ಬಟ್ಟೆಯಮೇಲೆ ಹಣದ ಹೊಳೆ!!!

0
1415

ನಿತ್ಯ ಅಂಕಣ-೯೩ : ತಾರಾನಾಥ್‌ ಮೇಸ್ತ, ಶಿರೂರು.
ಬದುಕು ಕಟ್ಟಿಕೊಳ್ಳಲು ವ್ಯಾಪಾರ ವಹಿವಾಟುಗಳು ನಡೆಸಿದಾಗ, ಪ್ರಾರಂಭಿಕ ಹಂತದಲ್ಲಿ ಎಲ್ಲವೂ ಸಾಂಗವಾಗಿ ನಡೆದು, ನಂತರ ವ್ಯಾಪಾರದಲ್ಲಿ ನಷ್ಟ ಹೊಂದುವ ಸಂದರ್ಭಗಳು ನಡೆಯುವುದು ಸಹಜ. ಆವಾಗ ಕೆಲವರು ವ್ಯವಹಾರ ನಷ್ಟದಿಂದ ಒಂದಡೆ ಜೀವನ ನಿರ್ವಹಣೆಯ ಸಮಸ್ಯೆ, ಮತ್ತೊಂದಡೆ ಸಾಲಗಾರರ ಕಾಟದಿಂದ ಜೀವನ ನಿರ್ವಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವಂತ ಘಟನೆಗಳು ನಡೆಯುತ್ತವೆ. ಕೆಲವರು ಸೋಲಿಗೆ ಕುಗ್ಗದೆ, ಸೋಲನ್ನು ಸವಾಲಾಗಿ ಸ್ವೀಕರಿಸಿ, ಸೋಲನ್ನು ಮೆಟ್ಟಿ ನಿಲ್ಲುವ ಧೈರ್ಯವಂತರು ಇದ್ದಾರೆ. ಹಾಗೆಯೇ ವ್ಯವಹಾರ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಭಕ್ತರು, ನಿತ್ಯಾನಂದರಲ್ಲಿ ಅಳಲನ್ನು ವ್ಯಕ್ತಪಡಿಸುತ್ತಿದ್ದರು. ಭಗವಾನರು ವ್ಯವಹಾರದಲ್ಲಿ ಸೋಲು ಕಂಡಿರುವ ವ್ಯಕ್ತಿಯ, ಕರ್ತವ್ಯಪ್ರಜ್ಞೆ, ಪ್ರಾಮಾಣಿಕ ಸೇವೆ, ಧರ್ಮಮಾರ್ಗದ ಸೇವೆ, ಇವುಗಳನ್ನು ಗುರುತಿಸಿ, ಅಂತವರನ್ನು ಸಾಲ-ಸೋಲಗಳಿಂದ ಉದ್ಧರಿಸುತ್ತಿದ್ದರು.
ಗಣೇಶಪುರಿಯಲ್ಲಿ ಮಣಿ ಐಯ್ಯರ್ ಎಂಬುವರು ನಿತ್ಯಾನಂದರ ಆಶೀರ್ವಾದ ಪಡೆದು ಹೊಟೇಲೊಂದನ್ನು ಸ್ಥಾಪಿಸಿದ್ದರು. ಇಲ್ಲಿ ದಕ್ಷಿಣ ಭಾರತದ ಖಾದ್ಯಗಳು ಲಭ್ಯ ಇದ್ದವು. ಗುರುದೇವರು ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲಕರ ವಿನಾಯತಿ ದರದಲ್ಲಿ ಆಹಾರಗಳ ಒದಗಿಸುವಂತೆ ಸ್ವಾಮಿಗಳು ಹೇಳಿದ್ದರು. ಗುರುದೇವರ ಆಜ್ಞೆಯನ್ನು ಪಾಲಿಸಿಕೊಂಡು ಮಣಿ ಐಯ್ಯರ್ ಅವರು ಹೊಟೇಲು ಹಲವಾರು ವರ್ಷಗಳ ಕಾಲ ನಡೆಸಿದರು. ಹೀಗಿರುವಾಗ ನಂತರದ ದಿನಗಳಲ್ಲಿ ಹೊಟೇಲು ವ್ಯವಹಾರವು ನಷ್ಟದಲ್ಲಿ ಸಿಲುಕಿಕೊಂಡಿತು. ಅವರಿಗೆ ಆ ಸಮಯದಲ್ಲಿ 10 ಸಾವಿರ ರೂಪಾಯಿ ಸಾಲವಾಯಿತು. ಆವಾಗ ಅಸಹಾಯಕನಾದ ಮಣಿ ಐಯ್ಯರ್ ಅವರು, ಗುರುದೇವರಲ್ಲಿ ಎದುರಾಗಿರುವ ಆರ್ಥಿಕ ಸಂಕಷ್ಟದ ವಿಷಯವನ್ನು ಹೇಳಿಕೊಂಡರು.
