ಫೇಲಾದವನಿಂದ, ಫೇಲಾದವರಿಗಾಗಿ, ಫೇಲಾದವರಿಗೋಸ್ಕರ….!

0
3481

2005 ಮೇ ತಿಂಗಳ ಒಂದು ಶುಭ(?!)ದಿನ.

ಅಂದು ಆಕಾಶವೇ ಕೆಳಗೆ ಬಿದ್ದಿತ್ತು! ಎಂದೂ ಯಾರೆದುರೂ ತಲೆತಗ್ಗಿಸದ ನಾನು ಅಂದು ತೋರಿಸಲು ಮುಖವಿಲ್ಲದಂತಿದ್ದೆ. ಅಪ್ಪ ಅಮ್ಮ ಅಕ್ಕ ತಂಗಿಯರೆದುರು ಅಪಮಾನದಿಂದ ಕುಗ್ಗಿಹೋಗಿದ್ದೆ. ಕಾರಣ, ಅಂದು ನನ್ನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶಕ್ಕಾಗಿ ಇಲಾಖೆ ಕೊಟ್ಟಿದ್ದ ಫೋನ್ ನಂಬರ್ ಗೆ ಕರೆ ಮಾಡಿದರೆ, ಅತ್ತ ಕಡೆಯಿಂದ ಹುಡುಗಿಯೊಬ್ಬಳ ಸುಮಧುರ ದನಿ. ಆದರೆ ಫಲಿತಾಂಶ ಮಾತ್ರ ಸುಮಧುರವಾಗಿರಲಿಲ್ಲ. ನನ್ನ ರಿಜಿಸ್ಟರ್ ನಂಬರ್ ಡಯಲ್ ಮಾಡಿದ ತಕ್ಷಣ ನಾನು ಪಡೆದ ಅಂಕಗಳು ಕೇಳಿಬರತೊಡಗಿತು.

“ನೀವು ಪಡೆದಿರುವ ಅಂಕಗಳು ಹೀಗಿವೆ.
ಕನ್ನಡ – 85,
ಇಂಗ್ಲೀಷ್ – 24,
ಫಿಸಿಕ್ಸ್ – 8,
ಕೆಮಿಸ್ಟ್ರಿ – 9,
ಮ್ಯಾತ್ಸ್ – 28 ಹಾಗೂ
ಬಯಾಲಜಿ – 22
ಕ್ಷಮಿಸಿ! ನೀವು ಅನುತ್ತೀರ್ಣರಾಗಿದ್ದೀರ. ಕರೆ ಮಾಡಿದ್ದಕ್ಕೆ ಧನ್ಯವಾದಗಳು.”

ನಾನು ಐದು ವಿಷಯಗಳಲ್ಲಿ ಫೇಲಾಗಿರುವುದನ್ನು ಕೇಳಿ ಸೈಲೆಂಟಾಗಿ ಫೋನ್ ಇಟ್ಟೆ.
ಹೆಚ್ಚು ಕಮ್ಮಿ ನಾ ಪಡೆದ ಅಂಕಗಳು (8524892822) ಫೋನ್ ನಂಬರ್ ನಂತೆ ಆಗಿಬಿಟ್ಟಿದ್ದವು!

ಪರೀಕ್ಷೆ ಬರೆದವನು ನಾನೇ ಆಗಿದ್ದರಿಂದ ಫಲಿತಾಂಶ ನನಗೆ ನಿರೀಕ್ಷಿತವೇ ಆಗಿತ್ತು. ಆದರೆ ನನ್ನ ಮನೆಯವರಿಗಾಗಲೀ ನನ್ನ ಪರಿಚಯದವರಿಗಾಗಲೀ ಇದು ಅನಿರೀಕ್ಷಿತವಾಗಿತ್ತು. ಬಹಳಷ್ಟು ಜನ ಹಿತೈಷಿಗಳು ನಾನು ಈ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿ ಉತ್ತೀರ್ಣನಾಗುತ್ತಾನೆಂದು ಭರವಸೆ ಇಟ್ಟಿದ್ದರು. ಏಕೆಂದರೆ ಅಲ್ಲಿಯವರೆಗೂ ಶಾಲೆಯ ಎಲ್ಲಾ ಪರೀಕ್ಷೆಗಳಲ್ಲಿ ನಾನೇ ಮೊದಲಿನವನಾಗಿರುತ್ತಿದ್ದೆ. ಪಾಠ ಮಾತ್ರವಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಯಾವಾಗಲೂ ಮುಂದಿದ್ದ ನನ್ನನ್ನು ಎಲ್ಲರೂ ಗುರುತಿಸುತ್ತಿದ್ದರು. ಅದೂ ಅಲ್ಲದೆ ಅಲ್ಲಿಯವರೆಗೂ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂನಲ್ಲಿ ಓದುತ್ತಿದ್ದ ನಾನು ಅಲ್ಲಿಂದ ಸೀದಾ ಮೈಸೂರಿನಂತಾ ನಗರದಲ್ಲಿ ಕಾಲೇಜು ಸೇರಿದ್ದೆ. ಇದೆಲ್ಲದರ ನಡುವೆ “ಹಳ್ಳಿಯಿಂದ ಪಟ್ಟಣಕ್ಕೆ ಹೋಗಿ ಸೈನ್ಸು ತೆಗೆದುಕೊಂಡಿರೋ ಹುಡುಗ ಅದೇನು ಮಾಡಿ ದಬಾಕುತ್ತಾನೆ ನೋಡೋಣ.” ಎನ್ನುವವರೂ ಕೂಡಾ ಇದ್ದರೂ. ಹೀಗಾಗಿ ನನ್ನ ಎಲ್ಲಾ ನಿರ್ಧಾರಗಳಿಗೂ ಪ್ರೋತ್ಸಾಹ ನೀಡುತ್ತಿದ್ದ ನಮ್ಮ ತಂದೆಗಂತೂ ಈ ನನ್ನ ಕಳಪೆ ಸಾಧನೆ ತೀರಾ ಅನಿರೀಕ್ಷಿತವಾಗಿತ್ತು. ಅಮ್ಮನಂತೂ “ನಾನು ಮೊದಲೇ ಹೇಳಿದ್ದೆ. ಇವನನ್ನು ಮೈಸೂರಿಗೆ ಕಳುಹಿಸಬೇಡಿ ಅಂತ. ನನ್ನ ಮಾತು ಕೇಳಲಿಲ್ಲ. ಇವನು ಹೇಳಿದಂತೆ ಕುಣಿದ್ರಿ. ಈಗ ಸುಮ್ಮನೆ ಸಾವಿರಾರು ರೂಪಾಯಿ ದಂಡ.” ಅಂತ ಉರಿಯುವ ಬೆಂಕಿಗೆ ತುಪ್ಪ ಸುರಿದರು. “ಇನ್ಮೇಲಾದ್ರೂ ಅಪ್ಪ ಮಗ ನನ್ನ ಮಾತು ಕೇಳಿ. ಉದ್ಧಾರ ಆಗ್ತೀರಾ.” ಅಂತ ಒಗ್ಗರೆಣ್ಣೆ ಬೇರೆ!

Advertisement

ಮೂಗನಂತೆ ನಿಂತಿದ್ದ ನನಗೆ “ಈಗ ಅಪ್ಪ ಏನು ಹೇಳಬಹುದು? ಏನು ಮಾಡಬಹುದು? ನಾಳೆಯಿಂದ ಸ್ನೇಹಿತರಿಗೆ, ನೆಂಟರಿಗೆ ಮುಖ ತೋರಿಸುವುದು ಹೇಗೆ? ರಿಸಲ್ಟ್ ಬರೋಕೆ ವಾರ ಮುಂಚೆಯೇ “ಸ್ವೀಟ್ ರೆಡಿ ಮಾಡಿ ಇಟ್ಟುಕೊ” ಎಂದು ಹೇಳುತ್ತಿದ್ದ ನನ್ನ ಹೈಸ್ಕೂಲು ಶಿಕ್ಷಕರಿಗೆ ಏನೆಂದು ಉತ್ತರ ನೀಡುವುದು? ‘ಕಾಲು ಜಾರಲಿ’ ಎಂದೇ ಕಾಯುವ ಹಿತಶತ್ರುಗಳ ಕುಹಕದ ಮಾತುಗಳನ್ನು ಹೇಗೆ ಕೇಳುವುದು? ಇದೆಲ್ಲದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಒಂದಷ್ಟು ದಿನ ಊರು ಬಿಟ್ಟು ಬೇರೆ ಊರಿನಲ್ಲಿ ಸೆಟ್ಲ್ ಆಗಿ ಬಿಡೋದಾ?” ಈ ರೀತಿಯ ನೂರು ವಿಚಾರಗಳು ಏಕಕಾಲಕ್ಕೆ ಹೈಸ್ಪೀಡಿನಲ್ಲಿ ನನ್ನ ತಲೆಯೊಳಗೆ ಗಿರಕಿ ಹೊಡೆಯುತ್ತಿದ್ದವು. ಅದರೊಂದಿಗೆ ಅಪ್ಪನ ಆ ಹೊತ್ತಿನ ದಿವ್ಯ ಮೌನ ಕ್ಷಣ ಕ್ಷಣಕ್ಕೂ ನನ್ನನ್ನು ದಹಿಸುತ್ತಿತ್ತು.

ಅಷ್ಟಕ್ಕೂ ನಾನು ಯಾಕೆ ಫೇಲ್ ಆದೆ?

ಒಂದೇ ಒಂದು ಮಾತಿನಲ್ಲಿ ಹೇಳಬೇಕೆಂದರೆ, ನಾನು ಓದುವ ವಿಷಯದಲ್ಲಿ “ಹಾರ್ಡ್ ವರ್ಕರ್” ಆಗಿರಲಿಲ್ಲ. ಅದರಲ್ಲೂ ಕನ್ನಡ ಮೀಡಿಯಂ ನಲ್ಲಿ ಓದಿದ್ದ ನನಗೆ ಇಂಗ್ಲೀಷ್ ನಲ್ಲಿ ಸೈನ್ಸ್ ಓದಲು ಬೇಕಾದ ಕಠಿಣ ಪರಿಶ್ರಮದ ಗುಣ ಇರಲಿಲ್ಲ. ಅಲ್ಲಿಯವರೆಗೂ ಭಗವಂತ ಕೊಟ್ಟಿದ್ದ ತೀಕ್ಷ್ಣ ಬುದ್ಧಿ ಶಕ್ತಿಯ ಬಲದಿಂದ ಪಾಠವನ್ನು ಕೇಳುತ್ತಲೇ ತಲೆಯಲ್ಲಿ ಪ್ರಿಂಟು ಹಾಕಿಕೊಂಡು ಎಕ್ಸಾಮ್ ಹತ್ತಿರ ಬಂದಾಗ ಒಂದಿಷ್ಟು ಮೆಲುಕು ಹಾಕಿ ಅದನ್ನೇ ಪರೀಕ್ಷೆಯಲ್ಲಿ ಬರೆದು ಒಳ್ಳೆಯ ಅಂಕಗಳನ್ನು ಗಿಟ್ಟಿಸುತ್ತಿದ್ದೆ. ಈ ಉರು ಹೊಡೆಯುವುದು, ಶಿಸ್ತಿನಿಂದ ಗಂಟೆಗಟ್ಟಲೆ ಕುಳಿತು ಓದುವುದು, ರಾತ್ರಿಯೆಲ್ಲಾ ಓದುವುದು, ಪುಟಗಟ್ಟಲೆ ಹೋಂ ವರ್ಕ್ ಬರೆಯುವುದು ನನಗಾಗದ ಮಾತಾಗಿತ್ತು. ಅತಿಯಾದ ಶಿಸ್ತು ಅನ್ನುವ ಕಾರಣಕ್ಕಾಗಿಯೇ ನಾನು ಹಿಂದೆ ಓದುತ್ತಿದ್ದ ಖಾಸಗಿ ಶಾಲೆಯಲ್ಲಿ ಬಂಡಾಯವೆದ್ದು (ಆ ವಯಸ್ಸಿಗೆ!) ಸರ್ಕಾರಿ ಶಾಲೆ ಸೇರಿದ್ದೆ. ಹೇಳಿಕೊಳ್ಳುವಂತಹಾ ಸ್ಪರ್ಧೆ ಇಲ್ಲದಿದ್ದ ಆ ಶಾಲೆಯಲ್ಲಿ ನಾನೇ ಎಲ್ಲರಿಗಿಂತಾ ಬುದ್ಧಿವಂತ! (ಹಾಳೂರಿಗೆ ಉಳಿದವನೇ ಗೌಡ ಅನ್ನುವ ಗಾದೆಯ ಥರ!) ಹಾಗೆ ಆಟವಾಡುತ್ತಲೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 80% ಅಂಕಗಳು ಬಂತು. “ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆ ಸೇರದೆ ಹೋಗಿದ್ದರೆ ನಿಮ್ಮ ಹುಡುಗನಿಗೆ ಇನ್ನೂ ಒಂದೈದು ಪರ್ಸೆಂಟ್ ಹೆಚ್ಚಿನ ಮಾರ್ಕು ಬರುತ್ತಿತ್ತು. ಹೋಗಲಿ ಬಿಡಿ. ಮುಂದೆ ಆರ್ಟ್ಸ್ ಕೊಡಿಸಿ ಹುಡುಗನ ಭವಿಷ್ಯ ಹಾಳು ಮಾಡಬೇಡಿ, ಸೈನ್ಸ್ ಕೊಡಿಸಿ ಒಳ್ಳೆದಾಗತ್ತೆ” ಅಂತ ತಿಳಿದವರು ನಮ್ಮ ತಂದೆಗೆ ಸಲಹೆ ಕೊಟ್ಟರು.

ವಿಷಯ ಏನಂದ್ರೆ, ನಮ್ಮ ಇಡೀ ವಂಶದಲ್ಲೇ ಯಾರೂ ಡಿಗ್ರೀ ಓದಿರಲಿಲ್ಲ. ಹೀಗಾಗಿ ಸಹಜವಾಗಿ ನನಗೂ ವಿದ್ಯಾಭ್ಯಾಸದ ದೃಷ್ಟಿಯಿಂದ ಅಂತಾ ಉನ್ನತ ಗುರಿಗಳೇನು ಇರಲಿಲ್ಲ. ಹೆಚ್ಚಂದ್ರೆ ಒಂದು ಸರ್ಕಾರಿ ಕೆಲಸ ತಗೊಂಡ್ರೆ ಅದೇ ದೊಡ್ಡದು ಎನ್ನುವ ಭಾವನೆ. ಆಗ ನನಗೆ ಸೈನ್ಸು ಅಂದ್ರೆ ಏನು? ಆರ್ಟ್ಸು ಅಂದ್ರೆ ಏನು ಅಂತಲೂ ಗೊತ್ತಿರಲಿಲ್ಲ. ಅಷ್ಟಕ್ಕೂ ನಮ್ಮೂರಿನಲ್ಲಿ ಸೈನ್ಸ್ ಕಾಲೇಜೆ ಇರಲಿಲ್ಲ. ಇಷ್ಟಾದರೂ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂನಲ್ಲಿ ಓದಿದ ನಾನು ಮೈಸೂರಿನಲ್ಲಿ ಇಂಗ್ಲೀಷ್ ಮೀಡಿಯಮ್ಮಿನ ಸೈನ್ಸು ಸೇರುವ ನಿರ್ಧಾರ ಮಾಡಿದೆ. ಇದಕ್ಕೆ ಕಾರಣವೂ ಇತ್ತು. ನಾನು 9 ನೇ ತರಗತಿಯಲ್ಲಿ ಇದ್ದಾಗ ಸ್ವಾಮಿ ಪುರುಷೋತ್ತಮಾನಂದರ ‘ವಿದ್ಯಾರ್ಥಿಗಾಗಿ’ ಎನ್ನುವ ಕಿರುಪುಸ್ತಕ ಓದಿ ತುಂಬಾ ಪ್ರಭಾವಿತನಾಗಿ, ಜೀವನದಲ್ಲಿ ಓದಿದರೆ ಒಮ್ಮೆ ರಾಮಕೃಷ್ಣ ಆಶ್ರಮದಲ್ಲಿ ಓದಬೇಕು ಎಂದು ಸಂಕಲ್ಪ ಮಾಡಿಕೊಂಡಿದ್ದೆ. ಅಷ್ಟರಲ್ಲಾಗಲೇ ನಮ್ಮ ಶಾಲೆಗೆ ರಾಮಕೃಷ್ಣ ಆಶ್ರಮದಿಂದ ಪುಸ್ತಕ ಮಾರಲು ಬಂದವರೊಬ್ಬರಿಂದ ವಿಳಾಸ ಪಡೆದು ಮೈಸೂರಿನ ಆಶ್ರಮದ ಪುಸ್ತಕ ಭಂಡಾರಕ್ಕೆ ಪತ್ರ ಬರೆದು ಒಂದಷ್ಟು ಪುಸ್ತಕಗಳನ್ನೂ ತರಿಸಿಕೊಂಡಿದ್ದೆ! ಹೀಗಾಗಿ ಅಪ್ಪನಿಗೆ “ಮೈಸೂರಿನ ರಾಮಕೃಷ್ಣ ಆಶ್ರಮದ ಕಾಲೇಜಿಗೆ ಸೇರಿಸುವುದಾದರೆ ಮಾತ್ರ ಸೈನ್ಸು ತೆಗೆದುಕೊಳ್ಳುತ್ತೇನೆ.” ಎಂದು ಪಟ್ಟು ಹಾಕಿದೆ. ಪೊಲೀಸ್ ಇಲಾಖೆಯಲ್ಲಿದ್ದರೂ ಸದಾ ಕಾಲ ಸಾತ್ವಿಕ ಚಿಂತನೆಯನ್ನೇ ಮಾಡುತ್ತಿದ್ದ ಅಪ್ಪ ಒಪ್ಪಿಗೆ ನೀಡಿದರು. ಆದರೆ ಅಮ್ಮ ಒಪ್ಪಬೇಕಲ್ಲ. “ಬೇಡ ನೋಡಿ, ಈಗಲೇ ಯೋಗ, ತಣ್ಣೀರು ಸ್ನಾನ, ಆಹಾರ ಕ್ರಮ ಅಂತ ಏನೇನೋ ಅಭ್ಯಾಸ ಮಾಡ್ತಿದ್ದಾನೆ. ಆಮೇಲೆ ಆಶ್ರಮ ಅಂತ ಹೋದ್ರೆ ನಿಮ್ಮ ಮಗ ಸನ್ಯಾಸಿ ಆಗೋಗ್ತಾನೆ ಅಷ್ಟೇ!” ಅಂತ ಅಮ್ಮ ಅಂದ್ರೆ, ಅಕ್ಕ ತಂಗಿ ಇಬ್ಬರೂ “ನಮ್ಮೆಲ್ಲರನ್ನೂ ಬಿಟ್ಟು ಹೋಗೋಕೆ ನಿನಗೆ ಮನಸ್ಸಾದರೂ ಹೇಗೆ ಬರುತ್ತೋ?” ಅಂತ ಸನ್ನಿವೇಶಕ್ಕೆ ಸೆಂಟಿಮೆಂಟಲ್ ಟಚ್ ಕೊಟ್ಟರು. ಅದ್ಯಾವುದಕ್ಕೂ ಜಗ್ಗದ ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೆ. ಕಡೆಗೆ ಅಪ್ಪನ ಒತ್ತಾಸೆಯಿಂದ ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಗೆ ಸೇರುವುದೆಂದು ನಿರ್ಧಾರವಾಯಿತು. ನನ್ನ ಮಾತು ಕೇಳದೆ ಮೈಸೂರಿಗೆ ಹೋಗುತ್ತಿದ್ದಾನಲ್ಲಾ ಅನ್ನುವ ಕೋಪವಿದ್ದರೂ ಮಗ ಪಟ್ಟಣದಲ್ಲಿ ನೋಡುವವರಿಗೆ ಚೆನ್ನಾಗಿ ಕಾಣಲಿ ಅಂತ ಪ್ರೀತಿಯಿಂದ ಎರಡು ಜೊತೆ ಬಟ್ಟೆ ಹೋಲಿಸಿಕೊಟ್ಟರು ಅಮ್ಮ. ಒಂದು ಶುಭದಿನದಂದು ಅಪ್ಪ ಅಮ್ಮ ಅಕ್ಕಪಕ್ಕದ ಮನೆಯ ಹಿರಿಯರಿಗೆಲ್ಲಾ ನಮಸ್ಕಾರ ಮಾಡಿಕೊಂಡು ಆಶೀರ್ವಾದ ಪಡೆದು, ರಾಮಕೃಷ್ಣ ಆಶ್ರಮದ ಕಾಲೇಜಿಗೆ ಅಪ್ಲಿಕೇಶನ್ ಹಾಕಲು ಅಪ್ಪನೊಂದಿಗೆ ಮೈಸೂರಿಗೆ ಹೊರಟೆ.

