ಪೊಲೀಸರು ಪ್ರತಿಭಟನೆ ನಡೆಸ್ತಾರೆಂದ್ರೆ ನಿಮಗ್ಯಾಕೆ ಚಿಂತೆ…?

0
280

 
ನಿಮ್ಮನ್ನು ರಕ್ಷಿಸುವವರತ್ತ ನೀವ್ಯಾಕೆ ಚಿತ್ತ ಹರಿಸುತ್ತಿಲ್ಲ…
ಮುಖ್ಯಮಂತ್ರಿಗಳಿಗೆ ವಾರ್ತೆ.ಕಾಂ ಬಹಿರಂಗ ಪತ್ರ
ಹರೀಶ್ ಕೆ.ಆದೂರು
ಪ್ರಧಾನ ಸಂಪಾದಕ
ವಾರ್ತೆ.ಕಾಂ ಮತ್ತು ಈ ಕನಸು.ಕಾಂ
ವಿಧಾನ ಸೌಧದ ಎಸಿ.ರೂಮಿನಲ್ಲಿ ಕುಳಿತುಕೊಳ್ಳುವ ನಿಮಗೆ ರಸ್ತೆ ಬದಿಗಳಲ್ಲಿ, ಸಮಾರಂಭಗಳಲ್ಲಿ, ದೊಂಬಿ, ಗಲಭೆಗಳ ಸಂದರ್ಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಬಿಸಿಲು ಮಳೆಯೆನ್ನದೆ, ರಾತ್ರಿ ಹಗಲೆನ್ನದೆ `ಡ್ಯೂಟಿ’ ಮಾಡುವ ಪೊಲೀಸರ ಬಗ್ಗೆ ನಿರ್ಲಕ್ಷ್ಯವೇಕೆ…? ನೀವೆಲ್ಲೇ ತೆರಳಿದರೂ, ನಿಮ್ಮ ಜೀವರಕ್ಷಣೆಗೆ ಪಣತೊಟ್ಟಿರುವ ಪೊಲೀಸರಿಗೂ ಒಂದು ಜೀವವಿದೆ-ಜೀವನವಿದೆ ಎಂಬ ಸಣ್ಣ ಚಿಂತೆಯೂ ನಿಮಗಿಲ್ಲವೇ…? ಐಷಾರಾಮಿ ಕಾರು ಹತ್ತಿ ಅಲ್ಲಿ ಇಲ್ಲಿ ಎಲ್ಲೆಲ್ಲೋ ಸುತ್ತಾಡುತ್ತಾ ಹೇಳಿಕೆ ನೀಡುವ ನಿಮ್ಮಂಥಹ ರಾಜಕಾರಣಿಗಳ ಹಿಂದೆ ಮುಂದೆ ಜೀವದ ಹಂಗು ತೊರೆದು ನಿಮ್ಮನ್ನು ರಕ್ಷಿಸುತ್ತಾ – ಕಾಯುತ್ತಿರುವ `ಪೊಲೀಸ್’ ರಿಗೆ ನೀವು ಕೊಡುವ ಬೆಲೆಯಾದರೂ ಏನು…? ರಾತ್ರಿ ಬೆಚ್ಚಗೆ ಮಲಗಿ ನಿದ್ರಿಸುವ ನಿಮಗೆ ರಾತ್ರಿ ಪಾಳಿಯಲ್ಲಿ ಡ್ಯೂಟಿ ಮಾಡುವ ಪೊಲೀಸರ ಬಗ್ಗೆ ಚಿಂತೆಯೇ ಇಲ್ಲವಾಯಿತಲ್ಲವೇ…?
ಹೌದು…ನಿಜಕ್ಕೂ ಕನಿಷ್ಟ ಮೂಲಭೂತ ಸೌಕರ್ಯವೂ ಇಲ್ಲದೆ ದಿನದ ಹೆನ್ನೆರಡರಿಂದ ಹದಿನೆಂಟು ತಾಸು ದುಡಿಯುತ್ತಿರುವ ಪೊಲೀಸರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವಾಗ ನೀವದನ್ನು ಧಮನಿಸುವ ಕಾರ್ಯ ಮಾಡುವುದು ಸರಿಯೆಂದು ನಿಮಗನಿಸುತ್ತಿದೆಯೇ…? ತುಸು ಯೋಚಿಸಿ ಮುಖ್ಯಮಂತ್ರಿಗಳೇ…ಗೃಹ ಸಚಿವರೇ…
 
