ಪ್ರೀತಿಯ ಹೆಬ್ಬಾರರಿಗೆ ಹೀಗೊಂದು ಪತ್ರ ಬಂದಿತ್ತು!

0
2362

ಪ್ರೀತಿಯ ಶಿವರಾಂ ಹೆಬ್ಬಾರರ ಕಛೇರಿಗೆ ಹೀಗೊಂದು ಹೆಸರಿಲ್ಲದ ಲೆಟರ್ರು ಬೆಳ್ಳಂ ಬೆಳಗ್ಗೆ ಬಂದಿತ್ತು, ಶಾಸಕರ ಬಲಗೈ ಪತ್ರವನ್ನ ಶಾಸಖರ ಕೈಗೆ ಕೊಡಲೋ ಬೇಡವೋ ಅಂತ ಯೋಚಿಸಿ ಪತ್ರ ಹರಿಯೋದಕ್ಕೆ ಮುಂದಾದ! ಮನಸ್ಸಾಗಲಿಲ್ಲ, ಸಾಹೆಬರಿಗೆ ಕೊಟ್ಟು ಕೈತೊಳೆದು ಕೊಳ್ಳೋಣ ಅಂತ ಸಾಹೆಬರ ಟೇಬಲ್ಲಿನ ಮೇಲಿಟ್ಟ! ಸಾಹೆಬರು ಬಂದವರು ಲೆಟರ್ರಿನ ಲಕೋಟೆ ನೋಡಿ ಸುಮ್ಮನೆ ತೆಗೆದು ಓದಿದರು, ಅದರಲ್ಲಿ ಶಿವರಾಂ ಹೆಬ್ಬಾರರನ್ನ ಪುಂಕಾನು ಪುಂಕವಾಗಿ ಹೊಗಳಲಾಗಿತ್ತು, ಓದಿದ ನಂತರ ಡಸ್ಟ್ಬಿನ್ ಸೇರಿಕೊಂಡದ್ದು ಕೊನೆಗೆ ನನ್ನ ಕೈ ಸೇರಿತ್ತು!
” ಪ್ರೀತಿಯ ಶಿವರಾಂ ಹೆಬ್ಬರರಿಗೆ,
ಸಾರ್ ನೀವು ನಮ್ಮ ಪಾಲಿನ ದೇವರು, ನಮ್ಮ ಕ್ಷೇತ್ರವನ್ನ ಅದ್ಭುತವಾಗಿ ಅಭಿವೃದ್ಧಿ ಮಾಡಿದಿರಾ ಸಾರ್, ನಮ್ಮ ಕ್ಷೇತ್ರದಲ್ಲಿ ಬಾಯಾರಿಕೆಯ ಮಾತೆ ಇಲ್ಲ ಕಂಡ ಕಂಡಲ್ಲಿ, ರೋಡಲ್ಲೆಲ್ಲ, ಬಾವಿಗಳನ್ನ ಮಾಡುವ ಮೂಲಕ ಬಾಯಾರಿಕೆಯಾದಾಗ ನೀರು ಸಿಗುವಂತೆ ಮಾಡಿದ್ದೀರಿ, ಅಷ್ಟೆ ಯಾಕೆ ಸಾರ್ ನೀವು ಒಬ್ಬ ಪರಿಸರ ಪ್ರೇಮಿ, ರೋಡಿನಲ್ಲೆ ಇಂಗು ಗುಂಡಿಗಳನ್ನ ನಿರ್ಮಿಸುವ ಮೂಲಕ ಅಂತರ್ಜಲ ಮಟ್ಟವನ್ನ ಸುಧಾರಿಸಲು ಮುಂದಾಗಿದ್ದೀರಿ, ಅದಿರಲಿ ನಿಮ್ಮಿಂದ ನಿರುದ್ಯೋಗಿ ಯುವಕರ ಸಮಸ್ಯೆ ಗಣನೀಯವಾಗಿ ಕಮ್ಮಿಯಾಗಿದೆ, ಏನೂ ಕೆಲಸ ಇಲ್ಲದೆ ಅಲೆದಾಡುತ್ತಿದ್ದ ಯುವಕರು ರೋಡಿನಲ್ಲಿ ನೀವು ಕಳಚೆ ಹಾಗೂ ನಂದೊಳ್ಳಿಯಲ್ಲಿ ನಿರ್ಮಿಸಿರುವ ಕೊಳಗಳಲ್ಲಿ ಮೀನು ಹಿಡಿಯಲಾರಂಬಿಸಿದ್ದಾರೆ, ಹೀಗೆ ಹಿಡಿದ ಮೀನುಗಳನ್ನ ಮಾರಿ ಒಂದಷ್ಟು ಕಾಸು ಸಂಪಾದಿಸ್ತಿದ್ದಾರೆ, ಇದೊಂದೆ ಅಲ್ಲಾ ಸಾರ್ ನಿಮ್ಮ ಈ ಗುಂಡಿಗಳಿಂದ ಕುಡುಕರಿಗಂತೂ ಮನೆ ದಾರಿಯೆ ತಪ್ಪುವುದಿಲ್ಲ, ಸರಿಯಾಗಿ ನಮ್ಮ ಮನೆಗೆ ಹೋಗುವಂತಾಗಿದೆ, ಅಷ್ಟೆಯಾಕೆ ಸಾರ್, ಬೇಸಿಗೆ ಬಂತೆಂದರೆ ನೀವು ರೋಡಲ್ಲೇ ನಿರ್ಮಿಸಿರುವ ಐಷರಾಮಿ ಈಜುಕೊಳದಲ್ಲಿ ಆರಾಮವಾಗಿ ಈಜಬಹುದು, ನೀರಿನ ಸಮಸ್ಯೆಯಂತೂ ಗಣನೀಯವಾಗಿ ಕಮ್ಮಿಯಾಗಿದೆ, ಸಾರ್ ಅಷ್ಟೆಯಾಕೆ ನಿಮ್ಮಿಂದ ಜನಸಂಖ್ಯೆಯೂ ಕಮ್ಮಿಯಾಗ್ತಿದೆ ಸಾರ್! ನೀವು ನಿರ್ಮಿಸಿರುವ ರೋಡಿನ ಗುಂಡಿಗಳ ಮೇಲೆ ವಾಹನ ಸವಾರರು ಹೋಗಿ, ಬಿದ್ದು ದೇವರ ಪಾದ ಸೇರ ಬಹುದು, ಅಂತಹವರನ್ನ ಸ್ವರ್ಗಸ್ಥರಾಗಿಸಿದ್ದಕ್ಕೆ ಅವರು ನಿಮಗೆ ಆಶಿರ್ವದಿಸಲು ಬಹುದು, ಏನೆ ಇರಲಿ ಸಾರ್ ಇದ್ರಿಂದಾಗಿ ಜನಸಂಖ್ಯೆ ಕಮ್ಮಿಯಾದರೂ ಆಗುತ್ತೆ, ಅಷ್ಟೆಯಾಕೆ ರೋಡಿನಲ್ಲಿ ನಿರ್ಮಿಸಿರುವ ಬಾವಿ, ಕೊಳಗಳನ್ನ ಆಗಾಗೆ ದುರಸ್ತಿ ಮಾಡಿಸುವ ನೀವು ಉದ್ಯೋಗವಕಾಶ ನೀಡ್ತಿದ್ದೀರಿ, ಸಾರ್ ನೀವು ನೊಂದವರ ಪಾಲಿನ ದೀನ ಬಂಧು, ಬಡವರ ಪಾಲಿನ ಆಶಾದೀಪ, ನಿಮ್ಮಂತ ಯೋಗ್ಯರನ್ನ ಆರಿಸಿ ತಂದಿದ್ದಕ್ಕೆ ಹೆಮ್ಮೆಯಾಗ್ತಿದೆ ಇನ್ನಷ್ಟು ನಿಮ್ಮ ಈ ಸಮಾಜ ಸೇವೆ ಮುಂದುವರಿಯಲಿ ಎಂದು ಬಯಸುತ್ತೇವೆ. ಇತಿ ತಮ್ಮ ವಿಶ್ವಾಸಿ “ನಿಮ್ಮ ಅಭಿಮಾನಿ.”
ಪತ್ರ ಓದಿ ಸಾಹೇಬರಿಗೆ ಏನೆನ್ನಿಸಿತೋ ಏನೋ ಪತ್ರವನ್ನ ಹರಿಯದೆ ಕಸದಬುಟ್ಟಿಗೆ ಎಸೆದರು! ಮೈ ಸ್ವಲ್ಪ ಬೆವರಿತ್ತು, ಬಿಸ್ಲರಿ ಬಾಟಲಿ ಮುಚ್ಚಳ ತೆಗೆದು ಎರಡು ಗುಟುಕು ನೀರು ಕುಡಿದರು! ನಂತರ ಎಂದಿನಂತೆ ಸಾಹೇಬರು ಗೂಟದ ಕಾರು ಹತ್ತಿ ಹೊರಟು ಹೋದರು…ಎಲ್ಲಿ ಹೋದರೋ ಎತ್ತ ಹೋದರೋ ನಾ ಕಾಣೆ! ಸಾಹೆಬ್ರು ಕಾಣೆಯಾದಂತೆ ಲೆಟರ್ರು ಕಾಣೆಯಾಗಲಿಲ್ಲ ಪುಣ್ಯಕ್ಕೆ ಈ ಲೆಟರ್ರು ನನ್ನ ಕೈಗೆ ಸಿಕ್ಕಿತ್ತು!

ನಾಗರಾಜ್ ಬಾಳೆಗದ್ದೆ

LEAVE A REPLY

Please enter your comment!
Please enter your name here