ಚಿತ್ರ-ವರದಿ: ಕೃಷ್ಣಪ್ರಶಾಂತ್.ವಿ
ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗ (ರಿ.) ವತಿಯಿಂದ ಕೆಂಗೇರಿ ಚಕ್ರಪಾಣಿಯವರು ಕನರ್ಾಟಕದ ಉದ್ದಗಲಕ್ಕೂ ಸಂಚರಿಸಿ ತೆಗೆದ ಸುಮಾರು 2000ಕ್ಕೂ ಹೆಚ್ಚು ಪ್ರಾಚಿನ ದೇವಾಲಯಗಳ ಛಾಯಾಚಿತ್ರಗಳ ಪ್ರದರ್ಶನಕ್ಕೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಚಾಲನೆ ನೀಡಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಅರಣ್ಯ ಸಚಿವ ರಮಾನಾಥ ರೈ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಅತಿಥಿಗಳು ಛಾಯಾಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಏಳು ವರ್ಷಗಳಲ್ಲಿ ಈ ಹವ್ಯಾಸಿ ಬಳಗ ಕರ್ನಾಟಕದಾದ್ಯಂತ ಸುಮಾರು ಮೂವತ್ತೆರಡು ಪ್ರವಾಸಗಳನ್ನು ಕೈಗೊಂಡಿದೆ. ಬಿ.ಎಸ್.ಎನ್.ಎಲ್ ನಲ್ಲಿ ಉದ್ಯೋಗಿಯಾಗಿರುವ ಕೆಂಗೇರಿ ಚಕ್ರಪಾಣಿಯವರು ತಮ್ಮ ಸಹೊದ್ಯೋಗಿಗಳ ಜತೆ ಸೇರಿ ಛಾಯಾಗ್ರಹಣ ಮತ್ತು ಶಿಲ್ಪಶಾಸ್ತ್ರಗಳ ಬಗೆಗೆ ಆಸಕ್ತಿಯನ್ನು ಬೆಳೆಸಿಕೊಂಡು ಹವ್ಯಾಸವನ್ನಾಗಿ ಮಾಡಿಕೊಂಡು 1997 ರಿಂದ ಸುಮಾರು 40 ಯಶಸ್ವೀ ಪ್ರದರ್ಶನಗಳನ್ನು ನಡೆಸಿದ್ದಾರೆ.
ಸುಮಾರು 300ಕ್ಕೂ ಅಧಿಕ ಶೈಲಿಯ ತರಹೇವಾರಿ ಶಿವಲಿಂಗಗಳು, ಶಿವನ ನಾನಾ ವಿಧದ ಲೀಲಾ ಮೂರ್ತಿಗಳು, ಬಾಹುಬಲಿಯ ಮಜ್ಜನದ ವಿವಿಧ ಮಜಲುಗಳ ದೃಶ್ಯಗಳು ಸೇರಿದಂತೆ ಅನೇಕ ಬಗೆಯ ಪ್ರಾಚೀನ ಶಿಲ್ಪಶಾಸ್ತ್ರದ ಕೆತ್ತನೆಗಳ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿರಿಸಲಾಗಿದೆ. ನಮ್ಮ ನಾಡಿನ ಪುರಾತನ ದೇಗುಲಗಳ ವಾಸ್ತುಶಿಲ್ಪ ಸೌಂದರ್ಯವನ್ನು ಪರಿಚಯಿಸುವ ಚಕ್ರಪಾಣಿಯವರ ಮಹತ್ವಪೂರ್ಣ ಪ್ರಯತ್ನ ಶ್ಲಾಘನೀಯ. ದಿನಾಂಕ 11-11-2016ರಿಂದ 14-11-2016ರವರೆಗೆ ನಡೆಯುವ ಈ ಛಾಯಾಚಿತ್ರ ಪ್ರದರ್ಶನಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ವಾಸ್ತುಶಿಲ್ಪಗಳ, ದೇಗುಲಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿದ್ದವರು ಅಮೃತವರ್ಷಿಣಿಗೆ ಭೇಟಿ ನೀಡಬಹುದು.