ಬಂಡೆ ಕೊರೆದು ನಿರ್ಮಾಣಗೊಂಡವು “ಗುಹಾಲೋಕ”

0
818

ನಿತ್ಯ ಅಂಕಣ: ೫೩ – ತಾರಾನಾಥ್‌ ಮೇಸ್ತ,ಶಿರೂರು.

ನಿತ್ಯಾನಂದ ಸ್ವಾಮಿಗಳು ಕೇರಳದ ದಕ್ಷಿಣದ ಪ್ರದೇಶಗಳಲ್ಲಿ ಸಂಚಾರವನ್ನು ಮುಗಿಸಿಕೊಂಡು ಉತ್ತರಾಭಿ ಮುಖವಾಗಿ ಸಂಚರಿಸುತ್ತ, ಕಾಂಞಂಗಾಡಿಗೆ ಬರುತ್ತಾರೆ. ಇದರ ನಡುವೆ ಅವರು ಉಡುಪಿ, ಮಂಗಳೂರು ಜಿಲ್ಲೆಗಳ ಸಂಚಾರವನ್ನು ಮುಗಿಸಿರುತ್ತಾರೆ. ಹೋದಲೆಲ್ಲ ಅವರು ಲೀಲೆಗಳ ತೊರ್ಪಡಿಸುತ್ತಾರೆ. ಭಕ್ತರನ್ನು ಹರಸುತ್ತಾರೆ. ರೋಗಿಗಳ ವ್ಯಾಧಿಗಳನ್ನು ಗುಣಪಡಿಸುತ್ತಾರೆ. ಹೀಗೆ ಗುರುದೇವರಿಂದ ಸಮಾಜಮುಖಿ ಸೇವಾ ಕಾರ್ಯಗಳು ನಡೆಯುತ್ತವೆ.

ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಕಾಂಞಂಗಾಡ್ ಪಟ್ಟಣ ಇರುವುದು. ಚರಿತ್ರೆಯ ಪುಟಗಳಲ್ಲಿ “ಪಯ್ಯನ್ನೂರು ಕಳಗಮ್” ಕರೆಯಲ್ಪಡುವ ಮೂವತ್ತೆರಡು ತಾಲೂಕುಗಳ ಗ್ರಾಮಗಳಲ್ಲಿ ಕಾಂಞಂಗಾಡ್ ಕೂಡ ಒಳಪಟ್ಟಿತ್ತು. ಈ ಎಲ್ಲಾ ಪ್ರದೇಶವು ಚರ್ಕಳ ರಾಜನಾದ ಕೊಲತ್ತಿರಿಯಿಂದ ಆಳಲ್ಪಡುತಿತ್ತು. ಆತನ ಅಧಿನದಲ್ಲಿದ್ದ ತುಂಡರಸ ಕಣ್ಣನ್ ಎನ್ನುವನು ಕಾಂಞಂಗಾಡ್ ಪ್ರಾಂತ್ಯವನ್ನು ಆಳುತ್ತಿದ್ದ. ರಾಜ ಕಣ್ಣನ್ ಆ ಪ್ರದೇಶದಲ್ಲಿ ಕೋಟೆಯನ್ನು ನಿರ್ಮಿಸಿದನು. ಕನ್ನಡದ ಅರಸ ರಾಜ ಇಕ್ಕೇರಿಯು ಕಾಂಞಂಗಾಡ್ ಪ್ರಾಂತ್ಯವನ್ನು ವಶಕ್ಕೆ ಪಡೆದು ಕೊಳ್ಳುತ್ತಾನೆ. ಹೊಸ ದುರ್ಗವನ್ನು ಕಟ್ಟುತ್ತಾನೆ. ಹೊಸ ದುರ್ಗ ಅಂದರೆ ಕನ್ನಡದಲ್ಲಿ “ಹೊಸದಾದ ಕೋಟೆ” ಎನ್ನುವ ಅರ್ಥ ಸೂಚಿಸುತ್ತದೆ. ಹಾಗಾಗಿ ಆ ಊರಿಗೆ ಹೊಸದುರ್ಗ ಹೆಸರು ಬಂದಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.