ಆವಾಗ ಗುರುದೇವರು, ಮಣಿ ಐಯ್ಯರ್ ಅವರ ಸಮಕ್ಷಮ, ನೆಲದಲ್ಲಿ ಬಟ್ಟೆಯನ್ನು ಹಾಸಿದರು. ಅದರ ಮೇಲೆ ಖಾಲಿಯಾಗಿದ್ದ ಕರಡಿಕೆಯನ್ನು ತಲೆ ಕೆಳಗಾಗಿ ಹಿಡಿದು ಕುಲುಕಿದರು. ಖಾಲಿ ಕರಡಿಕೆಯಿಂದ ನೋಟು ಉದುರಿ ಹಾಸಿದ ಬಟ್ಟೆಯ ಮೇಲೆ ಬಿದ್ದವು. ನಂತರ ಭಕ್ತ ಮಣಿ ಐಯ್ಯರಲ್ಲಿ ಹಣವನ್ನು ಕೊಂಡಯ್ಯಲು ಹೇಳಿದರು. ಮರುದಿನ ಮಣಿ ಐಯ್ಯರ್ ತನ್ನ ಅಳಿಯನ ಜೊತೆ ಹಣವನ್ನು ಎಣಿಕೆ ಮಾಡುವಾಗ ಅದರಲ್ಲಿ ಸರಿಯಾಗಿ ಹತ್ತು ಸಾವಿರ ರೂಪಾಯಿಗಳಿದ್ದವು. ಅಷ್ಟೇ ಹಣ ಅವರಿಗೆ ಸಾಲ ತಿರಿಸಲು ಬೇಕಾದ ಮೊತ್ತವಾಗಿತ್ತು. ಆ ಹಣವನ್ನು ಸಾಲಪಡೆದವರಿಗೆ ನೀಡಿ, ಐಯ್ಯರರು ಸಾಲ ಮುಕ್ತರಾಗುತ್ತಾರೆ. ಆದರೆ ಐಯ್ಯರವರಿಗೆ, 550 ರೂಪಾಯಿಯ ಸಾಲವೊಂದು, ಡಾಲ್ಡಾವನ್ನು ಖರಿಧಿಸಿರುವ ಅಂಗಡಿಯಯಲ್ಲಿ ಇತ್ತು. ಈ ವಿಚಾರ ಅವರು ನೆನಪಿಗೆ ಬಾರದೆ ಗುರುದೇವರಲ್ಲಿ ಹೇಳಿರಲಿಲ್ಲ. ಅದನ್ನು ಚುಕ್ತಾಗೊಳಿಸಲು ಅವರು ಮಿತ್ರನಿಂದ ಸಾಲಪಡೆದು ನೀಡಲು ಹೋಗುತ್ತಾರೆ. ಆವಾಗ ಅಂಗಡಿ ಮಾಲಿಕ ಸ್ವೀಕರಿಸುವುದಿಲ್ಲ. ನಿಮ್ಮಂತೆಯೇ ಇರುವ ವ್ಯಕ್ತಿಯೊಬ್ಬರು ಬಾಕಿ ಇದ್ದ ಹಣ ನೀಡಿ ಹೋದರು. ಆತ ರಶೀದಿಗಾಗಿಯೂ ಕಾಯಲಿಲ್ಲ. ಎಂದು ಹೇಳಿ ರಶೀದಿ ನೀಡುತ್ತಾರೆ. ಇದೆಲ್ಲವು ಗುರುದೇವರ ಲೀಲೆ ಎಂದು ಐಯ್ಯರ್ ಅವರಿಗೆ ತಿಳಿಯುತ್ತದೆ. ಸಮಸ್ಯೆಯಲ್ಲಿ ಸಿಲುಕಿದಾಗ ಗುರುದೇವರು ಕೃಪೆ ತೋರಿದ ಲೀಲಾಮೃತವನ್ನು ಸದ್ಭಕ್ತ ಬಂಧುಗಳೊಂದಿಗೆ ಮಣಿ ಐಯ್ಯರ್ ಅವರು ಹಂಚಿಕೊಳ್ಳುತ್ತಾರೆ.

LEAVE A REPLY

Please enter your comment!
Please enter your name here