ರಾಮಕೃಷ್ಣ ಆಶ್ರಮದಲ್ಲಿ ಓದಬೇಕೆಂಬ ಬಹಳ ದಿನಗಳ ಆಸೆ ಈಡೇರುವುದೆಂಬ ಸಂಭ್ರಮದಿಂದ, ವಿವೇಕಾನಂದರ ಮಡಿಲು ಸೇರಿಬಿಡಬೇಕು ಎನ್ನುವ ಆತುರದಿಂದ ಮೈಸೂರಿಗೆ ,ಹೊರಟಿದ್ದೆನೋ ನಿಜ. ಆದ್ರೆ ದುರದೃಷ್ಟ. ರಾಮಕೃಷ್ಣ ಆಶ್ರಮದಂತಾ ಪ್ರತಿಷ್ಠಿತ ಕಾಲೇಜಿಗೆ ಸೇರಲು, ನಾನು ಗಳಿಸಿದ್ದ 80% (ನಗರದ ಲೆಕ್ಕಕ್ಕೆ ಜುಜುಬಿ) ಅಂಕಗಳು ಕಡಿಮೆಯಾಗಿದ್ದವು. ಸೀಟು ಸಿಗಲಿಲ್ಲವೆಂಬ ದುಃಖದಿಂದ ಭಾರವಾದ ಹೃದಯದೊಂದಿಗೆ ವಾಪಾಸ್ಸು ಬರಬೇಕಾದರೆ, ಆಶ್ರಮದ ಹೊರಗೆ ನಗು ನಗುತ್ತಾ ಕುಳಿತಿದ್ದ ಸ್ವಾಮಿ ವಿವೇಕಾನಂದರ ಬೃಹತ್ ಮೂರ್ತಿ ಕಣ್ಣಿಗೆ ಬಿತ್ತು. ಮೊದಲೇ ಸೀಟು ಸಿಗದೆ ದುಖವಾಗಿತ್ತು. ಜೊತೆಗೆ ಈಗ ಕೋಪವೂ ಬಂತು! ಮೂರ್ತಿಯನ್ನೇ ನೋಡುತ್ತಾ “ಸ್ವಾಮೀಜಿ, ಇವತ್ತು ಅಷ್ಟು ಪ್ರೀತಿಯಿಂದ ನಿಮ್ಮ ಬಳಿ ಬಂದ ನನ್ನನ್ನು ಸೇರಿಸಿಕೊಳ್ಳದೆ ಹೊರಗೆ ಕಳುಹಿಸುತ್ತಾ ಇದ್ದೀರಾ ಅಲ್ವಾ? ನೋಡ್ತಾ ಇರಿ, ನಾಳೆ ಒಂದು ದಿನ ನೀವೇ ನನ್ನನ್ನ ನಿಮ್ಮ ಬಳಿಗೆ ಕರೆಸಿಕೊಳುವಷ್ಟರ ಮಟ್ಟಿಗೆ ಸಾಧನೆ ಮಾಡಿ ತೋರಿಸ್ತೀನಿ.” ಅಂತ ಮನಸ್ಸಿನಲ್ಲೇ ಛಾಲೆಂಜ್ ಮಾಡಿ ಬಂದಿದ್ದೆ!

ಸರಿ, ಇನ್ನೇನು ಮಾಡೋದು? ಬರೋದು ಬಂದಾಯ್ತು. ಇಲ್ಲೇ ಬೇರೆ ಕಾಲೇಜಿಗೆ ಸೇರಿಬಿಡೋಣ, ಅಂದುಕೊಂಡು ಇನ್ನೊಂದು ಖಾಸಗಿ ಕಾಲೇಜಿಗೆ ಸೇರಿದ್ದಾಯ್ತು. ಒಂದು ಹಾಸ್ಟೆಲ್ ನಲ್ಲಿ (ಬಸವೇಶ್ವರ ರಸ್ತೆಯ ಕುದೇರು ಮಠ) ಉಳಿಯುವ ವ್ಯವಸ್ಥೆಯೂ ಆಯಿತು. ಹಾಸ್ಟೆಲ್ಲಿನಲ್ಲಿ, ಒಂದೇ ರೂಮಿನಲ್ಲಿ ಆರು ಜನ ಸಹಪಾಠಿಗಳೊಂದಿಗೆ ವಾಸ. ಆರೂ ಜನ ನನ್ನ ಕಾಂಬಿನೇಶನ್ ನವರೇ. ಆದರೂ ಏನೂ ಪ್ರಯೋಜನವಿರಲಿಲ್ಲ. ಕಾರಣ ಎಲ್ಲರೂ ಅಷ್ಟೇನೂ ಬುದ್ಧಿವಂತರಲ್ಲದ, ನನ್ನಂತೆ ಕನ್ನಡ ಮೀಡಿಯಮ್ಮಿನಿಂದ ಬಂದ ಹುಡುಗರೇ. ಹೇಳಿಕೊಳ್ಳಬೇಕು ಅಂದ್ರೆ ನಾನೇ ಸ್ವಲ್ಪ ವಾಸಿ ಅನ್ನೋ ಥರ ಇದ್ದೆ! ಪಾಪ ಎಲ್ಲರೂ ಹಳ್ಳಿಯಿಂದ ಬಂದಂತಾ ಬಡ ಕುಟುಂಬದ ಹುಡುಗರು. ಅದೂ ಅಲ್ಲದೇ ದೇಶ ಧರ್ಮ ಸಾಹಿತ್ಯ ಮುಂತಾದ ವಿಚಾರಗಳ ಬಗ್ಗೆ ತೃಣ ಮಾತ್ರವೂ ಆಸಕ್ತಿ ತೋರಿಸದಿದ್ದ ಹುಡುಗರು ಅವರು. ಹೀಗಾಗಿ ನನ್ನ ವಿಚಾರಧಾರೆಗಳು, ನಡವಳಿಕೆಗಳು ಅವರಿಗೆ ವಿಚಿತ್ರವಾಗಿ ತೋರುತ್ತಿದ್ದವು. ಹೀಗಾಗಿ ಅವರೆಲ್ಲಾ ಒಂದು ಗುಂಪಾಗಿ ಹೋದರು. ನಾನೇ ಬೇರೆ ಆಗಿ ಹೋದೆ. ಹೊಂದಿಕೊಳ್ಳಲು ತುಂಬಾ ಕಷ್ಟವಾದರೂ ಹೇಗೋ ಹೊಂದಿಕೊಂಡೆ. ಹಾಸ್ಟೆಲ್ಲಿನಲ್ಲಿ ಬೆಲ್ಲು, ಪ್ರಾರ್ಥನೆ, ಊಟ, ರಾತ್ರಿ 9 ಗಂಟೆಗೆ ಗೇಟ್ ಬಂದ್. ಇತ್ಯಾದಿ ಶಿಸ್ತುಗಳ ಜೊತೆಗೆ ನಮ್ಮ ಬಟ್ಟೆ ನಾವೇ ಒಗೆದುಕೊಳ್ಳುವುದು, ನಮ್ಮ ಕೆಲಸ ನಾವೇ ಮಾಡಿಕೊಳ್ಳುವುದು ಎಲ್ಲಾ ಹೊಸಾ ಅನುಭವವಾಗಿತ್ತು. ಆರೋಗ್ಯ ಕೆಟ್ಟರೂ ನೋಡಿಕೊಳ್ಳುವವರು ಯಾರು ಇಲ್ಲ. ಈ ಸಂದರ್ಭದಲ್ಲಿ ಚಿಕ್ಕಂದಿನಿಂದ ಒಮ್ಮೆಯೂ ಮನೆ ಬಿಟ್ಟು ಬದುಕದ ನನಗೆ ಮನೆ ಅಮ್ಮ ಅಕ್ಕ ತಂಗಿ ಎಲ್ಲರ ಜ್ಞಾಪಕವಾಗತೊಡಗಿತು. (ಹೋಂ ಸಿಕ್ ಅಂತಾರಲ್ಲಾ ಅದೇ ಇರಬೇಕು!) ನಿಮಿಷ ನಿಮಿಷವೂ ಮನೆಯ ಜ್ಞಾಪಕವಾಗತೊಡಗಿತು. ಮನೆ ಬಿಟ್ಟು ಇರುವುದು ಅಸಾಧ್ಯ ಎನಿಸತೊಡಗಿತು. ಆದರೆ ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವದಿಂದ “ಮೊದಮೊದಲು ಎಲ್ಲರಿಗೂ ಹೀಗಾಗತ್ತೆ, ಹೋಗ್ತಾ ಹೋಗ್ತಾ ಸರಿ ಹೋಗುತ್ತೆ” ಎಂದು ಧೈರ್ಯ ತುಂಬಿದರು. ಮುಂದೆ ಅವರು ಹೇಳಿದಂತೆ ನಿಧಾನವಾಗಿ ಮನೆಯ ನೆನಪು ತನ್ನಷ್ಟಕ್ಕೆ ತಾನೇ ಕಡಿಮೆಯಾಗತೊಡಗಿತು.

ಇಂಥ ಸನ್ನಿವೇಶದಲ್ಲಿ ನಾವೆಲ್ಲರೂ ಕಾಲೇಜಿನ ಮೆಟ್ಟಿಲು ಹತ್ತಿದೆವು. ಅಲ್ಲಿಯವರೆಗೂ ಕೇವಲ ಕನ್ನಡ ಮಾಧ್ಯಮದಲ್ಲಿ ಓದಿ ಇಂಗ್ಲೀಷನ್ನು ಕೇವಲ ಒಂದು ಭಾಷೆಯಾಗಿ ಕಲಿತ ನನಗೆ ಮೊದಲ ದಿನದ ಮೊದಲ ಕ್ಲಾಸ್ನಲ್ಲೇ ತಲೆ ಕೆಡಲು ಆರಂಭಿಸಿತ್ತು. ಫಿಸಿಕ್ಸ್ ಮೇಷ್ಟ್ರು, ಕೆಮಿಸ್ಟ್ರೀ ಮೇಷ್ಟ್ರು ಇಂಗ್ಲೀಷ್ ನಲ್ಲಿ ಮಾಡುತ್ತಿರುವ ಪಾಠದ ತಲೆ ಬುಡವೇ ಅರ್ಥವಾಗುತ್ತಿರಲಿಲ್ಲ. ನನ್ನೊಂದಿಗಿದ್ದ ಸ್ನೇಹಿತರ ಪಾಡೂ ಅದೇ ಆಗಿತ್ತು. ನೋಟ್ಸ್ ಬರೆಸಬೇಕಾದರೆ ಅವರು ಹೇಳುತ್ತಿದ್ದ ಕೆಲವು ಪದಗಳ ಸ್ಪೆಲಿಂಗ್ ಗೊತ್ತಾಗುತ್ತಿರಲಿಲ್ಲ. ಇನ್ನು ಕೆಲವು ಪದಗಳನ್ನಂತೂ ನಾವು ಜೀವಮಾನದಲ್ಲೇ ಕೇಳಿರಲಿಲ್ಲ. ನನ್ನ ಸ್ನೇಹಿತರೆಲ್ಲರೂ ಕಷ್ಟಪಟ್ಟು ಉರು ಹೊಡೆದು ಅಂದಿನ ಕೆಲಸ ಅಂದು ಮುಗಿಸುತ್ತಿದ್ದರೆ, ನಾನು ಮಾತ್ರ ಒಂದೇ ಕಾನ್ಸೆಪ್ಟ್ ಹಿಡಿದುಕೊಂಡು ಪೂರ್ಣ ಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆದರೆ ಅರ್ಥ ಆಗಬೇಕಲ್ಲ! ಹಾಳು ಇಂಗ್ಲೀಷ್ ಭಾಷೆ ನನ್ನ ಪಠ್ಯ ಪುಸ್ತಕಗಳ ಅಧ್ಯಯನದ ಆಸಕ್ತಿಯನ್ನೇ ಆಪೋಶನ ತೆಗೆದುಕೊಂಡುಬಿಟ್ಟಿತು. ನನ್ನ ಸ್ನೇಹಿತರಂತೂ “ನಿತ್ಯಾ, ನೀ ಹಿಂಗೆ, ಒಂದೊಂದೇ ಪದವನ್ನು ಡಿಕ್ಷನರಿಯಲ್ಲಿ ಹುಡುಕಿ ಹುಡುಕಿ ಓದಿದರೆ ಪಿಯುಸಿ ನ ಹತ್ತು ವರ್ಷ ಓದಬೇಕಾಗುತ್ತೆ” ಅಂತಿದ್ರು. ನಾನು ಒಂದು ವಿಷಯವನ್ನು ಇಂಗ್ಲೀಷ್ ನಿಂದ ಕನ್ನಡಕ್ಕೆ ತರ್ಜುಮೆ ಮಾಡಿ ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಉಳಿದ ವಿಷಯಗಳು ಕೈಗೆ ಸಿಗದಷ್ಟು ಮುಂದೆ ಓಡಿಬಿಟ್ಟಿರುತ್ತಿದ್ದವು. ಅಷ್ಟು ಹೊತ್ತಿಗೆ ಕಾಲೇಜಿನಲ್ಲಿ ನನ್ನ ಸ್ನೇಹಿತರು ಹೊಂದಿಕೊಳ್ಳಲು ಪ್ರಾರಂಭಿಸಿದ್ದರು. ಆದರೆ ನನಗೇಕೋ ಆಗಲೇ ಇಲ್ಲ. ಹೆಚ್ಚು ಕಡಿಮೆ ಕಾಲೇಜು ಶುರುವಾಗಿ ಒಂದು ತಿಂಗಳಾಗಿತ್ತು. ಒಂದು ದಿನ ಶಾಲೆಯ ಪ್ರಿನ್ಸಿಪಾಲರು ನಮ್ಮ ಬಳಿ ಬಂದು “ಯಾರಿಗಾದ್ರೂ ಸೈನ್ಸು ಕಷ್ಟ ಆಗ್ತಿದ್ರೆ ಅಂಥವರು ಆರ್ಟ್ಸ್ ಗೆ ಕಾಂಬಿನೇಶನ್ ಚೇಂಜ್ ಮಾಡಿಸಿಕೊಳ್ಳಬಹುದು” ಅಂದ್ರು. ನನಗೆ ಅಷ್ಟು ಹೊತ್ತಿಗೆ ಸೈನ್ಸ್ ಸಹವಾಸ ಸಾಕಾಗಿಹೋಗಿತ್ತು. ಆದ್ರೆ ಒಣಜಂಭ ಬಿಡಬೇಕಲ್ಲ. “ಎಸ್.ಎಸ್.ಎಲ್.ಸಿ.ಲಿ 80% ತೆಗೆದುಕೊಂಡಿರೋ ನನಗೆ ಪಿಯುಸಿ ಲಿ 35% ತೆಗೆಯೋಕಾಗಲ್ವಾ? ಬಿಡು ಆಗತ್ತೆ.” ಅಂತ ಸಿಕ್ಕಿದ್ದ ಅವಕಾಶವನ್ನು ಕಳೆದುಕೊಂಡೆ. ನನ್ ತರಾನೆ ನನ್ ಸ್ನೇಹಿತರೂ ಕೆರೆಗೆ ಬೀಳೋಕೆ ರೆಡಿ ಇದ್ರು! ಅಂದ್ರೆ ಸೈನ್ಸಿನಲ್ಲೇ ಉಳಿದುಕೊಂಡರು!

ಹೀಗಿರಬೇಕಾದರೆ ಒಂದು ದಿನ…

ಸಿ.ಈ.ಟಿ. ಶುಲ್ಕ ಏರಿಕೆ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ.ಬಿ.ವಿ.ಪಿ) ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ನಮ್ಮ ಕಾಲೇಜಿನಲ್ಲಿ ಒಂದು ಪ್ರತಿಭಟನೆ ಏರ್ಪಡಿಸಿದ್ದರು. ನಾಯಕರು ಭಾಷಣ ಮುಗಿಸಿ, ವಿದ್ಯಾರ್ಥಿಗಳಲ್ಲಿ ಯಾರಾದರೂ ಭಾಷಣ ಮಾಡಬಹುದು ಎಂದರು. ಯಾರೂ ಮುಂದೆ ಬರಲಿಲ್ಲ. ಇಡೀ ಕಾಲೇಜಿನ ವಿದ್ಯಾರ್ಥಿಗಳ ಮುಂದೆ ಮಾತನಾಡುವ ಅವಕಾಶ ತಾನೇ ತಾನಾಗಿ ಒದಗಿ ಬಂದಿತ್ತು. ಮನಸ್ಸಿನಲ್ಲೇ ಒಂದು ಕೈ ನೋಡಿಬಿಡಲೇ? ಎಂದುಕೊಂಡೆ. ಶುಲ್ಕ ಏರಿಕೆಯ ಅನ್ಯಾಯದ ವಿರುದ್ಧ ನನಗೂ ಕೋಪವಿತ್ತು. ಜೀವನದಲ್ಲೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಭಾಷಣ ಮಾಡಲು ಎದ್ದು ನಿಂತೆ. ಒಂದೈದು ಹತ್ತು ನಿಮಿಷಗಳ ಕಾಲ ನನ್ನನ್ನೇ ಮರೆತು ಉಗ್ರ ಭಾಷಣ ಮಾಡಿದ್ದೆ. ಡಿಗ್ರೀ ಓದುತ್ತಿದ್ದ ಹುಡುಗರೇ ಮಾತನಾಡಲು ಹಿಂಜರಿದಿದ್ದಾಗ, ಆಗ ತಾನೇ ಪ್ರಥಮ ಪಿಯುಸಿಗೆ ಸೇರಿದ್ದ ಹುಡುಗ ಧೈರ್ಯದಿಂದ ಮಾತಾಡಿದ್ದು ಎಲ್ಲರಿಗೂ ತೀರಾ ಅನಿರೀಕ್ಷಿತವಾಗಿತ್ತು. ಖುಷಿಯಿಂದ ಎಲ್ಲರೂ ಚಪ್ಪಾಳೆ ಹೊಡೆದರು. ಎಬಿವಿಪಿ ನಾಯಕರು ನನ್ನನ್ನು ಮಾತನಾಡಿಸಿ ನನ್ನ ಹೆಸರು ಬರೆದುಕೊಂಡರು. ಅವರು ಕೊಟ್ಟ ಪ್ರೆಸ್ ನೋಟ್ ನಿಂದಾಗಿ ಮರುದಿನದ ದಿನಪತ್ರಿಕೆಯ ವರದಿಯಲ್ಲಿ ನನ್ನಹೆಸರು ‘ವಿದ್ಯಾರ್ಥಿ ನಾಯಕ’ ಎನ್ನುವ ವಿಶೇಷಣದೊಂದಿಗೆ ಪ್ರಕಟವಾಗಿಬಿಟ್ಟಿತ್ತು. ಆವತ್ತಿನಿಂದ ನಮ್ಮ ಕಾಲೇಜಿನಲ್ಲಿ ನನ್ನ ಇಮೇಜೇ ಬದಲಾಗಿ ಹೋಯಿತು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಎಲ್ಲಿ ನೋಡಿದರೂ ಗುರುತಿಸುತ್ತಿದ್ದರು. ಕೈಕುಲುಕಿ ಮಾತನಾಡಿಸುತ್ತಿದ್ದರು. ಆವತ್ತಿನಿಂದ ಎಬಿವಿಪಿ ಕಾರ್ಯಾಲಯಕ್ಕೆ ಪದೇ ಪದೇ ಭೇಟಿ ಕೊಡಲು ಶುರು ಮಾಡಿದೆ. ಅಲ್ಲಿ ಇದ್ದ ರಾಷ್ಟ್ರೀಯ ಸಾಹಿತ್ಯ, ಪತ್ರಿಕೆಗಳನ್ನು ಓದುತ್ತಿದ್ದೆ. ಅಲ್ಲಿದ್ದ ಕಾರ್ಯಕರ್ತರೊಡನೆ ಅನೇಕ ವಿಚಾರಗಳನ್ನು ಕುರಿತು ಚರ್ಚಿಸುತ್ತಿದ್ದೆ. ಮುಂದೆ ನನಗೆ ಕಾಲೇಜಿಗಿಂತ ಹೆಚ್ಚಾಗಿ ಎಬಿವಿಪಿ ಕಾರ್ಯಾಲಯವೇ ಆಪ್ತವೆನಿಸತೊಡಗಿತ್ತು (ಆಗ ಎಬಿವಿಪಿ ಕಾರ್ಯಾಲಯ ಸುಬ್ಬರಾಯನ ಕೆರೆ ಬಳಿ ಇತ್ತು.)

