ಪ್ರತಿಭಟನೆಗೆ ನಿರ್ಧಾರ

0
155

 
ನಮ್ಮ ಪ್ರತಿನಿಧಿ ವರದಿ
ಒಂದು ಕಡೆ ಸ್ಥಿರ ದೂರವಾಣಿ ಸಂಪರ್ಕವಿಲ್ಲ, ಮತ್ತೊಂದು ಕಡೆ ವಿಲ್ ದೂರವಾಣಿಯೂ ಅಸಮರ್ಪಕ ಸೇವೆ. ಹೀಗಾಗಿ ಸಂಪರ್ಕಕ್ಕೆ ಪರದಾಟ ನಡೆಸುವ ಈ ಸಂದರ್ಭ ಆಶಾವಾದವಾಗಿದ್ದ ಕಮಿಲ ಮೊಬೈಲ್ ಟವರ್ ಈಗ ಸ್ಥಳಾಂತರವಾಗಿರುವ ಬಗ್ಗೆ ತೀವ್ರ ಅಸಮಾಧಾನಗೊಂಡ ಕಮಿಲ ಪ್ರದೇಶದ ಮಂದಿ ತೀವ್ರ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
 
 
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದಲ್ಲಿ ಸುಮಾರು 1500 ಕ್ಕೂ ಅಧಿಕ ಬಿಎಸ್ಎನ್ಎಲ್ ಮೊಬೈಲ್ ಗ್ರಾಹಕರು ಇದ್ದಾರೆ. ಈ ಪ್ರದೇಶದಲ್ಲಿ ಬಿಎಸ್ಎನ್ಎಲ್ ಮೊಬೈಲ್ ಟವರ್ ಸ್ಥಾಪಿಸಬೇಕು ಎಂದು 2010 ರಿಂದ ಬಿಎಸ್ಎನ್ಎಲ್ ಗೆ ಕಮಿಲ ಪ್ರದೇಶದ ಮಂದಿ ಮನವಿ ಮಾಡುತ್ತಿದ್ದಲೇ ಇದ್ದರು.ಈ ಹಿಂದೆ ಮೊಬೈಲ್ ಬಳಕೆದಾರರ ಸಹಿಯೊಂದಿಗೆ ತಮಗೆ 2 ಬಾರಿ ಲಿಖಿತ ಮನವಿಯನ್ನೂ ನೀಡಲಾಗಿತ್ತು.ಇದರ ಜೊತೆ ಇಲಾಖೆಯ ವೆಬ್ ಸೈಟ್ ಮೂಲಕವೂ ತಮ್ಮ ಗಮನಕ್ಕೆ ತರಲಾಗಿತ್ತು.ಆ ಬಳಿಕ ತಮ್ಮ ಇಲಾಖೆಯಿಂದ ಆಗಮಿಸಿದ ಅಧಿಕಾರಿಗಳು ಕಮಿದಲ್ಲಿ ಮೊಬೈಲ್ ಟವರ್ಗೆ ಸ್ಥಳ ಪರಿಶೀಲನೆಯನ್ನೂ ಮಾಡಿ ಕಮಿಲದಲ್ಲಿ ಮೊಬೈಲ್ ಟವರ್ ಅವಶ್ಯ ಎಂದು ಹೇಳಿ ಮತ್ತೊಮ್ಮೆ ಸರ್ವೆ ಕಾರ್ಯ ನಡೆಸಿದ್ದಾರೆ. ಅಧಿಕಾರಿಗಳು ಸರ್ವೆ ಮಾಡಿರುವ ಪ್ರದೇಶದಿಂದ ಆಸುಪಾಸಿನ ಪ್ರದೇಶಗಳಾದ ಕಮಿಲ, ಮೊಗ್ರ, ಏರಣಗುಡ್ಡೆ, ಬಳ್ಳಕ್ಕ ಪ್ರದೇಶವೂ ಒಳಗೊಂಡಿದೆ.
 
