ಪ್ರತಿಭಟನೆ

0
323

 
ವರದಿ: ಸುನೀಲ್ ಕುಮಾರ್
ಮಂಗಳೂರು ನಗರದ ಹೃದಯಭಾಗದಲ್ಲಿರುವ ರಾವ್ ಆ್ಯಂಡ್ ರಾವ್ ವೃತ್ತದ ಬಳಿ ಒಳಚರಂಡಿ ದುರಸ್ತಿಗೊಳಿಸದೇ ಇರುವುದರಿಂದ ಅಲ್ಲದೆ ಮುಖ್ಯ ಕಾಂಕ್ರೀಟು ರಸ್ತೆಯನ್ನು ಒಡೆದಿರುವುದರಿಂದ, ಮಳೆಗಾಲದ ಗಲೀಜು ನೀರು ತುಂಬಿ ದುರ್ನಾತ ಬೀರುತ್ತಿದೆ. ದುರಸ್ತಿಕಾರ್ಯವನ್ನು ಆರಂಭಿಸಿ ಒಂದೂವರೆ ತಿಂಗಳಾಗಿದ್ದರೂ, ಇನ್ನೂ ಪೂರ್ಣಗೊಳಿಸಿಲ್ಲ. ಒಡೆದ ರಸ್ತೆಯ ತಿಳಿವಳಿಕೆ ಇಲ್ಲದೆ ಇಬ್ಬರು ಈಗಾಗಲೇ ರಸ್ತೆ ಚರಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಈ ಚರಂಡಿಯ ದುರವಸ್ಥೆ ಕೆಲವು ವರ್ಷಗಳಿಂದ ಇದ್ದರೂ, ಮಂಗಳೂರು ಮಹಾನಗರ ಪಾಲಿಕೆ ದುರಸ್ತಿಯನ್ನು ಆದ್ಯತೆಯ್ಲಿ ಕೈಗೊಳ್ಳದೇ ಇರುವುದನ್ನು ಖಂಡಿಸಿ ಸಿಪಿಐ(ಎಂ) ಮಂಗಳೂರು ನಗರ ಕೇಂದ್ರ ವಿಭಾಗ ಸಮಿತಿ ವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
 
 
ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಈ ಸಂದರ್ಭದಲ್ಲಿ ಮಾತನಾಡಿ, ಜೂನ್ 15ರಿಂದ ಅಕ್ಟೋಬರ್ 15ರ ಮಳೆಗಾಲದ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಯಾವ ರಸ್ತೆ ಒಡೆಯುವ ಕಾಮಗಾರಿ ಮಾಡಬಾರದೆಂದು ಪಾಲಿಕೆ ನಿರ್ಣಯ ಕೈಗೊಂಡಿದ್ದರೂ, ರಾವ್ ಆ್ಯಂಡ್ ರಾವ್ ವೃತ್ತದಲ್ಲಿ ಚರಂಡಿ ಕಾಮಗಾರಿಗಾಗಿ ರಸ್ತೆ ಒಡೆದು ಕೈಬಿಟ್ಟಿರುತ್ತಾರೆ. ತುರ್ತು ಕಾಮಗಾರಿಗಾಗಿ ‘ನಿರ್ಮಿತಿ ಕೇಂದ್ರ’ಕ್ಕೆ ಕಾಮಗಾರಿಯನ್ನು ನೀಡಲಾಗಿದೆ ಎಂದು ತಿಳಿದುಬರುತ್ತದೆ. ಆದಾಗ್ಯೂ ಕಾಮಗಾರಿಯನ್ನು ಆರಂಭಿಸದೆ ನಗರ ಕೇಂದ್ರವನ್ನು ದುರ್ನಾತಗೊಳಿಸಿರುವುದು ಖಂಡನೀಯ ಎಂದು ತಿಳಿಸಿದರು.
 
 
ರಾವ್ ಆ್ಯಂಡ್ ರಾವ್ ವೃತ್ತದಲ್ಲಿ ನಗರದ ಮೂರು ವಾರ್ಡ್ ಗಳು ಸ್ಪಂಧಿಸುತ್ತಿದ್ದು, ಮೂವರು ಕಾರ್ಪರೇಟರುಗಳು ಅಭಿವೃದ್ಧಿ ಜವಾಬ್ದಾರಿ ಹೊಂದಿದ್ದಾರೆ. ಸ್ವಚ್ಛತಾ ಅಭಿಯಾನದ ದೀಕ್ಷೆ ತೊಟ್ಟಿರುವ ಬಿಜೆಪಿ ಪಕ್ಷದ ಇಬ್ಬರು ಕಾರ್ಪರೇಟರುಗಳಿದ್ದೂ, ದುರಸ್ತಿಕಾರ್ಯ ನಡೆಯದಿರುವುದು ಆ ಪಕ್ಷದ ನಾಯಕರ ಇಬ್ಬಂದಿತನವನ್ನು ತೋರಿಸುತ್ತದೆ ಎಂದು ಈ ಸಂದರ್ಭ ಮಾತನಾಡಿದ ಸಿಪಿಐ(ಎಂ) ಮಂಗಳೂರು ನಗರ ಸಮಿತಿ ಸದಸ್ಯ ವಾಸುದೇವ ಉಚ್ಚಿಲ ಹೇಳಿದರು.
 
 
ಸಿಪಿಐ(ಎಂ) ಮಂಗಳೂರು ನಗರ ಸಮಿತಿ ಸದಸ್ಯೆ ಯೋಗೀಶ್ ಜಪ್ಪಿನಮೊಗರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬೀದಿಬದಿ ಕಾರ್ಮಿಕರ ಸಂಘಟನೆಯ ಸಂತೋಷ್ ಆರ್.ಎಸ್. ಧನ್ಯವಾದ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಿಪಿಐ(ಎಂ) ನಗರ ಮುಖಂಡರಾದ ಲಿಂಗಪ್ಪ ನಂತೂರು, ಭಾರತಿ ಬೋಳಾರ, ಸುರೇಶ್ ಬಜಾಲ್ ಭಾಗವಹಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಗರಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here