ಈ ಪ್ರದೇಶವು ಗಿಡ- ಗಂಟಿ, ಪೊದೆಗಳಿಂದ ಆವರಿಸಿತ್ತು. ನಿತ್ಯಾನಂದರು ಒಂದಿಷ್ಟು ಕಾರ್ಮಿಕರನ್ನು ಸೇರಿಸಿಕೊಂಡು ಪರಿಸರ ಸ್ವಚ್ಚಗೊಳಿಸುವ ಕೆಲಸ ಮಾಡಿಸುತ್ತಿದ್ದರು. ಗುಡ್ಡ ದಿಣ್ಣೆಗಳನ್ನು ಸಮತಟ್ಟುಗೊಳಿಸುತ್ತಿದ್ದರು. ಕಾರ್ಮಿಕರೊಂದಿಗೆ ಸೇರಿಕೊಂಡು, ಸುಡುವ ಬಿಸಿಲಿನಲ್ಲಿ ಬರಿ ಮೈಯಲ್ಲಿ ನಿತ್ಯಾನಂದರು ಶ್ರಮದಾನ ಮಾಡುತ್ತಿದ್ದರು. ಅಲ್ಲಿ ನಡೆಯುವ ಕೆಲಸ ಕಾರ್ಯಗಳನ್ನು ಸ್ಥಳಿಯರು ಅಚ್ಚರಿಪಟ್ಟು ವಿಕ್ಷಿಸುತ್ತಿದ್ದರು. ಎಲ್ಲ ಕಾರ್ಮಿಕರಿಗೂ ನಿತ್ಯಾನಂದರು ಗಂಜಿ ಊಟ, ಸಂಬಳವನ್ನು ಸರಿಯಾಗಿ ನೀಡುತ್ತಿದ್ದರು. ಹೀಗಿರುವಾಗ ಕೌಪೀನ ಧಾರಿಗೆ ಹೇಗೆ ಹಣ ಬರುತ್ತದೆ ಎಂಬ ಸಂಶಯವು ಸ್ಥಳಿಯರಿಗೆ ಕಾಡುತ್ತದೆ. ಮೊದಲು ಸರಿಯಾದ ರಸ್ತೆಯ ನಿರ್ಮಾಣವಾಗುತ್ತದೆ. ಅಲ್ಲೇ ಹತ್ತಿರದಲ್ಲಿದ್ದ ದೊಡ್ಡ ಕೆಂಪು ಮುರ ಕಲ್ಲಿನ ಬಂಡೆ, ನಿತ್ಯಾನಂದರ ಗಮನ ಸೆಳೆಯುತ್ತದೆ. ಸ್ವಾಮೀಜಿ ಅವರು ಮತ್ತು ಅವರೊಂದಿಗೆ ಇದ್ದ ಕಾರ್ಮಿಕರ ತಂಡವು, ಸ್ವಾಮೀಜಿ ಅವರ ನಿರ್ದೇಶನದಂತೆ ಆ ಕಲ್ಲನ್ನು ಕೊರೆದು, ಗುಹೆಗಳನ್ನು ನಿರ್ಮಿಸಲು ತೋಡಗುತ್ತದೆ. ಇಲ್ಲೊಂದು ಗೌಪ್ಯವಾಗಿ ಕಾಮಗಾರಿ ನಡೆಯುವ ವಿಚಾರವು ಊರೆಲ್ಲ ಹಬ್ಬುತ್ತದೆ. ಕೆಲಸಗಾರರಿಗೆ ನಿತ್ಯಾನಂದರು ಸಂಬಳವನ್ನು ತಮ್ಮ ಲಂಗೋಟಿಯಿಂದ ನೋಟುಗಳನ್ನು ತೆಗೆದು ನೀಡುತ್ತಿರುವ ವಿಷಯವು ಅಚ್ಚರಿಗೆ ಕಾರಣವಾಗುತ್ತದೆ.