ಹಾಗಂತ ನಾನು ಒಂದು ದಿನ ಮಾಡಿದ ಭಾಷಣದ ಕಾರಣದಿಂದಲೇ ಎಬಿವಿಪಿ ಕಡೆಗೆ ಆಕರ್ಷಿತನಾಗಿರಲಿಲ್ಲ. ಅದರ ಹಿಂದೆ ದೊಡ್ಡ ಹಿನ್ನೆಲೆ ಇತ್ತು. ಹೈಸ್ಕೂಲು ಮುಗಿಯುವ ಹೊತ್ತಿಗಾಗಲೇ ನಾನು ರಾಷ್ರಬಂಧು ರಾಜೀವ್ ದೀಕ್ಷಿತರ ಸ್ವದೇಶಿ ಚಿಂತನೆಗಳನ್ನು ವಿಜಯಕರ್ನಾಟಕದ ‘ಮೇರಾ ಭಾರತ್ ಮಹಾನ್’ ಅಂಕಣದ ಮೂಲಕ ಓದಿ ತಿಳಿದಿದ್ದೆ. ಅಪಾರ ಪ್ರೇರಣೆ ನೀಡಿ ನನ್ನ ಜೀವನ ಶೈಲಿಯನ್ನೇ ಬದಲಾಯಿಸಿದ್ದ ಚಿಂತನೆಗಳು ಅವು. ಸ್ವದೇಶಿ ವಸ್ತುಗಳನ್ನೇ ಬಳಸುವ, ಬೇವಿನಕಡ್ಡಿಯಲ್ಲೇ ಹಲ್ಲು ಉಜ್ಜುವ, ಜೀನ್ಸ್ ಪ್ಯಾಂಟ್ ತೊಡದಿರುವ, ಇಂಗ್ಲೀಶ್ ಅನ್ನು ಜಾಸ್ತಿ ಬಳಸದಿರುವ ಇನ್ನೂ ಮುಂತಾದ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ ಅವರ ಚಿಂತನೆಗಳು ನನ್ನನ್ನು ಪ್ರೇರೇಪಿಸಿದ್ದವು. (ಆಮೇಲೆ ಕೆಲವು ದಿನಗಳ ನಂತರ ಆ ಅಂಕಣದ ಭಾವಾನುವಾದ ಮಾಡುತ್ತಿದ್ದುದು ಚಕ್ರವರ್ತಿ ಸೂಲಿಬೆಲೆ ಅವರೇ ಅಂತ ತಿಳಿಯಿತು) ಆ ಅಂಕಣದಿಂದ ನಾನು ಎಷ್ಟು ಪ್ರಭಾವಿತನಾಗಿದ್ದೇನೆಂದರೆ, “ರಾಷ್ಟ್ರ ಕಾರ್ಯದಲ್ಲಿ ನಾನೂ ನಿಮ್ಮೊಂದಿಗೆ ಸೇರಬಯಸುತ್ತೇನೆ” ಅಂತ ರಾಜೀವ್ ದೀಕ್ಷಿತರಿಗೆ ಪತ್ರ ಕೂಡಾ ಬರೆದಿದ್ದೆ. ಅದರ ಜೊತೆಗೆ ಪ್ರತಾಪ ಸಿಂಹರು ಬರೆಯುತ್ತಿದ್ದ ‘ವಿಶ್ವ ವಿಹಾರ’ (ಆಮೇಲೆ ‘ಬೆತ್ತಲೆ ಜಗತ್ತು’ ಎಂದು ಬದಲಾಯಿತು.) ಅಂಕಣಗಳನ್ನು ತಪ್ಪದೆ ಓದುತ್ತಿದ್ದೆ. ‘ಮೇರಾ ಭಾರತ್ ಮಹಾನ್’ ಮತ್ತು ‘ಬೆತ್ತಲೆ ಜಗತ್ತು’ ಈ ಎರಡೂ ಅಂಕಣಗಳನ್ನು ಕಟ್ ಮಾಡಿ ಸಂಗ್ರಹಿಸಿ ಪದೇ ಪದೇ ಓದುತ್ತಿದ್ದೆ. ಸ್ವಾಮಿ ಪುರುಷೋತ್ತಮಾನಂದರ ‘ವಿದ್ಯಾರ್ಥಿಗಾಗಿ’ ಪುಸ್ತಕವನ್ನು ಓದಿದ ದೆಸೆಯಿಂದ ದಿನ ಬೆಳಿಗ್ಗೆ 5 ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ, ಜಾಗಿಂಗ್ ಮಾಡಿ ಬಂದು ಗಂಟೆಗಳ ಕಾಲ ಯೋಗಾಭ್ಯಾಸ ಮಾಡುತ್ತಿದ್ದೆ. ಲೈಬ್ರರಿಯಲ್ಲಿ ಸಿಕ್ಕಿದ್ದ ಒಂದು ಯೋಗ ಪುಸ್ತಕ ಓದಿ ಅದರ ಲೇಖಕರಾಗಿದ್ದ ಹಾಸನದ ಯೋಗಗುರು ‘ಹೆಚ್ ಬಿ ರಮೇಶ್’ (ಇಂದಿಗೂ ಹಾಸನದ ತೆಲುಗರ ಬೀದಿಯಲ್ಲಿ ವಾಸಮಾಡುತ್ತಾ ವಯೋವೃದ್ಧರಾದರೂ ಯೋಗ ತರಬೇತಿ ನೀಡುತ್ತಿದ್ದಾರೆ.) ಅವರಿಗೆ ಫೋನ್ ಮಾಡಿ ಯೋಗಾಭ್ಯಾಸದ ಕುರಿತಾಗಿ ಕೆಲವು ಅನುಮಾನಗಳನ್ನು ಬಗೆಹರಿಸಿಕೊಂಡಿದ್ದೆ. ಇದರಿಂದ ಸಂತಸಗೊಂಡಿದ್ದ ಅವರು ನಮ್ಮ ತಂದೆಯ ಜೊತೆ ಫೋನ್ ನಲ್ಲೇ ಮಾತನಾಡಿ ಒಮ್ಮೆ ಹಾಸನಕ್ಕೆ ಕರೆದುಕೊಂಡು ಬರುವಂತೆ ಹೇಳಿದ್ದರು. ಅಪ್ಪನ ಮುತುವರ್ಜಿಯಿಂದ ಒಮ್ಮೆ ಆ ಅವಕಾಶವೂ ದೊರೆಯಿತು. ಅಂದು ಯೋಗಗುರು ರಮೇಶ್ ಅವರು ಅಪರಿಚಿತನಾದ ನನ್ನನ್ನು ತುಂಬಾ ಪ್ರೀತಿಯಿಂದ ಮಾತನಾಡಿಸಿ ನನಗೆ ಅಮೂಲ್ಯವಾದ ಸಲಹೆ ಸೂಚನೆ ಕೊಟ್ಟಿದ್ದಲ್ಲದೆ, ಆ ವಯಸ್ಸಿನಲ್ಲೂ ಬಸ್ ಸ್ಟ್ಯಾಂಡ್ ನ ವರೆಗೂ ನಮ್ಮನ್ನು ಬಂದು ಬೀಳ್ಕೊಟ್ಟಿದ್ದರು. ಬಸ್ಸು ಹೊರಡುವ ಮೊದಲು “ಇನ್ನು ಒಂದೇ ಒಂದು ಉಳಿದಿದೆ. ನಿನಗೆ ಅಂತಲೇ ಇತ್ತು ಅನ್ನಿಸುತ್ತೆ ತಗೋ” ಅಂತ ಹೇಳಿ ವಿವೇಕಾನಂದರ ಒಂದು ಸುಂದರ ಚಿತ್ರ ಪಟವನ್ನು ಕೊಟ್ಟಿದ್ದರು. ನನಗೆ ವಿವೇಕಾನಂದರ ಹುಚ್ಚು ಹಿಡಿದಿದ್ದೇ ಆವತ್ತಿನಿಂದ. ಹೀಗಾಗಿ ಸಹಜವಾಗಿಯೇ ವಿವೇಕಾನಂದರ ಚಿಂತನೆಗಳನ್ನು ಹೊಂದಿದ್ದ ರಾಷ್ಟ್ರೀಯತೆಯ ಆದರ್ಶಗಳಿಂದ ಕೂಡಿದ್ದ ಎಬಿವಿಪಿಯಂತಾ ವಿದ್ಯಾರ್ಥಿ ಸಂಘಟನೆಯು ನಾನು ಸೇರಬೇಕಾಗಿದ್ದ ಜಾಗವೇ ಆಗಿತ್ತು.

ಕಾಲೇಜಿಗೆ ಹೋಗಿ ಅರ್ಥವಾಗದ ಪಾಠಗಳನ್ನು ಕೇಳುವುದಕ್ಕಿಂತಾ ಎಬಿವಿಪಿಯ ಕೆಲಸ ಮಾಡುವುದು ನನಗೆ ಹೆಚ್ಚು ರುಚಿಸುತ್ತಿತ್ತು. ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಯಾಂಪ್ (ವ್ಯಕ್ತಿತ್ವ ವಿಕಸನ ಶಿಬಿರ) ಗಳನ್ನು ಆಯೋಜಿಸುವುದು, ಪ್ರತಿಭಟನೆ, ಉಪನ್ಯಾಸ ಕಾರ್ಯಕ್ರಮಗಳು, ಮೆಂಬರ್ ಶಿಪ್ ಮಾಡಿಸುವುದು ಇವೆಲ್ಲಾ ನನಗೆ ಹೊಸಾ ಹೊಸಾ ಅನುಭವಗಳನ್ನು ಪಡೆಯಲು ಅವಕಾಶ ನೀಡಿತ್ತು. ಒಳ್ಳೆಯ ಸ್ನೇಹಿತರು ದೊರೆತರು. ಒಳ್ಳೆಯ ವಿಚಾರಗಳು ದೊರೆತವು. ಒಳ್ಳೆಯ ಪುಸ್ತಕಗಳೂ ಕೂಡಾ. ಸ್ನೇಹಿತ ವೇಣು, ವಿದ್ಯಾನಂದ ಶಣೈ ರವರ ಭಾರತ ದರ್ಶನ ಪರಿಚಯ ಮಾಡಿಸಿದರೆ, ಸ್ವಾಮಿ ಮರುಳಾಪುರ, ಗುರು, ಸಾವರ್ಕರ್ ಜೀವನದ ಸಿನಿಮಾ ತೋರಿಸಿದರು. ಅಕ್ಷಯ, ಶರತ್, ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಯಾಂಪ್ ನ ಪರಿಚಯ ಮಾಡಿಕೊಟ್ಟರು. ಇದರ ನಡುವೆಯೇ ಆರ್.ಎಸ್.ಎಸ್.ನ ಪರಿಚಯವೂ ಆಯಿತು. ಆದರೆ ಆರ್.ಎಸ್.ಎಸ್. ಅಂದ್ರೆ ಮುಸ್ಲೀಮರನ್ನು ದ್ವೇಷಿಸುವ ಸಂಘಟನೆ ಅಂತ ಪೂರ್ವಗ್ರಹ ಪೀಡಿತನಾಗಿದ್ದ ನನಗೆ ಅದರ ಬಗ್ಗೆ ಅಷ್ಟಾಗಿ ಒಲವು ಬೆಳೆಯಲಿಲ್ಲ. ( ಮುಂದೆ ಆರ್.ಎಸ್.ಎಸ್.ನ ಶಾಖೆಗಳಿಗೆ ಹೋದಾಗ, ಪ್ರಚಾರಕರ ಜೀವನವನ್ನು ಪ್ರತ್ಯಕ್ಷ ನೋಡಿದಾಗ ಮತ್ತು ಪ್ರಾಥಮಿಕ ಶಿಕ್ಷಾ ವರ್ಗ ಮುಗಿಸಿದಾಗ ಆ ಅಭಿಪ್ರಾಯ ಬದಲಾಯಿತು)

ಹಾಸ್ಟೆಲ್ಲಿನಲ್ಲಿದ್ದ ಸಂದರ್ಭದಲ್ಲಿ ಒಮ್ಮೊಮ್ಮೆ ನನ್ನ ತಿಂಗಳ ಖರ್ಚಿಗೆ ಹಣ ಸಾಕಾಗುತ್ತಿರಲಿಲ್ಲ. ಅಪ್ಪ ಎಷ್ಟು ಕೊಟ್ಟರೂ ನಗರ ಜೀವನ ಹಣ ನೀರಿನಂತೆ ಖರ್ಚಾಗಿ ಹೋಗುತ್ತಿತ್ತು. ಅಪ್ಪನ ಹತ್ತಿರ ಹೆಚ್ಚಿನ ಹಣ ಕೇಳುವುದಕ್ಕೂ ಮನಸ್ಸು ಬರುತ್ತಿರಲಿಲ್ಲ. ಕಾರಣ ಚಿಕ್ಕಂದಿನಿಂದ ಅಪ್ಪ ಒಂದೊಂದು ರೂಪಾಯಿಯನ್ನು ಕಷ್ಟ ಪಟ್ಟು ಕೂಡಿಡುತ್ತಿದ್ದರು. ಸ್ನೇಹಿತರು, ನೆಂಟರು ಅಪ್ಪನನ್ನು ಜಿಪುಣ ಎನ್ನುವಷ್ಟು. (ಆದರೆ ನಮ್ಮ ಅಪ್ಪ ಅಂದು ಉಳಿಸಿದ ಹಣದ ಮಹತ್ವ, ಮುಂದೆ ಮನೆ ಕಟ್ಟಿಸುವಾಗ ನನಗೆ ತಿಳಿಯಿತು. ಬರೆದರೆ ಅದೂ ಇಷ್ಟೇ ದೊಡ್ಡ ಇನ್ನೊಂದು ಕಥೆ ಆಗುವ ಅಪಾಯವಿದೆ!) ಬೆಳಗಿನ ತಿಂಡಿ ಹೋಟೆಲಿನಲ್ಲಿ ಮಾಡಬೇಕಿದ್ದರಿಂದ ಇದ್ದ ಹಣವೆಲ್ಲಾ ತಿಂಡಿಗೆ ಖರ್ಚಾಗಿಹೋಗುತ್ತಿತ್ತು. ನಾವೇ ಸ್ನೇಹಿತರೆಲ್ಲಾ ಸ್ಟವ್, ಪಾತ್ರೆ ತಂದು ಸ್ವತಃ ಅಡುಗೆ ಮಾಡಿಕೊಳ್ಳಲು ಪ್ರಯತ್ನಿಸಿದೆವು. ಆದರೆ ನಮ್ಮ ನಡುವಿನ ಹೊಂದಾಣಿಕೆಯ ಕೊರತೆಯಿಂದ ಆ ಪ್ರಯತ್ನ ಕೆಲವೇ ಕೆಲವು ದಿನದಲ್ಲಿ ನಿಂತುಹೋಗಿ ವಾರಕ್ಕೊಮ್ಮೆ ಭಾನುವಾರದಂದು ಕೇಸರಿ ಭಾತ್ ಮಾಡಿಕೊಂಡು ತಿನ್ನುವುದಕ್ಕಷ್ಟೆ ಸೀಮಿತವಾಗಿ ಹೋಯಿತು. ಹೀಗಾಗಿ ಅಲ್ಲೇ ಹತ್ತಿರದಲ್ಲಿ ಕಡಿಮೆ ದುಡ್ಡಿಗೆ ಇಡ್ಲಿ ಕೊಡುತ್ತಿದ್ದ ‘ಆಂಟಿ ಮೆಸ್’ ಒಂದನ್ನು ಗುರುತು ಮಾಡಿಕೊಂಡೆವು. ಅಲ್ಲಿ ಪ್ರತಿ ದಿನ ನಾವು ಕಾಲೇಜಿಗೆ ಹೋಗುವ ಟೈಮಿಗೆ ಆಗಿರುತ್ತಿದ್ದ ತಿಂಡಿ ‘ಇಡ್ಲಿ’ ಒಂದೇ! ದಿನಾ ಇಡ್ಲಿ ತಿಂದೂ ತಿಂದೂ ಇಡ್ಲಿಯನ್ನು ನೋಡಿದರೆ ವಾಕರಿಕೆ ಬರುವಂತಾಗಿತ್ತು. ಆದರೂ ಬೇರೆ ದಾರಿ ಇರಲಿಲ್ಲ. ಬೇರೆ ಹೋಟೆಲ್ ಗಳಲ್ಲಿ ಬೆಲೆ ಜಾಸ್ತಿ! ಹೇಗೋ ಏನೋ ದುಡ್ಡು ನಮ್ಮ ಮೇಲೆ ಸವಾರಿ ಮಾಡಲು ಆರಂಭಿಸಿತ್ತು. ಹಣವನು ಗಳಿಸುವ ಮಾರ್ಗದ ಬಗ್ಗೆ ಆಗಾಗ ಚಿಂತನೆಯೂ ನಡೆಯುತ್ತಿತ್ತು.

ಹಣದ ಕೊರತೆ ಇಲ್ಲದಂತೆ ಮಾಡಿಕೊಳ್ಳಲು ಆಗಿನ ಕಾಲದಲ್ಲಿ ಅತ್ಯಂತ ಜನಪ್ರಿಯ ಯೋಜನೆ ಅಂದರೆ ‘ಪ್ಲೇ ವಿನ್’ ಅನ್ನೋ ಲಾಟ್ರಿ ಟಿಕೆಟ್. ಬಿಕ್ಷಾಧಿಪತಿಯನ್ನು ಲಕ್ಷಾಧಿಪತಿ ಮಾಡುತ್ತಿದ್ದ ಪ್ಲೇ ವಿನ್ ಆಟ, ಟಿವಿ ಜಾಹೀರಾತುಗಳಲ್ಲಿ ಮಿಂಚುತ್ತಿತ್ತು. ಸಹಜವಾಗಿ ಹಣದ ಮುಗ್ಗಟ್ಟನ್ನು ಎದುರಿಸುತ್ತಿದ್ದ ನನ್ನನ್ನೂ ಆ ಆಟ ಸೆಳೆದಿತ್ತು. ಹೀಗಾಗಿ ಪ್ರತಿ ದಿನ 10 – 10 ರೂಪಾಯಿ ಕೊಟ್ಟು ಮೂರು ನಾಲ್ಕು ದಿನ ಟಿಕೆಟ್ ಖರೀದಿಸಿದೆ. ಕೋಟಿಯೂ ಸಿಗಲಿಲ್ಲ. ಲಕ್ಷವೂ ಸಿಗಲಿಲ್ಲ. ಕಡೆಗೆ ಇದ್ದ ಅಲ್ಪ ಸ್ವಲ್ಪ ದುಡ್ಡೂ ಕೈನಿಂದ ಜಾರಿಹೋಯಿತು. ವಾಪಾಸ್ಸು ನಿರಾಸೆಯಿಂದ ಹಾಸ್ಟೆಲ್ಲಿಗೆ ಬಂದಾಗ ನನ್ನ ಅಮ್ಮ ಫೋನ್ ಮಾಡಿದ್ದರು. ಮಾತನಾಡುವಾಗ ಅವರು ಹೇಳಿದ ವಿಚಾರವೆಂದರೆ, ಅವರ ತಂಗಿ ಅಂದರೆ ನಮ್ಮ ಚಿಕ್ಕಮ್ಮ ಹಾಸ್ಟೆಲ್ಲಿಗೆ ನನ್ನನ್ನು ನೋಡಲು ಬಂದಾಗ ನಾನು ಅಲ್ಲಿರದೇ ನನ್ನ ಸೀನಿಯರ್ ಒಬ್ಬ ಸಿಕ್ಕಿದ್ದನಂತೆ. “ಏನಪ್ಪಾ ನಮ್ಮ ಹುಡುಗ ಹೇಗೆ? ಅವನ ಸಹವಾಸ ಹೇಗಿದೆ?” ಅಂತ ಅವನನ್ನು ನನ್ನ ಚಿಕ್ಕಮ್ಮ ಕೇಳಿದಾಗ, ಅವನು “ನಿತ್ಯಾನಾ ಬಿಡಿ ಮೇಡಂ ಅವನು ವಿವೇಕಾನಂದ. ಯಾರು ಏನು ಮಾಡಿದರೂ ಅವನು ಹಾಳಾಗಲ್ಲ.” ಎಂದಿದ್ದನಂತೆ. ಅದನ್ನ ನಮ್ಮ ಚಿಕ್ಕಮ್ಮ ನಮ್ಮ ಅಮ್ಮನ ಬಳಿ ಹೇಳಿಕೊಂಡು “ಏನೇ ನಿನ್ನ ಮಗ, ಇಷ್ಟು ಒಳ್ಳೆ ಹೆಸ್ರು ತಗೊಂಡಿದಾನೆ.” ಅಂತ ಖುಷಿಪಟ್ಟಿದ್ದರಂತೆ. ಅದನ್ನೇ ಹೇಳಿ ನಮ್ಮಮ್ಮ ಖುಷಿಯಾಗಿದ್ದರು. ನನಗೆ ಈ ಮಾತು ಕೇಳಿ ಸಂತೋಷವಾಗುವುದರ ಬದಲಿಗೆ ನಾಚಿಕೆಯಾದಂತಾಯಿತು. ವಿವೇಕಾನಂದ ಅಂತ ತಿಳಿದುಕೊಂಡಿರುವ ನಿತ್ಯಾನಂದ ಇವತ್ತು ಪ್ಲೇ ವಿನ್ ಆಡಿದ ದೃಶ್ಯ ಕಣ್ಣ ಮುಂದೆ ಬಂದಿತು. ತಕ್ಷಣ ಅಪ್ಪನ ಜ್ಞಾಪಕವಾಯಿತು. ಅವರು ಕಷ್ಟಪಟ್ಟು ದುಡಿದ ದುಡ್ಡನ್ನು ಈ ರೀತಿ ಅನ್ಯಾಯವಾಗಿ ಕಳೆದುಬಿಟ್ಟೆನಲ್ಲಾ ಅಂತ ತುಂಬಾ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ. ಅವತ್ತೇ ಕೊನೆ ನನ್ನ ಜೀವನದಲ್ಲೇ ಇನ್ಯಾವತ್ತೂ ಜೂಜು ಲಾಟರಿ ಅಂತ ಆಡಲಿಲ್ಲ.

ಸರಿ ಈ ಮಾರ್ಗ ಬೇಡ ಎನಿಸಿದ ಮೇಲೆ, ನ್ಯಾಯವಾದ ಮಾರ್ಗದಲ್ಲಿ ಕಷ್ಟಪಟ್ಟು ದುಡಿಯಬೇಕು ಅಂತ ತೀರ್ಮಾನಿಸಿ ನನ್ನ ಸ್ನೇಹಿತ ಭವಾನಿ ಶಂಕರ ಅನ್ನುವನ ಸಲಹೆ ಕೇಳಿದೆ. ಆತ ಅತ್ಯಂತ ಬಡ ಕುಟುಂಬಕ್ಕೆ ಸೇರಿದ್ದರೂ ಮಹಾನ್ ಸ್ವಾಭಿಮಾನಿಯಾಗಿದ್ದ. ಬೆಳಿಗ್ಗೆ ಮನೆಮನೆಗೆ ಪೇಪರ್ ಹಾಕಿ, ಗಂಧದ ಕಡ್ಡಿ ಡಬ್ಬ ಗಳನ್ನು ಮಾಡಿ ತನ್ನ ಓದಿನ ಖರ್ಚನ್ನು ತಾನೇ ನೋಡಿಕೊಳ್ಳುತ್ತಿದ್ದ. ನಾನು ದುಡಿಯಬೇಕು ಎಂದಿದ್ದನ್ನು ನೋಡಿ ನಕ್ಕುಬಿಟ್ಟಿದ್ದ. ಕಡೆಗೆ ನನ್ನ ಬಲವಂತಕ್ಕೆ ಪೇಪರ್ ಹಾಕುವ ಕೆಲಸಕ್ಕೆ ನನ್ನನ್ನೂ ಸೇರಿಸಿದ. ಅಂದು ಬೆಳಗಿನ ಜಾವ 5 ಕ್ಕೆ ಎದ್ದು ಪೇಪರ್ ಹಾಕಲು ನನ್ನ ಸೈಕಲ್ ತೆಗೆದುಕೊಂಡು ಹೋದೆ. ಒಂಟಿಕೊಪ್ಪಲಿನ ಸುಮಾರು 100-150 ಮನೆಗಳಿಗೆ ಪೇಪರ್ ಹಾಕುವ ಕೆಲಸವನ್ನು ನನಗೆ ಕೊಡಿಸಿದ್ದ ಭವಾನಿ ಶಂಕರ! ತಿಂಗಳಿಗೆ 150 ರೂಪಾಯಿ ಸಂಬಳ! ಆವತ್ತು ಮೊದಲ ಬಾರಿಗೆ ನನಗೆ ಜೀವನದ ದರ್ಶನವಾಗಿತ್ತು. ಒಂದು ವಾರ ಪೇಪರ್ ಹಾಕುವ ಹೊತ್ತಿಗೆ ಸೈಕಲ್ ಹೊಡೆದೂ ಹೊಡೆದೂ ನನ್ನ ಕಾಲುಗಳು ಸೋತುಹೋಗಿದ್ದವು! ಒಂದು ದಿನ ಎನ್ ಸಿ ಸಿ ಪೆರೇಡ್ ಮಾಡಿ ಬಂದು ತುಂಬಾ ಸುಸ್ತಾಗಿ ಮಲಗಿದ್ದರಿಂದ ಬೆಳಿಗ್ಗೆ ಲೇಟಾಗಿ ಎದ್ದೆ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಲಾಗಲಿಲ್ಲ. ಒಂದು ದಿನವೂ ಬಿಡುವಿಲ್ಲದ ಈ ಕೆಲಸ ತುಂಬಾ ಕಷ್ಟ ಎನಿಸತೊಡಗಿತು. ಜೊತೆಗೆ ನಾನು ಪೇಪರ್ ಹಾಕಲು ಹೋಗುತ್ತಿರುವ ವಿಚಾರ ಹಾಸ್ಟೆಲ್ ನಲ್ಲಿ ಒಬ್ಬೊಬ್ಬರಿಗೆ ಗೊತ್ತಾಗಲು ಆರಂಭಿಸಿತ್ತು. ಮುಂದೆ ಅದು ನಮ್ಮ ಮನೆಯವರಿಗೂ ತಿಳಿದುಬಿಡುವ ಅಪಾಯವಿತ್ತು. ಹೀಗಾಗಿ ಆ ಕೆಲಸವನ್ನೇ ಬಿಟ್ಟು ಬಿಟ್ಟೆ. ಆದರೆ ಆ ಕೆಲಸ ಅಂದು ನನಗೆ ನೀಡಿದ ಜೀವನಾನುಭವವನ್ನು ನಾನು ಜೀವನ ಪೂರ್ತಿ ಮರೆಯುವಂತಿಲ್ಲ.

