ಪ್ರೌಢ ಶಾಲಾ ಶಿಕ್ಷಕರಿಗೆ ಭೂವಿಜ್ಞಾನ ಕಾರ್ಯಾಗಾರ

0
462
????????????????????????????????????

ಮಂಗಳೂರು ಪ್ರತಿನಿಧಿ ವರದಿ
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಡಿಸೆಂಬರ್ 08 ಮತ್ತು 09 ರಂದು ದ. ಕ. ಜಿಲ್ಲೆಯ ಆಯ್ದ ಪ್ರೌಢ ಶಾಲಾ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಶಿಕ್ಷಕರಿಗೆ ಭೂವಿಜ್ಞಾನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಬೆಂಗಳೂರು ಇವರು ಕೇಂದ್ರ ಸರಕಾರದ ಭೂವಿಜ್ಞಾನ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆಸುವಂತೆ ಆಪೇಕ್ಷಿಸಿದಂತೆ ದ. ಕ. ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ವಿಜ್ಞಾನ ಕೇಂದ್ರವು ಕಾರ್ಯಾಗಾರವನ್ನು ಪಠ್ಯ ವಿಷಯಕ್ಕೆ ಪೂರಕವಾಗಿರುವಂತೆ ರೂಪಿಸಿ ಎರಡು ದಿನದ ಈ ತರಬೇತಿಯನ್ನು ಏರ್ಪಡಿಸಲಾಗಿತ್ತು.
 
mng_pilikula1
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂವಿಜ್ಞಾನದ ಪ್ರಾಧ್ಯಾಪಕರು ಮತ್ತು ಜಿಯೋಇನ್ಫಾರ್ಮೆಟಿಕ್ಸ್ ಸಂಯೋಜಕರಾದ ಡಾ|| ಗಂಗಾಧರ ಭಟ್ ನೆರವೇರಿಸಿ ಮಾತನಾಡುತ್ತಾ ನಮ್ಮ ವಾಸ ಗ್ರಹ ಭೂಮಿಯ ಮಾಹಿತಿಗಳನ್ನು ನಾವು ತಿಳಿದಿರಬೇಕಾದ್ದು ಅವಶ್ಯ. ಭೂಮಿಯ ಸಂಪತ್ತಿನ ಸದುಪಯೋಗ ಮಾಡಲು ಅವಶ್ಯಕ ತಂತ್ರಜ್ಞಾನ ಇಂದು ಲಭ್ಯವಿದ್ದು ಇದರ ನೆರವಿನೊಂದಿಗೆ ಸರಿಯಾದ ರೀತಿಯಲ್ಲಿ ಭೂಮಿಯ ಮತ್ತು ನೀರಿನ ಬಳಕೆಗೆ ಸೂಕ್ತ ಯೋಜನೆಗಳನ್ನು ಕೈಗೊಳ್ಳಬೇಕೆಂದರು. ಶಾಲಾ ಪಠ್ಯಕ್ರಮದಲ್ಲಿ ಭೂವಿಜ್ಞಾನವು ಸೇರ್ಪಡೆಗೊಂಡಿದ್ದು ಈ ವಿಷಯದಲ್ಲಿ ಹಲವು ವಿಶ್ವವಿದ್ಯಾನಿಲಯಗಳು ನೂತನ ಸಂಶೋಧನೆಗಳನ್ನು ಕೈಗೊಳ್ಳುತ್ತಿವೆ ಹಾಗೂ ದೂರ ಸಂವೇದಿ ತಂತ್ರಜ್ಞಾನದ ಮೂಲಕ ಜನೋಪಯೋಗಿ ಯೋಜನೆಗಳನ್ನು ರೂಪಿಸುತ್ತಿವೆ ಎಂದರು. ಸರಕಾರವು ಈ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಗಳನ್ನು ಕೈಗೆತ್ತಿಗೊಂಡಿದೆ. ಮುಂದಿನ ದಿನಗಳಲ್ಲಿ ಭೂವಿಜ್ಞಾನವು ವಿಶೇಷ ಮಹತ್ವವನ್ನು ಪಡೆಯಲಿರುವುದರಿಂದ ಇಂತಹ ಕಾರ್ಯಕ್ರಮಗಳು ಅಧ್ಯಾಪಕರಿಗೆ ಅವಶ್ಯ ಮಾಹಿತಿಯನ್ನು ಒದಗಿಸಿ ವಿದ್ಯಾರ್ಥಿಗಳನ್ನು ಈ ಕ್ಷೇತ್ರದಲ್ಲಿ ಆಸಕ್ತಿ ಮೂಡಲು ನೆರವು ನೀಡುತ್ತದೆ ಎಂದರು.
 
