ಪ್ರಕೃತಿಯನ್ನು ಕೆಡಿಸುವ ದುರಂತಗಳು…

0
443

ದಿನೇಶ್ ಹೊಳ್ಳ.
‘ ಬನ ಅಂದಿತು ಬಾಗಿಲಿಗೆ, ಬರ ಬೇಡ ಕಾಡಿಗೆ…ಹೊಲ ಅಂದಿತು ನೇಗಿಲಿಗೆ ‘ ಬರ ‘ ಬೇಡ ನಾಡಿಗೆ.
ಹೌದು ಕಾಡು ನಾಡಿಗೆ ಹೇಳುತ್ತಾ ಇದೆ ನಿಮ್ಮ ಯಾವುದೇ ಗೊಂದಲದ ಯೋಜನೆಗಳನ್ನು ನನ್ನ ಮಡಿಲಿಗೆ ತರಬೇಡಿ, ಅದೇ ರೀತಿ ನಾಡು ನಾಡಿನ ಜನತೆಗೆ ಹೇಳುತ್ತಾ ಇದೆ ಏನೇ ಆದರೂ ಕೃಷಿಯನ್ನು ಬಿಟ್ಟು ಗದ್ದೆ, ತೋಟಗಳಲ್ಲಿ ಕಾಂಕ್ರೀಟು ಕಾಡು ನಿರ್ಮಿಸಬೇಡಿ ಎಂದು. ಆದರೆ ಇದಾವುದಕ್ಕೂ ಕಿವಿ ಆಗದ ಕಾಡಿನ ಫಲಾನುಭವಿ ಗಳೇ ಆದ ನಾಡಿನ ಜನರು ತಮ್ಮ ಸ್ವಾರ್ಥದ ‘ ಅಭಿವೃದ್ದಿ ‘ ಎಂಬ ಯೋಜನೆಗಳಿಗಾಗಿ ಕಾಡು, ಗಿರಿ, ಝರಿಗಳನ್ನು ಕತ್ತರಿಸುತ್ತಾ, ಗದ್ದೆ ,ಹಿತ್ತಿಲು, ತೋಟಗಳನ್ನು ಕೆತ್ತಿ ಸೈಟು, ಫ್ಲ್ಯಾಟ್ ಗಳನ್ನೂ ನಿರ್ಮಿಸುತ್ತಾ ಪ್ರಕೃತಿಯ ವಿರುದ್ಧ ಹೋಗುತ್ತಾ ತನ್ನ ದರ್ಪ ಸಾಮ್ರಾಜ್ಯವನ್ನು ಪ್ರದರ್ಶಿಸುತ್ತಿದ್ದಾನೆ. ಇಡೀ ಜಗತ್ತೇ ತನ್ನ ಮುಷ್ಟಿಯಲ್ಲಿ ಇದೆ ಎಂದೂ ಇಡೀ ಜಗತ್ತನ್ನೇ ತನಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳಬಹುದು ಎಂದು ಬೀಗುತ್ತಲೆ ಬಂದಿದ್ದು ತನ್ನ ಸರ್ವಾಧಿಕಾರದ ದಬ್ಬಾಳಿಕೆಯಿಂದ ಪ್ರಕೃತಿಗೆ ಎಷ್ಟು ನೋವು ಆಗುತ್ತಿದೆ ಎಂಬುದನ್ನು ಎಂದಿಗೂ ಯೋಚಿಸಲೇ ಇಲ್ಲ. ಇದರ ಪರಿಣಾಮವಾಗಿ ಪ್ರಕೃತಿಯ ಪ್ರತಿರೋಧ ಹಂತ, ಹಂತವಾಗಿ ಪ್ರತಿಕೂಲಗಳೊಂಡಿಗೆ ಪ್ರಾಕೃತಿಕ ದುರಂತಗಳ ತೊರಣವನ್ನೇ ಭುವಿಯ ಬಾಗಿಲಿಗೆ ಕಟ್ಟಿ ಬಿಟ್ಟಿತು.

ಬರಗಾಲ, ಜಲ ಪ್ರವಾಹ, ಸುನಾಮಿ, ಭೂಕುಸಿತ, ಚಂಡ ಮಾರುತ, ಕಾಡ್ಗಿಚ್ಚು, ಮುಂತಾದ ಪ್ರಾಕೃತಿಕ ದುರಂತಗಳು ಮನುಕುಲವನ್ನು ತತ್ತರಿಸಿ ಬಿಟ್ಟವು. ಮನುಜನ ಒಂದು ಅಹಂ ಇದೆ ಅದೇನೆಂದರೆ ತಾನು ಸೃಷ್ಟಿಸಿದ ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಪ್ರಕೃತಿಯ ಯಾವುದೇ ಸವಾಲನ್ನು ಎದುರಿಸಬಹುದು ಎಂದು. ಮೊನ್ನೆ ಕೊರೋನ ಎಂಬ ಕಣ್ಣಿಗೆ ಕಾಣದ ವೈರಸ್ ಇಡೀ ಪ್ರಪಂಚವನ್ನೇ ಅಡ್ಡಡ್ಡ ಮಲಗಿಸಿ ಬಿಟ್ಟಿತು. ವಿಶ್ವ ವನ್ನೇ ತನ್ನ ರಿಮೋಟ್ ನಲ್ಲಿ ಬಾಗಿಸಬಹುದೆಂಬ ವಿಜ್ಞಾನಿಗಳು ಮುಖಕ್ಕೆ ಮಾಸ್ಕ್ ಹಾಕಿ ಅಡಗಿ ಬಿಟ್ಟರು. ಹಾಗಿದ್ದರೆ ತಂತ್ರಜ್ಞಾನದ ಪ್ರಾಬಲ್ಯದಿಂದ ಕೊರೋನವನ್ನು ಒದ್ದೊಡಿಸಬಹುದಿತ್ತಲ್ಲ. ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ವಿಚಾರವೇನೆಂದರೆ ನಿಸರ್ಗದ ಅಗಾಧ ಶಕ್ತಿಯ ಎದುರು ಮಾನವ ಶಕ್ತಿ ಏನೂ ಅಲ್ಲ ಎಂಬುದು.