ಅವರೇನೂ ಹೆಚ್ಚು ಹೆಚ್ಚು ಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿಲ್ಲ… ತಮಗಾದ ಅನ್ಯಾಯವನ್ನು ಸರಿಪಡಿಸಿಯೆಂಬ ಮಾತನ್ನಷ್ಟೇ ಹೇಳುತ್ತಿದ್ದಾರೆ. ರಸ್ತೆ ಚಳವಳಿ ಮಾಡುತ್ತಿಲ್ಲ…ಸಾಮೂಹಿಕ ರಜೆಯೊಂದನ್ನು ಹಾಕಿ ಸಾಂಕೇತಿಕ ಪ್ರತಿಭಟನೆಗಳಷ್ಟೇ ಸೀಮಿತವಾಗುತ್ತಿದ್ದಾರೆ. ಇಷ್ಟಕ್ಕೇ ನಿಮಗೆ `ನಿದ್ದೆಬರದಂತಾದರೆ’ ಒಂದೊಮ್ಮೆ ಇತರ `ಪ್ರತಿಭಟನೆ’ಗಳಂತೆ ಪೊಲೀಸರೂ ಪ್ರತಿಭಟನೆಗೆ ಮುಂದಾದರೆ ತಾವೇನು ಮಾಡುತ್ತೀರಿ…?
ಸ್ಟಾಫ್ ಶಾರ್ಟೇಜ್ ನ ನೆಪದಲ್ಲಿ ವಾರಕ್ಕೊಂದು ರಜೆಯೂ ಇಲ್ಲ… ದಿನದ ಗರಿಷ್ಠಾವಧಿ `ಡ್ಯೂಟಿ’…ಸರಿಯಾದ ಊಟ ನಿದ್ರೆಗೂ ವ್ಯವಸ್ಥೆಯಿಲ್ಲ….ವಾರಕ್ಕೊಮ್ಮೆಯಾದರೂ ಹೆಂಡತಿ ಮಕ್ಕಳ ಮುಖನೋಡುವ ಭಾಗ್ಯವೇ ಇಲ್ಲ… ಹಬ್ಬ ಹರಿದಿನದಲ್ಲಿ ಮನೆಯೊಳಗೆ ಸಹಭೋಜಕ್ಕೆ ಕುಳಿತ ನೆನಪೇ ಇಲ್ಲ… ಈ ರೀತಿಯ ಜೀವನ ನಮಗೆ ಬೇಕೇ….? ಎಂಬ ಪೋಲೀಸರ ಪ್ರಶ್ನೆ ನಿಜಕ್ಕೂ ನಾಗರೀಕ ಸಮಾಜಕ್ಕೆ ಮುಜುಗರ ಉಂಟುಮಾಡುವುದರಲ್ಲಿ ಸಂದೇಹವೇ ಇಲ್ಲ.
 