Advertisement

ಜನರು ಅಕ್ಕಪಕ್ಕದ ಹಳ್ಳಿಗಳಿಂದಲೂ ಸ್ವಾಮೀಜಿಯ ದರ್ಶನ ಪಡೆಯಲು ಕಾಂಞಂಗಾಡಿಗೆ ಬರಲು ಆರಂಭಿಸುತ್ತಾರೆ. ಅವರೆಲ್ಲರಿಗೂ ಇವರು ನಿತ್ಯಾನಂದ ಸ್ವಾಮಿಗಳೆಂದು ತಿಳಿದು ಬರುತ್ತದೆ. ಅವರು ಮಾಡುವ ನಿರ್ಮಾಣ ಕಾರ್ಯವು ಬ್ರಿಟಿಷ್ ಅಧಿಕಾರಿಗಳ ಕಿವಿಗೂ ಮುಟ್ಟುತ್ತದೆ. ಅಧಿಕಾರಿಗಳಿಗೂ ಕೌಪೀನ ಧಾರಿ ಹಣಜೋಡಿಸುವುದು ಹೇಗೆ..? ಇತನಿಗೆ ಏಲ್ಲಿಯ ಸಂಪತ್ತು..? ಹತ್ತು ಹಲವು ಅನುಮಾನಗಳು ಸುಳಿದಾಡುತ್ತವೆ. ನಿತ್ಯಾನಂದರು ಬರುವಾಗ ಜೋಳಿಗೆ ಹೊತ್ತುಕೊಂಡು ಬರಲಿಲ್ಲ. ಲಂಗೋಟಿ ಮಾತ್ರವೇ ಅವರ ದೇಹದಲ್ಲಿತ್ತು. ಗುಹೆ ನಿರ್ಮಾಣದ ಕಾಮಗಾರಿ ಮಾತ್ರ ಭರದಿಂದಲೇ ಸಾಗುತಿತ್ತು. ಕೆಲಸಗಾರರು ಸಂಜೆ ಕೆಲಸ ಮುಗಿಸಿದ ಬಳಿಕ ಅವರ ನಿಗದಿತ ಸಂಬಳವು ನಿತ್ಯಾನಂದರು ಚಮತ್ಕಾರಗಳ ಮೂಲಕ ಬಟವಾಡೆ ಮಾಡುತ್ತಿದ್ದರು. ನಿತ್ಯಾನಂದರಿಂದ 40 ಗುಹೆಗಳು ಕೆಂಪು ಬಂಡೆಯೊಳಗೆ ಕೊರೆದು ನಿರ್ಮಾಣಗೊಳ್ಳುತ್ತದೆ. ಈ “ಗುಹಾಲೋಕ” ಯೋಗಿಗಳಿಗೆ ಸಾಧಕರ ಅನುಷ್ಠಾನಗಳಿಗೆ ಯೋಗ್ಯ ಸ್ಥಳವಾಗಿದೆ. ಈ ಕಾಮಗಾರಿ ಯೋಗಿಶ್ವರನಾದ ನಿತ್ಯಾನಂದರಿಂದ 1927 ಪ್ರಾರಂಭ ಪಡೆದು ನಂತರ ಮೂರು ವರ್ಷಗಳಲ್ಲಿ ಪೂರ್ಣಗೊಂಡಿರ ಬಹುದೆಂದು ಅಂದಾಜಿಸಲಾಗಿದೆ. ಮುಂದೆ ಅದೇ ಸ್ಥಳದಲ್ಲಿ ಶ್ರೀಜನಾನಂದ ಸ್ವಾಮಿಗಳಿಂದ 1963 ರಲ್ಲಿ ನಿತ್ಯಾನಂದ ಮಂದಿರ ಸ್ಥಾಪನೆ ಪಡೆದು, ಭಕ್ತರ ಶ್ರದ್ಧಾ ಕೇಂದ್ರವಾಗಿ ವಿಶ್ವ ವಿಖ್ಯಾತವಾದ ಧಾರ್ಮಿಕ ಕ್ಷೇತ್ರವಾಗುತ್ತದೆ.

LEAVE A REPLY

Please enter your comment!
Please enter your name here