ಪ್ರೊ. ಸಿಎನ್ಆರ್ ರಾವ್ ಅವರಿಗೆ ಗೀತಂ ಸ್ಥಾಪನಾ ಪ್ರಶಸ್ತಿ ಗೌರವ

0
412

ಬೆಂಗಳೂರು ಪ್ರತಿನಿಧಿ ವರದಿ
2016ನೇ ಸಾಲಿನ ಗೀತಂ ವಿಶ್ವವಿದ್ಯಾಲಯ ಸ್ಥಾಪನೆಯ ನೆನಪಿನಲ್ಲಿ ವಾರ್ಷಿಕವಾಗಿ ನೀಡುವ ಪ್ರಶಸ್ತಿಯ ಗೌರವಕ್ಕೆ ಖ್ಯಾತ ವಿಜ್ಞಾನಿ ಪ್ರೊಫೆಸರ್ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ (ಪ್ರೊ. ಸಿ ಎ ನ್ಆರ್ ರಾವ್) ಪಾತ್ರರಾಗಿದ್ದಾರೆ. ಆಗಸ್ಟ್ 13, ಶನಿವಾರದಂದು ಗೀತಂ ವಿವಿ ವಿಶಾಖಪಟ್ಟಣಂ ಕ್ಯಾಂಪಸ್ ನಲ್ಲಿ ನಡೆಯಲಿರುವ 36ನೇ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
 
githam cn rao
ಸಾಲಿಡ್ ಸ್ಟೇಟ್ ಮತ್ತು ಸ್ಟ್ರಕ್ಚರಲ್ ರಸಾಯನ ಶಾಸ್ತ್ರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಪ್ರೊ. ಸಿ ಎನ್ ಆರ್ ರಾವ್, 1630 ಸಂಶೋಧನೆ ಪ್ರಬಂಧಗಳನ್ನು ಮಂಡಿಸಿದ್ದಾರೆ. 50 ಪುಸ್ತಕಗಳನ್ನು ಬರೆದು ಇಲ್ಲವೇ ಸಂಕಲಿಸಿದ್ದಾರೆ. 60 ವಿವಿಗಳಿಂದ ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಸಿಕ್ಕಿದೆ. ಬೆಂಗಳೂರಿನಲ್ಲಿರುವ ಜವಾಹರಲಾಲ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಸಂಸ್ಥಾಪಕರಾಗಿರುವ ಪ್ರೋ. ರಾವ್, ಹಲವು ಪ್ರಧಾನ ಮಂತ್ರಿಗಳ ಅಧಿಕಾರವಾಧಿಯಲ್ಲಿ ವೈಜ್ಞಾನಿಕ ಸಲಹಾ ಆಯೋಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
 
ಭಟ್ನಾಗರ್ ಪ್ರಶಸ್ತಿ, ಪದ್ಮಶ್ರೀ, ಪದ್ಮ ವಿಭೂಷಣ, ಭಾರತೀಯ ವಿಜ್ಞಾನ ಪ್ರಶಸ್ತಿ ಮತ್ತು ಕರ್ನಾಟಕದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ. 2014ರಲ್ಲಿ ಪ್ರೊ ರಾವ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಸಕ್ತ ಪ್ರೊ. ರಾವ್, ರಾಷ್ಟ್ರೀಯ ಸಂಶೋಧನೆ ಪ್ರೊಫೆಸರ್ ಆಗಿ, ಲೀನಸ್ ಪೌಲಿಂಗ್ ರಿಸರ್ಚ್ ಪ್ರೊಫೆಸರ್ ಹಾಗೂ ಜವಾಹರಲಾಲ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಗೌರವ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
 
ಗೀತಂ ಸ್ಥಾಪನಾ ವಾರ್ಷಿಕ ಪ್ರಶಸ್ತಿ
ಖ್ಯಾತ ಸಮಾಜ ಸೇವಕ ಡಾ. ಎಂವಿವಿಎಸ್ ಮೂರ್ತಿ ಅವರು ನೀಡಿದ 30 ದಶ ಲಕ್ಷ ರೂ. ದೇಣಿಗೆಯಿಂದ ಗೀತಂ ಸ್ಥಾಪನಾ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದರಲ್ಲಿ ಬಂದ ಬಡ್ಡಿಯನ್ನು ಪ್ರಶಸ್ತಿ ರೂಪದಲ್ಲಿ ಪ್ರತಿ ವರ್ಷವೂ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ ಖ್ಯಾತರಿಗೆ ನೀಡಲಾಗುತ್ತದೆ. ಪ್ರಶಸ್ತಿಯು 10 ಲಕ್ಷ ನಗದು ಒಳಗೊಂಡಿದ್ದು, ವಿಜ್ಞಾನ, ಕಲೆ, ಆರ್ಥಿಕತೆ, ಭಾಷೆ, ಸಾರ್ವಜನಿಕ ಸೇವೆ ಮತ್ತು ಸಮಾಜ ಸೇವೆಗೆ ಸಂಬಂಧ ಪಟ್ಟ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಈ ವರ್ಷ ಪ್ರೊ. ಸಿಎನ್ಆರ್ ರಾವ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಆಗಸ್ಟ್ 13ರಂದು ನಡೆಯುವ ಗೀತಂ ಸ್ಥಾಪನಾ ದಿನದಂದು ಪ್ರದಾನ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here