 
ದ. ಕ. ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ (ಸಮಾಜ ವಿಜ್ಞಾನ) ಶ್ರೀ ಶಂಕರಪ್ಪ ಮುದ್ನಾಳ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ವಿಜ್ಞಾನ ವಿಷಯ ಪರಿವೀಕ್ಷಕರಾದ ಪುರುಷೋತ್ತಮ ಭಾಗವಹಿಸಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ಹತ್ತು ಹಲವು ಕಾರ್ಯಕ್ರಮಗಳನ್ನು ಶಿಕ್ಷಕರಿಗೋಸ್ಕರ ಸಂಘಟಿಸಿ ಅವರ ಅಧ್ಯಯನ ಅಧ್ಯಾಪನದ ಪ್ರಯತ್ನಗಳಿಗೆ ಸ್ಪಂದಿಸುತ್ತಿದೆ. ಈಗ ಪ್ರಥಮವಾಗಿ ಸಂಘಟಿಸುತ್ತಿರುವ ಭೂವಿಜ್ಞಾನ ಕಾರ್ಯಗಾರ ಈ ಬಾರಿಯ ಫಲಿತಾಂಶ ಉತ್ತಮಗೊಳಿಸಲು ಕಾರಣವಾಗಬೇಕೆಂದರು. ಕೇಂದ್ರದ ನಿರ್ದೇಶಕ ಡಾ|| ಕೆ. ವಿ. ರಾವ್ ಅಧ್ಯಕ್ಷತೆ ವಹಿಸಿದ್ದರು. ಡಾ|| ಜಯಂತ್ ಧನ್ಯವಾದ ಸಮರ್ಪಣೆಗೈದರು. ಶ್ರೀ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು.
 
 
ನಂತರ ನಡೆದ ಅಧಿವೇಶನದಲ್ಲಿ ಡಾ|| ಗಂಗಾಧರ ಭಟ್ರವರು ಶಿಲಾಗೋಳ, ಜಲಗೋಳ ಮತ್ತು ಕರ್ನಾಟಕದ ಜಲಸಂಪನ್ಮೂಲಗಳು ಕುರಿತು ವಿವರಿಸಿದರು. ಎರಡನೇ ಅಧಿವೇಶನದಲ್ಲಿ ರಾಮಕೃಷ್ಣ ಮರಾಟಿ ಜೀವಗೋಳ, ಭಾರತದ ಅರಣ್ಯಗಳು, ಭಾರತದ ಭೂ ಬಳಕೆ ಮತ್ತು ಕೃಷಿ ಬಗ್ಗೆ ತಿಳಿಸಿದರು. ಮೂರನೇ ಅಧಿವೇಶನದಲ್ಲಿ ಡಾ|| ಗಂಗಾಧರ ಭಟ್ ದೂರ ಸಂವೇದಿ ತಾಂತ್ರಿಕತೆ ಮತ್ತು ಸಂಪನ್ಮೂಲಗಳ ಬಳಕೆ ಕುರಿತು ಚರ್ಚಿಸಿದರು.
 
 
ಎರಡನೇ ದಿನದ ಮೊದಲನೇ ಅಧಿವೇಶನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂವಿಜ್ಞಾನದ ಪ್ರಾಧ್ಯಾಪಕ ಡಾ|| ಮಂಜುನಾಥ್ ವಾತಾವರಣ ರಚನೆ ಮತ್ತು ವೈಶಿಷ್ಟ್ಯ ಕುರಿತು ವಿವರಿಸಿದರು. ಎರಡನೇ ಅಧಿವೇಶನದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ|| ಜಯಂತ್ ಸೌರವ್ಯೂಹ ಮತ್ತು ಭೂಮಿಯ ವಿಶೇಷತೆಗಳ ಬಗ್ಗೆ ತಿಳಿಸಿದರು. ಮಧ್ಯಾಹ್ನದ ನಂತರದ ಅಧಿವೇಶನದಲ್ಲಿ ಡಾ|| ಮಂಜುನಾಥ್ ಮಣ್ಣು ಮತ್ತು ಖನಿಜ ಸಂಪನ್ಮೂಲಗಳ ಬಗ್ಗೆ ವಿವರಿಸಿ ಸಂದೇಹಗಳನ್ನು ಬಗೆಹರಿಸಿದರು.
 
 
ಅಧ್ಯಾಪಕರಿಗೆ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಮಾದರಿಗಳನ್ನು ವಿಜ್ಞಾನ ಕೇಂದ್ರದ ಪ್ರದರ್ಶಿಕೆಗಳ ಮೂಲಕ ವಿವರಿಸಿ ತಾರಾಮಂಡಲದ ಮೂಲಕ ಪ್ರಾತ್ಯಕ್ಷಿಕೆಯನ್ನು ಸಹ ಏರ್ಪಡಿಸಲಾಗಿತ್ತು.
 
ಎರಡು ದಿನಗಳ ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅಧಿವೇಶನಗಳ ಕುರಿತು ಭಾಗವಹಿಸಿದ ಅಧ್ಯಾಪಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಂಕರಪ್ಪ ಮುದ್ನಾಳ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿ ಇಲ್ಲಿ ಗಳಿಸಿದ ಅನುಭವವನ್ನು ಅಧ್ಯಾಪಕರು ತಮ್ಮ ಶಾಲೆಯಲ್ಲಿ ಉಪಯೋಗಿಸಬೇಕೆಂದು ಕೋರಿದರು. ಜಗನ್ನಾಥ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here