 
ಅದಾದ ಬಳಿಕ 2015-16 ರಲ್ಲಿ ಕಮಿಲಕ್ಕೆ ಮೊಬೈಲ್ ಟವರ್ ಸ್ಥಾಪಿಸುವುದಾಗಿಯೂ ಇಲಾಖೆಯಿಂದ ಲಿಖಿತವಾಗಿ ತಿಳಿಸಿದ್ದರು.ಆದರೆ ಇದೀಗ ಕಮಿಲ ಗ್ರಾಮೀಣ ಭಾಗ ಎಂದು ಇಲಾಖೆಯೇ ಹೇಳಿದ್ದು, ಈ ಕಾರಣದಿಂದ ವಳಲಂಬೆಯಲ್ಲಿ ಮೊಬೈಲ್ ಟವರ್ ಸ್ಥಾಪಿಸಲಾಗುವುದು ,ಅಲ್ಲಿಂದಲೇ ಕಮಿಲಕ್ಕೆ ಮೊಬೈಲ್ ಸಿಗ್ನಲ್ ಲಭ್ಯವಾಗುತ್ತದೆ ಎಂದು ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡಿರುವುದರಿಂದ ಕಮಿಲದ ಜನತೆ ಆಕ್ರೋಶಿತರಾಗಿದ್ದಾರೆ. ಗುತ್ತಿಗಾರು, ವಳಲಂಬೆ, ದೇವಚಳ್ಳದ ಕೆಲವೇ ಕಿಮೀ ದೂರದಲ್ಲಿ ಇಲಾಖೆ ಮೊಬೈಲ್ ಟವರ್ ನಿರ್ಮಾಣ ಮಾಡುತ್ತದೆ, ಆದರೆ ಗ್ರಾಮೀಣ ಪ್ರದೇಶದ ಮಂದಿಗೆ ಉಪಯೋಗವಾಗುವ ಕೆಲಸ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ, ಅಲ್ಲದೆ ಕಮಿಲ ಪ್ರದೇಶದ ಜನತೆಯ ಇದುವರೆಗಿನ ಬೇಡಿಕೆಗೆ ಬೆಲೆಯೇ ಇಲ್ಲವೇ ಎಂದೂ ಪ್ರಶ್ನಿಸಿದ್ದಾರೆ.
 
 
 
ಸಂಸದರು ಬಂದರೂ ಪ್ರಯೋಜನವಾಗಿಲ್ಲ. .!:
ಕಮಿಲ ಪ್ರದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಮಂಗಳೂರು ಸಂಸದರು ಕಮಿಲದಲ್ಲಿಯೇ ಸಭೆ ನಡೆಸಿ ಜನತೆಯ ಅಹವಾಲು ಕೇಳಿದ್ದರು.ಈ ಸಂದರ್ಭ ಮೊಬೈಲ್ ಟವರ್ ನಿರ್ಮಾಣವಾಗಬೇಕು ಎಂದು ಜನತೆ ಒಕ್ಕೊರಲಿನಿಂದ ತಿಳಿಸಿದ್ದರು. ಈ ಸಂದರ್ಭ ಕಮಿಲದಲ್ಲಿಯೇ ಮೊಬೈಲ್ ಟವರ್ ನಿರ್ಮಿಸಲು ಶಿಫಾರಸು ಮಾಡುವುದಾಗಿಯೂ ಸಂಸದರು ಸಭೆಯಲ್ಲಿಯೇ ಹೇಳಿದ್ದರು. ಆ ಬಳಿಕ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಶಿಫಾರಸು ಕೂಡಾ ಮಾಡಿದ್ದರು. ಕಮಿಲದಲ್ಲಿಯೇ ಮೊಬೈಲ್ ಟವರ್ ಸ್ಥಾಪಿಸಬೇಕು ಅಧಿಕಾರಿಗಳಿಗೆ ಎಂದೂ ಸೂಚಿಸಿದ್ದರು. ಆದರೆ ಆ ಶಿಫಾರಸು ಒಂದೂವರೆ ವರ್ಷ ಕಳೆದುಹೋದವು. ಈಗ ಕಮಿಲದಲ್ಲಿ ಮೊಬೈಲ್ ಟವರ್ ಇಲ್ಲ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ಹೇಳಿದ್ದಾರೆ. ಸಂಸದರ ಮಾತಿಗೆ ಬೆಲೆಯೇ ಇಲ್ಲವಾಗಿದೆ.ಈಗ ಅದೆಲ್ಲಾ ನಮಗೆ ತಿಳಿದಿಲ್ಲ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ಹೇಳುತ್ತಾರೆ. .!
 
