ಪುಸ್ತಕ ಪ್ರದರ್ಶನ

0
157

 
ಉಡುಪಿ ಪ್ರತಿನಿಧಿ ವರದಿ
ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಟ ನಡೆಸಿದ್ದ ಡಾ.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದರೂ ಈ ಪಿಡುಗು ನಮ್ಮಲ್ಲಿಲ್ಲ ಎನ್ನುವ ಮಟ್ಟಕ್ಕೆ ನಾವಿನ್ನು ಮುಟ್ಟಿಲ್ಲ. ಆದರೆ ಅಸ್ಪೃಶ್ಯತೆ ಎಂದರೆ ಎಲ್ಲಿ, ಯಾರು ಎನ್ನುವಷ್ಟು ಜಾಗೃತಿ, ಬೆಳವಣಿಗೆ ಸಮಾಜದಲ್ಲಿ ನಡೆದಿದೆ ಎಂದು ಶಾಸಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
 
ಅವರು ಇತ್ತೀಚಿಗೆ ಉಡುಪಿ ನಗರಕೇಂದ್ರ ಗ್ರಂಥಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 
ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ಅನುಭವಿಸಿದ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಗೊಂದಲಗಳ ನಡುವೆಯೂ ದೇಶದ ಪರಮೋಚ್ಛ ಸಂವಿಧಾನವನ್ನು ರಚಿಸಿದ ಅವರ ಮೇಧಾವಿ ಶಕ್ತಿ ಬೆರಗು ಹುಟ್ಟಿಸುತ್ತದೆ. ಈ ಅಸಮಾನತೆ ಎಂಬುದು ಕೇವಲ ದಲಿತರಿಗೆ ಸೀಮಿತವಾಗದೆ ಶ್ರೇಣಿಕೃತವಾಗಿ ಸಮಾಜದ ಪ್ರತಿಯೊಂದು ಜಾತಿಗಳ ನಡುವೆ ನುಸುಳಿ ನಾವೆಲ್ಲಾ ಸಂತ್ರಸ್ಥರಾಗುವಂತೆ ಮಾಡಿದೆ. ಇಷ್ಟೊಂದು ಸಾಮಾಜಿಕ ಜಾಗೃತಿಗಳು ನಿರಂತರವಾಗಿ ನಡೆಯುತ್ತಿದ್ದರೂ ಈ ಪಿಡುಗನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿಲ್ಲ. ಈ ಸಮಸ್ಯೆಯ ವಿರುದ್ಧ ಧ್ವನಿಯೇನೋ ಗಟ್ಟಿಯಾಗಿದೆ ಆದರೆ ಸಮಾನತೆ ಇನ್ನೂ ಬಂದಿಲ್ಲ ಎಂದು ಅವರು ವಿಶಾದಿಸಿದರು.
 
ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಗದೀಶ ರಾವ್ ಅವರು ಮಾತನಾಡಿ ಅಂಬೇಡ್ಕರ್ ಅವರ ಹೋರಾಟ, ವರ್ಗ ಸಂಘರ್ಷವಾಗದೆ, ಅಸ್ಪೃಶ್ಯರನ್ನು, ದಲಿತರನ್ನು ಸಬಲೀಕರಣಗೊಳಿಸುವುದ್ದಾಗಿತ್ತು. ಈ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತಂದು ಸಮಾನತೆಯನ್ನು ದಲಿತರು ಪಡೆಯಬೇಕು ಎಂಬುದ್ದಾಗಿತ್ತು. ಪ್ರಪಂಚದ ಹಲವಾರು ದೇಶಗಳಲ್ಲಿನ ಸಂವಿಧಾನ ವಿಫಲವಾಗಿ ಏನೇನೋ ಅರಾಜಕತೆಗಳು ನಡೆದಿವೆ. ಆದರೆ ನಮ್ಮ ಸಂವಿಧಾನಕ್ಕೆ 100 ತಿದ್ದುಪಡಿಗಳನ್ನು ಈವರೆಗೆ ಮಾಡಲಾಗಿದ್ದರೂ, ಅದರ ಮೂಲ ಆಶಯ ಬದಲಾಗದೆ ಅದು ಯಶಸ್ಸು ಹೊಂದಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಅವರು ತಿಳಿಸಿದರು.
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ವಹಿಸಿದ್ದರು. ಉಪಾಧ್ಯಕ್ಷೆ ಸಂಧ್ಯಾ ಕುಮಾರಿ ಉಪಸ್ಥಿತರಿದ್ದರು.
ಅಂಬೇಡ್ಕರ್ ಜಯಂತಿ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತ ಮಂದಿಗೆ ಬಹುಮಾನವನ್ನು ವಿತರಿಸಲಾಯಿತು.
ಜಿಲ್ಲಾ ಕೇಂದ್ರ ಗ್ರಂಥಾಲಯಾಧಿಕಾರಿ ವೆಂಕಟೇಶ್ ಸಿ.ಜೆ. ಅವರು ಸ್ವಾಗತಿಸಿ, ನಗರಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ವಂದಿಸಿದರು. ಪ್ರೇಮ ಎಂ. ನಿರೂಪಿಸಿ ಗ್ರಂಥಪಾಲಕಿ ಜಯಶ್ರೀ ಎಂ. ಅವರು ವಿಜೇತರ ಪಟ್ಟಿ ವಾಚಿಸಿದರು.

LEAVE A REPLY

Please enter your comment!
Please enter your name here