ಇದೆಲ್ಲದರ ನಡುವೆ ನಾನು ಓದಿಕೊಂಡಿದ್ದ ಚಿಂತನೆಗಳು ನನಗೆ ಏನಾದರೂ ದೊಡ್ಡದನ್ನು ಮಾಡುವಂತೆ ಪ್ರೇರೇಪಿಸುತ್ತಿತ್ತು. ವಿವೇಕಾನಂದರ “ನಿನ್ನ ಮೇಲೆ ನಂಬಿಕೆಯಿಡು. ಮಹಾಪುರುಷನಾಗಲೆಂದೇ ಭಗವಂತ ನಿನ್ನನ್ನು ಸೃಷ್ಟಿಸಿದ್ದಾನೆಂದು ತಿಳಿ.” ಎಂಬ ಮಾತುಗಳು ಯಥೇಚ್ಛವಾದ ಆತ್ಮವಿಶ್ವಾಸವನ್ನು ತುಂಬುತ್ತಿದ್ದವು. ಒಮ್ಮೆ ಸ್ನೇಹಿತರೊಂದಿಗೆ ಯಾವುದೋ ವಿಷಯಕ್ಕೆ ಜಗಳವಾದಾಗ “ನೀವು ನನ್ನನ್ನು ಮಾತಾಡಿಸದೆ ಇದ್ರೆ ಏನೂ ನಷ್ಟ ಇಲ್ಲ ಹೋಗ್ರಲೋ ಭಾರತ ದೇಶದ 100 ಕೋಟಿ ಜನ ನನಗಾಗಿ ಕಾಯುತ್ತಿದ್ದಾರೆ.” ಎಂದಿದ್ದೆ! ವಿವೇಕಾನಂದರ ಮಾತುಗಳನ್ನು ಕೇವಲ ಮೇಲ್ನೋಟವನ್ನು ನೋಡಿ ಅರ್ಥಮಾಡಿಕೊಂಡಿದ್ದ ನನ್ನಲ್ಲಿ “ನಾನು ಯಾವುದೋ ವಿಶೇಷ ವ್ಯಕ್ತಿ” ಎಂಬ ಅಹಂಭಾವೂ ಸೇರಿಕೊಂಡಿತ್ತು. ಆದರೆ ಅದು ಎಂದೂ ದುರಹಂಕಾರವಾಗಿ ಬದಲಾಗಲಿಲ್ಲ ಎಂಬುದು ಭಗವಂತನ ಕೃಪೆಯೇ ಸರಿ. ಸದಾ ಕಾಲ ಮನಸ್ಸು ಸಜ್ಜನರ, ಜ್ಞಾನಿಗಳ ಸಹವಾಸಕ್ಕೆ ಹಾತೊರೆಯುತ್ತಿತ್ತು. ಒಮ್ಮೆ ಎಬಿವಿಪಿಯ ಕಾರ್ಯಕ್ರಮದ ಸಲುವಾಗಿ ರಾಮಕೃಷ್ಣ ಆಶ್ರಮಕ್ಕೆ ಹೋಗುವ ಅವಕಾಶ ದೊರೆಯಿತು. ಅಂದು ಸ್ವಾಮಿ ಜಿತಕಾಮಾನಂದಜೀ ಎನ್ನುವ ಸನ್ಯಾಸಿಯೊಬ್ಬರ ಭಾಷಣ ನನ್ನ ಮೇಲೆ ಬಹಳ ಪ್ರಭಾವ ಬೀರಿತ್ತು. ತೇಜಸ್ಸಿನಿಂದ ಕೂಡಿದ್ದ ಅವರ ಮುಖ ಯಾವುದೋ ಅಲೌಕಿಕ ಆಕರ್ಷಣೆಯಂತೆ ನನ್ನನ್ನು ಮಂತ್ರಮುಗ್ದನಾಗಿ ಮಾಡಿಬಿಟ್ಟಿತ್ತು. ಜೀವನಪೂರ್ತಿ ಯಾಕೆ ಇಂಥಾ ಗುರುಗಳೊಡನೆ ಈ ಆಶ್ರಮದಲ್ಲೇ ಇರಬಾರದು ಅನ್ನಿಸಿತ್ತು. ಆದರೆ ಮೊದಲೇ ಒಮ್ಮೆ ಕಹಿ ಅನುಭವವಾಗಿದ್ದರಿಂದ ನಮ್ಮಂತವರನ್ನೆಲ್ಲ ಇವರು ಹತ್ತಿರ ಸೇರಿಸಿಕೊಳ್ಳುತ್ತಾರಾ? ಎಂಬ ಅನುಮಾನದಿಂದ ಮತ್ತೆ ಆಶ್ರಮದ ಬಳಿ ಹೋಗುವ ಪ್ರಯತ್ನ ಮಾಡಲಿಲ್ಲ.

ಈ ಸಮಯದಲ್ಲಿ ನನಗೆ ಹೊಸಾ ದಾರಿ ತೋರಿದ್ದು ಆಜಾದಿ ಬಚಾವೋ ಆಂದೋಲನ. ವಿಜಯ ಕರ್ನಾಟಕದಲ್ಲಿ ಓದಿಕೊಂಡಿದ್ದ ರಾಜೀವ್ ದೀಕ್ಷಿತರ ಚಿಂತನೆಗಳು ನನ್ನನ್ನು ಸುಮ್ಮನೆ ಕೂರಲು ಬಿಡುತ್ತಿರಲಿಲ್ಲ. ಹೇಗಾದರೂ ಆಂದೋಲನದ ಸಂಪರ್ಕ ಪಡೆಯಬೇಕೆಂದು ಹಂಬಲಿಸುತ್ತಿದ್ದೆ. ಮೈಸೂರಿನಲ್ಲಿ ಅದರ ಒಂದು ಶಾಖೆ ಇರುವುದೆಂದು ಎಲ್ಲೋ ಕೇಳಿ ತಿಳಿದಿದ್ದೆ. ಹೀಗಾಗಿ ಪ್ರತಿ ದಿನ ಸಂಜೆ ಸ್ನೇಹಿತರೆಲ್ಲಾ ಟ್ಯೂಷನ್ ಗೆ ಹೋದರೆ ನಾನು ಮೈಸೂರಿನ ಬೇರೆ ಬೇರೆ ಏರಿಯಾಗಳಲ್ಲಿ ಸೈಕಲ್ ತೆಗೆದುಕೊಂಡು ‘ಆಜಾದಿ ಬಚಾವೋ ಆಂದೋಲನ’ದ ಆಫೀಸ್ ಹುಡುಕಲು ಪ್ರಾರಂಭಿಸಿದೆ. ಬಹಳ ದಿನಗಳು ಹುಡುಕಿದ ನಂತರ ಒಂದು ದಿನ ವಿದ್ಯಾರಣ್ಯಪುರಂನಲ್ಲಿ ‘ಆಜಾದಿ ಬಚಾವೋ ಆಂದೋಲನ’ದ ಬೋರ್ಡು ಕಾಣಿಸಿತು. ಅದು ಆಂದೋಲನದ ಕಾರ್ಯಕರ್ತರಾಗಿದ್ದ ದ್ವಾರಕಾನಾಥ್ ಅವರ ಮನೆಯಾಗಿತ್ತು. ಅವರು ಮತ್ತು ಅವರ ಪತ್ನಿ ಶೈಲಾ ದ್ವಾರಕಾನಾಥ್ ತುಂಬಾ ಪ್ರೀತಿ ವಿಶ್ವಾಸದಿಂದ ಮಾತನಾಡಿಸಿದರು. ನನ್ನ ವಿಚಾರ ಚಿಂತನೆಗಳೆಲ್ಲವನ್ನು ಸಾವಧಾನದಿಂದ ಆಲಿಸಿದರು. ಅವರ ಮಕ್ಕಳಾದ ಭೂಮಿಕಾ ಮತ್ತು ವಿಕ್ರಮ್ ಬಹಳ ಆತ್ಮೀಯರಾದರು. ಅವರ ಮನೆಯಲ್ಲಿ ವಿಕ್ರಮ್ ಮತ್ತು ಭೂಮಿಕಾರ ಸ್ನೇಹಿತರೆಲ್ಲಾ ಸೇರಿಕೊಂಡು ಯಾವಾಗಲೂ ಮಕ್ಕಳ ಸೈನ್ಯವೇ ಇರುತ್ತಿತ್ತು. ಆ ಮಕ್ಕಳೆಲ್ಲಾ ನನಗಿಂತಲೂ ವಯಸ್ಸಿನಲ್ಲಿ ಸ್ವಲ್ಪ ಕಿರಿಯವರಾಗಿದ್ದು ನಾನು ಬಂದಾಗ ನನ್ನೊಡನೆ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಇದನ್ನು ನೋಡಿದ ದ್ವಾರಕಾನಾಥ್ ಮತ್ತು ಶೈಲಾ ದ್ವಾರಕಾನಾಥ್ ದಂಪತಿಗಳು ಒಂದು ದಿನ ಎಲ್ಲಾ ಸೇರಿ ಒಂದು ಮಕ್ಕಳ ಸಂಘ ಕಟ್ಟುವ ಯೋಚನೆ ಮಾಡಿದರು. “ಬಾಲ ಸಮಿತಿ” ಅಂತ ಒಂದು ತಂಡದ ರಚನೆ ಮಾಡಿ ನನ್ನನ್ನು ಆ ಸಮಿತಿಯ ಬಾಲ ಪ್ರಮುಖ್ ಎಂದು ಘೋಷಿಸಿದರು. ಅದಾದ ಮೇಲೆ ಪ್ರತಿ ಭಾನುವಾರ ಬಾಲ ಸಮಿತಿಯ ಸಭೆ ಸೇರುತ್ತಿದ್ದೆವು. ಆ ಬೀದಿಯ ಮಕ್ಕಳೆಲ್ಲಾ ಸೇರಿ ದೇಶದ ಕುರಿತಾಗಿ ಚರ್ಚೆ, ದೇಶ ಭಕ್ತಿಗೀತೆ, ಸ್ವದೇಶಿ ಚಳುವಳಿಯ ವಿಚಾರ ಮುಂತಾದ ಕಾರ್ಯ ಕಲಾಪ ನಡೆಸುತಿದ್ದೆವು. ಅದೇ ಸಂದರ್ಭದಲ್ಲಿ ಸುಧೀಂದ್ರ ಅಣ್ಣ ಮತ್ತು ಕುಸುಮಕ್ಕನ ಪರಿಚಯವಾಯಿತು. ಈ ಇಬ್ಬರೂ ಕೂಡ ನನ್ನ ಜೀವನದಲ್ಲಿ ಒಳ್ಳೆಯ ದಾರಿಯಲ್ಲಿ ನಡೆಯಲು ಬಹಳಷ್ಟು ನೆರವು ನೀಡಿದರು. ಕುಸುಮಕ್ಕ ನನಗೆ ಭಾವನಾತ್ಮಕವಾಗಿ ಆತ್ಮೀಯಳಾದರೆ, ಸುಧೀಂದ್ರಣ್ಣ ಬೌದ್ಧಿಕವಾಗಿ ಹತ್ತಿರವಾದರು. (ಮುಂದೆ ಇವರಿಬ್ಬರಿಂದಲೇ ಚಕ್ರವರ್ತಿ ಅಣ್ಣನ ಸಾನಿಧ್ಯ ಪಡೆಯಲು ನನಗೆ ಬಹಳ ಹೆಚ್ಚಿನ ಅವಕಾಶಗಳು ಸಿಕ್ಕಿದವು.) ನಾನು ಓದಿಕೊಂಡಿದ್ದ ರಾಜೀವ್ ದೀಕ್ಷಿತರ ಚಿಂತನೆಗಳನ್ನು ಇನ್ನೂ ಆಳವಾಗಿ ಅರ್ಥ ಮಾಡಿಕೊಳ್ಳಲು ಸುಧೀಂದ್ರ, ದ್ವಾರಕಾನಾಥ್, ಕುಸುಮಕ್ಕ, ವೇಣೂಜೀ ಮುಂತಾದ ಹಿರಿಯರೊಡನೆ ಅನೇಕ ಬಾರಿ ಚರ್ಚೆ, ವಾದ ವಿವಾದಗಳನ್ನು ನಡೆಸುತ್ತಿದ್ದೆ. ಈ ಚಿಂತನ ಮಂಥನದಿಂದಾಗಿ ನಾನು ತಿಳಿದಿದ್ದ ಹಲವು ವಿಚಾರಗಳ ತಪ್ಪು ಸರಿಗಳು ಸ್ಪಷ್ಟವಾಗುತ್ತಿದ್ದವು.

ಇವರೆಲ್ಲರ ಸಾನಿಧ್ಯ ನನ್ನ ಬೌದ್ದಿಕ ಹಸಿವಿಗೆ ಒಳ್ಳೆಯ ಆಹಾರ ದೊರಕಿತ್ತು. ಆದರೆ ಒಂದು ಆಸೆ ಮಾತ್ರ ಈಡೇರಿರಲಿಲ್ಲ. ಅದೇ ರಾಜೀವ್ ದೀಕ್ಷಿತರನ್ನು ಕಣ್ಣಾರೆ ಕಾಣುವ ಆಸೆ. ಭಗವಂತ ದಯಾಮಯಿ. ಒಂದು ದಿನ ರಾಜೀವ್ ದೀಕ್ಷಿತರು ಮೈಸೂರಿಗೆ ಬರುತ್ತಾರೆಂಬ ಸುದ್ದಿ ತಿಳಿಯಿತು. ಖುಷಿಯಿಂದ ಕುಣಿದಾಡಿಬಿಟ್ಟೆ. ಅವರ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನಾನೇ ಓಡಾಡಿಕೊಂಡು ಎಲ್ಲರಿಗೂ ಹಂಚಿದೆ. ಅಂದು ನಾ ಕಾತರದಿಂದ ಕಾಯುತ್ತಿದ್ದ ದಿನ ಬಂದೇಬಿಟ್ಟಿತು. ಸಿದ್ದಪ್ಪ ಸ್ಕ್ವೇರ್ ಬಳಿ ಇದ್ದ ಆಂದೋಲನದ ಹಳೇ ಆಫೀಸಿನ ಹೊರಗಡೆ ಕಾಯುತ್ತಾ ಕುಳಿತಿದ್ದಾಗ ರಾಜೀವ್ ದೀಕ್ಷಿತರ ಆಗಮನವಾಯಿತು. ತನ್ನ ಇಡೀ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿಕೊಂಡಿದ್ದ ರಾಜೀವ್ ದೀಕ್ಷಿತ್, ಹಗಲೂ ರಾತ್ರಿ ದೇಶಾದ್ಯಂತ ಬಿರುಗಾಳಿಯಂತೆ ಸುತ್ತುತ್ತಿದ್ದ ರಾಜೀವ್ ದೀಕ್ಷಿತ್, ಜೀವನದಲ್ಲಿ ಒಮ್ಮೆಯಾದರೂ ನೋಡಬೇಕೆಂದು ಕಾತರದಿಂದ ನಾನು ಕಾಯುತ್ತಿದ್ದ ನನ್ನ ಪಾಲಿನ ಆದರ್ಶ ವ್ಯಕ್ತಿಯಾಗಿದ್ದ ಅದೇ ರಾಜೀವ್ ದೀಕ್ಷಿತ್ ಇಂದು ನನ್ನ ಕಣ್ಣ ಮುಂದೆ ಬಂದಿದ್ದರು. ಕನಸೋ ನನಸೋ ಅಂತ ತಿಳಿಯದಂತ ಸನ್ನಿವೇಶ. ಖಾದಿ ಕುರ್ತಾ ಧರಿಸಿ ತಮ್ಮ ದೈವೀ ಕಳೆಯಿಂದ ಕಂಗೊಳಿಸುತ್ತಿದ್ದ ರಾಜೀವ್ ಭಯ್ಯಾ ಕಾರಿನಿಂದ ಇಳಿದು ಆಫೀಸ್ ಗೆ ಬಂದರು. ಎಲ್ಲ ಕಾರ್ಯಕರ್ತರೂ ಒಟ್ಟಿಗೆ ಸೇರಿ ವಂದೇ ಮಾತರಂ ಹಾಡಿದೆವು. ಆಮೇಲೆ ಸುಧೀಂದ್ರ ಅಣ್ಣ ರಾಜೀವ್ ಭಯ್ಯಾಗೆ ನನ್ನ ಪರಿಚಯ ಮಾಡಿಕೊಟ್ಟರು. “ಇವನ ಹೆಸರು ನಿತ್ಯಾನಂದ ಅಂತ. ಇಷ್ಟು ಚಿಕ್ಕ ವಯಸ್ಸಿಗೆ ದೇಶದ ಬಗ್ಗೆ ಆಪಾರ ಪ್ರೀತಿ, ನಿಮ್ಮ ಆರ್ಟಿಕಲ್ ಗಳನ್ನ ಒಂದೂ ಬಿಡದೆ ಓದಿದ್ದಾನೆ. ಬಹಳ ಪ್ರಶ್ನೆಗಳನ್ನು ಕೇಳುತ್ತಾನೆ.” ಎಂದು ಪರಿಚಯ ಮಾಡಿಕೊಟ್ಟರು. “ಏನಾದ್ರೂ ಪ್ರಶ್ನೆ ಕೇಳೋದಾದ್ರೆ ಕೇಳು.” ಅಂದರು. ನನಗೋ ರಾಜೀವ್ ದೀಕ್ಷಿತರನ್ನು ನೋಡಿ ಪ್ರಶ್ನೆಗಳೇ ಮರೆತುಹೋಗಿದ್ದವು. ಮಾತನಾಡೋಕೆ ಹೋದರೆ ಹಿಂದಿ ಬರಲ್ಲ. “ಆಗಲಿ ಕನ್ನಡದಲ್ಲೇ ಮಾತನಾಡು ನನಗೆ ಅರ್ಥ ಆಗತ್ತೆ” ಅಂದರು. “ರಾಜೀವ್ ಭಯ್ಯಾ ನಿಮ್ಮ ವಿಚಾರಗಳು ಹಿಂದಿಯಲ್ಲಿ ಇರುವುದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಅರ್ಥವಾಗುವುದಿಲ್ಲ. ಹೀಗಾಗಿ ನಾನು ಎಲ್ಲಾ ಕಾಲೇಜುಗಳಿಗೂ ಹೋಗಿ ಸ್ವದೇಶೀ ವಿಚಾರಗಳನ್ನು ಕನ್ನಡದಲ್ಲಿ ಹೇಳಬೇಕು ಎಂದುಕೊಂಡಿದ್ದೇನೆ. ಆದರೆ ನಾನು ಚಿಕ್ಕ ಹುಡುಗ ಅಂತ ಭಾಷಣಕ್ಕೆ ಯಾರೂ ಅನುಮತಿಯನ್ನೇ ಕೊಡುವುದಿಲ್ಲ” ಎಂದೆ! ರಾಜೀವ್ ದೀಕ್ಷಿತರು ನಸುನಕ್ಕು “ಅಚ್ಚಾ! ನಮ್ಮ ಕಾರ್ಯಕರ್ತರು ನಿನಗೆ ಅನುಮತಿ ಕೊಡಿಸುತ್ತಾರೆ. ಯೋಚಿಸಬೇಡ.” ಎಂದರು. ನಂತರ ಕಾರ್ಯಕರ್ತರೊಂದಿಗೆ ಮುಂದಿನ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದರು. ಅನಂತರ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಒಂದು ಭಾಷಣ ಕಾರ್ಯಕ್ರಮಕ್ಕೆ ಹೊರಟರು. ನಾನೂ ಅವರೊಂದಿಗೇ ಹೊರಟೆ.