ಮಕ್ಕಳ ಭವಿಷ್ಯಕ್ಕೆ ಬೇಕಾದ ಹಣವಿಲ್ಲ…ಫೀಸ್ ಕಟ್ಟಲು , ಡೊನೇಷನ್ ಕೊಡಲು ಕಾಸಿಲ್ಲ… ವೇತನ ತಾರತಮ್ಯದ ಸ್ಥಿತಿಯಲ್ಲಿ ಇಷ್ಟು ದಿನ ಕಳೆದಾಯಿತು…ಇನ್ನಾದರೂ ನೆಮ್ಮದಿ ನೀಡಿ ಎಂಬ ಪೊಲೀಸರ ಬೇಡಿಕೆ ಸಮರ್ಪಕವಾಗಿಲ್ಲವೇ…?
ಯಾವೊಂದು ಸಾರ್ವಜನಿಕ ಕಾರ್ಯಕ್ರಮಗಳಿದ್ದರೂ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಬೇಕೇ ಬೇಕು. ಮಂತ್ರಿ ಮಾಗಧರ ಬೆಂಗಾವಲಿಗೆ ಇದೇ ಪೊಲೀಸರು ಬೇಕು…ಅಲ್ಲೆಲ್ಲಾ ವಿವಿಐಪಿಗಳಿಗಷ್ಟೇ ಬೆಲೆ ಬಿಟ್ಟರೆ ಶಾಂತಿ ಕಾಪಾಡಲು ಕಟಿಬದ್ಧರಾಗಿರುವ ಪೊಲೀಸರನ್ನು ಕೇಳುವ ಮಂದಿಯೇ ಇಲ್ಲ… ಇಂತಹ ಸ್ಥಿತಿಯನ್ನನುಭವಿಸುವ ಪೊಲೀಸರ ಕಷ್ಟಗಳಿಗೆ ಸರಕಾರ ಯಾಕೆ ಧ್ವನಿಯಾಗುತ್ತಿಲ್ಲ… ಈತನಕವೂ ಕೇವಲ ಭರವಸೆಗಳನ್ನಷ್ಟೇ ನೀಡುತ್ತಾ ಕಾಲ ಕಳೆಯುವ ಸಕರಾರ- ಆಡಳಿತಧಾರರು ಇನ್ನಾದರೂ ಸಮಾಜದ ಹಿತ ಕಾಯುವ ಪೊಲೀಸರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ.
 
ಸಮಾಜ ಸುಸ್ಥಿತಿಯಲ್ಲಿದ್ದರಷ್ಟೇ ಸರಕಾರ ನೆಮ್ಮದಿಯಿಂದಿರಲು ಸಾಧ್ಯ. ಸಮಾಜವನ್ನು ಶಾಂತಿ ಸುವ್ಯವಸ್ಥಿತವಾಗಿಡುವಲ್ಲಿ ನೆರವಾಗುವ ಪೊಲೀಸರನ್ನು ಮೆರೆಯುವುದು ಉಚಿತವಲ್ಲ. ಸರಕಾರದ ಚುಕ್ಕಾಣಿ ಹಿಡಿದಿರುವ ಆಡಳಿತವರ್ಗ ಇಂತಹವರತ್ತ ಚಿತ್ತ ವಹಿಸಬೇಕಾಗಿದೆ. ಹಾಗಾದಾಗ ಮಾತ್ರ ಪೊಲೀಸ್ ಇಲಾಖೆ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯ.
 
ಮುಖ್ಯಮಂತ್ರಿಗಳೇ… ಪೊಲೀಸ್ ಇಲಾಖೆ ಸರಕಾರದ ಒಂದು ಆಸ್ತಿ. ಇಲ್ಲಿ ಕರ್ತವ್ಯ ನಡೆಸುವವರು ಸರಕಾರದ ಅನ್ನ ತಿನ್ನುವವರು. ಅವರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದಿದ್ದರೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಬೇಕಾಗಿರುವುದು ಸರಕಾರದ ಕರ್ತವ್ಯವೂ ಹೌದು. ನೀವು ಮೂಲಭೂತ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಪೂರೈಸಿದ ನಂತರವೂ ಪ್ರತಿಭಟನೆಗೆ ಮುಂದಾದರೆ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುವುದು ಸರಿ.

LEAVE A REPLY

Please enter your comment!
Please enter your name here