಣ ನಾಯ್ಕ ಈ ಎಲ್ಲ ಕಾರ್ಯದಲ್ಲಿ ಜೊತೆಗಿದ್ದು ಸಹಕರಿಸಿದರು.
ಪ್ರಸ್ತುತ ಗಣೇಶ್ ಭಟ್ ಮುಣ್ಚಿಕ್ಕಾನ ಅವರ ಪ್ರೀತಿಯ ಆರೈಕೆಯಲ್ಲಿ ಕೃಷ್ಣನೀಗ ಚೇತರಿಸಿಕೊಳ್ಳುತ್ತಿರುವುದು ಸಮಾಧಾನಕರ ವಿಷಯವಾಗಿದೆ.

LEAVE A REPLY

Please enter your comment!
Please enter your name here