ದೇವರು ಕೊಟ್ರೆ ಒಂದೇ ಸಲ ಕೊಡ್ತಾನೆ ಅನ್ನೋದಕ್ಕೆ ಇನ್ನೊಂದು ಉದಾಹರಣೆ ನನ್ನ ಜೀವನದಲ್ಲಿ ನಡೆದುಹೋಯಿತು. ರಾಜೀವ್ ದೀಕ್ಷಿತರನ್ನು ನೋಡಿದ ದಿನವೇ ಚಕ್ರವರ್ತಿ ಸೂಲಿಬೆಲೆಯವರನ್ನು ನೋಡುವ ಭಾಗ್ಯ ನನ್ನದಾಗಿತ್ತು. ಕಲಾ ಮಂದಿರದ ಕಾರ್ಯಕ್ರಮಕ್ಕೆ ಆಗಮಿಸಿ ಫೋನಿನಲ್ಲಿ ಮಾತನಾಡುತ್ತಿದ್ದ ಚಕ್ರವರ್ತಿ ಅಣ್ಣನನ್ನು ದೂರದಿಂದಲೇ ತೋರಿಸಿ “ನಿತ್ಯಾ, ರಾಜೀವ್ ದೀಕ್ಷಿತರ ಅಂಕಣವನ್ನು ವಿಜಯಕರ್ನಾಟಕದಲ್ಲಿ ಬರೆಯುತ್ತಾರಲ್ಲಾ. ಚಕ್ರವರ್ತಿ ಸೂಲಿಬೆಲೆ. ನೋಡು ಅವರೇ.” ಅಂತ ಆರಾಧ್ಯ ಎನ್ನುವ ನಮ್ಮ ಕಾರ್ಯಕರ್ತರೊಬ್ಬರು ಪರಿಚಯ ಮಾಡಿಕೊಟ್ಟರು. ಆಗ ರಾಜೀವ್ ದೀಕ್ಷಿತರ ವಿಚಾರವನ್ನು ಕರ್ನಾಟಕದ ಜನತೆಗೆ ತಲುಪಿಸುವ ದೂಡ್ಡ ಜವಾಬ್ದಾರಿಯನ್ನು ಚಕ್ರವರ್ತಿ ಅಣ್ಣ ಹೊತ್ತುಕೊಂಡಿದ್ದರು. ಆಂದೋಲನದ ಹೊಸ ಸ್ವಾತಂತ್ರ್ಯದ ಬೆಳಕು ಪತ್ರಿಕೆಯ ಸಂಪಾದಕರಾಗಿದ್ದರು. ಹೀಗಾಗಿ ಅಂದಿನ ಕಾರ್ಯಕ್ರಮಕ್ಕೆ ಚಕ್ರವರ್ತಿ ಅಣ್ಣನೂ ಬಂದಿದ್ದರು. ಅವರನ್ನು ನೋಡಿರದಿದ್ದರೂ ಅವರ ಹೆಸರನ್ನು ನೋಡಿದ್ದೆ. ಪ್ರತಿ ದಿನ ನಾನು ತಪ್ಪದೇ ಓದುತ್ತಿದ್ದ ರಾಜೀವ್ ದೀಕ್ಷಿತರ “ಮೇರಾ ಭಾರತ್ ಮಹಾನ್” ಆರ್ಟಿಕಲ್ ನ ಕೊನೆಯಲ್ಲಿ ‘ಅನುವಾದ – ಚಕ್ರವರ್ತಿ ಸೂಲಿಬೆಲೆ’ ಅಂತ ಬರೆದಿರುತ್ತಿತ್ತು. ನಿಜ ಹೇಳಬೇಕಂದ್ರೆ ರಾಜೀವ್ ದೀಕ್ಷಿತರನ್ನು ನಾನು ಎಷ್ಟು ವಿಪರೀತವಾಗಿ ಪ್ರೀತಿಸುತ್ತಿದ್ದೇನೆಂದರೆ ಅವರ ಆರ್ಟಿಕಲ್ ನಲ್ಲಿ ಇವರ ಹೆಸರು ಯಾಕಿರಬೇಕು? ಅಂತ ನಾನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದ ಎಲ್ಲಾ ಆರ್ಟಿಕಲ್ ಗಳಿಂದ ಚಕ್ರವರ್ತಿ ಸೂಲಿಬೆಲೆ ಎನ್ನುವ ಹೆಸರನ್ನು ಕಟ್ ಮಾಡಿಹಾಕಿದ್ದೆ! ಆದರೆ ಅವರೇ ಮುಂದೆ ನನ್ನ ಜೀವನದ ಮೂರ್ತಿಯ ಬೇಡವಾದ ಭಾಗಗಳನ್ನು ಕಟ್ ಮಾಡಿ ಸುಂದರ ಮೂರ್ತಿಯನ್ನಾಗಿ ಮಾರ್ಪಡಿಸುವ ಶಿಲ್ಪಿಯಾಗುತ್ತಾರೆ ಎಂದು ನಾನು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ.

ಅಂದು ಸಂಜೆ ಕಲಾಮಂದಿರದಲ್ಲಿ ರಾಜೀವ್ ದೀಕ್ಷಿತರ ಭಾಷಣ ನಡೆಯಿತು. ನಂತರ ಪ್ರೊ. ಕೃಷ್ಣೇಗೌಡರು ಮಾತನಾಡಿದರು. ಅವರು ಹೇಳಿದ ಒಂದು ಮಾತು ಇಂದಿಗೂ ನನ್ನ ಕಿವಿಯಲ್ಲೇ ಇದೆ. “ ರೇಡಿಯೋ ತರಂಗಗಳು ಯಾವಾಗಲೂ ಗಾಳಿಯಲ್ಲಿ ಇರುತ್ತವೆ. ಆದರೆ ರೇಡಿಯೋದಲ್ಲಿ ಸರಿಯಾದ ಕಂಪನಾಂಕಕ್ಕೆ ಟ್ಯೂನ್ ಮಾಡಿದವರಿಗೆ ಮಾತ್ರ ಹಾಡು ಕೇಳುತ್ತದೆ. ಹಾಗೆಯೇ ರಾಜೀವ್ ದೀಕ್ಷಿತರಂಥವರು ಮಾತನಾಡುವುದನ್ನು ಎಲ್ಲರ ಕಿವಿಗಳೂ ಕೇಳುತ್ತವೆ. ಆದರೆ ಹೃದಯವನ್ನು ಯಾರು ಟ್ಯೂನ್ ಮಾಡಿ ಇಟ್ಟುಕೊಂಡಿರುತ್ತಾರೋ ಅವರು ಮಾತ್ರ ಅದನ್ನು ನಿಜವಾಗಿ ಕೇಳಿಸಿಕೊಳ್ಳಬಲ್ಲರೂ.” ಕೃಷ್ಣೆ ಗೌಡರು ಹಾಗೆಂದಾಗ, “ಆ ಟ್ಯೂನ್ ಮಾಡಿಕೊಂಡಿರುವವನು ನಾನೇ” ಅಂತ ಕೂಗಿ ಹೇಳಬೇಕೆನ್ನಿಸಿತು. ನಂತರ ಚಕ್ರವರ್ತಿ ಅಣ್ಣನ ಭಾಷಣವಿತ್ತು. ಬಹಳ ಚೆನ್ನಾಗಿ ಮಾತನಾಡಿದರು. ಪಕ್ಕದಲ್ಲಿ ಕೂರಿಸಿಕೊಂಡು ಶೈಲಕ್ಕ ಹೇಳಿದರು “ನಿತ್ಯಾ ನೋಡು. ನಾಳೆ ನೀನು ಇವರ ತರಾನೆ ಆಗಬೇಕು ಅನ್ನೋದು ನಮ್ಮ ಆಸೆ.” ಅಂತ. ರಾಜೀವ್ ದೀಕ್ಷಿತರಿಗೆ ಬಿಟ್ಟು ಇನ್ಯಾರನ್ನೂ ನನ್ನ ಹೃದಯದಲ್ಲಿ ಜಾಗವಿಲ್ಲವೆಂದು ತೀರ್ಮಾನಿಸಿದ್ದ ನಾನು “ನಾ ಇವರ ತರ ಆಗಲ್ಲ. ರಾಜೀವ್ ದೀಕ್ಷಿತರ ತರ ಆಗ್ತೀನಿ.” ಅಂತ ಮನಸ್ಸಿನಲ್ಲಿ ಅಂದುಕೊಂಡಿದ್ದೆ.

ಕಾರ್ಯಕ್ರಮ ಮುಗಿಸಿ ರಾಜೀವ್ ದೀಕ್ಷಿತರೊಂದಿಗೆ ಎಲ್ಲರೂ ನಮ್ಮ ಕಾರ್ಯಕರ್ತರೊಬ್ಬರ ಮದುವೆಗೆ ಹೊರಟೆವು. ರಾಮಸ್ವಾಮಿ ಸರ್ಕಲ್ ಬಳಿ ಇರುವ ಜೈನ್ ಕನ್ವೆನ್ಷನ್ ಹಾಲ್ ನಲ್ಲಿ ಊಟ ಮುಗಿಸಿ ಮೆಟ್ಟಿಲು ಇಳಿದು ಹೊರಗೆ ಬರಬೇಕಾದರೆ ರಾಜೀವ್ ದೀಕ್ಷಿತರೂ ಮೆಟ್ಟಿಲು ಇಳಿಯುತ್ತಿದ್ದರು. ನನ್ನನ್ನು ನೋಡಿ ಅವರ ಕೈಲಿದ್ದ ತಾಂಬೂಲಕ್ಕೆಂದು ಕೊಟ್ಟಿದ್ದ ತೆಂಗಿನಕಾಯಿಯನ್ನು ನನ್ನ ಕೈಲಿಟ್ಟರು. ನಾನು ಮನಸ್ಸಿನಲ್ಲೇ “ರಾಜೀವ್ ದೀಕ್ಷಿತರೇ ಸ್ವತಃ ತಮ್ಮ ಕಯ್ಯಾರೆ ನೀಡಿದ ಈ ತೆಂಗಿನ ಕಾಯಿಯನ್ನು ಜೀವನಪರ್ಯಂತ ಜೋಪಾನಾವಾಗಿ ಇಟ್ಟುಕೊಳ್ಳಬೇಕು.” ಅಂತ ಯೋಚಿಸುತ್ತಲೇ. “ರಾಜೀವ್ ಭಯ್ಯಾ ಮತ್ತೆ ಕರ್ನಾಟಕಕ್ಕೆ ಯಾವಾಗ ಬರ್ತೀರಾ?” ಅಂತ ಕನ್ನಡದಲ್ಲೇ ಕೇಳಿದೆ. ಅವರು “ಮುಂದಿನ ತಿಂಗಳು ಬೆಂಗಳೂರಿನ ಶಿಬಿರಕ್ಕೆ ಬರ್ತೀನಿ” ಅಂತ ಹಿಂದಿಯಲ್ಲಿ ಹೇಳುವಷ್ಟರಲ್ಲಿ ಛತ್ರದ ಹೊರಗಿನ ಪಾರ್ಕಿಗೆ ಬಂದಿದ್ದೆವು. ಅಲ್ಲಿ ಎಲ್ಲ ಕಾರ್ಯಕರ್ತರು ರಾಜೀವ್ ದೀಕ್ಷಿತರನ್ನು ಬೀಳ್ಕೊಡುವುದಕ್ಕಾಗಿ ಕಾದಿದ್ದರು. ರಾಜೀವ್ ದೀಕ್ಷಿತರಿಗೆ ಏನನ್ನಿಸಿತೋ ನನ್ನ ಹೆಗಲ ಮೇಲೆ ಕೈ ಹಾಕಿಕೊಂಡು ಎಲ್ಲರನ್ನೂ ಕರೆದು. “ಸುನೋ ಎ ಲಡ್ಕಾ ಆಂದೋಲನ್ ಕಾ ಅಚ್ಚೀ ಕಾರ್ಯಕರ್ತ ಹೈ” ಅಂತ ಹೇಳಿ ಕಾರ್ಯಕ್ರಮದಲ್ಲಿ ತಮಗೆ ಸನ್ಮಾನಿಸಿ ಕೊಟ್ಟಿದ್ದ ಹಣ್ಣಿನ ಬುಟ್ಟಿ ಮತ್ತು ಹೂಗುಚ್ಚವನ್ನೂ ನನಗೆ ಕೊಟ್ಟುಬಿಟ್ಟರು. ಅಷ್ಟೂ ಸಾಲದೆಂಬಂತೆ ತಮಗೆ ಹೊದಿಸಿದ್ದ ಶಾಲನ್ನು ನನಗೆ ಹೊದಿಸಿಬಿಟ್ಟರು. ನಾನು ಅನಿರೀಕ್ಷಿತವಾಗಿ ನಡೆದು ಹೋದ ಈ ಘಟನೆಯಿಂದ ಅವಾಕ್ಕಾಗಿ ನಿಂತಿದ್ದೆ. ಜೀವನದಲ್ಲಿ ಯಾವ ವ್ಯಕ್ತಿಯನ್ನು ಒಮ್ಮೆ ನೋಡಿಬಿಟ್ಟರೆ ಸಾಕು ಎಂದುಕೊಂಡಿದ್ದೆನೋ ಅದೇ ವ್ಯಕ್ತಿ ಇಂದು ನನಗೆ ಸನ್ಮಾನ ಮಾಡುತ್ತಿದ್ದಾರೆ. ತಕ್ಷಣ ರಾಜೀವ್ ದೀಕ್ಷಿತರ ಕಾಲಿಗೆ ನಮಸ್ಕಾರ ಮಾಡಿಕೊಳ್ಳಲು ಮುಂದೆ ಬಗ್ಗಿದರೆ ಕಣ್ಣಿಂದ ಅಷ್ಟೇ ವೇಗದಲ್ಲಿ ಆನಂದ ಭಾಷ್ಪ ಹೊರಬರಲಾರಂಭಿಸಿತು. ಒಂದಷ್ಟು ನಿಮಿಷಗಳ ಕಾಲ ನಾನು ಎಲ್ಲಿದ್ದೇನೆ ಎನ್ನುವ ಬಾಹ್ಯ ಪ್ರಜ್ಞೆಯನ್ನೇ ಮರೆತು ತೃಪ್ತಿಯಾಗುವಷ್ಟು ಕಣ್ಣೀರು ಹಾಕಿದ್ದೆ. ಅಷ್ಟು ಹೊತ್ತಿಗೆ ಸರಿಯಾಗಿ ಆ ಅಪರೂಪದ ಕ್ಷಣಗಳನ್ನು ಸುಧೀಂದ್ರ ಅಣ್ಣ ತಮ್ಮ ಕೆಮೆರಾದಲ್ಲಿ ಸೆರೆಹಿಡಿಡುಬಿಟ್ಟಿದ್ದರು! ರಾಜೀವ್ ಭಯ್ಯಾ “ಈ ಹುಡುಗನನ್ನು ಬೆಂಗಳೂರಿನಲ್ಲಿ ಜೂನ್ ತಿಂಗಳು ನಡೆಯುವ ಶಿಬಿರಕ್ಕೆ ಕರೆದುಕೊಂಡು ಬನ್ನಿ” ಎಂದು ಕಾರ್ಯಕರ್ತರಿಗೆ ಹೇಳಿ ಹೊರಟರು. (ತಮ್ಮೊಂದಿಗೆ ಹೊರಟ ಕಾರ್ಯಕರ್ತರೊಂದಿಗೆ ರಾಜೀವ್ ಭಯ್ಯಾ “ಆ ಹುಡುಗನ ಕಣ್ಣಲ್ಲಿ ಬಂದ ನೀರು, ಅವನ ಹೃದಯ ಎಷ್ಟು ಪರಿಶುದ್ಧವಾಗಿದೆ ಎಂಬುದನ್ನು ತೋರಿಸುತ್ತದೆ.” ಎಂದು ಹೇಳಿದ್ದಾರೆಂಬುದನ್ನು ಮಾರನೆಯ ದಿನ ಕುಸುಮಕ್ಕನ ಬಾಯಲ್ಲಿ ಕೇಳಿ ಆನಂದಪರವಶನಾಗಿದ್ದೆ!) ಈ ಘಟನೆಯ ನಂತರ ಎಲ್ಲ ಕಾರ್ಯಕರ್ತರೂ ನನ್ನನ್ನು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದರು. ಶೈಲಕ್ಕ ಅಂತೂ “ನಾವು ಎಷ್ಟು ವರ್ಷಗಳಿಂದ ಆಂದೋಲನದಲ್ಲಿದ್ದೇವೆ. ನಮಗೆ ಒಮ್ಮೆಯೂ ರಾಜೀವ್ ಭಯ್ಯಾ ಸನ್ಮಾನ ಮಾಡಲಿಲ್ಲ. ನಿನಗೆ ಮಾತ್ರ ಎಂತ ಅದೃಷ್ಟ ನೋಡು” ಎಂದರು. ಅಷ್ಟು ಹೊತ್ತಿಗಾಗಲೇ ಸಮಯ 11 ಗಂಟೆ ಆಗಿಹೋಗಿತ್ತು. ನನ್ನ ಮೈ ನಡುಗುತ್ತಿತ್ತು. ಕಾರ್ಯಕರ್ತರು ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಹಾಸ್ಟೆಲ್‌ನ ವರೆಗೂ ಕರೆದೊಯ್ದರು.

ಅಂದು ರಾತ್ರಿ ಬಹಳ ಹೊತ್ತಿನವರೆಗೆ ನನಗೆ ನಿದ್ರೆಯೇ ಬರಲಿಲ್ಲ. ಭವಿಷ್ಯದಲ್ಲಿ ನಾನೂ ರಾಜೀವ್ ದೀಕ್ಷಿತರಂತೆ ದೇಶದ ಉದ್ದಗಲಕ್ಕೂ ಓಡಾಡಿ ರಾಷ್ಟ್ರೀಯತೆಯನ್ನು ಸಾರುವ ವಕ್ತಾರನಾಗಬೇಕೆಂಬ ಕನಸು ಕಟ್ಟಿ ಮಲಗಿದ್ದೆ. ಅದಾದ ಕೆಲವು ದಿನಗಳ ನಂತರ ಬೆಂಗಳೂರಿನ ಕ್ಯಾಂಪ್ ಗೆ ಹೋದೆವು. ಅಪ್ಪನ ಬಳಿ ಫೋನ್ ನಲ್ಲೇ ಮಾತಾಡಿ ಅನುಮತಿ ಪಡೆದಿದ್ದೆ. ಸತ್ಯಕೀರ್ತಿ ಜೀ, ರಾಮಚಂದ್ರ ಗುಪ್ತಾಜೀ ಮತ್ತು ಸುಧೀಂದ್ರ ಅಣ್ಣ ನನ್ನನ್ನು ರೈಲಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋದರು. ಬುದ್ಧಿ ಬಂದ ಮೇಲೆ ಮೊದಲ ಬಾರಿಗೆ ಬೆಂಗಳೂರು ನಗರವನ್ನು ಅಂದು ನೋಡಿದ್ದೆ. ಕಾಟನ್‌ಪೇಟೆಯಲ್ಲಿರುವ ಆಜಾದಿ ಬಚಾವೋ ಆಂದೋಲನದ ಆಫೀಸಿನಲ್ಲಿ ಶಿಬಿರ ನಡೆಯುತ್ತಿತ್ತು. ಆವತ್ತೇ ನನ್ನ ಹುಟ್ಟಿದ ದಿನವೂ ಕೂಡಾ ಆಗಿತ್ತು. ಅಂದು ರಾಜೀವ್ ದೀಕ್ಷಿತರ ಮತ್ತು ಚಕ್ರವರ್ತಿ ಅಣ್ಣನ ಜೊತೆ ಆತ್ಮೀಯ ಒಡನಾಟ ಲಭಿಸಿತು. ಅಂದು ಶಿಬಿರದಲ್ಲಿ ತಿಂಡಿಗೆ ಅಂತ ಮಾಡಿದ್ದ ಕೇಸರಿ ಭಾತ್ ಅನ್ನೇ ನನ್ನ ಹುಟ್ಟು ಹಬ್ಬಕ್ಕೆ ಮಾಡಿದ್ದು ಅಂತ ಚಕ್ರವರ್ತಿ ಅಣ್ಣ ನನ್ನನ್ನು ಮಾತ್ರವಲ್ಲದೆ ಅಲ್ಲಿದ್ದ ಎಲ್ಲರನ್ನೂ ನಂಬಿಸಿದರು! ಅವರು ನನ್ನೊಂದಿಗೆ ಅಷ್ಟು ಆತ್ಮೀಯವಾಗಿ ನಡೆದುಕೊಂಡಿದ್ದನ್ನು ನಾನು ಇಂದಿನವರೆಗೂ ಮರೆತಿಲ್ಲ. ಅಂದು ಸಂಜೆ ರಾಜೀವ್ ದೀಕ್ಷಿತರ ಎದುರು ಒಂದು ಪುಟ್ಟ ಭಾಷಣವನ್ನೂ ಮಾಡಿದ್ದೆ. ಶಿಬಿರ ಮುಗಿಸಿಕೊಂಡು ಹಾಸ್ಟೆಲ್ಲಿಗೆ ವಾಪಾಸ್ಸು ಬರುವ ಹೊತ್ತಿಗೆ ಬಹಳ ಅನುಭವ ಆಗಿತ್ತು. ಅದಾದ ನಂತರ ಚಕ್ರವರ್ತಿ ಅಣ್ಣನ ಜೊತೆ ಪ್ರತಿ ದಿನ ಫೋನಿನ ಮೂಲಕ ಸಂಪರ್ಕಿಸುತ್ತಿದ್ದೆ. ಒಮ್ಮೆಯೂ ಬೇಜಾರು ಮಾಡಿಕೊಳ್ಳದೆ ಅವರು ನನ್ನೊಂದಿಗೆ ಪ್ರೀತಿಯಿಂದ ಮಾತನಾಡುತ್ತಿದ್ದ ರೀತಿ ನನಗೆ ಅತ್ಯಂತ ಆನಂದವನ್ನು ತರುತ್ತಿತ್ತು. ಮುಂದೆ ಅಣ್ಣ ವಿಜಯ ಕರ್ನಾಟಕ ಪತ್ರಿಕೆಗೆ ‘ಹೊಂಗೆ ಕಾಂ ಯಾಬ್’ ಅಂಕಣವನ್ನು ಬರೆಯತೊಡಗಿದರು. ಅದೇ ಪ್ರೇರಣೆಯಿಂದ ನಾನು ಲೇಖನಗಳನ್ನು ಬರೆಯಲು ಪ್ರಾರಂಭಿಸಿದೆ. ಒಮ್ಮೆ ‘ಹೊಸ ಸ್ವಾತಂತ್ರ್ಯದ ಬೆಳಕು’ ಪತ್ರಿಕೆಗೆ ನಾನು ಬರೆದಿದ್ದ, ಸುಮಾರಾಗಿದ್ದ ಲೇಖನದ ಬಗ್ಗೆ ಚಕ್ರವರ್ತಿ ಅಣ್ಣ “ತುಂಬಾ ಚೆನ್ನಾಗಿ ಬರೆದಿದ್ದೀಯ ಕಣೋ, ಬರೆಯೋದು ನಿಲ್ಲಿಸಬೇಡ, ಮುಂದುವರೆಸು.” ಅಂತ ಪ್ರೋತ್ಸಾಹ ನೀಡಿದ್ದರು. ರಾಜೀವ್ ದೀಕ್ಷಿತರು ಮತ್ತು ಚಕ್ರವರ್ತಿ ಅಣ್ಣ ಮೈಸೂರಿಗೆ ಬಂದಾಗಲೆಲ್ಲಾ ಉಳಿದುಕೊಳ್ಳುತ್ತಿದ್ದುದು ಸುಧೀಂದ್ರ ಅಣ್ಣನ ಮನೆಯಲ್ಲಿ. ಬಸವನ ಹಿಂದೆ ಬಾಲ ಎಂಬಂತೆ ಅವರ ಹಿಂದೆ ನಾನೂ ಕುಸುಮಕ್ಕಳೂ ಸುಧೀಂದ್ರ ಅಣ್ಣನ ಮನೆಗೆ ಹೊರಟುಬಿಡುತ್ತಿದ್ದೆವು. ರಾಜೀವ್ ದೀಕ್ಷಿತರ ಜೊತೆ ಇರುವ ಭಾಗ್ಯ ಸಿಗುತ್ತಲ್ಲಾ ಅಂತ ಸುಧೀಂದ್ರ ಅಣ್ಣನ ಮನೆಗೆ ಹೋಗಿಬಿಡುತ್ತಿದ್ದೆ. ಸುಧೀಂದ್ರ ಅಣ್ಣನ ಅಮ್ಮ ಮಹಾತಾಯಿ. ಅವರ ಮನೆಗೆ ಯಾರೇ ಬರಲಿ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಚಕ್ರವರ್ತಿ ಅಣ್ಣನಂತೂ ಅವರನ್ನು ಅನ್ನಪೂರ್ಣೆ ಅಂತಲೇ ಕರೆಯುತ್ತಿದ್ದುದು. ಚಕ್ರವರ್ತಿ ಅಣ್ಣ ಎಲ್ಲರೊಂದಿಗೆ ಮಾಡುತ್ತಿದ್ದ ಹಾಸ್ಯ. ಒಬ್ಬರಿಗೊಬ್ಬರು ಕಾಲೆಳೆಯುವುದು ಇತ್ಯಾದಿಗಳು ನನಗೆ ಅತ್ಯಂತ ಸಂಭ್ರಮದಿಂದ ಅಲ್ಲಿರುವಂತೆ ಮಾಡಿತ್ತು. ಅದರ ಜೊತೆಗೆ ನಾನು ಮತ್ತು ಕುಸುಮಕ್ಕ ಇಬ್ಬರೂ ಜೊತೆ ಸೇರಿಕೊಂಡು ಯಾವಾಗಲೂ ರಾಜೀವ್ ದೀಕ್ಷಿತರನ್ನು ತಿಂದು ಹಾಕಿಬಿಡುವಂತೆ ಗಮನಿಸುತ್ತಿದೆವು. ಅವರು ಹಾಲಿನ ಕೆನೆಯಲ್ಲಿ ಶೇವಿಂಗ್ ಮಾಡುವುದು, ಬಬೂಲ್ ಕಡ್ಡಿಯಲ್ಲಿ ಹಲ್ಲುಜ್ಜುವುದನ್ನು ನೋಡುವುದೇ ಒಂದು ಮಜಾ! ಅವರೂ ಕೂಡಾ ನಮ್ಮನ್ನು ಚಿಕ್ಕ ಮಕ್ಕಳೆಂದು ನಮ್ಮ ತುಂಟಾಟಗಳನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದರು!