 
 
ಲ್ಯಾಂಡ್ ಲೈನ್ ಇಲ್ಲ . . ವಿಲ್ ಇಲ್ಲ. . ಮೊಬೈಲ್ ಇನ್ನೂ ದೂರ. .!
ಕಮಿಲಕ್ಕೆ ಮೊಬೈಲ್ ಸಿಗ್ನಲ್ ವ್ಯವಸ್ಥೆ ಇಲ್ಲದೇ ಇದ್ದರೂ ಸರಿ, ಇಲ್ಲಿನ ಎಲ್ಲಾ ಮನೆಗಳಿಗೆ ಲ್ಯಾಂಡ್ಲೈನ್ ಸಂಪರ್ಕ ಕಲ್ಪಿಸಿ, ಅಥವಾ ವಿಲ್ ದೂರವಾಣಿ 24 ಗಂಟೆಗಳ ಕಾಲವೂ ಚಾಲೂ ಇರುವಂತಹ ವ್ಯವಸ್ಥೆಯನ್ನು ಮಾಡಿಕೊಡಿ ಎಂದೂ ಜನತೆ ಕೇಳಿದ್ದಾರೆ.ಈ ಎರಡೂ ವ್ಯವಸ್ಥೆ ಇಲ್ಲದೆ ಇಲ್ಲದೇ ವರ್ಷಗಳೇ ಕಳೆದುಹೋಗಿದೆ. ಈಗ ಮೊಬೈಲ್ ಟವರ್ ಕೂಡಾ ಇಲ್ಲದೇ ಸಂಪರ್ಕ ವ್ಯವಸ್ಥೆಯೇ ಕಷ್ಟವಾಗಿದೆ.ರಾತ್ರಿ ವೇಳೆ ಅನಾರೋಗ್ಯದಂತಹ ಸಂದರ್ಭ ವೈದ್ಯರನ್ನು ಸಂಪರ್ಕಿಸಲು ದೂರದ ಗುಡ್ಡ ಪ್ರದೇಶಕ್ಕೆ ಬರಬೇಕಾದ ಸ್ಥಿತಿ ಇಲ್ಲಿನ ಜನರದ್ದು.
 
 
 
ಪ್ರತಿಭಟಗೆ-ಉಪವಾಸಕ್ಕೆ ನಿರ್ಧಾರ:
ಕಮಿಲದ ಮೊಬೈಲ್ ಟವರ್ ನಿರ್ಮಾಣಕ್ಕೆ ಈಗ ರಾಜಕೀಯ ರಹಿತವಾಗಿ ಹೋರಾಟ ನಡೆಸಲು ಜನತೆ ನಿರ್ಧರಿಸಿದ್ದಾರೆ. ಇದಕ್ಕಾಗಿ ಈಗಾಗಲೇ ಒಂದು ಹಂತದ ಸಭೆ ನಡೆಸಲಾಗಿದೆ.ಈ ಬಗ್ಗೆ ಇಲಾಖೆಗೆ ಹಾಗೂ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದು, ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ನಿರ್ಧರಿಸಿದ್ದು ಉಪವಾಸ ಹಾಗೂ ಪ್ರತಿಭಟನೆ ಮೂಲಕ ರಾಜ್ಯಮಟ್ಟದವರೆಗೂ ಗ್ರಾಮೀಣ ಭಾಗದ ಸಮಸ್ಯೆಯ ಬಗ್ಗೆ ಗಮನಸೆಳೆಯಲಾಗುವುದು ಈ ಸಂದರ್ಭ ಯಾವುದೇ ಹಾನಿಯಾದರೂ ಇಲಾಖೆಯೇ ಜವಾಬ್ದಾರಿಯಾಗಿರುತ್ತದೆ ಎಂದೂ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here