ಬಜಕೂಡ್ಲು ಗೋಶಾಲೆಯಲ್ಲಿ ವಿದ್ಯಾರ್ಥಿ ಸಂಗಮ

0
551

ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಗೋಕರ್ಣಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನೀ, ಬಿಂದು ಸಿಂಧು, ಮುಷ್ಟಿಭಿಕ್ಷೆ, ಸಂಸ್ಕಾರ ಹಾಗೂ ಮಾತೃವಿಭಾಗದ ಸಂಯುಕ್ತ ಆಶ್ರಯದಲ್ಲಿ ಎಣ್ಮಕಜೆ ವಲಯದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಾಗೂ ವಿಚಾರ ಸಂಕಿರಣಗಳನ್ನು ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿತ್ತು.
 
 
 
ವೇದಮೂರ್ತಿ ಕೇಶವಪ್ರಸಾದ ಭಟ್ ಕೂಟೇಲು ಅವರು ಗೋಪೂಜೆಯನ್ನು ನಡೆಸಿದರು. ಬಿ.ಜಿ.ರಾಮಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಂಠಪಾಠ, ರಸಪ್ರಶ್ನೆ, ಭಾಷಣ, ದೇವರ ನಾಮ ಇತ್ಯಾದಿ ಸ್ಪರ್ಧೆಗಳು ಐದು ವಿಭಾಗಗಳಲ್ಲಾಗಿ ನಡೆಯಿತು. ಮುಷ್ಟಿಭಿಕ್ಷೆ ಹಾಗೂ ಬಿಂದು ಸಿಂಧು ಯೋಜನೆಗಳ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
 
 
 
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಅಧ್ಯಕ್ಷತೆ ವಹಿಸಿದ್ದರು. ಪ್ರತೀಕ್ಷಾ ತಿರುಮಲೇಶ್ವರಿ ಪ್ರಾರ್ಥನೆಯನ್ನು ಹಾಡಿದರು. ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ ಸ್ವಾಗತಿಸಿದರು. ವಿಶೇಷ ಅಭ್ಯಾಗತರಾದ ಕೇಶವಪ್ರಸಾದ ಎಡೆಕ್ಕಾನ ವಿದ್ಯಾರ್ಥಿಗಳ ಸಂಘಟನೆ ಕುರಿತು ಮಾತನಾಡಿದರು. ಸಂಸ್ಕಾರವಂತರಾಗಿ ಉತ್ತಮ ಜೀವನವನ್ನು ನಡೆಸಬೇಕು ಎಂದು ಬಾಲಕೃಷ್ಣ ಶರ್ಮ ಕುಂಬಳೆ ನುಡಿದರು. ಸ್ವದೇಶೀ ಗೋತಳಿಯ ಮಹತ್ವದ ಬಗ್ಗೆ ಕೇಶವಪ್ರಸಾದ ಭಟ್ ಕೂಟೇಲು ವಿವರಣೆಯನ್ನು ನೀಡಿದರು. ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು ಮಂಗಳೂರಿನ ಕುಳೂರಿನಲ್ಲಿ ನಡೆಯಲಿರುವ ಮಂಗಲ ಗೋಯಾತ್ರೆಯ ಮಾಹಿತಿ ನೀಡಿ ಎಲ್ಲರೂ ಭಾಗವಹಿಸುವಂತೆ ಕರೆನೀಡಿದರು.
 
 
 
ಮುಳ್ಳೇರಿಯ ಮಂಡಲ ಮಾತೃಪ್ರಧಾನೆ ಕುಸುಮ ಪೆರ್ಮುಖ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಾದ ಶ್ರೀಶ ಪರ್ತಜೆ, ಸ್ಮಿತಾ ಪಾರ್ವತಿ, ಶ್ರೀಹರ್ಷ ಮುಳಿಯಾಲ ಹಾಗೂ ಕರಾಟೆಯಲ್ಲಿ ವಿಶೇಷ ಸಾಧನೆಗೈದ ಕುಮಾರಿ ಮಧುಶ್ರೀ ಮಿತ್ರ ಇವರನ್ನು ಗುರುತಿಸಿ ಸ್ಮರಣಿಕೆಯನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ವಾಹಿನಿ ಪ್ರಧಾನೆ ವಿಜಯಶ್ರೀ ಪೆರ್ಲ ಧನ್ಯವಾದವನ್ನಿತ್ತರು. ವಲಯ ಕಾರ್ಯದರ್ಶಿ ಶಂಕರಪ್ರಸಾದ್ ಕುಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here