'ಪ್ರಚಲಿತತೆಯ ಗುಣದಿಂದ ಅಂಕಣ ಬರಹಕ್ಕೆ ಭಿನ್ನತೆ'

0
287

ವರದಿ: ಸುಶ್ಮಿತಾ ಗೌಡ
ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂಕಣ ಬರಹ ಬರೆಯುವಾಗ ಪ್ರಚಲಿತತೆಯ ಅಂಶವನ್ನು ಮುಖ್ಯವಾಗಿಸಿಕೊಳ್ಳಬೇಕು ಎಂದು ಅಂಕಣಕಾರ ರೋಹಿತ್ ಚಕ್ರತೀರ್ಥ ಅಭಿಪ್ರಾಯಪಟ್ಟರು.
 
 
ಅವರು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ‘ಮೀಡಿಯಾ ಮೆಸೆಂಜರ್’ ಇತ್ತೀಚೆಗೆ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನ ಸಂಬಂಧಿತ ಬರಹ ಬರೆಯುವ ವಿಧಾನಗಳನ್ನು ಪರಿಚಯಿಸಿದರು.
 
 
ಪ್ರತಿವಾರವೂ ವಿಜ್ಞಾನಕ್ಕೆ ಸಂಬಂಧಿಸಿದ ಅಂಕಣ ಬರಹ ಬರೆಯುವುದು ಸವಾಲಿನದು. ನಿರ್ದಿಷ್ಟ ಆವಿಷ್ಕಾರ, ವಿಜ್ಞಾನ ವಲಯದಲ್ಲಿಯೇ ನಡೆದ ಘಟನೆ ಮತ್ತಿತರ ಸಂಗತಿಗಳನ್ನು ಕಾರ್ಯ-ಕಾರಣ ಸಂಬಂಧಗಳೊಂದಿಗೆ ವಿಶ್ಲೇಷಿಸುವಾಗ ಓದುಗರ ಅರ್ಥೈಸಿಕೊಳ್ಳುವ ಶಕ್ತಿಯನ್ನೂ ದೃಷ್ಟಿಯಲ್ಲಿರಿಸಿಕೊಂಡಿರಬೇಕಾಗುತ್ತದೆ ಎಂದು ಹೇಳಿದರು.
 
 
ಒಬ್ಬ ಸಾಮಾನ್ಯ ಓದುಗನಿಗೆ ವಿಜ್ಞಾನ ಸಂಬಂಧಿತ ವಿಷಯಗಳು ಆಸಕ್ತಿ ಕೆರಳಿಸದೇ ಇರಬಹುದು. ಅಂಥ ಸಂದರ್ಭದಲ್ಲಿ ವಿಜ್ಞಾನದ ವಿವರಗಳು ಓದುಗನನ್ನು ಸೆಳೆದುಕೊಳ್ಳುವ ಹಾಗೆ ಕಟ್ಟಿಕೊಡುವ ಜಾಣ್ಮೆ ವಿಜ್ಞಾನ ಬರಹಗಾರರಿಗೆ ಇರಬೇಕಾಗುತ್ತದೆ ಎಂದು ಹೇಳಿದರು.
 
 
ಅಂಕಣ ಬರಹ ಬರೀ ಮಾಹಿತಿಗಳನ್ನಷ್ಟೇ ಒಳಗೊಳ್ಳಬಾರದು. ಆ ಮಾಹಿತಿಗಳು ಸ್ಪಷ್ಟ ಅರ್ಥೈಸುವಿಕೆಯ ಕ್ರಮಗಳ ಮೂಲಕ ಪ್ರಸ್ತುತಪಡಿಸಲ್ಪಡಬೇಕು. ಇಲ್ಲದಿದ್ದರೆ ನಿರ್ದಿಷ್ಟವಾದ ಮಹತ್ವದ ಮಾಹಿತಿಯೊಂದು ಹಲವರ ಗಮನಕ್ಕೆ ಬಾರದ ಹಾಗೆಯೇ ಉಳಿದುಬಿಡುತ್ತದೆ ಎಂದರು.
 
 
ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಬರಹಗಳು ನಿಖರವಾಗಿರಬೇಕು. ಪ್ರಪಂಚದ ಯಾವುದೋ ಭಾಗದಲ್ಲಿ ನಡೆದ ವೈಜ್ಞಾನಿಕ ಆವಿಷ್ಕಾರ ಭಾರತಕ್ಕೆ ಹೇಗೆ ಪ್ರಸ್ತುತ ಎಂಬುದನ್ನು ಆಲೋಚಿಸಿ ಬರಹಗಳನ್ನು ಹೆಣೆದಾಗ ಅವುಗಳಿಗೆ ಪ್ರಸ್ತುತತೆಯ ಗುಣ ದಕ್ಕುತ್ತದೆ. ಸುದ್ದಿಪತ್ರಿಕೆಗಳಿಗೆ ವಿಜ್ಞಾನ ಸಂಬಂಧಿತ ಬರಹ ಬರೆಯುವಾಗ ಈ ಅಂಶವನ್ನು ದೃಷ್ಟಿಯಲ್ಲಿರಿಸಿಕೊಂಡಿರಬೇಕು ಎಂದು ಹೇಳಿದರು.
 
 
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ್ ಹೆಗ್ಡೆ ಮಾತನಾಡಿದರು. ಆಂಜನೇಯ ಕಾರ್ಯಕ್ರಮ ನಿರೂಪಿಸಿದರು. ಪವಿತ್ರಾ ವಂದಿಸಿದರು.

LEAVE A REPLY

Please enter your comment!
Please enter your name here