ರಾಜ್ಯದಲ್ಲಿ ಈಗ ಒಂದು ಕಡೆ ಅತೀವ ಬರಗಾಲ, ಇನ್ನೊಂದು ಕಡೆ ಜಲ ಪ್ರವಾಹ , ಭೂಕುಸಿತ, ಇವೆರಡರ ನಡುವೆ ಸಂತಸ ಮರೆತು ಸಂಕಟ ಎದುರಿಸುವ ಜನರು. ಬರಗಾಲ ಆವರಿಸಿ ಅತೀವ ನೀರಿನ ಸಮಸ್ಯೆ ಆದರೂ ವಿಪರೀತ ಮಳೆ ಆಗಿ ಜಲ ಪ್ರವಾಹ, ಭೂಕುಸಿತ ಆದರೂ ಜನತೆ ಮಳೆ ಹಾಗೂ ಹೊಳೆಗೆ ಬಯ್ಯುತ್ತಾರೆಯೆ ವಿನಃ ಇದಕ್ಕೆ ಕಾರಣ ಏನು ? ಮತ್ತು ಯಾರು ಎಂದು ವಿಮರ್ಶೆಗೆ ಹೋಗುತ್ತಿಲ್ಲ. ಮಳೆ ಅದರ ಪಾಡಿಗೆ ಬರುತ್ತಿದೆ ಹೊಳೆ ಅದರ ಪಾಡಿಗೆ ಹರಿಯುತ್ತಿದೆ ಆದರೆ ಮಳೆ ಮತ್ತು ಹೊಳೆಯ ವ್ಯವಸ್ಥೆಯನ್ನು ಕೆಡಿಸಿ ದುರಂತಕ್ಕೆ ನಿಸರ್ಗದ ಮೇಲೆ ಅಪವಾದ ಹಾಕಿ ತಾನು ನಿರಪರಾಧಿ ಆಗಿ ಇನ್ನೊಂದು ದುರಂತಕ್ಕೆ ಅಡಿಪಾಯ ಹಾಕುತ್ತಾನೆ ಇದು ಎಲ್ಲಕ್ಕಿಂತ ದೊಡ್ಡ ದುರಂತ.

ಕೊರೋನ ರೋಗದಿಂದಾಗಿ ವಿಶ್ವವೇ ಲಾಕ್ ಡೌನ್ ಆಗಿದ್ದು ಒಂದು ಭಯ ಭೀತ ವಾತಾವರಣ ನಿರ್ಮಾಣ ಆಗಿದ್ದರೂ ಜನರು ಲಾಕ್ ಡೌನ್ ಯಾವಾಗ ಅಂತ್ಯ ? ಮಾಲು, ಮಹಲ್ ಗಳು ಯಾವಾಗ ಓಪನ್ ಎಂಬ ಚಿಂತೆಯಲ್ಲಿ ಇದ್ದಾರೆಯೇ ಹೊರತು ಪ್ರಕೃತಿ ತನ್ನ ವಿರುದ್ಧ ಸಮರ ಸಾಧಿಸುತ್ತಿದೆ ಇದಕ್ಕೆ ತಾನು ಅವಕಾಶ ಕೊಡಬಾರದು ಎಂದು ಯಾವತ್ತಿಗೂ ಮನ ಪರಿವರ್ತನೆ ಮಾಡಿಲ್ಲ. ಇನ್ನಾದರೂ ನಾವು ನಮ್ಮ ಮಕ್ಕಳ ಭವಿಷ್ಯದ ಭದ್ರತೆಗಾಗಿ ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಪ್ರಕೃತಿಯ ಮಹತ್ವ ಮತ್ತು ಅಗತ್ಯದ ಪಾಠವನ್ನು ಮಾಡಿ ನಿಸರ್ಗದ ಬಗ್ಗೆ ಕಾಳಜಿ ಮೂಡಿಸಲೇಬೇಕಾದ ಅನಿವಾರ್ಯತೆ ಇಂದು ನಮ್ಮೆದುರು ಇವೆ. ನೈಸರ್ಗಿಕ ದುರಂತಗಳಿಗೆ ಕಾರಣ ಕಂಡು ಹುಡುಕಬೇಕು ಹೊರತು ಅದರ ತೋರಣ ಕಟ್ಟುವುದಲ್ಲ. ಇನ್ನಾದರೂ ನಾವು ಪ್ರಕೃತಿಯ ರೊಡನಕ್ಕೆ ಕಿವಿ ಆಗದೇ ಇದ್ದರೆ ಮುಂದೆ ಆಗಲಿರುವ ಇನ್ನಷ್ಟು ಭಯಾನಕ ದುರಂತಗಳಿಗೆ ನಾವೇ ಆಮಂತ್ರಣ ನೀಡಿ ಆಹ್ವಾನಿಸಿದಂತೆ ಆಗಬಹುದು.

LEAVE A REPLY

Please enter your comment!
Please enter your name here