ಮುಂದೆ ಮೈಸೂರಿನಲ್ಲಿ ಆಂದೋಲನದ ಚಟುವಟಿಕೆಗಳು ಬಿರುಸಾಯಿತು. ನಾನು ಮತ್ತು ನನ್ನ ಗೆಳೆಯರು ಸ್ವದೇಶಿ ವಸ್ತು \ ವಿದೇಶಿ ವಸ್ತು ಪಟ್ಟಿಯನ್ನು ಮುದ್ರಿಸಿ ಜೆರಾಕ್ಸ್ ಮಾಡಿಸಿ ಮನೆ ಮನೆಗೆ ಹಂಚಲಾರಂಭಿಸಿದೆವು. ಬಹಳಷ್ಟು ಜನ ಸ್ನೇಹಿತರನ್ನು ಸ್ವದೇಶಿಯನ್ನಾಗಿ ಬದಲಾಯಿಸುವಲ್ಲಿ ಅಲ್ಪ ಮಟ್ಟಿಗಿನ ಯಶಸ್ಸನ್ನೂ ಕಂಡೆವು. ಒಮ್ಮೆ ಮೈಸೂರಿನ ಸದ್ವಿದ್ಯಾ ಕಾಲೇಜಿನಲ್ಲಿ ಜಾಗತೀಕರಣ ಕುರಿತಂತೆ ಒಂದು ಭಾಷಣ ಸ್ಪರ್ಧೆಯನ್ನೂ ಏರ್ಪಡಿಸಿದ್ದೆವು. ಆಗಲೇ ನನಗೆ ಸಂಘಟನೆಯೊಂದರ ಗ್ರೌಂಡ್ ಲೆವಲ್ ನ ಕೆಲಸಗಳ ಬಗ್ಗೆ ಪೂರ್ಣ ಅನುಭವ ದೊರಕಿದ್ದು. ಮುಂದೆ “ನವಜಾಗೃತಿ” ಹೆಸರಿನ ಒಂದು ಕೈಬರಹದ ಜೆರಾಕ್ಸ್ ಪತ್ರಿಕೆಯನ್ನು ಪ್ರಾರಂಭಿಸಿದೆ. ಬರೆಯಲು ತಲೆಯಲ್ಲಿರುವ ಸಾಮಗ್ರಿ ಖಾಲಿ ಆಗಿದೆ ಎನಿಸಿದಾಗ ಅಣ್ಣನ ಸಲಹೆಯಂತೆ ಅನೇಕ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ಅದೇ ಸಮಯಕ್ಕೆ ನನಗೆ ಕ್ರಾಂತಿಕಾರಿ ಚಂದ್ರ ಶೇಖರ್ ಆಜಾದ್ ರ ಜೀವನ ಚರಿತ್ರೆ “ಅಜೇಯ” ಪುಸ್ತಕ ದೊರಕಿತು. ಅದನ್ನು ಓದುವಾಗ ಈ ದೇಶದ ಸ್ವಾತಂತ್ರ್ಯಕ್ಕೋಸ್ಕರ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್, ದುರ್ಗ ಭಾಬಿ, ಜತೀನ್ ದಾಸ್, ಮುಂತಾದ ಕ್ರಾಂತಿಕಾರಿಗಳು ಮಾಡಿದ ತ್ಯಾಗ ಬಲಿದಾನದ ಬಗ್ಗೆ ತಿಳಿಯಿತು. ಎಷ್ಟೋ ಬಾರಿ ಅಜೇಯ ಓದಬೇಕಾದರೆ ನಾನು ಆ ಕ್ರಾಂತಿಕಾರಿಗಳಲ್ಲಿ ಒಬ್ಬನಾಗಿರುವೆನೇನೋ ಎನ್ನುವಷ್ಟರ ಮಟ್ಟಿಗೆ ಅದರಲ್ಲಿ ಲೀನವಾಗಿಬಿಡುತ್ತಿದ್ದೆ. ಭಾವೋದ್ವೇಗದಿಂದ ಕಣ್ಣೀರು ಬರುತ್ತಿತ್ತು. ಅದರಲ್ಲೂ ಆಜಾದ್ ರ ಬಲಿದಾನದ ಸನ್ನಿವೇಶ ವನ್ನು ಓದಬೇಕಾದರೆ ಜೀವವೇ ಹಾರಿಹೋದಂತೆ ಅನ್ನಿಸಿತ್ತು . ಆಗೆಲ್ಲಾ ಇಂಥಾ ಮಹಾತ್ಮರ ಜೀವನವನ್ನು ನಮ್ಮ ದೇಶದ ಜನ ಮರೆತೇ ಬಿಟ್ಟಿದ್ದಾರಲ್ಲ ಎಂದು ಬಹಳ ಸಂಕಟವಾಗುತ್ತಿತ್ತು. ಸಾಧ್ಯವಾದರೆ ಇಂಥವರ ಜೀವನವನ್ನು ಜನರಿಗೆ ತಿಳಿಸುವುದಕ್ಕೆ ನನ್ನ ಇಡೀ ಜೀವನವನ್ನು ಮೀಸಲಿಡಬೇಕು ಎಂದು ಪದೇ ಪದೇ ಅಂದುಕೊಳ್ಳುತ್ತಿದ್ದೆ. ಮುಂದೆ ನನಗೆ ‘ಹಿಮಾಲಯನ್ ಬ್ಲಂಡರ್’ ಪುಸ್ತಕ ದೊರಕಿತು. ಆ ಪುಸ್ತಕದಿಂದಾಗಿ ನೆಹರೂ ಈ ದೇಶಕ್ಕೆ ಮಾಡಿದ ಅನ್ಯಾಯ, ನಮ್ಮ ಸೈನಿಕರು ದೇಶಕ್ಕಾಗಿ ಗಡಿಯಲ್ಲಿ ಪಡುವ ಕಷ್ಟ ಎಲ್ಲವೂ ತಿಳಿಯಿತು. ಒಮ್ಮೆ ಸುಧೀಂದ್ರ ಅಣ್ಣನ ಮನೆಗೆ ಹೋಗಿದ್ದಾಗ ಕ್ರಾಂತಿ ವೀರ ವಿನಾಯಕ ದಾಮೋದರ ಸಾವರ್ಕರರ ನನ್ನ ಜೀವಾವಧಿ ಶಿಕ್ಷೆ, ಆತ್ಮಾಹುತಿ ಮುಂತಾದ ಗ್ರಂಥಗಳು ದೊರೆತವು. ಸಾವರ್ಕರ್ ರಂಥಾ ಒಬ್ಬ ಮಹಾನ್ ಕ್ರಾಂತಿಕಾರಿ ತನ್ನ ಯವ್ವನದ ಬಹುಮುಖ್ಯ ಅವಧಿಯನ್ನು ಅಂಡಾಮಾನಿನ ಜೈಲಿನಲ್ಲಿ ಕತ್ತಲೆ ಕೋಣೆಗಳಲ್ಲಿ ಕಳೆದ ಯಾತನಾಮಯ ಬದುಕನ್ನು ಓದಿ ರೋಮಾಂಚನವಾಯಿತು. ಆಮೇಲೆ ನೇತಾಜಿಯವರ ಜೀವನ ‘ಕೋಲ್ಮಿಂಚು’ ಓದಿದೆ. ಇವೆಲ್ಲವನ್ನೂ ಓದಿದಂತೆಲ್ಲಾ ನಮ್ಮ ದೇಶದ ನಿಜವಾದ ಇತಿಹಾಸ ಅರ್ಥವಾಗುತ್ತಾ ಹೋಯಿತು. ನಮ್ಮ ದೇಶದ ಇತಿಹಾಸದಲ್ಲಿ ಗಾಂಧಿವಾದಿಗಳು ಎನಿಸಿಕೊಂಡವರಿಗೆ ದೊರೆತಷ್ಟು ಗೌರವ ಮಹತ್ವ ಅವರಿಗಿಂತಲೂ ತ್ಯಾಗಮಯ ಜೀವನ ನಡೆಸಿದ ಕ್ರಾಂತಿಕಾರಿಗಳಿಗೆ ದೊರೆತಿಲ್ಲ ಎನುವ ಸತ್ಯದ ಅರಿವಾಯಿತು.

ಅದೇ ಸಮಯಕ್ಕೆ ಸರಿಯಾಗಿ ಕಾಂಗ್ರೆಸ್ ಮಂತ್ರಿ ಮಣಿಶಂಕರ್ ಅಯ್ಯರ್ ಅಂಡಾಮಾನಿನ ಜೈಲಿನಲ್ಲಿ ಸಾವರ್ಕರ್ ಸ್ಮರಣಾರ್ಥ ಇಡಲಾಗಿದ್ದ ಸ್ಮರಣಿಕೆಯೊಂದನ್ನು ತೆಗೆಸಿಹಾಕಿ ಅವರನ್ನು ಒಬ್ಬ ಹೇಡಿ ಎಂದು ಹೇಳಿಕೆ ನೀಡಿದ ಘಟನೆ ರಾಷ್ಟ್ರ ಪ್ರೇಮಿಗಳ ಮನಸ್ಸಿನಲ್ಲಿ ಬೆಂಕಿ ಹಚ್ಚಿತ್ತು. ಆಗ ತಾನೇ ಸಾವರ್ಕರರ ಜೀವನ ಓದಿಕೊಂಡಿದ್ದ ನನಗೂ ಸಹಜವಾಗಿ ಕೋಪ ಬಂದಿತು. ಆದರೆ ನಾನೊಬ್ಬ ಏನು ಮಾಡಲು ಸಾಧ್ಯ? ಆಗ ಬೆಳಕು ಪತ್ರಿಕೆಗೆ “ನಾಯಿ ಬೊಗಳಿದರೆ ದೇವಲೋಕ ಹಾಳೆ?” ಎಂಬ ಲೇಖನ ಬರೆದಿದ್ದೆ. ಆದರೆ ಒಂದು ಲೇಖನ ಸರ್ಕಾರಕ್ಕೆ ಏನು ತಾನೇ ಮಾಡಬಲ್ಲದು. ಆಗಲೇ ನನಗೆ ಸಂಘಟನೆಯ ಮಹತ್ವ ಅರ್ಥವಾಗಿದ್ದು. ಅದೇ ಸಮಯದಲ್ಲಿ ಚಕ್ರವರ್ತಿ ಅಣ್ಣ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರ್ಕರ್ ಕೃತಿ ರಚಿಸಿದರು. ರಾಜ್ಯದ ಬಹಳಷ್ಟು ಜಿಲ್ಲಾ ಕೇಂದ್ರಗಳಲ್ಲಿ ಆ ಪುಸ್ತಕ ಬಿಡುಗಡೆ ಸಮಾರಂಭ ನಡೆದು ವಿದ್ಯಾನಂದ ಶಣೈ ಮತ್ತು ಚಕ್ರವರ್ತಿ ಸೂಲಿಬೆಲೆಯವರ ಭಾಷಣಗಳಿಂದ ಸಾವರ್ಕರರ ಜೀವನ ಲಕ್ಷಾಂತರ ಜನತೆಗೆ ತಲುಪಿತು. ಈ ಸಮಯದಲ್ಲಿ ಚಕ್ರವರ್ತಿ ಅಣ್ಣ ನನ್ನನ್ನು ತಮ್ಮ ಜೊತೆ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಬಹಳಷ್ಟು ವಿಚಾರಗಳನ್ನು ಪ್ರತ್ಯಕ್ಷವಾಗಿ ಕಲಿಯುವ ಅವಕಾಶ ಆಗಲೇ ನನಗೆ ದೊರೆತಿದ್ದು. ಒಂದು ದಿನ ಅದು ಹೇಗೋ ನಾನು ಕಾಲೇಜಿಗೆ ಸರಿಯಾಗಿ ಹೋಗದಿರುವ ವಿಚಾರ ಅಣ್ಣನಿಗೆ ತಿಳಿಯಿತು. ಅಣ್ಣ ಕೇಳಿದರು “ಯಾಕೋ ಕಾಲೇಜಿಗೆ ಸರಿಯಾಗಿ ಹೋಗುತ್ತಿಲ್ಲವಂತೆ? ಏನು ಸಮಾಚಾರ?” ಅಂತ. “ಅಣ್ಣಾ. ಕಾಲೇಜಿನಲ್ಲಿ ಮಾಡೋ ಪಾಠ ಏನು ಅರ್ಥ ಆಗಲ್ಲ ಅಣ್ಣಾ. ಇಂಗ್ಲೀಷು. ಅಷ್ಟಕ್ಕೂ ಒಳ್ಳೆಯವನಾಗಿರಬೇಕಾದರೆ ಓದಲೇಬೇಕು ಅಂತ ಏನು ಇಲ್ಲ ಅಲ್ವಾ ಅಣ್ಣಾ.” ಅಂತ ಹೇಳಿದ್ದೆ. ಅದಕ್ಕೆ ಅಣ್ಣ “ನಿತ್ಯಾ, ನೀ ಓದೋದು ನಿನಗಾಗಿ ಅಲ್ಲ. ಸಮಾಜಕ್ಕಾಗಿ. ಈಗ ನೀನು, ನಾಳೆ ದಿನ ದೇಶದ ಕೆಲಸಕ್ಕೆ ಅಂತ ಬರ್ತೀಯಾ ಅಂತಿಟ್ಕೋ. ಜನ ಏನು ಹೇಳ್ತಾರೆ? ಓದೋಕೆ ಆಗ್ಲಿಲ್ಲ. ಬೇರೆ ಯಾವುದು ದಾರಿ ಇಲ್ಲ. ಅದಿಕ್ಕೆ ಇಲ್ಲಿಗೆ ಬಂದಿದ್ದಾನೆ.” ಅಂತ ಅಂದುಬಿಡುತ್ತಾರೆ ಕಣೋ. ಸಾವರ್ಕರ್ ಆಗ್ಲಿ, ಗಾಂಧೀಜಿ ಆಗ್ಲಿ ಸುಭಾಷ್ ಚಂದ್ರ ಬೋಸ್ ಆಗ್ಲಿ, ಲೋಕಮಾನ್ಯ ತಿಲಕರಾಗಲಿ ನೀನು ಪ್ರೀತಿಸುವ ರಾಜೀವ್ ದೀಕ್ಷಿತರೆ ಆಗಲಿ ಎಲ್ಲರೂ ಉನ್ನತ ವಿದ್ಯಾಭ್ಯಾಸ ಮಾಡಿದವರೇ. ತಾನಾಗಿ ಸಿಕ್ಕ ದೊಡ್ಡ ದೊಡ್ಡ ಅವಕಾಶವನ್ನು ಬಿಟ್ಟು ಅವರೆಲ್ಲಾ ದೇಶ ಸೇವೆಗೆ ಧುಮಿಕಿದವರು. ಹೀಗಾಗಿ ಸಮಾಜಕ್ಕೋಸ್ಕರವಾಗಿಯೂ ನೀನು ಓದಬೇಕು. ನಾಳೆ ದಿನ ನೀನು ದೊಡ್ಡ ಎತ್ತರಕ್ಕೆ ಏರಿದ ಮೇಲೆ ರಾಜೀನಾಮೆ ಬಿಸಾಕಿ ಬಾ. ಆಗ ಸಮಾಜ ನಿನ್ನನ್ನು ಒಪ್ಪಿಕೊಳ್ಳುತ್ತದೆ.” ಎಂದರು. ಆಗಲೇ ನನಗೆ ವಾಸ್ತವ ಪ್ರಪಂಚದ ಅರಿವಾಗಿದ್ದು. ಅಲ್ಲಿಯವರೆಗೂ ನನ್ನ ಜೀವನ ಇರುವುದೇ ದೇಶಕ್ಕಾಗಿ, ನಾನೊಬ್ಬ ದೊಡ್ಡ ದೇಶಭಕ್ತ, ನಾಳೆ ದೊಡ್ಡ ನಾಯಕನಾಗಿಬಿಡುತ್ತೇನೆ ಇತ್ಯಾದಿ ಇತ್ಯಾದಿ ಮುಗ್ದ ಹುಂಬ ಆಲೋಚನೆಗಳು ನನ್ನ ಮನಸ್ಸಿನಲ್ಲಿದ್ದವು.

ಇದೇ ರೀತಿ ಒಮ್ಮೆ ರಾಜೀವ್ ದೀಕ್ಷಿತರ ಬಳಿಯಲ್ಲೂ ಕುಸುಮಕ್ಕ ಕಂಪ್ಲೇಂಟ್ ಕೊಟ್ಟಿದ್ದರು. “ಇವನು ಸರಿಯಾಗಿ ಕಾಲೇಜಿಗೆ ಹೋಗುತ್ತಿಲ್ಲ, ಓದುತ್ತಿಲ್ಲ, ಯಾವಾಗಲೂ ಆಂದೋಲನ ಎಬಿವಿಪಿ ಅಂತ ಓಡಾಡುತ್ತಿದ್ದಾನೆ ನೀವಾದ್ರೂ ಸ್ವಲ್ಪ ಬುದ್ಧಿ ಹೇಳಿ ರಾಜೀವ್ ಭಯ್ಯಾ.” ಅಂತ. ಅದಕ್ಕೆ ರಾಜೀವ್ ಭಯ್ಯಾ “ನೋಡಪ್ಪ ನೀ ಚೆನ್ನಾಗಿ ಓದಲಿಲ್ಲ ಅಂದ್ರೆ ಫೇಲ್ ಆಗ್ತೀಯಾ. ನೀ ಫೇಲ್ ಆದರೆ ನಿಮ್ಮ ತಂದೆ ತಾಯಿ, ನಮ್ಮ ಹುಡುಗ ರಾಜೀವ್ ದೀಕ್ಷಿತರ ಹಿಂದೆ ಹೋಗಿದ್ದಕ್ಕೆ ಫೇಲ್ ಆದ, ಅಂತ ನನಗೆ ಬಯ್ತಾರೆ. ನನಗೆ ಬಯ್ಸೊದು ನಿನಗೆ ಇಷ್ಟಾನಾ?” ಅಂತ ಅಂದಿದ್ದರು. ನಾನು ಮೂಕನಾಗಿದ್ದೆ. ಆದರೆ ನನ್ನ ಕಷ್ಟ ನನಗೆ ಗೊತ್ತಿತ್ತು. ಪುಸ್ತಕ ತೆರೆದರೆ ಸಾಕು ಅದರಲ್ಲಿರುವ ಇಂಗ್ಲೀಷ್ ಪದಗಳು ನನಗೆ ತಲೆ ಚಿಟ್ಟು ಹಿಡಿಸುತ್ತಿದ್ದವು. ಅದಕ್ಕೆ ಬಹಳಷ್ಟು ಕಾರಣಗಳು ಇದ್ದವು. . ಒಂದು, ನಾನು ಚಿಕ್ಕಂದಿನಿಂದ ಕನ್ನಡದಲ್ಲೇ ಓದಿದ್ದು. ಎರಡು, ಚಿಕ್ಕಂದಿನಿಂದಲೂ ಗ್ರಾಮೀಣ ಪ್ರದೇಶದಲ್ಲೇ ಓದಿದ್ದು. ಮೂರು, ನನ್ನ ಪರಿಸರದಲ್ಲಿ ಯಾರೂ ಇಂಗ್ಲೀಷ್ ತಿಳಿದವರು ಇಲ್ಲದಿದ್ದುದು. (ಕೆಲವರು ಈ ಎಲ್ಲಾ ಕಾರಣಗಳಿಗೆ ಹೊರತಾಗಿಯೂ ಒಳ್ಳೆ ಅಂಕಗಳನ್ನು ಗಳಿಸಿದವರಿದ್ದಾರೆ, ಅದು ಬೇರೆ ಮಾತು ) ನಾಲ್ಕನೆಯದು ಸ್ವಲ್ಪ ಮಜವಾಗಿದೆ. ನಾನು ರಾಜೀವ್ ದೀಕ್ಷಿತರ ಸ್ವದೇಶಿ ಚಿಂತನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಂತೆ ವಿದೇಶಿಯನ್ನು ಮನಸಾರೆ ದ್ವೇಷಿಸಲು ಶುರು ಮಾಡಿದೆ. ವಿದೇಶಿ ವಸ್ತ್ರ, ವಿದೇಶಿ ಸಂಸ್ಕೃತಿ, ವಿದೇಶಿ ಚಿಂತನೆ ಎಲ್ಲವನ್ನೂ ವಿರೋಧಿಸತೊಡಗಿದ್ದೆ. ಅದರ ಜೊತೆಗೆ ವಿದೇಶಿ ಭಾಷೆಯ ಕುರಿತಾಗಿಯೂ ಅತಿಯಾದ ದ್ವೇಷ ಬೆಳೆಸಿಕೊಂಡಿದ್ದೆ. ಹೀಗಾಗಿ ಪಠ್ಯ ಪುಸ್ತಕ ಓದುವ ವಿಚಾರವನ್ನು ಕಟ್ಟಿ ಇಡಬೇಕಾಯಿತು. ಹೀಗಾಗಿ ಮತ್ತೆ ನನಗೆ ಇಷ್ಟವಾಗಿದ್ದ ಆಂದೋಲನದ ಚಟುವಟಿಕೆಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಭಾಗವಹಿಸಲು ಶುರು ಮಾಡಿದೆ.

ನಾನು ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ಲಾಸುಗಳಿಗೆ ತಪ್ಪಿಸಿಕೊಳ್ಳುತ್ತಿದ್ದರೂ ಕಾಲೇಜಿನಲ್ಲಿ ನಡೆಯುವ ಯಾವ ಸಾಂಸ್ಕೃತಿಕ ಸ್ಪರ್ಧೆಗಳಿಗೂ ತಪ್ಪಿಸಿಕೊಳ್ಳದೇ ಭಾಗವಹಿಸುತ್ತಿದ್ದೆ. ಏಕಪಾತ್ರಾಭಿನಯ, ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ದೇಶ ಭಕ್ತಿ ಗೀತೆ, ಜನಪದ ಗೀತೆ, ಹೆಚ್ಚು ಕಮ್ಮಿ ನಡೆಯುವ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೆ. ಎನ್ ಸಿ ಸಿಗೂ ಸೇರಿದ್ದೆ. ನಮ್ಮ ಕಾಲೇಜಿನಲ್ಲಿ ಮತ್ತು ಬೇರೆ ಕಾಲೇಜುಗಳಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳಲ್ಲೂ ಭಾಗವಹಿಸಿ ಅನೇಕ ಬಹುಮಾನಗಳನ್ನು ತೆಗೆದುಕೊಳ್ಳುತ್ತಿದ್ದೆ. ನಮ್ಮ ಕಾಲೇಜಿನ ವಾರ್ಷಿಕ ಮ್ಯಾಗಜಿನ್ ನಲ್ಲಿ “ನಮ್ಮ ಕಾಲೇಜಿನ ಕೀರ್ತಿ ರತ್ನಗಳು” ಅಂತ ಒಂದು ಕಾಲಂ ಮಾಡಿ ಅದರಲ್ಲಿ ನನ್ನದೂ ಒಂದು ಫೋಟೋ ಪ್ರಕಟಿಸಿದ್ದರು. (ಆದರೆ ಅದೇ ಕೀರ್ತಿ ರತ್ನ 5 ವಿಷಯಗಳಲ್ಲಿ ಫೇಲಾಗಿದ್ದು ಮಾತ್ರ ವಿಪರ್ಯಾಸ!) ಇದನ್ನು ನೋಡಿ ನಮ್ಮ ಲೆಕ್ಚರರ್ ಗಳು “ಎಲ್ಲಾ ಸರಿ ಕಣಪ್ಪಾ ಇಷ್ಟೊಂದು ಪ್ರತಿಭೆ ಇರೋ ನೀನು, ಕಾಲೇಜಿಗೆ ಯಾಕೆ ಸರಿಯಾಗಿ ಬರಲ್ಲ?” ಅಂತ ಪ್ರಶ್ನೆ ಮಾಡುತ್ತಿದ್ದರು. ಓದುವ ಕಥೆ ಹೀಗಿದ್ದರೂ ನನ್ನ ಸಾಮಾಜಿಕ ಕಾಳಜಿಗೇನೂ ಕಡಿಮೆ ಇರಲಿಲ್ಲ. ಕಾಲೇಜು ಕ್ಯಾಂಟೀನಿನಲ್ಲಿ ಹುಡುಗರು ಸಿಗರೇಟು ಸೇದುತ್ತಿದ್ದುದನ್ನು ಕಂಡು ಪ್ರಿನ್ಸಿಪಾಲರಿಗೆ ಕಂಪ್ಲೇಂಟ್ ಮಾಡಿದ್ದೆ. ಹುಡುಗರ ಕೈಲೆಲ್ಲಾ ಸಹಿ ಹಾಕಿಸಿ ಪ್ರಿನ್ಸಿಪಾಲರಿಗೆ ಮನವಿ ಪತ್ರ ಕೊಟ್ಟಿದ್ದೆ. ನನ್ನ ಈ ರೀತಿಯ ಚಟುವಟಿಕೆಗಳನ್ನು ಕಂಡ ಹುಡುಗರು “ಏ ನಿತ್ಯಾ ಈ ಸಲ ಸಿ ಆರ್ (ಕ್ಲಾಸ್ ರೆಪ್ರೆಸೆಂಟಿಟಿವ್) ಎಲೆಕ್ಷನ್ಣಿಗೆ ನಿಂತುಕೋ.” ಎಂದರು. ನಾನೂ ಧೈರ್ಯ ಮಾಡಿ ನಿಂತೆ. ಅವಿರೋಧವಾಗಿ ಆಯ್ಕೆಯಾಗಿ ಹೋದೆ. ಒಟ್ಟಿನಲ್ಲಿ ಏನು ಮಾಡಬೇಕಿತ್ತೋ ಅದನ್ನು ಬಿಟ್ಟು ಉಳಿದೆಲ್ಲವನ್ನೂ ಮಾಡಿದೆ!

ವಿದ್ಯಾಭ್ಯಾಸಕ್ಕೆಂದು ಮೈಸೂರಿಗೆ ಬಂದಿದ್ದ ನಾನು ನನ್ನ ಮೂಲ ಉದ್ದೇಶವನ್ನೇ ಮರೆತು ಈ ರೀತಿ ಸಾಮಾಜಿಕ ಕಾರ್ಯಕರ್ತನಾಗಿ ಬದಲಾಗಿರುವ ವಿಚಾರ ನನ್ನ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ಪರೀಕ್ಷೆ ಬೇರೆ ಹತ್ತಿರ ಬರುತ್ತಿತ್ತು. ನನ್ನ ತಂದೆ ತಿಂಗಳಿಗೊಮ್ಮೆ ಹಾಸ್ಟೆಲ್ಲಿಗೆ ಬಂದು ನೋಡಿಕೊಂಡು ಹೋಗುತ್ತಿದ್ದರು. ನಾನೂ ಆಗಾಗ ಊರಿಗೆ ಹೋಗಿ ಒಂದೆರಡು ದಿನ ಇದ್ದು ಬರುತ್ತಿದ್ದೆ. ಆಗೆಲ್ಲಾ ಎಲ್ಲವೂ ಸರಿ ಇದೆ ಎಂಬಂತೆ ವರ್ತಿಸುತ್ತಿದ್ದೇನೆ ಹೊರತು ವಿದ್ಯಾಭ್ಯಾಸದಲ್ಲಿ ನನಗೆ ಎದುರಾಗಿರುವ ಸಮಸ್ಯೆಗಳನ್ನು ಅಪ್ಪಿತಪ್ಪಿಯೂ ಬಾಯಿ ಬಿಡುತ್ತಿರಲಿಲ್ಲ. ತಂದೆ ಹಾಸ್ಟೆಲ್ಲಿಗೆ ಬಂದಾಗಲೂ ಅಷ್ಟೇ. ಏನೋ ತೊಂದರೆ ಇಲ್ಲ ಎನ್ನುವಂತೆ ನಾನೂ ನನ್ನ ಸ್ನೇಹಿತರು ವರ್ತಿಸುತ್ತಿದ್ದೆವು. ಪರೀಕ್ಷೆ ಹೊತ್ತಿಗೆ ಹೇಗಾದರೂ ಸರಿ ಮಾಡಿಕೊಳ್ಳುತ್ತೇನೆಂಬ ಆತ್ಮವಿಶ್ವಾಸದಿಂದಲೋ ಅಥವಾ ಪಾಸಾದ್ರೆ ಸಾಕು ತಾನೇ? ಆಗತ್ತೆ ಬಿಡು. ಎಂಬ ಭಂಡತನದಲ್ಲೋ ಹೀಗೆ ಮಾಡಿದ್ದೆ. ಆದರೆ ಸತ್ಯವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ?

ಒಂದು ದಿನ ಎ.ಬಿ.ವಿ.ಪಿ ಇಂದ ಒಂದು ದೊಡ್ಡ ಕಾರ್ಯಕ್ರಮ ನಡೆಯುವುದಿತ್ತು. ಹೀಗಾಗಿ ನಾನು ಅಂದು ಎ.ಬಿ.ವಿ.ಪಿ ಆಫೀಸಿನಲ್ಲೇ ಉಳಿದಿದ್ದೆ. ಅದೇ ದಿನಕ್ಕೆ ಸರಿಯಾಗಿ ನಮ್ಮ ತಂದೆ ಯಾವ ಸೂಚನೆಯನ್ನೂ ಕೊಡದೆ ಇದ್ದಕ್ಕಿದ್ದಂತೆ ಹಾಸ್ಟೆಲ್ಲಿಗೆ ಬಂದುಬಿಟ್ಟಿದ್ದರು. ರಾತ್ರಿ ಬಹಳ ಹೊತ್ತಿನವರೆಗೂ ನನಗಾಗಿ ಕಾದು ಅಲ್ಲೇ ಮಲಗಿದ್ದಾರೆ. ಬೆಳಿಗ್ಗೆ ನಾನು ಕಾಲೇಜಿಗೆ ಬರಬಹುದೆಂದು ಅಲ್ಲಿಗೆ ಹೋಗಿದ್ದಾರೆ. ಆದರೆ ನಾನು ಅಂದು ಕಾಲೇಜಿಗೆ ಹೋಗದೆ ಆಫೀಸಿನಲ್ಲೇ ಕಾರ್ಯಕ್ರಮದ ಕುರಿತಾಗಿ ಕೆಲಸ ಮಾಡುತ್ತಿದ್ದೆ. ಸಂಜೆ ಹೊತ್ತಿಗೆ ಹಾಸ್ಟೆಲ್ ಗೆ ಮರಳಿದ ಅಪ್ಪನಿಗೆ ಸ್ನೇಹಿತರು “ನಿತ್ಯಾ ಎಬಿವಿಪಿ ಆಫೀಸ್ ನಲ್ಲಿ ಇರಬಹುದು ನೋಡಿ ಸಾರ್. ಏನೋ ಪ್ರೋಗ್ರಾಮ್ ಇದೆ ಅಂತಿದ್ದ.” ಎಂದಿದ್ದಾರೆ. ಅಪ್ಪ ಅಲ್ಲಿಂದ ಸೀದಾ ನನ್ನನ್ನು ಹುಡುಕಿಕೊಂಡು ಎಬಿವಿಪಿ ಆಫೀಸಿಗೆ ಬಂದುಬಿಟ್ಟರು. ಅಪ್ಪನ ಆಗಮನವನ್ನು ನಿರೀಕ್ಷಿಸಿಯೇ ಇರದಿದ್ದ ನಾನು ಸ್ವಲ್ಪ ಗಾಬರಿಯಾದರೂ ಅದನ್ನು ತೋರಗೊಡದೆ ಸಹಜವಾಗಿ ಮಾತನಾಡಿದೆ. ಎಲ್ಲರನ್ನೂ ಪರಿಚಯ ಮಾಡಿಕೊಟ್ಟೆ. ಆಮೇಲೆ ಕಾಲೇಜಿಗೆ ಹೋಗದಿದ್ದುದಕ್ಕೆ ಏನೇನೋ ಕಾರಣ ಕೊಟ್ಟು ಅಪ್ಪನನ್ನು ಸಮಾಧಾನಪಡಿಸಿದೆ. ಅದಾಗಲೇ ಅಪ್ಪ ಮೈಸೂರಿಗೆ ಬಂದು ಒಂದು ದಿನ ಕಳೆದುಹೋಗಿದ್ದರಿಂದ ಅಂದು ರಾತ್ರಿ ಅಪ್ಪ ವಾಪಾಸ್ ಊರಿಗೆ ಹೋಗಲೇಬೇಕಿತ್ತು. ಹೀಗಾಗಿ ಹೆಚ್ಚಿನ ಮಾತನಾಡಲು ಸಮಯವಿರಲಿಲ್ಲ. ಆದರೆ ಅಪ್ಪನಿಗೆ ‘ಇಲ್ಲಿ ಎಲ್ಲವೂ ಸರಿ ಇಲ್ಲ’ ಎನ್ನುವ ಅನುಮಾನ ಬಂದಿತ್ತು. ಹೋಗಬೇಕಾದರೆ ಅಪ್ಪ ಹೇಳಿದ್ದು ಒಂದೇ ಮಾತು. “ಏನೋ ಗೊತ್ತಿಲ್ಲಪ್ಪಾ. ನಿನ್ನ ಮೇಲೆ ಎಲ್ಲರೂ ನಂಬಿಕೆ ಇಟ್ಟಿದ್ದಾರೆ. ಆ ನಂಬಿಕೆಯನ್ನು ಉಳಿಸುವ ಕೆಲಸ ಮಾಡಬೇಕು.“ ಅಂತ ಹೇಳಿ ಬಸ್ಸು ಹತ್ತಿದರು.

ಅಂದು ರಾತ್ರಿ ನನಗೆ ನಿದ್ರೆ ಹತ್ತಲಿಲ್ಲ. ಕಿವಿಯಲ್ಲಿ ಅಪ್ಪ ಊರಿಗೆ ಹೋಗುವಾಗ ಹೇಳಿದ ಮಾತುಗಳೇ ಪ್ರತಿಧ್ವನಿಸುತ್ತಿದ್ದವು. ಪರೀಕ್ಷೆಗೆ ಇನ್ನು ಕೇವಲ 30-40 ದಿನಗಳು ಮಾತ್ರ ಬಾಕಿ ಇದ್ದವು. ಮನಸ್ಸಿನಲ್ಲಿ ಅಸಾಧ್ಯ ಒತ್ತಡ ಶುರುವಾಯಿತು. “ನಾನು ತಪ್ಪು ಮಾಡಿದೆನಾ?” ಅನ್ನುವ ಅಪರಾಧೀ ಭಾವ ಒಂದೆಡೆಯಾದರೆ, “ನಾನು ಇನ್ನೇನು ತಾನೇ ಮಾಡಲು ಸಾಧ್ಯವಿತ್ತು?” ಎನ್ನುವ ಪ್ರಶ್ನಾರ್ಥಕ ಭಾವ, “ಅಷ್ಟಕ್ಕೂ ನಾನೇನು ಕೆಟ್ಟ ಕೆಲಸಗಳನ್ನು ಮಾಡಿಲ್ಲವಲ್ಲ” ಎನ್ನುವ ಸಾರ್ಥಕಭಾವ ಒಂದೆಡೆಯಾದರೆ. “ಒಂದು ವೇಳೆ ನಾನು ಫೇಲಾಗಿಬಿಟ್ಟರೆ?” ಎನ್ನುವ ಭಯದ ಭಾವ ಇನ್ನೊಂದೆಡೆ. ಹೀಗೆ ವಿವಿಧ ರೀತಿಯ ಚಿಂತೆಗಳಿಂದಾಗಿ ನಿದ್ರೆ ಬಾರದೆ ಹೊರಳಾಡುತ್ತಿದ್ದೆ. ಕಡೆಗೆ ಒತ್ತಡ ತಡೆಯಲಾರದೆ ಎದ್ದು ಕುಳಿತೆ. ಲೈಟ್ ಹಾಕಿದೆ. ಎಲ್ಲಾ ಸ್ನೇಹಿತರೂ ನಿದ್ರಿಸುತ್ತಿದ್ದರು. ಬಹಳ ಹೊತ್ತಿನ ನಂತರ ಎದುರುಗಡೆ ನನ್ನ ಪೆಟ್ಟಿಗೆಯ ಮೇಲೆ ಯಾವಾಗಲೂ ಇರುತ್ತಿದ್ದ ಗಾಂಧೀಜಿಯ ಆತ್ಮಕಥೆ “ ನನ್ನ ಸತ್ಯಾನ್ವೇಷಣೆ” ಕೃತಿ ಕಣ್ಣಿಗೆ ಬಿತ್ತು. ತಕ್ಷಣ ಅದರಲ್ಲಿ ನಾನು ಓದಿದ್ದ ಒಂದು ಸಂದರ್ಭ ಜ್ಞಾಪಕಕ್ಕೆ ಬಂತು. ಗಾಂಧೀಜಿ ಬಾಲ್ಯದಲ್ಲಿ ತಂದೆಗೆ ಕಾಣದಂತೆ ಸಿಗರೇಟು ಸೇದಿದ್ದು, ಮಾಂಸಾಹಾರ ಸೇವನೆ ಮಾಡಿದ್ದು, ಶಾಲೆಗೆ ಚಕ್ಕರ್ ಹಾಕಿ ಸ್ನೇಹಿತರೊಡನೆ ಮಜಾ ಮಾಡಿದ್ದು. ಕಡೆಗೆ ತನ್ನ ತಪ್ಪಿನ ಅರಿವಾದಾಗ ತಂದೆಗೆ ಒಂದು ಪತ್ರ ಬರೆದು, ತನ್ನ ತಪ್ಪನ್ನು ಕ್ಷಮಿಸಿ ಎಂದು ಬೇಡಿಕೊಂಡಿದ್ದು. ಇವೆಲ್ಲಾ ಕಣ್ಣ ಮುಂದೆ ಹಾದು ಹೋದಂತೆ ಆಯಿತು.

ಮೊದಲೇ ಮನಸ್ಸಿನ ಬೇಗುದಿಯನ್ನು ಹೊರಹಾಕಲು ಚಡಪಡಿಸುತ್ತಿದ್ದ ನಾನು, ಅದೇ ಪ್ರೇರಣೆಯಿಂದ ಪೇಪರ್ರು ಪೆನ್ನು ಕೈಗೆತ್ತಿಕೊಂಡೆ. ನಮ್ಮ ತಂದೆಗೆ ಒಂದು ಸುಧೀರ್ಘವಾದ ಪತ್ರ ಬರೆದೆ. ಪತ್ರ ಬರೆಯುತ್ತಿದ್ದಂತೆ ನನ್ನ ಇಡೀ ಎರಡು ವರ್ಷಗಳ ಮೈಸೂರು ಜೀವನ ಕಣ್ಣ ಮುಂದೆ ಬಂದಂತಾಯಿತು. ಗಂಟಲು ಕಟ್ಟಿತು. ಹೃದಯದಲ್ಲಿ ಏನೋ ಉಕ್ಕಿ ಹರಿದಂತೆ ಭಾಸವಾಯಿತು. ಅಂದು ರಾತ್ರಿ ಇಡೀ ಹಾಸ್ಟೆಲ್ಲು ಮಲಗಿ ನಿದ್ರಿಸುತ್ತಿದ್ದಾಗ ನಡೆದ ಈ ಘಟನೆ, ಇಷ್ಟು ದಿನದವರೆಗೂ ಕೇವಲ ನನ್ನೊಬ್ಬನಿಗೆ ಮಾತ್ರ ಗೊತ್ತಿತ್ತು. ನನ್ನ ಜೊತೆಗಿದ್ದ ಎಲ್ಲಾ ಸ್ನೇಹಿತರು ಗಾಢ ನಿದ್ರೆಯಲ್ಲಿದ್ದ ಆ ಸಮಯದಲ್ಲಿ ನಾನು ಮಾತ್ರ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಕಣ್ಣಿನಿಂದ ಕಣ್ಣೀರು ಹರಿಯುತ್ತಿದ್ದರೆ ಇತ್ತ ಪೇಪರ್ ನ ಮೇಲೆ ಇಂಕು ಅಕ್ಷರಗಳಾಗಿ ಇಳಿಯುತ್ತಿತ್ತು. ಹಾಳೆ ತುಂಬಿದಂತೆಲ್ಲಾ ಮನಸ್ಸು ಹಗುರವಾಗುತ್ತಾ ಬಂತು. ಬೆಳಿಗ್ಗೆ 3-4 ಗಂಟೆ ಹೊತ್ತಿಗೆ ಪತ್ರ ಬರೆದು ಮುಗಿಸಿ ಮಲಗಿಬಿಟ್ಟೆ. ಬೆಳಿಗ್ಗೆ ಎದ್ದು ಆ ಪತ್ರವನ್ನು ಅಪ್ಪನಿಗೆ ಪೋಸ್ಟ್ ಮಾಡಿ ಬಂದೆ. “ಪ್ರೀತಿಯ ಅಪ್ಪ, ಓದಬೇಕೆಂದು ಮೈಸೂರಿಗೆ ಬಂದ ನಾನು ಇಷ್ಟು ದಿನ ಇಲ್ಲಿ ನನ್ನ ಕರ್ತವ್ಯವನ್ನು ಮಾಡಿಲ್ಲ. ಕಾಲೇಜಿಗೆ ಸೇರಿದ ದಿನದಿಂದಲೇ ನನಗೆ ಇಂಗ್ಲೀಷ್ ಭಾಷೆಯಲ್ಲಿ ಬೋಧಿಸುವ ಈ ವಿಷಯಗಳು ಇಷ್ಟವಾಗುತ್ತಿರಲಿಲ್ಲ. ಅರ್ಥವಾಗದ ಈ ವಿಷಯಗಳನ್ನು ಬಿಟ್ಟು ನನಗೆ ಇಷ್ಟವಾದ ಕೆಲಸಗಳನ್ನು ಮಾಡಿದ್ದೇನೆ. ಆದರೆ ಹಾಗಂತ ನಿಮ್ಮ ಮಗ ಕೆಟ್ಟವರ ಸಹವಾಸ ಮಾಡಿಲ್ಲ. ಪೋಲಿಯಾಗಿಲ್ಲ. ಬದಲಾಗಿ ನಾಲ್ಕು ಜನ ಮೆಚ್ಚುವಂತ ಕೆಲಸಗಳನ್ನು ಮಾಡಿದ್ದೇನೆ. ಎಲ್ಲರ ಕೈಲಿ ಹೊಗಳಿಸಿಕೊಂಡಿದ್ದೇನೆ. ಆದರೆ ಇದ್ಯಾವುದೂ ನನಗೆ ಪರೀಕ್ಷೆಯಲ್ಲಿ ಮಾರ್ಕು ತಂದುಕೊಡುವುದಿಲ್ಲ ಎಂದು ನನಗೆ ಗೊತ್ತು. ಇನ್ನು ಉಳಿದಿರುವ ಕೆಲವು ದಿನಗಳಲ್ಲೇ ಕಷ್ಟಪಟ್ಟು ಓದಿ ಪರೀಕ್ಷೆ ಪಾಸು ಮಾಡುತ್ತೇನೆಂಬ ಭರವಸೆ ಕೊಡುತ್ತೇನೆ. ನನ್ನ ಮೇಲೆ ವಿಶ್ವಾಸವಿಡೀ. ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ.” ಎಂಬುದೇ ಆ ಪತ್ರದ ತಿರುಳು. ಆ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನಾನು ಬಯಸಿರಲಿಲ್ಲ. ಆದರೆ ಮುಂದೊಮ್ಮೆ ನನ್ನ ತಂಗಿ ಹೇಳಿದಂತೆ ಆ ಪತ್ರವನ್ನು ಓದುವಾಗ ನಮ್ಮ ತಂದೆಯ ಕಣ್ಣಲ್ಲಿ ನೀರಾಡಿತ್ತಂತೆ.

ಸರಿ, ‘ಯುದ್ಧ ಕಾಲೇ ಶಸ್ತ್ರಾಭ್ಯಾಸ’ ಎಂಬಂತೆ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಆದರೆ ಮಣ ಭಾರದಷ್ಟಿದ್ದ ಆ ಸಿಲೆಬಸ್ಸಿನ ತಲೆಬುಡವೇ ಗೊತ್ತಾಗಲಿಲ್ಲ. ಯಾವತ್ತಾದರೂ ಓದಿದ್ಡರೆ ತಾನೇ ಅರ್ಥವಾಗುವುದು?! ಎಲ್ಲಿಂದ ಆರಂಭಿಸುವುದು, ಯಾವುದನ್ನು ಓದುವುದು, ಎಂದೇ ತಿಳಿಯಲಿಲ್ಲ. ಹಾಗೂ ಹೀಗೂ ಬಾಯಿಗೆ ಬಂದಷ್ಟು ಓದಿಕೊಂಡೆ. ಕಡೆಗೆ ಒಂದಾದ ಮೇಲೆ ಒಂದರಂತೆ ಎಲ್ಲಾ ಪರೀಕ್ಷೆಗಳನ್ನೂ ಬರೆದಿದ್ದಾಯಿತು. ಪರೀಕ್ಷೆ ಮುಗಿಸಿ ಹಾಸ್ಟೆಲ್ಲಿಗೆ ಬಂದೆ. ಮುಂದೆ ಮೈಸೂರಿಗೆ ಕಾಲಿಡುವ ಭಾಗ್ಯ ಇದೆಯೋ ಇಲ್ಲವೋ ತಿಳಿಯದೆ ಊರಿಗೆ ಮರಳಿದೆ. ಆಗಲೇ ಈ ರಿಸಲ್ಟ್ ಬಂದಿದ್ದು. ಅಪ್ಪನ ಮುಂದೆ ತಲೆ ತಗ್ಗಿಸಿ ಕುಳಿತಿದ್ದು.ಅಪ್ಪನ ದಿವ್ಯ ಮೌನದ ನಡುವೆ ಈ ಎಲ್ಲಾ ಘಟನೆಗಳೂ ಕಣ್ಣ ಮುಂದೆ ಹಾದು ಹೋಗಿದ್ದವು. ಈಗ ಅಪ್ಪನ ಸರದಿ. ದೀರ್ಘವಾಗಿ ಒಂದು ನಿಟ್ಟುಸಿರು ಬಿಟ್ಟು. “ಹೂಂ. ಸರಿ. ಆಗಿದ್ದು ಆಗಿ ಹೋಯಿತು. ಈಗ ಏನ್ ಮಾಡೋಕಾಗತ್ತೆ? ಈಗೇನು ಮತ್ತೆ ಪರೀಕ್ಷೆ ಕಟ್ಟುತ್ತೀಯಾ? ಎಂದರು. ನನಗೋ ಬೇರೆ ವಿಧಿಯಿರಲಿಲ್ಲ. ಇಷ್ಟಕ್ಕೆ ಮುಗಿಯಿತಲ್ಲ ಎಂದುಕೊಂಡು ಹೂಂ ಎಂಬಂತೆ ತಲೆ ಆಡಿಸಿದೆ. “ಸರಿ. ಈಗಲಾದ್ರೂ ಚೆನ್ನಾಗಿ ಓದಿ ಪಾಸ್ ಮಾಡು. ಮುಂದೆ ನೋಡೋಣ.” ಎಂದು ಹೇಳಿ ಏನೇ ಅಡುಗೆ ಆಯ್ತಾ? ನದಿ ಕೈ ತೊಳೆದುಕೊಂಡು ಬಾ. ಅಂದರು. ಅಲ್ಲಿಗೆ ಅವತ್ತಿನ ಕಥೆ ಮುಕ್ತಾಯವಾಯಿತು. ಅಂದು ನಮ್ಮ ತಂದೆ ನಡೆದುಕೊಂಡ ರೀತಿ ನನಗೆ ಇಂದಿಗೂ ಒಂದು ಆದರ್ಶವಾಗಿದೆ. ಕೋಪ ತಾಪ ನೋವು ನಿರಾಸೆ ಎಲ್ಲವನ್ನೂ ನುಂಗಿಕೊಂಡು ಅವರು ಅಂದು ಪ್ರದರ್ಶಿಸಿದ ತಾಳ್ಮೆ ಸಂಯಮ ಇಂದಿಗೂ ನನಗೆ ಅಚ್ಚರಿಯನ್ನು ಉಂಟುಮಾಡುತ್ತದೆ. ಮುಂದೆ ರಾಮಕೃಷ್ಣ ಆಶ್ರಮ ಸೇರಿದಾಗ ಭಗವದ್ಗೀತೆಯಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ಓದುವಾಗ ಅಂದಿನ ಅಪ್ಪನ ವರ್ತನೆಯ ಚಿತ್ರ ಕಣ್ಮುಂದೆ ಬರುತ್ತಿತ್ತು. ಅಂದು ನನ್ನ ತಂದೆ ತೋರಿದ ಆದರ್ಶ ಇಂದು ನನ್ನನ್ನು ಈ ಲೇಖನವನ್ನು ಹೆಮ್ಮೆಯಿಂದ ಬರೆಯುವಂತಾ ಸ್ಥಿತಿಗೆ ತಂದು ನಿಲ್ಲಿಸಿದೆ. ಅದಕ್ಕಾಗಿ ನಾನು ನನ್ನ ಅಪ್ಪನಿಗೆ ಚಿರಋಣಿ. ಅಂದು ಅಪ್ಪ ನನ್ನನ್ನು ದಂಡಿಸಿದ್ದರೆ, ವಾಚಾಮಗೋಚರ ನಿಂದಿಸಿದ್ದರೆ, ಮನಸ್ಸಿಗೆ ಬಂದಂತೆ ಅಪಮಾನಿಸಿದ್ದರೆ, ಮನೆ ಬಿಟ್ಟು ಓಡಿಸಿದ್ದರೆ, ನಾನು ಇಂದು ಹೀಗೆ ಆಗುತ್ತಿದ್ದೆನೋ ಇಲವೋ ಗೊತ್ತಿಲ್ಲ.

ಓದುಗರೇ, ಅಂದು ನಾನು ಪರೀಕ್ಷೆ ಫೇಲಾದ ನಂತರ ಮತ್ತೆ ಪರೀಕ್ಷೆ ಕಟ್ಟಿದೆ. ಚಕ್ರವರ್ತಿ ಅಣ್ಣ ನನ್ನನ್ನು ಓದಿಸಲೆಂದು ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿಟ್ಟರು. ತಾವೇ ಸ್ವತಃ ಪಾಠ ಮಾಡಿದರು. ರಕ್ತ ಸಂಬಂಧವೇ ಇಲ್ಲದ ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ವಾರಗಟ್ಟಲೆ ಊಟ ಹಾಕಿದರು. ಅವರ ಆ ಪ್ರೀತಿಯನ್ನು ಈ ಜನ್ಮದಲ್ಲಿ ಮರೆಯಲಾರೆ. ಅವರೆಲ್ಲರ ಪ್ರೋತ್ಸಾಹ ಮತ್ತು ಪ್ರೀತಿಯಿಂದ ಮತ್ತೆ ಪರೀಕ್ಷೆ ಬರೆದೆ. ಆದರೂ ಎಲ್ಲಾ ವಿಷಯಗಳಲ್ಲೂ ಪಾಸು ಮಾಡಲು ನನ್ನ ಕೈಲಿ ಆಗಲಿಲ್ಲ. ಒಂದು ದಿನ ನನ್ನ ಭವಿಷ್ಯವನ್ನೇ ಬದಲಿಸುವ ಸುದ್ದಿಯೊಂದು ಪತ್ರಿಕೆಯಲ್ಲಿ ಬಂತು. ಸೈನ್ಸ್ ಓದಿ ಫೇಲಾದ ವಿದ್ಯಾರ್ಥಿಗಳು ಆರ್ಟ್ಸ್ ಪರೀಕ್ಷೆಯನ್ನು ಕಟ್ಟಲು ವಯೋಮಿತಿಯನ್ನು ಸಡಿಲಿಸಲಾಗಿದೆ ಅಂತ. ಸರಿಯಾಗಿ ಆಗ ತಾನೇ ನಾನು ಆ ವಯೋಮಿತಿ ತಲುಪಿದ್ದೆ. ಪರೀಕ್ಷೆ ಬರೆದೆ. ಕೇವಲ 15 ದಿನಗಳಲ್ಲಿ ಓದಿ ನನ್ನ ಮೆಚ್ಚಿನ ಆರ್ಟ್ಸ್ ಪರೀಕ್ಷೆಯಲ್ಲಿ 70% ಮಾರ್ಕು ಪಡೆದೆ. ಮುಂದೆ ಮಂಡ್ಯದ ಸರ್ಕಾರಿ ಕಾಲೇಜಿನಲ್ಲಿ ಬಿ ಎ ಸೇರಿದೆ. ಅಲ್ಲಿಯವರೆಗೂ ತಂದೆ ತಾಯಿಗಳೊಂದಿಗೆ “ನಿಮ್ಮ ಮಗ ಬರೀ ಪುಸ್ತಕದ ಬದನೆಕಾಯಿ ಅಷ್ಟೇ. ವ್ಯವಹಾರ ಜ್ಞಾನ ಇಲ್ಲ, ದೇಶ ದೇಶ ಅಂತಾನೆ ಅಷ್ಟೇ. ಬದುಕೋದು ಗೊತಿಲ್ಲ.” ಅಂತ ಅನ್ನುತ್ತಿದವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಹಾಗೆ ನಾನೇ ಮುಂದೆ ನಿಂತು ಎರಡೆರಡು ಮನೆ ಕಟ್ಟಿ ತೋರಿಸಿದೆ. ಅಪ್ಪ ಜತನದಿಂದ ಕಾಪಾಡಿದ್ದ ಪರಿಶ್ರಮದ ದುಡ್ಡನ್ನು ಒಂದು ಪೈಸೆಯೂ ನಷ್ಟವಾಗದಂತೆ, ಪಕ್ಕಾ ಅನುಭವಿ ವ್ಯವಹಾರಸ್ಥರಿಗಿಂತಲೂ ಕುಶಾಲನಾಗಿ ಮನೆ ಕಟ್ಟಿಸಿದೆ. ಮನೆ ಕಟ್ಟುವಾಗ ಆಳಾಗಿ ದುಡಿದು ಗೃಹಪ್ರವೇಶದ ದಿನ “ಅರಸನಾಗಿ ಬದುಕು ಮಗುವೆ” ಅಂತ ಹಿರಿಯರಿಂದ ಬಾಯಿತುಂಬಾ ಹೊಗಳಿಸಿಕೊಂಡೆ. ಮೈಸೂರಿನ ಪ್ರತಿಷ್ಠಿತ ರೆಡ್ ಎಫ್ ಎಂ ನಲ್ಲಿ ಜನಪ್ರಿಯ ರೇಡಿಯೋ ಜಾಕೀಯಾದೆ, ನಂತರ ಎರಡೆರಡು ಸರ್ಕಾರಿ ಕೆಲಸ ಪಡೆದು ಕೈತುಂಬಾ ಸಂಬಳ ಎಣಿಸಿದೆ. ಎರಡೂ ಕೆಲಸಗಳಿಗೂ ರಾಜೀನಾಮೆ ಕೊಟ್ಟು ಹೊರಬಂದು ಮತ್ತೆ ಕಾಲೇಜು ಸೇರಿ ಪದವಿ ಮುಗಿಸಿದೆ. ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಗುರುಕೃಪೆಯಿಂದ ರಾಮಕೃಷ್ಣ ಆಶ್ರಮದಲ್ಲಿ ಓದಿ ಡಿಸ್ಟಿಂಕ್ಷನ್ ನಲ್ಲಿ ಬಿಎಡ್ ಪದವಿ ಪಡೆದೆ. ಅದೇ ಸಮಯದಲ್ಲಿ ಮೈಸೂರಿನ ಸದ್ವಿದ್ಯಾ ಶಾಲೆಯಲ್ಲಿ ನೀತಿ ಶಿಕ್ಷಣ ಪಾಠ ಮಾಡಿ ಮಕ್ಕಳ ಪ್ರೀತಿ ಗಳಿಸಿದೆ. ಅರುಣಾಚಲ ಪ್ರದೇಶದ ಚೀನಾ ಗಡಿಯ ಕಾಡುಗಳಲ್ಲಿ ಬುಡಕಟ್ಟು ಮಕ್ಕಳಿಗೆ ಒಂದು ವರ್ಷ ಪಾಠ ಮಾಡಿದೆ. ಕನ್ಯಾಕುಮಾರಿಯಲ್ಲಿ ವಿವೇಕಾನಂದ ಕೇಂದ್ರದ 30 ದಿನಗಳ ಆಚಾರ್ಯ ಪ್ರಶಿಕ್ಷಣ ಶಿಬಿರವನ್ನು ಪಾಸು ಮಾಡಿಕೊಂಡೆ. ಸ್ವದೇಶಿ ವಸ್ತುಗಳು ಮಾರಾಟ ಆಗುವುದಿಲ್ಲ ಎನ್ನುವವರ ನಡುವೆ, ಸ್ವದೇಶಿ ಭಂಡಾರ ತೆರೆದು ಲಾಭ ಮಾಡಿ ತೋರಿಸಿದೆ. ಭಾರತ ಸ್ವಾಭಿಮಾನ ಟ್ರಸ್ಟ್ ನ ಜವಾಬ್ದಾರಿ ಕೊಟ್ಟಾಗ ಮಂಡ್ಯ ದಲ್ಲಿ ಜಾಗೋ ಭಾರತ್ ಆಗಿಲ್ಲ ಎನ್ನುವ ಕೊರಗನ್ನು ಗೆಳೆಯರ ಸಹಕಾರದೊಂದಿಗೆ ಸಂಘಟನೆ ಮಾಡಿ ನೀಗಿಸಿದೆ. ನೂರಾರು ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಭಕ್ತರ ಮತ್ತು ಸ್ವಾತಂತ್ರ್ಯ ಹೋರಾಟದ ಕಥನಗಳನ್ನು ಉಪನ್ಯಾಸದ ಮೂಲಕ ತಲುಪಿಸಿದೆ. ಮೋದಿ ಪರವಾಗಿ ಕೆಲಸ ಮಾಡಬೇಕೆಂದು ಗುರು ಆಜ್ಞೆ ಆದಾಗ ಸ್ವದೇಶಿ ಅಂಗಡಿಯನ್ನು ಮುಚ್ಚಿ ತಿಂಗಳುಗಟ್ಟಲೆ ರಾಜ್ಯಪ್ರವಾಸ ಮಾಡಿ ಗುರುವಿನ ನಂಬಿಕೆಯಂತೆ ಗುರಿ ಸಾಧಿಸುವಲ್ಲಿ ಯಶಸ್ವಿಯಾದೆ.

ಆತ್ಮೀಯ ಓದುಗರೇ, ಇಷ್ಟೆಲ್ಳವನ್ನು ಹೇಳಿಕೊಂಡಿದ್ದು ‘ನಾನು’ ಏನು ಎಂಬುದನ್ನು ತೋರಿಸುವ ಸಲುವಾಗಿ ಅಲ್ಲ! ಬದಲಾಗಿ ನಾನು ನಾನಾಗುವುದಕ್ಕೆ ಎದುರಾದ ಅಡ್ಡಿ ಆತಂಕಗಳನ್ನು ನನ್ನ ಕಿರಿಯರಿಗೆ ತೋರಿಸಿ ಧೈರ್ಯಗೆಟ್ಟವರಿಗೆ ಧೈರ್ಯ ತುಂಬುವ ಸಲುವಾಗಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಕಡಿಮೆ ಅಂಕ ಗಳಿಸಿರುವ ನನ್ನ ವಿದ್ಯಾರ್ಥಿಮಿತ್ರರಿಗೆ ಜೀವನವೆಂದರೆ ಕೇವಲ ಅಂಕಗಳಷ್ಟೇ ಅಲ್ಲ ಎಂದು ಹೇಳುವ ಸಲುವಾಗಿ. ಈಗ ನಾನು ಜೀವನದಲ್ಲಿ ಅತ್ಯಂತ ನೆಮ್ಮದಿಯಿಂದ ಇರುವ ವ್ಯಕ್ತಿ. ನಿಜವಾದ ಸುಖ ಎಲ್ಲಿದೆ ಎಂಬುದನ್ನು ಅರ್ಥಮಾಡಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡು ನ್ಯಾಯವಾದ ಮಾರ್ಗದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇನೆ. ಅಂದು ನಾನು ನೀರುತ್ಸಾಹಗೊಂಡಿದ್ದರೆ, ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮನೆ ಬಿಟ್ಟು ಓಡಿಹೋಗಿದ್ದರೆ, ಭವಿಷ್ಯದಲ್ಲಿ ನಾನು ಪಡೆದ ಈ ವರ್ಣ ರಂಜಿತಾ ಜೀವನವನ್ನು ಪಡೆಯಲಾಗುತ್ತಿರಲಿಲ್ಲ. ಹೀಗಾಗಿ ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳಿಗೆ ಸೋಲುವ ಮನಸ್ಸು ಮಾಡದೆ ಧೈರ್ಯದಿಂದ ಎದುರಿಸೋಣ. ಅಂದಿನ ಸ್ಥಿತಿಯಲ್ಲಿ ನನ್ನ ತಂದೆ ತೋರಿದ ಸಂಯಮವೂ ಬಹಳ ಮುಖ್ಯವಾದ ಅಂಶವಾಗಿತ್ತು ಎನ್ನುವುದು ಕೂಡಾ ಅಷ್ಟೇ ಸತ್ಯ. ಹೀಗಾಗಿ ಫೇಲಾದ ಮಕ್ಕಳ ಪೋಷಕರೂ ಕೂಡಾ ತಾಳ್ಮೆ ಮತ್ತು ಸಂಯಮದಿಂದ ತಮ್ಮ ಮಕ್ಕಳನ್ನು ನೋಡಿಕೊಳ್ಳಬೇಕೆಂಬುದನ್ನು ತಿಳಿಸುವುದೂ ಕೂಡಾ ಈ ಲೇಖನದ ಉದ್ದೇಶ. ಈ ಲೇಖನವನ್ನು ಓದಿದ ಮೇಲೆ ಪರೀಕ್ಷೆಯಲ್ಲಿ ಕಾರಣಾಂತರದಿಂದ ಫೇಲಾದ ಮಕ್ಕಳು ದುಡುಕಿನ ನಿರ್ಧಾರದಿಂದ ಹಿಂದೆ ಸರಿದು ತಮ್ಮ ಜೀವನವನ್ನು ನಂದನವನವನ್ನಾಗಿ ಮಾಡಿಕೊಳ್ಳುವ ಆಶಾದಾಯಕ ಸಂಕಲ್ಪ ತೊಟ್ಟರೆ ನಾ ಈ ಲೇಖನ ಬರೆದ ಶ್ರಮ ಸಾರ್ಥಕ.

ಕಮಾನ್ ಇಂಡಿಯಾ ಕರಲೋ ದುನಿಯಾ ಮುಟ್ಠಿ ಮೇ!

ವಿವೇಕವಂಶಿ

LEAVE A REPLY

Please enter your comment!
Please enter your name here